ಪೋಗಟ್ ಕುಟುಂಬದ ಮತ್ತೊಂದು ಮಿಂಚು

7

ಪೋಗಟ್ ಕುಟುಂಬದ ಮತ್ತೊಂದು ಮಿಂಚು

Published:
Updated:
ಪೋಗಟ್ ಕುಟುಂಬದ ಮತ್ತೊಂದು ಮಿಂಚು

ರಿಯೊ ಒಲಿಂಪಿಕ್ಸ್‌ನ ಆ ಸಂಜೆಯನ್ನು ನೆನಪಿಸಿಕೊಳ್ಳಿ. ಅವತ್ತು ಮಹಿಳೆಯರ ಕುಸ್ತಿ ಮ್ಯಾಟ್‌ ಮೇಲೆ ಕಾಲುನೋವಿನಿಂದ ನರಳಿ ಕಣ್ಣೀರು ಸುರಿಸುತ್ತ  ಆಸ್ಪತ್ರೆಗೆ  ತೆರಳಿದ್ದ ಭಾರತದ ಕುಸ್ತಿಪಟು ವಿನೇಶಾ ಪೋಗಟ್ ಈಗ ಮತ್ತೆ ಲಯಕ್ಕೆ ಮರಳಿದ್ದಾರೆ.

ಸುದೀರ್ಘ ಆರೈಕೆ , ವಿಶ್ರಾಂತಿಯ ನಂತರ ಅಖಾಡಕ್ಕೆ ಮರಳಿದ್ದಾರೆ. ಅಲ್ಲದೇ ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌ನ 50 ಕೆ.ಜಿ. ವಿಭಾಗದಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ. ಇಡೀ ಟೂರ್ನಿಯಲ್ಲಿ ಕಠಿಣ ಹಾದಿಯಲ್ಲಿ ಹೋರಾಟ ನಡೆಸಿದ್ದ ವಿನೇಶಾ ಫೈನಲ್‌ ತಲುಪಿದ್ದರು. ಗಾಯದಿಂದ ಚೇತರಿಸಿಕೊಂಡ ನಂತರ ಭಾಗವಹಿಸಿರುವ ಎರಡೂ ಏಷ್ಯನ್ ಚಾಂಪಿಯನ್‌ಷಿಪ್‌ಗಳಲ್ಲಿ ಪದಕ ಜಯಿಸಿರುವುದು ಅವರ ಹೆಗ್ಗಳಿಕೆ. ಸುಮಾರು ಎಂಟೂವರೆ ತಿಂಗಳು ಕಾಲ ವಿಶ್ರಾಂತಿ ಪಡೆದಿದ್ದ ಅವರು ಹೋದ ವರ್ಷ ದೆಹಲಿಯಲ್ಲಿ ನಡೆದಿದ್ದ ಏಷ್ಯನ್ ಟೂರ್ನಿಯಲ್ಲಿ ಕಂಚು ಗೆದ್ದಿದ್ದರು. ಆದರೆ ಈ ಬಾರಿ ಕಿರ್ಗಿಸ್ತಾನದಲ್ಲಿ ಫೈನಲ್‌ನಲ್ಲಿ ಕೂದಲೆಳೆಯ ಅಂತರದಲ್ಲಿ ಚಿನ್ನದ ಪದಕ ಗೆಲ್ಲುವುದನ್ನು ತಪ್ಪಿಸಿಕೊಂಡಿದ್ದರು. ಚೀನಾದ ಚನ್ ಲೀ ಅವರು 3–2ರಿಂದ ವಿನೇಶಾ ವಿರುದ್ಧ ಪ್ರಯಾಸದ ಜಯ ಗಳಿಸಿದ್ದರು.

ಮುಂದಿನ ತಿಂಗಳು ಗೋಲ್ಡ್‌ ಕೋಸ್ಟ್‌ನಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟ ಆರಂಭವಾಗುವ ಮುನ್ನ ವಿನೇಶಾ ಅವರು ಉತ್ತಮವಾಗಿ ಆಡುತ್ತಿರುವುದು ಕುಸ್ತಿ ಪ್ರಿಯರಲ್ಲಿ ಹೊಸ ವಿಶ್ವಾಸ ಹುಟ್ಟುಹಾಕಿದೆ. ಏಕೆಂದರೆ 2014ರಲ್ಲಿ ಗ್ಲಾಸ್ಗೊದಲ್ಲಿ ನಡೆದಿದ್ದ ಕಾಮನ್‌ವೆಲ್ತ್ ಕೂಟದ ಮಹಿಳೆಯರ 48 ಕೆ.ಜಿ. ವಿಭಾಗದಲ್ಲಿ ಅವರು ಚಿನ್ನದ ಪದಕ ಗೆದ್ದಿದ್ದರು.‌

ಆಕ್ಕಂದಿರೇ ಸ್ಫೂರ್ತಿ

ಭಾರತದ ಮಹಿಳಾ ಕುಸ್ತಿಗೆ ಹೊಸ ಆಯಾಮ ನೀಡಿದ ಹರಿಯಾಣದ ಪೋಗಟ್‌ ಕುಟುಂಬದ ಕುಡಿ ವಿನೇಶಾ. ಮಹಾವೀರ್ ಸಿಂಗ್ ಪೋಗಟ್ ಅವರ ತಮ್ಮ ರಾಜಪಾಲ್ ಸಿಂಗ್ ಅವರ ಮಗಳು. ದೊಡ್ಡಪ್ಪ ಮತ್ತು ಅಕ್ಕಂದಿರಾದ ಗೀತಾ ಮತ್ತು ಬಬಿತಾ ಅವರ ಪ್ರೇರಣೆಯಿಂದ ಕುಸ್ತಿ ಅಖಾಡಕ್ಕೆ ಧುಮುಕಿದವರು. 2012ರ ಒಲಿಂಪಿಕ್ಸ್‌ನಲ್ಲಿ ಗೀತಾ ಸ್ಪರ್ಧಿಸಿದ್ದು ಇಡೀ ಹರಿಯಾಣದ ಮಹಿಳಾ ಕುಸ್ತಿಪಟುಗಳಿಗೆ ಸ್ಫೂರ್ತಿಯಾಗಿತ್ತು. ಅವರ ಎರಡನೇ ತಂಗಿ ರಿತು ಪೋಗಟ್ ಹೋದ ಡಿಸೆಂಬರ್‌ನಲ್ಲಿ ನಡೆದಿದ್ದ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಗಳಿಸಿದ್ದರು. ಮೂರನೇ ತಂಗಿ ಸಂಗೀತಾ ಕೂಡ ಭರವಸೆಯ ಕುಸ್ತಿಪಟುವಾಗಿದ್ದಾರೆ. ಇದೀಗ ಈ ಸಹೋದರಿಯರಲ್ಲಿಯೇ ಪೈಪೋಟಿ ಆರಂಭವಾಗಿದೆ. ಇದರಿಂದ ದೇಶಕ್ಕೆ ಪದಕ ಒಲಿಯುವ ಅವಕಾಶಗಳು ಹೆಚ್ಚಾಗಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry