ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್‌ಚಾಲಿತ ವಾಹನಗಳ ಭವಿಷ್ಯ

Last Updated 2 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ವಿದ್ಯುತ್‌ಚಾಲಿತ ವಾಹನಗಳಿಗೆ (electric vehicles– ಇ.ವಿ) ಚಾರ್ಜಿಂಗ್‌ ಮಾಡಿಸುವ ರಾಜ್ಯದ ಮೊದಲ ಕೇಂದ್ರ ಇತ್ತೀಚೆಗೆ ಬೆಂಗಳೂರಿನಲ್ಲಿ ಕಾರ್ಯಾರಂಭ ಮಾಡಿದೆ. ಪೆಟ್ರೋಲ್‌ ಮತ್ತು ಡೀಸೆಲ್‌ಚಾಲಿತ ವಾಹನಗಳಿಗೆ ಪೆಟ್ರೋಲ್‌ ಪಂಪ್‌ಗಳಲ್ಲಿ ಇಂಧನ ತುಂಬಿಸುವ ರೀತಿಯಲ್ಲೇ ಈ ಕೇಂದ್ರ ಕಾರ್ಯನಿರ್ವಹಿಸುತ್ತದೆ.

ವಿದ್ಯುತ್‌ನಿಂದ ನಡೆಯುವ ಪರಿಸರಸ್ನೇಹಿ ವಾಹನಗಳ ಬ್ಯಾಟರಿಗಳಿಗೆ ವಿದ್ಯುತ್‌ ಚಾರ್ಜ್‌ ಮಾಡಲಾಗುವುದು. ನಗರದ 11 ಕಡೆ ಇಂತಹ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಒಂದು ಚಾರ್ಜಿಂಗ್‌ ಕೇಂದ್ರಕ್ಕೆ ₹ 5 ಲಕ್ಷ ವೆಚ್ಚ ತಗುಲುತ್ತದೆ. ಈ ಕೇಂದ್ರಗಳು ದಿನದ 24 ಗಂಟೆಗಳೂ ಕಾರ್ಯನಿರ್ವಹಿಸಲಿವೆ. ಒಂದು ಸಲ ಚಾರ್ಜ್‌ ಆದ ಬಳಿಕ ವಾಹನ 120 ಕಿ.ಮೀ. ನಿಂದ 140 ಕಿ.ಮೀ.ವರೆಗೆ ಸಂಚರಿಸಲಿದೆ.

2030ರ ಹೊತ್ತಿಗೆ ದೇಶದಲ್ಲಿನ ಸಾರ್ವಜನಿಕ ಸಾರಿಗೆಯ ಎಲ್ಲ ವಾಹನಗಳು ಮತ್ತು ಖಾಸಗಿ ಬಳಕೆಯ ಶೇ 40ರಷ್ಟು ವಾಹನಗಳು ವಿದ್ಯುತ್‌ ಬ್ಯಾಟರಿ ಚಾಲಿತವೇ ಆಗಿರಬೇಕು ಎಂಬುದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಗುರಿಯಾಗಿದೆ. ಇತರ ದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿನ ವಿದ್ಯುತ್‌ ಚಾಲಿತ ವಾಹನ ತಯಾರಿಕಾ ಉದ್ಯಮ ಇನ್ನೂ ಅಂಬೆಗಾಲು ಹಾಕುತ್ತಿದೆ. ಈ ವಾಹನಗಳ ಬಳಕೆ ಈಗಲೂ ಮುಖ್ಯವಾಹಿನಿಯಲ್ಲಿ ಸೇರ್ಪಡೆಗೊಂಡಿಲ್ಲ. ‘ಫೇಮ್‌ ಇಂಡಿಯಾ’ ಯೋಜನೆಯಡಿ ಇಂತಹ ವಾಹನಗಳ ತಯಾರಿಕೆ, ಖರೀದಿ ಮತ್ತು ಬಳಕೆ ಉತ್ತೇಜಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ವಿದ್ಯುತ್ ಚಾರ್ಜಿಂಗ್‌ ಕೇಂದ್ರವು ಕೂಡ ಈ ಗುರಿ ಸಾಧಿಸಲು ಕರ್ನಾಟಕ ಸರ್ಕಾರ ಹಮ್ಮಿಕೊಂಡ ರಚನಾತ್ಮಕ ಕಾರ್ಯಕ್ರಮವಾಗಿದೆ.

* ಕರ್ನಾಟಕ ಸರ್ಕಾರದ ಉಮೇದು
ಈ ವಾಹನಗಳ ಬಳಕೆಯನ್ನು ಜನಪ್ರಿಯಗೊಳಿಸಲು ಕರ್ನಾಟಕ ಮುಂಚೂಣಿಯಲ್ಲಿ ಇದೆ. ಬೆಂಗಳೂರನ್ನು ವಿದ್ಯುತ್‌ಚಾಲಿತ ವಾಹನಗಳ ರಾಜಧಾನಿಯನ್ನಾಗಿ ಮಾಡಲು ರಾಜ್ಯ ಸರ್ಕಾರ 2017ರ ಸೆಪ್ಟೆಂಬರ್‌ನಲ್ಲಿಯೇ ಕಾರ್ಯಪ್ರವೃತ್ತವಾಗಿದೆ. ರಾಜ್ಯದ ‘ವಿದ್ಯುತ್‌ ಚಾಲಿತ ವಾಹನ ಮತ್ತು ಇಂಧನ ಸಂಗ್ರಹ ನೀತಿ’ಯನ್ನು ಜಾರಿಗೆ ತಂದಿದೆ. ರಾಜ್ಯವನ್ನು ಪರ್ಯಾಯ ಇಂಧನ ಚಾಲಿತ ವಾಹನಗಳ ತಯಾರಿಕಾ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲು ಮತ್ತು ‘ಕರ್ನಾಟಕಲ್ಲಿಯೇ ತಯಾರಿಸಿ’ ಯೋಜನೆಗೆ ಒತ್ತು ನೀಡಲು ಕ್ರಮ ಕೈಗೊಂಡಿದೆ. ಈ ವಲಯದಲ್ಲಿ ₹ 31 ಸಾವಿರ ಕೋಟಿಗಳಷ್ಟು ಬಂಡವಾಳ ಆಕರ್ಷಿಸಲಾಗುತ್ತಿದೆ. ಇದರಿಂದ 55 ಸಾವಿರ ಹೊಸ ಹೊಸ ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿವೆ.

* ಏನಿದು ಇ–ಮೊಬಿಲಿಟಿ?
ವಿದ್ಯುತ್‌ಚಾಲಿತ ವಾಹನಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ರಾಜ್ಯ ಸರ್ಕಾರ ‘ಇ–ಮೊಬಿಲಿಟಿ’ ಪ್ರಚಾರ ಅಭಿಯಾನ ಹಮ್ಮಿಕೊಂಡಿದೆ. ನಗರದ ಖಾಸಗಿ ಕಂಪನಿಗಳ ಉದ್ಯೋಗಿಗಳಿಗೆ ಶೀಘ್ರದಲ್ಲಿಯೇ 1,000 ವಿದ್ಯುತ್‌ಚಾಲಿತ ಕಾರುಗಳ ಸೇವೆ ದೊರೆಯಲಿದೆ. ಐ.ಟಿ, ಸ್ಟಾರ್ಟ್‌ಅಪ್‌ ರಾಜಧಾನಿ ಇನ್ನು ಮುಂದೆ ಇ.ವಿ. ರಾಜಧಾನಿಯಾಗಿಯೂ ಗಮನ ಸೆಳೆಯಲಿದೆ.

* ರೇವಾ ಹೆಗ್ಗಳಿಕೆ
ಭಾರತಕ್ಕೆ ವಿದ್ಯುತ್‌ಚಾಲಿತ ವಾಹನಗಳು ಕಾಲಿಟ್ಟು ಕೆಲ ವರ್ಷಗಳೇ ಕಳೆದಿವೆ. ಬೆಂಗಳೂರಿನ ರೇವಾ ಕಂಪನಿಯು ‘ರೇವಾ’ ಹೆಸರಿನ ಇ–ಕಾರನ್ನು 2002ರಲ್ಲೇ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಆನಂತರ ರೇವಾ ಸಂಸ್ಥೆಯನ್ನು ಮಹೀಂದ್ರಾ ಅಂಡ್ ಮಹೀಂದ್ರಾ ಸ್ವಾಧೀನಪಡಿಸಿಕೊಂಡಿದೆ. ವಿದ್ಯುತ್‌ಚಾಲಿತ ವಾಹನಗಳ ತಯಾರಿಕೆ ಉದ್ದೇಶಕ್ಕೆ ₹ 900 ಕೋಟಿಗಳಷ್ಟು ಬಂಡವಾಳ ಹೂಡಿಕೆ ಮಾಡಲು ಮಹೀಂದ್ರಾ ಸಮೂಹ ನಿರ್ಧರಿಸಿದೆ. ಈ ಹೂಡಿಕೆ ಮೊತ್ತದಲ್ಲಿ ಕರ್ನಾಟಕದಲ್ಲಿ ₹ 400 ಕೋಟಿ ಮತ್ತು ಮಹಾರಾಷ್ಟ್ರದಲ್ಲಿ ₹ 500 ಕೋಟಿ ತೊಡಗಿಸಲಾಗುತ್ತಿದೆ.

* ಮೂಲ ಸೌಕರ್ಯಗಳು ಇವೆಯೇ?
ವಿದ್ಯುತ್‌ಚಾಲಿತ ವಾಹನಗಳ ಬಳಕೆ ಹೆಚ್ಚಿದಂತೆ ಚಾರ್ಜಿಂಗ್‌ ಕೇಂದ್ರಗಳಂತಹ ಮೂಲ ಸೌಕರ್ಯಗಳೂ ಹೆಚ್ಚಬೇಕಾಗಿದೆ. ಇಂತಹ ಕೇಂದ್ರಗಳು ಬರೀ ಮಹಾನಗರಗಳಿಗಷ್ಟೇ ಸೀಮಿತವಾಗದೆ, ಇತರ ನಗರ, ಪಟ್ಟಣಗಳಿಗೂ ವಿಸ್ತರಣೆಗೊಳ್ಳಬೇಕು. ಹೆದ್ದಾರಿ ಉದ್ದಕ್ಕೂ ಇರಬೇಕಾಗುತ್ತದೆ. ಇಂತಹ ಚಾರ್ಜಿಂಗ್‌ ಕೇಂದ್ರಗಳನ್ನು ‘ಸೇವಾ ಉದ್ದಿಮೆ’ಯಾಗಿ ಅಥವಾ ‘ಬರೀ ವಿದ್ಯುತ್‌ ಮಾರಾಟ’ ಕೇಂದ್ರಗಳಾಗಿ ಪರಿಗಣಿಸಬೇಕೇ ಎನ್ನುವುದು ಮಾತ್ರ ಇನ್ನೂ ನಿರ್ಧಾರವಾಗಿಲ್ಲ.

* ಗುರಿ ತಲುಪಲು ಸಾಧ್ಯವೇ?
2030ರ ಗಡುವಿಗೆ ಕೇವಲ 12 ವರ್ಷಗಳು ಬಾಕಿ ಉಳಿದಿವೆ. ಅಷ್ಟರ ಒಳಗೆ ಗುರಿ ತಲುಪಲು ಸಾಧ್ಯವೇ ಎನ್ನುವ ಪ್ರಶ್ನೆಯೂ ಇಲ್ಲಿ ಉದ್ಭವಿಸುತ್ತದೆ. ಕಾಲಮಿತಿ ಒಳಗೆ ಗುರಿ ಸಾಧಿಸುವುದು ತುಂಬ ಕಠಿಣ ಸವಾಲು. ನಿರ್ದಿಷ್ಟ ಮುನ್ನೋಟ, ಚಾರ್ಜಿಂಗ್‌ ಮೂಲಸೌಕರ್ಯ, ಉತ್ತೇಜನಾ ಕ್ರಮಗಳು ಮತ್ತು ರಾಜ್ಯ ಸರ್ಕಾರಗಳ ನಿಲುವು ಕೂಡ ಇಲ್ಲಿ ಮುಖ್ಯವಾಗುತ್ತದೆ.

* ಸರ್ಕಾರದ ಗೊಂದಲ
ಕೇಂದ್ರ ಸರ್ಕಾರ ತನ್ನ ಕನಸಿನ ಯೋಜನೆಗೆ ನೆರವಾಗುವ ಸಮಗ್ರ ನೀತಿಯನ್ನೇ ಇದುವರೆಗೆ ರೂಪಿಸಿಲ್ಲ. ‘ಸದ್ಯಕ್ಕೆ ಯಾವುದೇ ನೀತಿ ಪ್ರಕಟಿಸುವ ಅಗತ್ಯ ಇಲ್ಲ’ ಎಂದು ಭೂಸಾರಿಗೆ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ. ‘ಕ್ರಿಯಾ ಯೋಜನೆ ಇದ್ದರೆ ಸಾಕು’ ಎಂದು ನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್‌ ಹೇಳಿದ್ದಾರೆ. ಇಂತಹ ವಾಹನಗಳಲ್ಲಿ ಅಳವಡಿಸಬಹುದಾದ ತಂತ್ರಜ್ಞಾನದ (EV technology ) ಬಗ್ಗೆಯೂ ಸರ್ಕಾರ ಸ್ಪಷ್ಟವಾಗಿ ಏನನ್ನೂ ಹೇಳಿಲ್ಲ. ನಾರ್ವೆ ಮತ್ತು ಡೆನ್ಮಾರ್ಕ್‌ಗಳಲ್ಲಿ ಇರುವಂತೆ ತಂತ್ರಜ್ಞಾನ ಆಯ್ಕೆ ತಮಗೆ ಬಿಟ್ಟುಕೊಡಬೇಕು ಎನ್ನುವುದು ವಾಹನ ತಯಾರಿಕಾ ಸಂಸ್ಥೆಗಳ ನಿಲುವಾಗಿದೆ.

* ಉದ್ಯಮದ ನಿಲುವು
ಕೇಂದ್ರ ಸರ್ಕಾರದ ಅಸ್ಪಷ್ಟ ಧೋರಣೆಯ ಹೊರತಾಗಿಯೂ, ಪರಿಸರಸ್ನೇಹಿ ವಾಹನಗಳನ್ನು ಅಭಿವೃದ್ಧಿಪಡಿಸುವ ದಿಸೆಯಲ್ಲಿ ನಾವು ಈಗಾಗಲೇ ಕಾರ್ಯಪ್ರವೃತ್ತವಾಗಿರುವುದಾಗಿ ದೇಶದ ಪ್ರಮುಖ ವಾಹನ ತಯಾರಿಕಾ ಸಂಸ್ಥೆಗಳು ಹೇಳಿಕೊಂಡಿವೆ. ಮಾರುತಿ ಸುಜುಕಿ, ಮಹೀಂದ್ರಾ ಎಲೆಕ್ಟ್ರಿಕ್‌ ಮತ್ತು ಮರ್ಸಿಡಿಸ್‌ ಬೆಂಜ್‌... ಇವೆಲ್ಲ ವಿದ್ಯುತ್‌ಚಾಲಿತ ವಾಹನಗಳ ತಯಾರಿಕೆಗೆ ಮುಂದಾಗಿವೆ.

* ವಾಹನ ಮೇಳದ ಪಾತ್ರ ಏನು?
ಜನವರಿಯಲ್ಲಿ ದೆಹಲಿಯಲ್ಲಿ ನಡೆದ ದಕ್ಷಿಣ ಏಷ್ಯಾದ ಅತಿದೊಡ್ಡ ವಾಹನ ಮೇಳದಲ್ಲಿ ಭಾಗವಹಿಸಿದ್ದ ವಾಹನ ತಯಾರಿಕಾ ಸಂಸ್ಥೆಗಳು ತಮ್ಮ, ತಮ್ಮ ವಿದ್ಯುತ್‌ ಚಾಲಿತ ವಾಹನಗಳ ಪರಿಕಲ್ಪನೆಯನ್ನಷ್ಟೇ ಪ್ರದರ್ಶಿಸಿದವು. ಟಾಟಾ ಮೋಟರ್ಸ್‌ ಮತ್ತು ಮಹೀಂದ್ರಾ ಅಂಡ್‌ ಮಹೀಂದ್ರಾ ಮಾತ್ರ ವಿದ್ಯುತ್‌ಚಾಲಿತ ವಾಹನಗಳನ್ನು ಪ್ರದರ್ಶಿಸಿದವು. ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳೂ ಗಮನ ಸೆಳೆದವು.

* ಎಸ್‌ಎಂಇವಿ ಪಾತ್ರ ಏನು?
ವಿದ್ಯುತ್‌ಚಾಲಿತ ವಾಹನ ಮತ್ತು ಇಂತಹ ವಾಹನಗಳ ಬಿಡಿಭಾಗ ತಯಾರಕರನ್ನು ಎಸ್‌ಎಂಇವಿ ಪ್ರತಿನಿಧಿಸುತ್ತದೆ. ವಿದ್ಯುತ್‌ಚಾಲಿತ ವಾಹನಗಳ ತಯಾರಿಕೆ, ಬಳಕೆ, ಆಮದು ಸುಂಕ ಕಡಿತಕ್ಕೆ ಸಂಬಂಧಿಸಿದ ನೀತಿ ನಿರೂಪಣೆ ಸಿದ್ಧಪಡಿಸಲು ಸರ್ಕಾರಕ್ಕೆ ನೆರವಾಗುತ್ತಿದೆ.

* ಏನಿದು ಫೇಮ್‌ ಇಂಡಿಯಾ ಸ್ಕೀಮ್‌?
ವಿದ್ಯುತ್‌ಚಾಲಿತ ವಾಹನಗಳ ತ್ವರಿತ ಅಳವಡಿಕೆ ಮತ್ತು ತಯಾರಿಕಾ ನೀತಿ (ಎಫ್‌ಎಎಂಇ) ಇದಾಗಿದೆ. ಕೇಂದ್ರ ಸರ್ಕಾರವು 2015ರಲ್ಲಿಯೇ ಇದನ್ನು ರೂಪಿಸಿದೆ. ಹೈಬ್ರಿಡ್‌ ಮತ್ತು ವಿದ್ಯುತ್‌ ತಂತ್ರಜ್ಞಾನ ಆಧಾರಿತ ವಾಹನಗಳ ತಯಾರಿಕೆ, ಮಾರುಕಟ್ಟೆ ವಿಸ್ತರಣೆಗೆ ವಿತ್ತೀಯ ಮತ್ತು ಹಣಕಾಸು ಉತ್ತೇಜನಾ ಕ್ರಮಗಳನ್ನು ನೀಡಲು ಈ ನೀತಿ ರೂಪಿಸಲಾಗಿದೆ.

* ಹೊಸ ರಾಷ್ಟ್ರೀಯ ವಾಹನ ನೀತಿ
ವಿದ್ಯುತ್‌ ಚಾಲಿತ (ಇ.ವಿ) ಮತ್ತು ಹೈಬ್ರಿಡ್‌ (ಇಂಧನ ಮತ್ತು ವಿದ್ಯುತ್‌ಚಾಲಿತ) ವಾಹನಗಳ ತಯಾರಿಕೆ ಉತ್ತೇಜಿಸುವ ‘ಉದ್ಯಮ ಸ್ನೇಹಿ’ಯಾದ ರಾಷ್ಟ್ರೀಯ ವಾಹನ ನೀತಿಯನ್ನು ಶೀಘ್ರದಲ್ಲಿಯೇ ರೂಪಿಸುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ತೆರಿಗೆ ಪದ್ಧತಿ ಸರಳಗೊಳಿಸುವುದೂ ಸರ್ಕಾರದ ಉದ್ದೇಶವಾಗಿದೆ. ಇದರಿಂದ ಈ ಉದ್ದಿಮೆಗೆ ಸ್ಥಿರತೆ ಒದಗುವುದರ ಜತೆಗೆ ವಿದೇಶಿ ಹೂಡಿಕೆದಾರರಲ್ಲಿ ವಿಶ್ವಾಸವನ್ನೂ ಮೂಡಿಸಲಿದೆ.

*ಮಾರುಕಟ್ಟೆಯ ಸ್ವರೂಪ
ವಿದ್ಯುತ್‌ಚಾಲಿತ ವಾಹನಗಳ ದೇಶಿ ಮಾರುಕಟ್ಟೆಯು ವಿಶ್ವದ ಮಾರುಕಟ್ಟೆಗಿಂತ ತುಂಬ ಭಿನ್ನವಾಗಿದೆ. ವಿಶ್ವದ ಇತರ ದೇಶಗಳಿಗೆ ಹೋಲಿಸಿದರೆ ಹಿಂದೆ ಉಳಿದಿದೆ. ಇಲ್ಲಿನ ಆರ್ಥಿಕತೆ, ಮಾರುಕಟ್ಟೆಯ ಅಗತ್ಯ ಮತ್ತು ಗ್ರಾಹಕರ ನಿಲುವುಗಳೆಲ್ಲ ಈ ಪರಿಸರಸ್ನೇಹಿ ವಾಹನಗಳ ಭವಿಷ್ಯ ನಿರ್ಧರಿಸಲಿವೆ. ದ್ವಿಚಕ್ರ ವಾಹನಗಳ ಬಳಕೆಯಲ್ಲಿಯೂ ಭಾರತ ಅತಿದೊಡ್ಡ ಮಾರುಕಟ್ಟೆಯಾಗಿದೆ. ವಿದ್ಯುತ್‌ಚಾಲಿತ ಬೈಕ್‌ಗಳ ಬಳಕೆ ಹೆಚ್ಚಿಸುವಲ್ಲಿ ಸುಲಭವಾಗಿ ಚಾರ್ಜಿಂಗ್‌ ಸೌಲಭ್ಯಗಳು ಎಟುಕುವುದೂ ತುಂಬ ಮುಖ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT