ಸಿಬಿಎಸ್‌ಇ: ಇಂದಿನಿಂದ 10,12ನೇ ತರಗತಿ ಪರೀಕ್ಷೆ

7

ಸಿಬಿಎಸ್‌ಇ: ಇಂದಿನಿಂದ 10,12ನೇ ತರಗತಿ ಪರೀಕ್ಷೆ

Published:
Updated:
ಸಿಬಿಎಸ್‌ಇ: ಇಂದಿನಿಂದ 10,12ನೇ ತರಗತಿ ಪರೀಕ್ಷೆ

ನವದೆಹಲಿ: ಕೇಂದ್ರ ಪ್ರೌಢಶಿಕ್ಷಣ ಮಂಡಳಿಯ (ಸಿಬಿಎಸ್‌ಇ) 10 ಮತ್ತು 12ನೇ ತರಗತಿ ಪರೀಕ್ಷೆಗಳು ದೇಶದಾದ್ಯಂತ ಸೋಮವಾರದಿಂದ ಆರಂಭವಾಗಲಿದ್ದು ಒಟ್ಟಾರೆ 28 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ.

10ನೇ ತರಗತಿ ಪರೀಕ್ಷೆಗೆ 16,38,428 ವಿದ್ಯಾರ್ಥಿಗಳು, 12ನೇ ತರಗತಿಗೆ 11,86,306 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದಾರೆ.

ಈ ಬಾರಿ 10ನೇ ತರಗತಿ ವಿದ್ಯಾರ್ಥಿಗಳು ಕಡ್ಡಾಯವಾಗಿ ಪಬ್ಲಿಕ್‌ ಪರೀಕ್ಷೆ ಬರೆಯಲಿದ್ದಾರೆ. ಏಳು ವರ್ಷಗಳ ಹಿಂದೆ ಜಾರಿಗೆ ಬಂದಿದ್ದ ಸಮಗ್ರ ಮತ್ತು ನಿರಂತರ ಮೌಲ್ಯಮಾಪನ (ಸಿಸಿಇ) ವಿಧಾನವನ್ನು ಈ ವರ್ಷದಿಂದ ಸರ್ಕಾರ ಕೈಬಿಟ್ಟಿದ್ದು, ಎಲ್ಲ ವಿದ್ಯಾರ್ಥಿಗಳಿಗೆ ಪಬ್ಲಿಕ್‌ ಪರೀಕ್ಷೆಯನ್ನು ಕಡ್ಡಾಯಗೊಳಿಸಿದೆ.

ಪರೀಕ್ಷಾ ಕೇಂದ್ರಗಳು: 10ನೇ ತರಗತಿ ಪರೀಕ್ಷೆಗಳು ದೇಶದ 4,453 ಹಾಗೂ ವಿದೇಶಗಳಲ್ಲಿನ 78 ಕೇಂದ್ರಗಳಲ್ಲಿ ಜರುಗಲಿವೆ.

12ನೇ ತರಗತಿ ಪರೀಕ್ಷೆಗಳು ದೇಶದ 4,138 ಕೇಂದ್ರಗಳಲ್ಲಿ ಹಾಗೂ ವಿದೇಶಗಳಲ್ಲಿನ 71 ಕೇಂದ್ರಗಳಲ್ಲಿ ನಡೆಯಲಿವೆ.

ಮಧುಮೇಹದಿಂದ ಬಳಲುತ್ತಿರುವ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಸೇಬು, ಕಿತ್ತಳೆ ಮುಂತಾದ ಹಣ್ಣು, ನೀರು ಮತ್ತು ಮಧುಮೇಹದ ಔಷಧಿಯನ್ನು ತೆಗೆದುಕೊಂಡು ಹೋಗಲು ಅನುಮತಿ ನೀಡಲಾಗಿದೆ. ಆದರೆ ಚಾಕಲೇಟ್‌, ಕ್ಯಾಂಡಿ, ಸ್ಯಾಂಡ್‌ವಿಚ್‌ನಂತಹ ತಿನಿಸನ್ನು ತೆಗೆದುಕೊಂಡು ಹೋಗುವಂತಿಲ್ಲ.

10ನೇ ತರಗತಿ ಉತ್ತೀರ್ಣ ನಿಯಮ ಸಡಿಲಿಕೆ: ಈ ವರ್ಷ ಹತ್ತನೇ ತರಗತಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಉತ್ತೀರ್ಣರಾಗಲು ಪಡೆಯಬೇಕಿರುವ ಕನಿಷ್ಠ ಅಂಕದ ವಿಚಾರದಲ್ಲಿ ಮಂಡಳಿ ವಿನಾಯಿತಿ ನೀಡಿದೆ.

ಶಾಲೆಯಲ್ಲಿ ನಡೆಸುವ ಪರೀಕ್ಷೆ ಮತ್ತು ಮಂಡಳಿಯ ಪರೀಕ್ಷೆ ಎರಡರಲ್ಲಿಯೂ ವಿದ್ಯಾರ್ಥಿಗಳು ಕನಿಷ್ಠ ಶೇ 33 ಅಂಕ ಪಡೆಯಬೇಕು ಎಂಬ ನಿಯಮವನ್ನು ಸಡಿಲಿಸಲಾಗಿದೆ. ಇದು 2017–18ನೇ ಸಾಲಿನಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯವಾಗುತ್ತದೆ. ಇದೇ ಮೊದಲ ಬಾರಿ ವಿದ್ಯಾರ್ಥಿಗಳು ಸಿಬಿಎಸ್‌ಇ (ಮಂಡಳಿ) ಪರೀಕ್ಷೆ ಎದುರಿಸುತ್ತಿರುವುದರಿಂದ ಈ ವಿನಾಯಿತಿ ನೀಡಲಾಗಿದೆ.

10ನೇ ತರಗತಿ ಪರೀಕ್ಷೆಯು ಮಾರ್ಚ್‌ 5ರಿಂದ ಏಪ್ರಿಲ್‌ 4ರವರೆಗೆ, 12ನೇ ತರಗತಿ ಪರೀಕ್ಷೆಯು ಮಾರ್ಚ್‌ 5ರಿಂದ ಏಪ್ರಿಲ್‌ 14ರವರೆಗೆ ನಡೆಯಲಿವೆ. ಎರಡೂ ಪರೀಕ್ಷೆಗಳು ಬೆಳಿಗ್ಗೆ 10.30ಕ್ಕೆ ಆರಂಭವಾಗಲಿವೆ.

ಅಗತ್ಯ ಇರುವ ಅಭ್ಯರ್ಥಿಗಳಿಗೆ ಲ್ಯಾಪ್‌ಟಾಪ್‌ ಸೌಲಭ್ಯ

ವಿಶೇಷ ಅಗತ್ಯ ಇರುವ ವಿದ್ಯಾರ್ಥಿಗಳಿಗೆ ಈ ವರ್ಷದಿಂದ ಲ್ಯಾಪ್‌ಟಾಪ್‌ ಮೂಲಕ ಪರೀಕ್ಷೆ ಬರೆಯಲು ಸಿಬಿಎಸ್‌ಇ ಅವಕಾಶ ಕಲ್ಪಿಸಿದೆ. ವಿದ್ಯಾರ್ಥಿಗಳೇ ಲ್ಯಾಪ್‌ಟಾಪ್‌ ತರಬೇಕಿದ್ದು, ಆ ಲ್ಯಾಪ್‌ಟಾಪ್‌ನ ಡಿವೈಸ್‌ ಅನ್ನು ಕೇಂದ್ರದ ಕಂಪ್ಯೂಟರ್‌ ಶಿಕ್ಷಕರು ಪರಿಶೀಲಿಸಿದ ನಂತರ ಬಳಕೆಗೆ ಅರ್ಹವೆನಿಸಿದರೆ ಅವಕಾಶ ನೀಡಲಿದ್ದಾರೆ. ಈ ಲ್ಯಾಪ್‌ಟಾಪ್‌ಗಳಿಗೆ ಇಂಟರ್‌ನೆಟ್‌ ಸಂಪರ್ಕವನ್ನು ನೀಡುವುದಿಲ್ಲ ಎಂದು ಮಂಡಳಿ ತಿಳಿಸಿದೆ.

ಪರೀಕ್ಷೆ ಮುಗಿದ ನಂತರ ವಿದ್ಯಾರ್ಥಿಯು ಲ್ಯಾಪ್‌ಟಾಪ್‌ನಲ್ಲಿ ಬರೆದ ಉತ್ತರದ ಪ್ರತಿಗಳ ‘ಪ್ರಿಂಟೌಟ್‌’ ಪಡೆಯಲು ಪರೀಕ್ಷಾ ಕೇಂದ್ರದಲ್ಲಿ ವ್ಯವಸ್ಥೆ ಮಾಡಲಾಗುತ್ತದೆ. ಉತ್ತರ ಪತ್ರಿಕೆಯ ಪ್ರತಿ ‘ಪ್ರಿಂಟೌಟ್‌’ ಮೇಲೂ ಕೊಠಡಿ ಮೇಲ್ವಿಚಾರಕರು, ಕಂಪ್ಯೂಟರ್‌ ಶಿಕ್ಷಕರು ಸಹಿ ಹಾಕಬೇಕು. ಅಲ್ಲದೆ ಪ್ರತಿ ಪುಟದಲ್ಲೂ ವಿದ್ಯಾರ್ಥಿಯ ನೋಂದಣಿ ಸಂಖ್ಯೆ, ವಿಷಯ, ಪ್ರಶ್ನೆ ಪತ್ರಿಕೆ ಕೋಡ್‌ ಅನ್ನು ಬರೆದು ಸಹಿ ಮಾಡಬೇಕು. ಬಳಿಕ ಒಟ್ಟಾರೆ ಉತ್ತರ ಪತ್ರಿಕೆಗಳ ಸಂಖ್ಯೆಯನ್ನು ಬರೆದು ಟ್ಯಾಗ್‌ ಮಾಡಬೇಕು ಎಂದು ಮಂಡಳಿ ತಿಳಿಸಿದೆ.

ವಿಶೇಷ ಅಗತ್ಯವಿರುವ ವಿದ್ಯಾರ್ಥಿ ಎಂಬುದನ್ನು ಸಾಬೀತು ಪಡಿಸಲು ವಿದ್ಯಾರ್ಥಿಯ ಬಳಿ, ನೋಂದಾಯಿತ ವೈದ್ಯರು ಅಥವಾ ಅರ್ಹ ಮನೋ ವೈದ್ಯಕೀಯ ಚಿಕಿತ್ಸಾ ಆಪ್ತಸಮಾಲೋಚಕರ ದೃಢೀಕರಣ ಪತ್ರವಿರಬೇಕು. ಲ್ಯಾಪ್‌ಟಾಪ್‌ ಬಳಕೆಗೆ ಅನುಮತಿ ನೀಡುವುದಕ್ಕೆ ಸಂಬಂಧಿಸಿದಂತೆ ಅವರಿಂದ ಶಿಫಾರಸು ಪತ್ರವನ್ನು ಪಡೆದು, ಅದನ್ನು ಪರೀಕ್ಷಾ ಕೇಂದ್ರಕ್ಕೆ ಸಲ್ಲಿಸಬೇಕು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.

ದೇಶದಲ್ಲಿ 10ನೇ ತರಗತಿಗೆ 4510 ಹಾಗೂ 12ನೇ ತರಗತಿಗೆ 2846 ವಿಶೇಷ ಅಗತ್ಯವುಳ್ಳ ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry