ವಿಮಾನದಲ್ಲಿ ಬಂದು ಕಳ್ಳತನ ಎಸಗುತ್ತಿದ್ದರು!

ಮಂಗಳವಾರ, ಮಾರ್ಚ್ 26, 2019
31 °C

ವಿಮಾನದಲ್ಲಿ ಬಂದು ಕಳ್ಳತನ ಎಸಗುತ್ತಿದ್ದರು!

Published:
Updated:
ವಿಮಾನದಲ್ಲಿ ಬಂದು ಕಳ್ಳತನ ಎಸಗುತ್ತಿದ್ದರು!

ಬೆಂಗಳೂರು: ವಿಮಾನದಲ್ಲಿ ನಗರಕ್ಕೆ ಬಂದು ಕಳ್ಳತನ ಎಸಗಿ ಪುನಃ ವಿಮಾನದಲ್ಲೇ ಪರಾರಿಯಾಗುತ್ತಿದ್ದ ಅಂತರರಾಜ್ಯ ಡಕಾಯಿತರ ತಂಡದ ನಾಲ್ವರು ಆರೋಪಿಗಳನ್ನು ಜೆ.ಸಿ.ನಗರ ಪೊಲೀಸರು ಬಂಧಿಸಿದ್ದಾರೆ.

ನೇಪಾಳದ ಸುಮನ್ ಬಹಾದ್ದೂರ್ ಬಿಷ್ಟ್ (27), ಪ್ರಕಾಶಗಿರಿ ಅಲಿಯಾಸ್‌ ಧನ್‍ರಾಜ್ ಗಿರಿ (39), ಕಿಶನ್‍ಗಿರಿ (29) ಹಾಗೂ ಬೇನ್ ಖಡಕಾ (19) ಬಂಧಿತರು. ಅವರಿಂದ ₹7 ಲಕ್ಷ ಮೌಲ್ಯದ ಸ್ವತ್ತು ಹಾಗೂ ಕೃತ್ಯಕ್ಕೆ ಬಳಸಿದ್ದ ಚಾಕು ಜಪ್ತಿ ಮಾಡಲಾಗಿದೆ.

ಮಿಲ್ಲರ್ಸ್ ರಸ್ತೆಯಲ್ಲಿ ವಾಸವಿರುವ ಆಭರಣ ವ್ಯಾಪಾರಿ ಅಶೋಕ ಭಾಟಿಯಾ ಮನೆಗೆ ಫೆ. 20ರಂದು ನುಗ್ಗಿದ್ದ ಆರೋಪಿಗಳು, ಮನೆಯಲ್ಲಿದ್ದ ಯೊಗೇಶ್ ಶರ್ಮಾ ಮತ್ತು ಹಿತೇಶ್ ಶರ್ಮಾ ಅವರಿಗೆ ಚಾಕು ತೋರಿಸಿ ಬೆದರಿಸಿದ್ದರು. ಬಳಿಕ ಇಬ್ಬರನ್ನೂ ಕಂಬಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿ ತಿಜೋರಿ ಸಮೇತ ಆಭರಣಗಳನ್ನು ಕದ್ದುಕೊಂಡು ಅಶೋಕ ಅವರ ಕಾರಿನಲ್ಲೇ ಆರೋಪಿಗಳು ಪರಾರಿಯಾಗಿದ್ದರು. ಈ ಪ್ರಕರಣದ ಬಗ್ಗೆ ತನಿಖೆ ಕೈಗೊಂಡಿದ್ದ ಪೊಲೀಸರು, ಘಟನೆ ನಡೆದು ಐದೇ ದಿನದಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.

‘ಆರೋಪಿಗಳು ಬನಶಂಕರಿಯ ಮತ್ತೊಂದು ಮನೆಯಲ್ಲಿ ಕಳ್ಳತನ ಮಾಡಲು ಸಂಚು ರೂಪಿಸಿದ್ದರು. ಅದಕ್ಕಾಗಿ ಬಹಾದ್ದೂರ್ ಬಿಷ್ಟ್, ಪುಣೆಯಿಂದ ವಿಮಾನದಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ. ಆತನನ್ನು ನಿಲ್ದಾಣದಲ್ಲೇ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಉಳಿದೆಲ್ಲ ಆರೋಪಿಗಳ ಬಗ್ಗೆ ಬಾಯ್ಬಿಟ್ಟ’ ಎಂದು ಪೊಲೀಸರು ತಿಳಿಸಿದರು.

‘ಪ್ರತಿಬಾರಿಯೂ ವಿಮಾನದಲ್ಲೇ ಬರುತ್ತಿದ್ದ ಈ ಆರೋಪಿಗಳು, ಒಂದು ದಿನ ನಗರದಲ್ಲಿ ವಾಸವಿರುತ್ತಿದ್ದರು. ಅಂದೇ ರಾತ್ರಿ ಕಳ್ಳತನ ಎಸಗಿ, ಪರಾರಿಯಾಗುತ್ತಿದ್ದರು. ಕೆಲ ಆರೋಪಿಗಳು, ನಗರದಲ್ಲೇ ಉಳಿದುಕೊಂಡು ಕಳ್ಳತನಕ್ಕೆ ಸಂಚು ರೂಪಿಸುತ್ತಿದ್ದರು. ಕಳ್ಳತನಕ್ಕೆ ನಿಗದಿ ಮಾಡಿದ ದಿನದಂದು ಇತರೆ ಆರೋಪಿಗಳನ್ನು ನಗರಕ್ಕೆ ಕರೆಸಿಕೊಂಡು ಕೃತ್ಯ ಎಸಗುತ್ತಿದ್ದರು. ಈ ಆರೋಪಿಗಳ ವಿರುದ್ಧ ಮಹಾರಾಷ್ಟ್ರದಲ್ಲೂ ಪ್ರಕರಣಗಳು ದಾಖಲಾಗಿವೆ’ ಎಂದರು.

ತಪ್ಪಿದ ಕಳ್ಳತನ: ಚಾಲಕ ವಶಕ್ಕೆ

‘ಆರೋಪಿಗಳು ಕಳ್ಳತನಕ್ಕೆ ಸಂಚು ರೂಪಿಸಿದ್ದ ಬನಶಂಕರಿಯ ಉದ್ಯಮಿಯ ಮನೆಯಲ್ಲೇ ನೇಪಾಳದ ವ್ಯಕ್ತಿಯೊಬ್ಬ ಚಾಲಕನಾಗಿದ್ದ. ಎರಡು ತಿಂಗಳ ಹಿಂದೆ ಆತ ಕೆಲಸ ಬಿಟ್ಟಿದ್ದ. ಪ್ರತಿ ಭಾನುವಾರ ಉದ್ಯಮಿ ಕುಟುಂಬವು ಪ್ರವಾಸಕ್ಕೆ ಹೊರಗಡೆ ಹೋಗುತ್ತದೆ ಎಂಬ ಮಾಹಿತಿಯನ್ನು ಆತನೇ ಆರೋಪಿಗಳಿಗೆ ತಿಳಿಸಿದ್ದ’ ಎಂದು ಪೊಲೀಸರು ತಿಳಿಸಿದರು.

‘ಫೆ. 25ರಂದು ಭಾನುವಾರ ಮಧ್ಯಾಹ್ನ ಮನೆಗೆ ನುಗ್ಗಿ ಕೃತ್ಯ ಎಸಗಲು ಸಜ್ಜಾಗಿದ್ದ ಆರೋಪಿಗಳನ್ನು, ಕಳ್ಳತನಕ್ಕೂ ಮುನ್ನವೇ ಬಂಧಿಸಿದೆವು. ಜತೆಗೆ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry