ಅಡಿಕೆ ಚಹಾ: ಸ್ಟಾರ್ಟ್ಅಪ್ ಪ್ರಶಸ್ತಿ

7
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ನಿವೇದನ್‌ ನೆಂಪೆ ಅವರಿಗೆ ಗೌರವ

ಅಡಿಕೆ ಚಹಾ: ಸ್ಟಾರ್ಟ್ಅಪ್ ಪ್ರಶಸ್ತಿ

Published:
Updated:
ಅಡಿಕೆ ಚಹಾ: ಸ್ಟಾರ್ಟ್ಅಪ್ ಪ್ರಶಸ್ತಿ

ಮಂಗಳೂರು: ಭಾರತೀಯ ಆಹಾರ ಮತ್ತು ಕೃಷಿ ಮಂಡಳಿಯು (ಐಸಿಎಫ್‌ಎ) ನೀಡುವ ಈ ವರ್ಷದ ಅತ್ಯುತ್ತಮ ಕೃಷಿ ಸ್ಟಾರ್ಟ್‌ಅಪ್‌ ಉತ್ಪನ್ನ ಪ್ರಶಸ್ತಿಗೆ ಅಡಿಕೆ ಚಹಾ ಪಾತ್ರವಾಗಿದೆ.

ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕ್ಯಾಂಪ್ಕೊ ಅಧ್ಯಕ್ಷ ಎಸ್‌.ಆರ್. ಸತೀಶ್ಚಂದ್ರ, ‘ಈ ಹಿಂದೆ ಅಡಿಕೆ ಚಹಾಕ್ಕೆ ಭಾರತದಲ್ಲಿಯೇ ತಯಾರಿಸಿ ಪ್ರಶಸ್ತಿ ದೊರೆತಿದ್ದು, ಈಗ ಮತ್ತೆ ರಾಷ್ಟ್ರೀಯ ಪ್ರಶಸ್ತಿ ದೊರೆತಿದೆ’ ಎಂದರು.

‘ಅಡಿಕೆಯಲ್ಲಿರುವ ಆರೋಗ್ಯದಾಯಕ ಅಂಶಗಳನ್ನು ಗುರುತಿಸಿ ಚಹಾವನ್ನು ಸಂಶೋಧಿಸುವ ಮೂಲಕ, ಅಡಿಕೆಗೆ ಮತ್ತಷ್ಟು ಬೇಡಿಕೆ ತರಲು ಮುಂದಾಗಿರುವ ಸಂಶೋಧಕ ನಿವೇದನ್ ನೆಂಪೆ ಅವರನ್ನು ಅಭಿನಂದಿಸುವೆ’ ಎಂದರು.

‘ಅಡಿಕೆ ಆರೋಗ್ಯಕ್ಕೆ ಹಾನಿಕಾರಕ, ಕ್ಯಾನ್ಸರ್‌ಕಾರಕ ಎಂಬಿತ್ಯಾದಿ ಗುಲ್ಲು ಹಬ್ಬುತ್ತಿರುವ ಈ ಸಂದರ್ಭದಲ್ಲಿ, ಅಡಿಕೆ ಅರೋಗ್ಯದಾಯಕವೆಂದು ಸಾಬೀತುಪಡಿಸುವ ಅಡಿಕೆ ಟೀ ಇಂದು ರಾಷ್ಟ್ರ ಮನ್ನಣೆಗೆ ಪಾತ್ರವಾಗುತ್ತಿದೆ. ಕೇಂದ್ರ ಸರ್ಕಾರವೇ ಇದನ್ನು ಗುರುತಿಸಿ, ಗೌರವಿಸುತ್ತಿರುವುದು ಪ್ರಸ್ತುತವಾಗಿದೆ’ ಎಂದರು.

‘ನವದೆಹಲಿಯಲ್ಲಿ ಐಸಿಎಫ್‌ಎ ವತಿಯಿಂದ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವ ಸುರೇಶ ಪ್ರಭು ಅವರು ನಿವೇದನ್ ನೆಂಪೆ ಅವರಿಗೆ ಪುರಸ್ಕಾರ ಪ್ರದಾನ ಮಾಡಿದ್ದಾರೆ’ ಎಂದರು.

ನಿವೇದನ್‌ ನೆಂಪೆ ಮಾತನಾಡಿ, ‘ಅಡಿಕೆ ಚಹಾದ ಕುರಿತು ಮಾನ್ಯತೆ ಪಡೆದ ಪ್ರಯೋಗಾಲಯಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಮಧ್ಯಂತರ ವರದಿ ಬಂದಿದೆ. ಕೆಲವೇ ದಿನಗಳಲ್ಲಿ ಪೂರ್ಣ ವರದಿ ಬರಲಿದ್ದು, ಬಹಳಷ್ಟು ಗೊಂದಲಗಳಿಗೆ ತೆರೆ ಬೀಳುವ ಸಾಧ್ಯತೆ ಇದೆ’ ಎಂದರು.

‘ಅಡಿಕೆ ಚಹಾವನ್ನು ವಿದೇಶಗಳಿಗೆ ರಫ್ತು ಮಾಡಲಾಗುತ್ತಿದ್ದು, ವೆಸ್ಟ್‌ಇಂಡೀಸ್‌ನಿಂದ ಬಹಳಷ್ಟು ಬೇಡಿಕೆ ಬಂದಿದೆ. ಅಮೆರಿಕ ಮತ್ತು ನೆದರ್‌ಲ್ಯಾಂಡ್ಸ್‌ಗೆ ರಫ್ತು ಮಾಡುವ ಯೋಜನೆಯೂ ಇದೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry