ಬೆಳ್ಳಂದೂರು ಕೆರೆಗೆ ಕೋರಮಂಗಲದ ನೀರು

7

ಬೆಳ್ಳಂದೂರು ಕೆರೆಗೆ ಕೋರಮಂಗಲದ ನೀರು

Published:
Updated:

ಬೆಂಗಳೂರು: ಕೋರಮಂಗಲದಲ್ಲಿ ಜಲಮಂಡಳಿ ನಿರ್ಮಿಸಲಿರುವ 21 ಕೋಟಿ ಲೀಟರ್ ಸಾಮರ್ಥ್ಯದ ಕೊಳಚೆ ನೀರು ಸಾಗಿಸುವ ಜಲರೇಚಕ ಯಂತ್ರಾಗರ ಕಟ್ಟಡ (ಐಎಸ್‌ಪಿಎಸ್) ಮತ್ತು ಪಂಪಿಂಗ್‌ ಮೇನ್‌ ಕಾಮಗಾರಿಗಳಿಗೆ ಸಚಿವ ಕೆ.ಜೆ. ಜಾರ್ಜ್‌ ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿದರು.

₹104 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಇಲ್ಲಿಂದ ಕೆ.ಸಿ. ಕಣಿವೆಯ ಕೊಳಚೆ ನೀರು ಸಂಸ್ಕರಣಾ ಘಟಕಕ್ಕೆ ನೀರು ಹರಿಸಲು 5.5 ಕಿ.ಮೀ ಉದ್ದದ ಕೊಳವೆ ಮಾರ್ಗ ನಿರ್ಮಿಸಲಾಗುವುದು. 1,800 ಮಿ.ಮೀ ವ್ಯಾಸದ ಕೊಳವೆಗಳನ್ನು ಬಳಸಲಾಗುವುದು.

ಗೃಹ ಸಚಿವ ರಾಮಲಿಂಗಾರೆಡ್ಡಿ, ‘ರಾಷ್ಟ್ರೀಯ ಕ್ರೀಡಾ ಗ್ರಾಮದಲ್ಲಿ ಹೊಸ

ದಾಗಿ ಮನೆಗಳು ನಿರ್ಮಾಣವಾಗುತ್ತಿವೆ. ಒಂದೆರಡು ಇದ್ದ ಮನೆಗಳ ಜಾಗದಲ್ಲಿ ಹತ್ತು–ಹನ್ನೆರಡು ಮನೆಗಳು ನಿರ್ಮಾಣವಾಗಿವೆ. ಇಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ನೀರನ್ನು ಸಂಸ್ಕರಿಸಿ ಸಾಗಿಸುವ ಸಮಸ್ಯೆಗೆ ಇದು ಪರಿಹಾರವಾಗಲಿದೆ’ ಎಂದರು.

ಬೆಳ್ಳಂದೂರು ಕೆರೆಯ ಹೂಳೆತ್ತುವ ಮೂಲಕ ಸಂಸ್ಕರಣೆಗೊಂಡ ನೀರು ಸರಾಗವಾಗಿ ಹರಿಯುವಂತೆ ಮಾಡಲಾಗುವುದು. ಅಲ್ಲದೆ, ಪ್ರವಾಹ ತಡೆಯಲು ಇರುವ ಗೇಟ್‌ಗಳನ್ನು ಸರಿಪಡಿಸುವ ಕೆಲಸವೂ ಪ್ರಗತಿಯಲ್ಲಿದೆ. ಕೋರಮಂಗಲ ಸುತ್ತಮುತ್ತಲ ಪ್ರದೇಶಗಳಲ್ಲಿ ಮಳೆಗಾಲದಲ್ಲಿ ರಾಜಕಾಲುವೆಯ ನೀರು ತುಂಬಿ ರಸ್ತೆಗಳಲ್ಲಿ ಹರಿಯುತ್ತಿತ್ತು. ಈ ಕಾಮಗಾರಿ ಪೂರ್ಣಗೊಂಡ ನಂತರ ಆ ಸಮಸ್ಯೆ ಶಾಶ್ವತವಾಗಿ ಪರಿಹಾರಗೊಳ್ಳಲಿದೆ ಎಂದರು.140 ಕೋಟಿ ಲೀಟರ್‌ ಕಾವೇರಿ ನೀರು ಹಾಗೂ ಅಂತರ್ಜಲದಿಂದ 40 ಕೋಟಿ ಲೀಟರ್‌ ಸೇರಿ ನಗರಕ್ಕೆ ದಿನಕ್ಕೆ ಒಟ್ಟು 180 ಕೋಟಿ ಲೀಟರ್‌ ನೀರು ಪೂರೈಕೆ ಆಗುತ್ತಿದೆ. ಬಳಕೆಯಾದ ಶೇ 80ರಷ್ಟು ಕೊಳಚೆ ನೀರನ್ನು ಸಂಸ್ಕರಿಸಲು ಘಟಕಗಳನ್ನು ಸ್ಥಾಪಿಸಲಾಗಿದೆ. ಉಳಿದ ನೀರು ಸಂಸ್ಕರಣೆಗೆ ಘಟಕಗಳ ನಿರ್ಮಿಸಲಾಗುತ್ತಿದೆ ಎಂದು ಜಾರ್ಜ್‌ ಮಾಹಿತಿ ನೀಡಿದರು.

ಹಲಸೂರು ಕೆರೆಗೆ ಎಸ್‌ಟಿಪಿ: ಹಲಸೂರು ಕೆರೆಯಂಗಳದಲ್ಲಿ ಎಸ್‌ಬಿಆರ್ (ಸಿಕ್ಯೂವೆಷಿಯಲ್ ಬ್ಯಾಚ್ ರಿಯಾಕ್ಟರ್) ತಂತ್ರಜ್ಞಾನದ 20 ಲಕ್ಷ ಲೀಟರ್‌ ಸಾಮರ್ಥ್ಯದ ತ್ಯಾಜ್ಯ ಸಂಸ್ಕರಣಾ ಘಟಕವನ್ನು ಜಾರ್ಜ್‌ ಉದ್ಘಾಟಿಸಿದರು.

‘ಕೆರೆಯಲ್ಲಿನ ಆಮ್ಲಜನಕ ಕೊರತೆಯಿಂದ ಮೀನುಗಳು ಸಾಯುತ್ತಿದ್ದವು. ಇದನ್ನು ತಡೆಯಲು ಎಸ್‌ಟಿಪಿ ನಿರ್ಮಿಸಲಾಗಿದೆ. ಘಟಕ ನಿರ್ಮಾಣಕ್ಕೆ ₹3.98 ಕೋಟಿ ವೆಚ್ಚ ಮಾಡಲಾಗಿದೆ. ₹5.53 ಕೋಟಿ ವೆಚ್ಚದಲ್ಲಿ ಹತ್ತು ವರ್ಷ ನಿರ್ವಹಣೆ ಮಾಡಲಾಗುತ್ತದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry