87 ಕೋಟಿ ಬ್ಯಾಂಕ್‌ ಖಾತೆಗೆ ಆಧಾರ್‌ ಜೋಡಣೆ

7

87 ಕೋಟಿ ಬ್ಯಾಂಕ್‌ ಖಾತೆಗೆ ಆಧಾರ್‌ ಜೋಡಣೆ

Published:
Updated:
87 ಕೋಟಿ ಬ್ಯಾಂಕ್‌ ಖಾತೆಗೆ ಆಧಾರ್‌ ಜೋಡಣೆ

ನವದೆಹಲಿ: ಚಾಲ್ತಿಯಲ್ಲಿರುವ 109.9 ಕೋಟಿ ಬ್ಯಾಂಕ್‌ ಖಾತೆಗಳ ಪೈಕಿ,  87 ಕೋಟಿ ಖಾತೆಗಳಿಗೆ ಆಧಾರ್‌ ಸಂಖ್ಯೆ ಜೋಡಣೆಯಾಗಿದೆ ಎಂದು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ ತಿಳಿಸಿದೆ.

12 ಸಂಖ್ಯೆಗಳನ್ನು ಒಳಗೊಂಡ ವಿಶಿಷ್ಟ ಗುರುತಿನ ಚೀಟಿ ಆಧಾರ್ ಅನ್ನು ಬ್ಯಾಂಕ್‌ ಖಾತೆ, ಶಾಶ್ವತ ಖಾತೆ ಸಂಖ್ಯೆ (ಪ್ಯಾನ್‌ ಕಾರ್ಡ್‌) ಮತ್ತು ಮೊಬೈಲ್‌ಫೋನ್‌ ಸಂಪರ್ಕಕ್ಕೆ ಜೋಡಣೆ ಮಾಡುವುದು ಕಡ್ಡಾಯಗೊಳಿಸಲಾಗಿದೆ. ಇದಕ್ಕೆ ಮಾರ್ಚ್‌ 31ರವರೆಗೆ ಗಡುವು ವಿಧಿಸಲಾಗಿದೆ.

‘ಆಧಾರ್‌ಗೆ ಜೋಡಣೆಯಾಗಿರುವ 87 ಕೋಟಿ ಬ್ಯಾಂಕ್‌ ಖಾತೆಗಳ ಪೈಕಿ 58 ಖಾತೆಗಳ ಪರಿಶೀಲನೆ ಕೂಡ ಮುಗಿದಿದೆ. ಉಳಿದ ಖಾತೆಗಳ ಪರಿಶೀಲನೆ ನಡೆಯುತ್ತಿದೆ. ದಾಖಲೆಗಳನ್ನು ಬ್ಯಾಂಕ್‌ಗಳಿಗೆ ಸಲ್ಲಿಸಲಾಗಿದೆ’ ಎಂದು ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.

ಆಧಾರ್ ಕಡ್ಡಾಯ ಬಳಕೆ ಪ್ರಶ್ನಿಸಿ ಹಲವು ದೂರುಗಳು ಸುಪ್ರೀಂಕೋರ್ಟ್‌ಗೆ ದಾಖಲಾಗಿವೆ. ಈ ದೂರುಗಳ ವಿಚಾರಣೆಗೆ  ಕೋರ್ಟ್‌ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠ ರಚಿಸಿದೆ. ಈ ವಿಚಾರಣೆ ಹೊರತಾಗಿಯೂ ಪ್ಯಾನ್‌, ಬ್ಯಾಂಕ್‌ ಖಾತೆ ಸಂಖ್ಯೆ, ಕ್ರೆಡಿಟ್ ಕಾರ್ಡ್‌, ವಿಮೆ ಪಾಲಿಸಿ, ಮ್ಯೂಚುವಲ್ ಫಂಡ್ಸ್‌, ಪಿಂಚಣಿ ಯೋಜನೆ, ಸಮಾಜ ಕಲ್ಯಾಣ ಯೋಜನೆಗಳಿಗೆ ಮಾರ್ಚ್‌ 31ರೊಳಗೆ ಆಧಾರ್ ಜೋಡಣೆ ಮಾಡುವುದು ಕಡ್ಡಾಯ ಮಾಡಲಾಗಿದೆ.

ಪರ್ಯಾಯ ಗುರುತಿನ ಸಂಖ್ಯೆ: ಆಧಾರ್ ದುರ್ಬಳಕೆ ಆಗುತ್ತದೆ ಎಂಬ ದೂರುಗಳು ಬಂದಿದ್ದರಿಂದ, 16 ಸಂಖ್ಯೆಗಳ ಪರ್ಯಾಯ (ವರ್ಚುವಲ್‌) ಗುರುತಿನ ಸಂಖ್ಯೆಯನ್ನು ನೀಡಲಾಗುವುದು ಎಂದು ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ ತಿಳಿಸಿದೆ. ಆಧಾರ್ ಕಾರ್ಡ್ ಬಳಸುತ್ತಿರುವವರು, ಸಂಸ್ಥೆಯ ಅಂತರ್ಜಾಲ ತಾಣದ ಮೂಲಕ ಈ ವರ್ಚುವಲ್‌ ಐಡಿ ಸಂಖ್ಯೆಯನ್ನು ಪಡೆದುಕೊಳ್ಳಬಹುದಾಗಿದೆ. ಈ ಸಂಖ್ಯೆಯನ್ನು ಮೊಬೈಲ್ ಸಿಮ್‌ ಪರಿಶೀಲನೆ ಸೇರಿದಂತೆ ವಿವಿಧ ಉದ್ದೇಶಗಳಿಗೆ ಬಳಸಬಹುದಾಗಿದೆ ಎಂದು ತಿಳಿಸಿದೆ.

ಗುರುತು ಪತ್ತೆಗಾಗಿ ಸದ್ಯಕ್ಕೆ ಬಳಸುತ್ತಿರುವ ಬೆರಳಚ್ಚು, ಪಾಪೆಗಳ ಜತೆಗೆ ಮುಖ ಗುರುತು ಪತ್ತೆ ಮಾಡುವ ಸೌಲಭ್ಯವನ್ನೂ ಒದಗಿಸಲಾಗುವುದು ಎಂದು ಪ್ರಾಧಿಕಾರ ಘೋಷಿಸಿದೆ. ಇದರಿಂದ ವ್ಯಕ್ತಿಯ ಜೈವಿಕ ದೃಢೀಕರಣ ಸುಲಭವಾಗಲಿದೆ ಎಂದು ಅಭಿಪ್ರಾಯ ಪಟ್ಟಿದೆ.

ಗಡುವು ವಿಸ್ತರಿಸಲು ‘ಅಸೋಚಾಂ’ ಒತ್ತಾಯ

ಆಧಾರ್‌ ಸಂಖ್ಯೆ ಜೋಡಣೆ ಕಡ್ಡಾಯಗೊಳಿಸಿ ಮಾರ್ಚ್‌ 31ರವರೆಗೆ ವಿಧಿಸಿರುವ ಗಡುವನ್ನು ವಿಸ್ತರಿಸುವಂತೆ ಭಾರತೀಯ ವಾಣಿಜ್ಯೋದ ಮಹಾಸಂಘವು (ಅಸೋಚಾಂ) ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದೆ.

ಮುಖ್ಯವಾಗಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ಖಾತೆಗಳಿಗೆ ಆಧಾರ್ ಜೋಡಣೆ ಮಾಡಲು ಇನ್ನಷ್ಟು ಕಾಲಾವಕಾಶ ನೀಡುವಂತೆ ಕೋರಿದೆ. ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ವಂಚನೆ ಪ್ರಕರಣದಿಂದ ಸಾರ್ವಜನಿಕ ಕ್ಷೇತ್ರದಲ್ಲಿ ವಹಿವಾಟು ನಡೆಸುತ್ತಿರುವವರು ತಮ್ಮ ವ್ಯಾಪಾರಗಳಿಗೆ ಸೂಕ್ತ ನೆಲೆ ಕಲ್ಪಿಸಲು ಪರದಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ಗ್ರಾಹಕರ ಮೇಲೆ ಒತ್ತಡ ಹೇರಿದರೆ ಅವರಿಗೆ ಅನನುಕೂಲವಾಗಲಿದೆ ಎಂದು ‘ಅಸೋಚಾಂ’ ಅಭಿಪ್ರಾಯ ಪಟ್ಟಿದೆ.

ನೋಟು ರದ್ಧತಿ ಮತ್ತು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯ ಪರಿಣಾಮಗಳಿಂದ ಈಗಷ್ಟೇ ದೇಶದ ಆರ್ಥ ವ್ಯವಸ್ಥೆ ಚೇತರಿಸಿಕೊಳ್ಳುತ್ತಿದೆ. ಇಂತಹ ಸಮಯದಲ್ಲಿ ಮತ್ತೆ ಇಂತಹ ಒತ್ತಡದ ವಾತಾವರಣ ಸೃಷ್ಟಿಸುವುದು ಬೇಡ ಎಂದು ಸಲಹೆ ನೀಡಿದೆ.

*ಶೇ 80ರಷ್ಟು ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆಯಾಗಿದೆ. ಉಳಿದ ಖಾತೆಗಳಿಗೂ ಶೀಘ್ರ  ಜೋಡಣೆಯಾಗುವ ವಿಶ್ವಾಸವಿದೆ.

–ಅಜಯ್‌ ಭೂಷಣ್,

ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ ಸಿಇಒ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry