‘ಜಾತಿ ವಿನಾಶಕ್ಕೆ ಮೀಸಲಾತಿ’

ಶನಿವಾರ, ಮಾರ್ಚ್ 23, 2019
34 °C
ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ಉದ್ಘಾಟಿಸಿದ ಸಿದ್ದರಾಮಯ್ಯ

‘ಜಾತಿ ವಿನಾಶಕ್ಕೆ ಮೀಸಲಾತಿ’

Published:
Updated:
‘ಜಾತಿ ವಿನಾಶಕ್ಕೆ ಮೀಸಲಾತಿ’

ಬೆಂಗಳೂರು: ‘ಜಾತಿ ವ್ಯವಸ್ಥೆ ಹೋಗಬೇಕಾದರೆ ‌ಶೋಷಿತ ಮತ್ತು ಹಿಂದುಳಿದ ಸಮಾಜಗಳಿಗೆ ಮೀಸಲಾತಿ ಸೌಲಭ್ಯ ಇರಲೇಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದರು.

ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.

ಮೀಸಲಾತಿ ಇಲ್ಲದಿದ್ದರೆ ಶಿಕ್ಷಣ ಮತ್ತು ಸಂಪತ್ತು ಸಮಾನ ಹಂಚಿಕೆಯಾಗುವುದಿಲ್ಲ. ಬಡವ ಮತ್ತು ಶ್ರೀಮಂತರ ನಡುವೆ ಅಂತರ ಹೆಚ್ಚಾಗಿ ಜಾತಿ ವ್ಯವಸ್ಥೆ ಮತ್ತಷ್ಟು ಗಟ್ಟಿಯಾಗುತ್ತದೆ ಎಂದರು.

ಅಂಬಿಗ ಸಮುದಾಯವನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸುವ ಸಂಬಂಧ ಕೇಂದ್ರಕ್ಕೆ ಈ ಹಿಂದೆಯೇ ಶಿಫಾರಸು ಮಾಡಲಾಗಿದೆ. ಸಮುದಾಯದ ಮುಖಂಡರು ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದು ಸಿದ್ದರಾಮಯ್ಯ ಸಲಹೆ ನೀಡಿದರು.

‘ಮೀನುಗಾರರ ಅಭಿವೃದ್ಧಿಗೆ ಇನ್ನಷ್ಟು ಕಾರ್ಯಕ್ರಮ ರೂಪಿಸುವ ಆಲೋಚನೆ ಇದೆ. ಬಡವರು ಮತ್ತು ಸಾಮಾಜಿಕ ನ್ಯಾಯದ ಪರವಾಗಿ ನಾನು ಎಂದಿಗೂ ಇರುತ್ತೇನೆ. ನನ್ನೊಂದಿಗೆ ನೀವು ಇರಬೇಕು’ ಎಂದರು.

ಉಪ್ಪಾರ ಅಭಿವೃದ್ಧಿ ನಿಗಮಕ್ಕೂ ಚಾಲನೆ

ಬೆಂಗಳೂರು:
ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನಗರದಲ್ಲಿ ಶುಕ್ರವಾರ ಉದ್ಘಾಟಿಸಿದರು.

ನಿಗಮದ ಸಾಲ ಸೌಲಭ್ಯದ ಯೋಜನೆಗೆ ಆಯ್ಕೆಯಾದ ಕೋಲಾರದ ಧನಲಕ್ಷ್ಮಿ, ತುಮಕೂರಿನ ಎಚ್.ಎ.ನಾಗರಾಜ್ ಹಾಗೂ ಮಂಜುನಾಥ್ ಅವರಿಗೆ ಚೆಕ್‌ಗಳನ್ನು ಹಸ್ತಾಂತರಿಸಲಾಯಿತು. ರಾಜ್ಯ ಉಪ್ಪಾರ ಸಂಘದ ವತಿಯಿಂದ ಮುಖ್ಯಮಂತ್ರಿ ಅವರಿಗೆ ಬೆಳ್ಳಿಗದೆ ನೀಡಿ ಗೌರವಿಸಲಾಯಿತು.

ಬಳಿಕ ಮಾತನಾಡಿದ ಸಿದ್ದರಾಮಯ್ಯ, ‘ಎಲ್ಲ ಸಮುದಾಯಗಳು ಒಂದೇ ನಿಗಮದಡಿ ಇದ್ದರೆ ಹೆಚ್ಚಿನ ಸೌಲಭ್ಯ ಸಿಗುವುದಿಲ್ಲ. ಹೀಗಾಗಿ, ಪ್ರತ್ಯೇಕ ನಿಗಮ ಸ್ಥಾಪಿಸಿದ್ದೇವೆ ಎಂದರು.

‘ಸವಿತಾ, ಗೊಲ್ಲ, ತಿಗಳ ಹಾಗೂ ಮಡಿವಾಳ ಸಮುದಾಯವರೂ ನಿಗಮಗಳ ಸ್ಥಾಪನೆಗೆ ಬೇಡಿಕೆ ಇಟ್ಟಿದ್ದಾರೆ. ಅದು ಸಾಧ್ಯವಾಗದ ಕಾರಣಕ್ಕೆ ಆ ಸಮುದಾಯಗಳಿಗೆ ಪ್ರತ್ಯೇಕವಾಗಿ ₹ 100 ಕೋಟಿ ಅನುದಾನ ಮೀಸಲಿಟ್ಟಿದ್ದೇವೆ’ ಎಂದು ಹೇಳಿದರು.

‘ಉಪ್ಪಾರ ಅಭಿವೃದ್ಧಿ ನಿಗಮಕ್ಕೆ ₹100 ಕೋಟಿ ಮೀಸಲಿಡುವಂತೆ ಬೇಡಿಕೆ ಇಟ್ಟಿದ್ದಾರೆ. ಅದಕ್ಕಿಂತ ಹೆಚ್ಚಿನ ಅನುದಾನ ನೀಡುತ್ತೇನೆ. ಸಮುದಾಯವನ್ನು ಎಸ್‌ಟಿ ಪಟ್ಟಿಗೆ ಸೇರಿಸಲು ಕ್ರಮಕೈಗೊಳ್ಳುತ್ತೇನೆ’ ಎಂದರು.

‘ಪುಟ್ಟರಂಗಶೆಟ್ಟಿ ಅವರು ಮಂತ್ರಿಯಾಗಬೇಕಿತ್ತು. ಆದರೆ, ಅದು ಸಾಧ್ಯವಾಗಿಲ್ಲ. ಮುಂದಿನ ಬಾರಿ ನಾವೇ ಅಧಿಕಾರಕ್ಕೆ ಬರುತ್ತೇವೆ. ಶೆಟ್ಟಿ ಅವರನ್ನು ಮಂತ್ರಿ ಮಾಡುತ್ತೇನೆ. ಅದಕ್ಕೆ ನೀವೆಲ್ಲ ಆಶೀರ್ವಾದಿಸಿ’ ಎಂದರು.

ಪುಟ್ಟರಂಗಶೆಟ್ಟಿ, ‘ಮೀನುಗಾರರಿಗೆ ಸರ್ಕಾರದಿಂದ ಕಲ್ಪಿಸುವ ವಿಶೇಷ ಸೌಲಭ್ಯದ ವ್ಯಾಪ್ತಿಗೆ ನಮ್ಮ ಸಮುದಾಯವನ್ನು ಸೇರಿಸಬೇಕು’ ಎಂದರು.

ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ, ‘ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದ ಈ ಸಮುದಾಯಕ್ಕೆ ಸರ್ಕಾರ ನೆರವು ನೀಡಿದೆ. ಧ್ವನಿ ಇಲ್ಲದವರಿಗೆ ಧ್ವನಿಗೂಡಿಸುವ ಕೆಲಸವನ್ನು ಮುಖ್ಯಮಂತ್ರಿ ಮಾಡಿದ್ದಾರೆ’ ಎಂದರು.

*

ಹಿಂದುಳಿದವರು ಹಣೆಪಟ್ಟಿಯಿಂದ ವಿಮೋಚನೆಗೊಳ್ಳಲು ಶಿಕ್ಷಣ ಒಂದೇ ಮಾರ್ಗ. ಯಾವುದೇ ಸೌಲಭ್ಯ ಕಲ್ಪಿಸಿದರೂ ಆ ಹಣೆಪಟ್ಟಿ ಕಳಚುವುದಿಲ್ಲ.

–ಸಿದ್ದರಾಮಯ್ಯ, ಮುಖ್ಯಮಂತ್ರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry