ಮೆಣಸಿನಕಾಯಿ ಖರೀದಿ ಕೇಂದ್ರಕ್ಕೆ ಒತ್ತಾಯ

7
ಯೋಗ್ಯ ಬೆಲೆ ಇಲ್ಲದೇ ಕಂಗಾಲಾದ ರೈತರು

ಮೆಣಸಿನಕಾಯಿ ಖರೀದಿ ಕೇಂದ್ರಕ್ಕೆ ಒತ್ತಾಯ

Published:
Updated:
ಮೆಣಸಿನಕಾಯಿ ಖರೀದಿ ಕೇಂದ್ರಕ್ಕೆ ಒತ್ತಾಯ

ಕುಂದಗೋಳ: ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಡಿಲಕ್ಸ್ ಕೆಂಪು ಮೆಣಸಿನಕಾಯಿ ಬೆಳೆ ಕಳೆದ ನಾಲ್ಕು ವರ್ಷಗಳಿಂದ ಸರಿಯಾಗಿ ಮಳೆ ಇಲ್ಲದ್ದರಿಂದ ಉತ್ತಮ ಇಳುವರಿ ಬಂದಿರಲಿಲ್ಲ. ಪ್ರಸಕ್ತ ಸಾಲಿನಲ್ಲಿ ಅಲ್ಪಸ್ವಲ್ಪ ಮಳೆಯಿಂದ ಉತ್ತಮ ಬೆಳೆ ಬಂದಿದೆ. ಆದರೆ ಮಾರುಕಟ್ಟೆಯಲ್ಲಿ ಯೋಗ್ಯ ಬೆಲೆ ಇಲ್ಲದೇ ಸಂಕಷ್ಟವನ್ನು ಎದುರಿಸುವ ಇಲ್ಲಿನ ರೈತ ಸಮುದಾಯ ಪಟ್ಟಣದಲ್ಲೊಂದು ಮೆಣಸಿನಕಾಯಿ ಖರೀದಿ ಕೇಂದ್ರ ತೆರೆಯುವಂತೆ ಆಗ್ರಹಿಸಿದೆ.

ಉತ್ತರ ಕರ್ನಾಟಕದಲ್ಲಿಯೇ ಕುಂದಗೋಳ ತಾಲ್ಲೂಕಿನಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿದ್ದ ಕೆಂಪು ಮೆಣಸಿನಕಾಯಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಮಳೆ ಇಲ್ಲದೇ ಬೆಳೆ ತೆಗೆಯುವುದು ಕುಂಠಿತಗೊಂಡಿತ್ತು. ಈ ವರ್ಷ ಕುಂದಗೋಳ ಹೋಬಳಿಯಲ್ಲಿ 7 ಸಾವಿರ ಹೆಕ್ಟೇರ್‌ ಪ್ರದೇಶ ಹಾಗೂ ಸಂಶಿ ಹೋಬಳಿಯಲ್ಲಿ 5 ಸಾವಿರ ಹೆಕ್ಟೇರ್‌ ಪ್ರದೇಶಗಳಲ್ಲಿ ಮೆಣಸಿನ ಸಸಿಗಳನ್ನು ನಾಟಿ ಮಾಡಲಾಗಿತ್ತು.

ತಾಲ್ಲೂಕಿನ ದೇವನೂರ, ಕಮಡೊಳ್ಳಿ, ತರ್ಲಘಟ್ಟ, ಹಿರೇಹರಕುಣಿ, ಹಿರೇನರ್ತಿ, ಬಸಾಪೂರ, ಸಂಶಿ, ಚಾಕಲಬ್ಬಿ, ಗುಡೇನಕಟ್ಟಿ, ಕಮಡೊಳ್ಳಿ ಗ್ರಾಮಗಳಲ್ಲಿ ಈ ಕೆಂಪು ಡಿಲಕ್ಸ್ ಮೆಣಸಿನಕಾಯಿಯನ್ನು ಬೆಳೆಯುತ್ತಾರೆ. ಪ್ರತಿ ಎಕರೆ ಹೊಲಕ್ಕೆ 3 ರಿಂದ 4 ಕ್ವಿಂಟಲ್‌ವರೆಗೆ ಬರುತ್ತಿದ್ದ ಮೆಣಸಿನ ಬೆಳೆ ಇತ್ತಿತ್ತಲಾಗಿ ಮಳೆ ಸಮರ್ಪಕವಾಗಿ ಆಗದೇ ಇರುವುದರಿಂದ ಈ ವರ್ಷ ಕೇವಲ ಎಕರೆಗೆ 1ರಿಂದ 2 ಕ್ವಿಂಟಲ್‌ ಮಾತ್ರ ಬಂದಿದೆ. ಸಸಿ ನಾಟಿ ಮಾಡುವುದರಿಂದ ಹಿಡಿದು ರಾಸಾಯನಿಕ ಗೊಬ್ಬರ ಕಟ್ಟುವುದು, ಕ್ರಿಮಿನಾಶಕ ಔಷಧಿ ಸಿಂಪರಣೆ, ಹಿಡಿದು ಬೆಳೆ ಕಟಾವು ಮಾಡುವವರೆಗೂ ಪ್ರತಿ ಎಕರೆಗೆ ₹ 7 ರಿಂದ ₹ 8 ಸಾವಿರದವರಿಗೆ ಹಣ ಖರ್ಚಾಗುತ್ತದೆ. ಬೆಳೆ ಬಂದಾಗ ಮಾತ್ರ ಮಾರುಕಟ್ಟೆಯಲ್ಲಿ ಯೋಗ್ಯ ಬೆಲೆ ಸಿಗುವುದಿಲ್ಲ. ಬೆಳೆ ಕಟಾವು ಆಗುವುದಕ್ಕಿಂತ ಮುಂಚೆ ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ ₹ 15ರಿಂದ ₹ 20 ಸಾವಿರದವರಿಗೆ ಇರುವ ದರ ರೈತರು ಕಟಾವ್ ಮಾಡಿ ಒಣಗಿಸಿ ಮಾರಾಟಕ್ಕೆ ಹೋದಾಗ ₹ 8 ರಿಂದ ₹ 10 ಸಾವಿರಕ್ಕೆ ಕುಸಿದಿರುತ್ತದೆ.

ಇಲ್ಲಿ ಬೆಳೆಯುವ ಡಿಲಕ್ಸ್ ಕೆಂಪು ಮೆಣಸಿನಕಾಯಿ ತಾಲ್ಲೂಕಿನದ್ದಾದರೂ ಅದಕ್ಕೆ ಹೆಸರು ಮಾತ್ರ ಬ್ಯಾಡಗಿ ಮೆಣಸಿಕಾಯಿ ಎನ್ನುತ್ತಾರೆ. ಈ ಕಾರಣ

ದಿಂದಲೇ ಕುಂದಗೋಳದ ಕೃಷಿ ಉತ್ಪನ್ನ ಮಾರುಕಟ್ಟೆಯ ಆವರಣದಲ್ಲಿರುವ ವಿಶಾಲವಾದ ಜಾಗೆಯಲ್ಲಿ ಮೆಣಸಿನಕಾಯಿ ಖರೀದಿ ಕೇಂದ್ರ ತೆರೆಯುವಂತೆ ಈ ಭಾಗದ ರೈತರು ಅನೇಕ ಬಾರಿ ಹೋರಾಟ ಮಾಡಿದ್ದಾರೆ. ಆದರೆ, ಯಾವ ಸರ್ಕಾರವೂ ಈ ಬಗ್ಗೆ ತಲೆಕಡೆಸಿಕೊಳ್ಳುತ್ತಿಲ್ಲ ಎಂಬ ಆತಂಕ ಈ ಭಾಗದ ರೈತರಲ್ಲಿ ಮೂಡಿದೆ.

‘ಇಲ್ಲಿಯೇ ಖರೀದಿ ಕೇಂದ್ರ ತೆರೆದರೆ ತಾಲ್ಲೂಕಿನ ಮೆಣಸಿನಕಾಯಿ ಬೆಳೆಯುವ ರೈತರು ಉದ್ಧಾರ ಆಗ್ತಾರೆ ಇಲ್ಲಾಂದ್ರ ನಾವ್ ಬೆಳೆಯೋದು. ಬ್ಯಾಡಗಿ ಮಾರುಕಟ್ಟೆಗೆ ಕಳಿಸೋದು ಅಲ್ಲಿನ ಮೆಣಸಿನಕಾಯಿ ವ್ಯಾಪಾರಸ್ಥ ಹಾಗೂ ಕಮಿಶನ್ ಏಜೆಂಟರನ್ನು ಶ್ರೀಮಂತರನ್ನಾಗಿ ಮಾಡುವುದಷ್ಟೇ ನಮ್ಮ ಕೆಲಸವಾಗುತ್ತಿದೆ’ ಎನ್ನುತ್ತಾರೆ ರೈತ ಮುಖಂಡ ಸೋಮರಾವ್ ದೇಸಾಯಿ.

‘ರೈತರು ಯಾವುದೇ ಬೆಳೆ ಬೆಳೆಯಲಿ ಬೆಳೆಯುವುದಕ್ಕಿಂತ ಮುಂಚೆ ಮಾರುಕಟ್ಟೆಯಲ್ಲಿರುವ ದರ ಬೆಳೆ ಕಟಾವ್ ನಂತರ ದಿಢೀರನೇ ಕುಸಿದುಬಿಡುತ್ತದೆ. ಇದರಿಂದ ಬಹಳಷ್ಟು ರೈತರಿಗೆ ವ್ಯವಸಾಯದಲ್ಲಿರುವ ಆಸಕ್ತಿ ಕಡಿಮೆಯಾಗುತ್ತದೆ. ಸರ್ಕಾರ ಇನ್ನು ಮುಂದೆ ಆದರೂ ರೈತರು ಬೆಳೆಯುವ ಎಲ್ಲ ಬೆಳೆಗಳಿಗೂ ಬೆಂಬಲ ಬೆಲೆ ನಿಗದಿಪಡಿಸಿದರೆ ಮಾತ್ರ ರೈತರು ನೆಮ್ಮದಿಯ ಜೀವನ ಸಾಗಿಸಲು ಸಾಧ್ಯ. ಇಲ್ಲದಿದ್ದರೆ ವ್ಯವಸಾಯ ಮಾಡುವವರ ಜೀವನ ಅಧೋಗತಿಳಿಯುತ್ತದೆ’ ಎನ್ನುತ್ತಾರೆ ರೈತ ಮುಖಂಡ ರುದ್ರಪ್ಪ ಗಾಣಿಗೇರ.

***

ಇಲ್ಲಿ ಬೆಳೆದ ಮೆಣಸಿನಕಾಯಿ ರುದ್ರಾಕ್ಷಿ ಮ್ಯಾಲ ಹೆಂಗ್ ಗೆರಿ ಇರ್ತಾವ ಹಂಗ ಸುತ್ತುಗಟ್ಟಿದ ಮೆಣಸಿಕಾಯಿ ವರ್ಷಗಟ್ಟಲೇ ಇಟ್ಟರೂ ಕೆಡಂಗಿಲ್ರೀ..

– ಚನ್ನವೀರಯ್ಯ ಸ್ವಾಮಿ, ಬಳ್ಳಾರಿಯ ವ್ಯಾಪಾರಸ್ಥ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry