ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಕು ಮಹಿಳಾ ಸ್ನೇಹಿ ಸಾರಿಗೆ

Last Updated 5 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಮಹಿಳಾಸ್ನೇಹಿ ನಗರ ಸಾರಿಗೆ ರೂಪಿಸಬೇಕು ಎನ್ನುವುದು ಸರ್ಕಾರದ ಬಹುಕಾಲದ ಚಿಂತನೆ. ನಮ್ಮ ಮೆಟ್ರೊ, ಬಿಎಂಟಿಸಿ, ಆಟೊ ಮತ್ತು ಓಲಾಗಳಂತಹ ಸಾರ್ವಜನಿಕ ಮತ್ತು ಅರೆಸಾರ್ವಜನಿಕ ಸಾರಿಗೆಗಳಿಂದ ಮಹಿಳೆಯರು ನಿರೀಕ್ಷಿಸುವುದು ಏನನ್ನು? ಅಧಿಕಾರಿಗಳ ಮಟ್ಟದಲ್ಲಿ ರೂಪಿತವಾಗುವ ವಿವಿಧ ಯೋಜನೆಗಳು ಮಹಿಳೆಯರ ನಾಡಿಮಿಡಿತಕ್ಕೆ ಸ್ಪಂದಿಸುತ್ತಿವೆಯೇ? ಯಾವರೀತಿಯ ನಗರಸಾರಿಗೆಯನ್ನು ಸ್ತ್ರೀಯರು ಬಯಸುತ್ತಿದ್ದಾರೆ? ನಗರದ ಮಹಿಳೆಯರ ಅಭಿಪ್ರಾಯ ಇಲ್ಲಿದೆ.

ನಗರಸಾರಿಗೆಯನ್ನು ಮಹಿಳಾ ಸ್ನೇಹಿಯಾಗಿಸುವ ಸಲುವಾಗಿ ಬಿಎಂಟಿಸಿ ಬಸ್ಸುಗಳಲ್ಲಿ ಮಹಿಳೆಯರಿಗೆ ಆಸನಗಳನ್ನು ಮೀಸಲಿರಿಸುವುದು, ಮೆಟ್ರೊದಲ್ಲಿ ಮಹಿಳೆಯರಿಗೆ ಪ್ರತ್ಯೇಕ ಬಾಗಿಲುಗಳು, ರಿಯಾಯಿತಿ ಪ್ರಯಾಣಕ್ಕಾಗಿ ಇಂದಿರಾ ಸಾರಿಗೆ ಬಸ್‌ ಚಾಲ್ತಿಯಲ್ಲಿವೆ. ಇವುಗಳಿಗೆ ಹೊಸ ಸೇರ್ಪಡೆ ಎಂಬಂತೆ ‍ಬಸ್‌ಗಳಲ್ಲಿ ಗುಲಾಬಿ ಬಣ್ಣದ ಆಸನಗಳು ಹಾಗೂ ಪಿಂಕ್ ಆಟೋ ಪರಿಕಲ್ಪನೆಗಳು ಸಹ ಸದ್ಯ ಸುದ್ದಿಯಲ್ಲಿವೆ. ಆದರೆ, ‘ಇವೆ’ಗಳನ್ನೂ ಮೀರಿದ ಕೆಲ ಸೌಲಭ್ಯಗಳನ್ನು ಸರ್ಕಾರ ಮತ್ತು ಸಮಾಜದಿಂದ ಸ್ತ್ರೀ ಬಯಸುತ್ತಿದ್ದಾಳೆ.

ಸಹ ಪುರುಷ ಪ್ರಯಾಣಿಕರು, ಟ್ರಾಫಿಕ್ ಪೋಲಿಸರು, ಆಟೊ ಚಾಲಕರು, ಕ್ಯಾಬ್ ಕಂಪೆನಿಗಳು ಮೆಟ್ರೊ ಮತ್ತು ಬಿಎಂಟಿಸಿ ಸಿಬ್ಬಂದಿಯಿಂದಲೂ ಮಹಿಳಾ ಸ್ನೇಹಿ ನಡವಳಿಕೆಯನ್ನು ಆಕೆ ನಿರೀಕ್ಷಿಸುತ್ತಿದ್ದಾಳೆ. ಸರ್ಕಾರದ ಮಟ್ಟದಲ್ಲಿ ರೂಪುಗೊಳ್ಳುವ ಯೋಜನೆಗಳು ಕಾರ್ಯರೂಪಕ್ಕೆ ಬರಲು ಮುಖ್ಯವಾಗಿ ಸಹಕರಿಸಬೇಕಿರುವುದು ಸಾರ್ವಜನಿಕರು ಮತ್ತು ಸಹಪ್ರಯಾಣಿಕರು. ಅವರ ಸಹಕಾರದ ಹೊರತಾದ ಯಾವುದೇ ಯೋಜನೆ ನಿಷ್ಟ್ರಯೋಜಕ ಎನ್ನುವ ಸಾಮಾನ್ಯ ನಿಲುವು ನಗರದ ಮಹಿಳೆಯರದು.

ನಮ್ಮ ಮೆಟ್ರೊ ಸೇವೆಯನ್ನು ಮತ್ತಷ್ಟು ಮಹಿಳಾ ಸ್ನೇಹಿಯಾಗಿ ರೂಪಿಸುವ ಸಲುವಾಗಿ ಫೆ. 19ರಿಂದ ಸಂಚಾರ ದಟ್ಟಣೆಯ ಅವಧಿಯಲ್ಲಿ ಮೊದಲ ಬೋಗಿಯ ಮೊದಲೆರೆಡು ಬಾಗಿಲುಗಳನ್ನು ಮಹಿಳೆಯರಿಗೆ ಮಾತ್ರ ಮೀಸಲಿರಿಸಲಾಗಿದೆ. ಈ ಯೋಜನೆ ಕೆಲ ಮಹಿಳಾ ಪ್ರಯಾಣಿಕರಲ್ಲಿ ತುಸು ನಿರಾಳ ಭಾವ ಮೂಡಿಸಿದೆಯಾದರೂ ಮಹಿಳೆಯರಿಗೆ ಸಂಪೂರ್ಣ ಸಮಾಧಾನ ಕೊಟ್ಟಿಲ್ಲ.

ಕೆಲ ನಿಲ್ದಾಣಗಳಲ್ಲಿ ಪ್ರಯಾಣಿಕರು ಸ್ಟೇಷನ್ ಒಳಗೆ ಹೋಗುವ ಸ್ಥಳ ಕೊನೆಯ ಬಾಗಿಲಿನ ಸಮೀಪ ಇರುತ್ತದೆ. ಇಂಥ ಸ್ಥಳಗಳಲ್ಲಿ ಮುಂದಿನ ಬಾಗಿಲವರೆಗೆ ಹೋಗುವುದು ತ್ರಾಸದಾಯಕ. ಇದರ ಬದಲು ಮೊದಲ ಎರಡು ಬಾಗಿಲು ಮತ್ತು ಕೊನೆಯ ಎರಡು ಬಾಗಿಲನ್ನು ಮಹಿಳೆಯರಿಗೆ ಮೀಸಲಿಡಬೇಕಿತ್ತು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಬಿಎಂಟಿಸಿ ಬಸ್ಸುಗಳ ಮಹಿಳಾ ಪ್ರಯಾಣಿಕರಲ್ಲಿ ಅಸುರಕ್ಷತೆಯ ಭಾವ ಹೆಚ್ಚಿದೆ. ಮೆಟ್ರೊಗೆ ಹೋಲಿಸಿದರೆ ಬಸ್ಸುಗಳಲ್ಲಿ ಕಳ್ಳರ ಹಾವಳಿ ಮತ್ತು ಲೈಂಗಿಕ ಕಿರುಕುಳ ಹೆಚ್ಚು. ಎಲ್ಲ ವಿಷಯಗಳನ್ನೂ ಬಾಯಿಬಿಟ್ಟು ಹೇಳಿಕೊಳ್ಳಲು ಆಗುವುದಿಲ್ಲ. ಎಲ್ಲ ಬಸ್ಸುಗಳಲ್ಲಿ ಸುರಕ್ಷಿತ ಪ್ರಯಾಣಕ್ಕೆ ಆದ್ಯತೆ ನೀಡುವ ಸಲುವಾಗಿ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ, ಸಮರ್ಪಕವಾಗಿ ನಿರ್ವಹಿಸಬೇಕು. ಬಸ್ಸುಗಳ ಹೊರನೋಟವನ್ನು ಅಂದಗೊಳಿಸಲು, ಒಳಾಂಗಣ ಅಲಂಕಾರ ಮಾಡಲು ಬಿಎಂಟಿಸಿ ದುಡ್ಡು ಖರ್ಚು ಮಾಡುತ್ತಿದೆ. ಅದರೆ ಸುಖಕರ ಪ್ರಯಾಣಕ್ಕೆ ಪರಿಶ್ರಮ ಹಾಕುತ್ತಿಲ್ಲ.

ಆಟೊ, ಓಲಾ ಮತ್ತು ಉಬರ್‌ಗಳು ಇಂದಿಗೂ ಒಂಟಿ ಮಹಿಳೆಯ ಪ್ರಯಾಣಕ್ಕೆ ಸುರಕ್ಷಿತವಲ್ಲ ಎಂಬ ಭಾವವೊಂದು ಬಹುತೇಕ ಮಹಿಳೆಯರ ಮನದಲ್ಲಿ ಗಟ್ಟಿಯಾಗಿ ಮನೆಮಾಡಿದೆ. ಅದಕ್ಕೆ ಪರ್ಯಾಯ ಅಥವಾ ಪರಿಹಾರಗಳೇನು ಎಂದು ಕೇಳಿದರೆ ಬಹುತೇಕರು ನಿರುತ್ತರರಾಗುತ್ತಾರೆ. ಸರ್ಕಾರದ ಪ್ರಸ್ತಾಪಿತ ಪಿಂಕ್ ಆಟೋಗಳು ಲೈಂಗಿಕ ದೌರ್ಜನ್ಯಗಳಂತ ವಿಷಯಗಳಲ್ಲಿ ಮಹಿಳಾ ಸ್ನೇಹಿ ಎಂಬ ನಂಬಿಕೆ ಇದ್ದರೂ ಮಹಿಳೆಯರ ಚಾಲನ ಕೌಶಲ ಕುರಿತು ಮಹಿಳೆಯರಲ್ಲಿಯೇ ಅಪನಂಬಿಕೆಯೂ ಇದೆ.‌‌‌
***
ಕೊನೆಯ ಬೋಗಿಯೂ ಬೇಕು
ಪ್ರತಿಸಲವೂ ಮುಂದಿನ ಬೋಗಿಗೆ ಹೋಗಿ ರೈಲು ಹತ್ತುವುದು ಕಷ್ಟ. ನಾನು ರಾಮನಗರಕ್ಕೆ ನಿತ್ಯ ರೈಲಿನಲ್ಲಿ ಪ್ರಯಾಣಿಸುತ್ತೇನೆ. ಮೆಟ್ರೊದ ಮೊದಲ ಬೋಗಿಯಲ್ಲಿ ಪ್ರಯಾಣಿಸಿದರೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಲ್ಲಿ ಎಕ್ಸಿಟ್ ತುಂಬಾ ದೂರವಾಗುತ್ತೆ. ನನಗೆ ರೈಲು ತಪ್ಪಿಹೋಗುತ್ತೆ. ಹಾಗಾಗಿ ಯಾವಾಗಲೂ ಮೆಟ್ರೊದ ಕೊನೆಯ ಬಾಗಿಲಲ್ಲಿಯೇ ಹತ್ತುತ್ತೇನೆ. ಮೊದಲು ಎರಡು ಮತ್ತು ಕೊನೆಯ ಎರಡು ಬಾಗಿಲುಗಳನ್ನು ಮಹಿಳೆಯರಿಗೆ ಮೀಸಲಿಟ್ಟರೆ ಅನುಕೂಲ.
-ಶ್ವೇತಾ, ರಾಮನಗರ

ದೌರ್ಜನ್ಯಕ್ಕೆ ಹೆದರಿದೆ
ನಾನು ಮೂಲತಃ ಕೊಡಗಿನವಳು. ಬೆಂಗಳೂರಿಗೆ ಬಂದು ದಶಕಗಳೇ ಕಳೆದಿವೆ. ಆಟೊ ಪ್ರಯಾಣ ಇಷ್ಟವಾಗುವುದಿಲ್ಲ, ಆದರೆ ನನಗೆ ಅನಿವಾರ್ಯ. ಸುರಕ್ಷಿತ ಎಂದು ನನಗೆಂದೂ ಅನಿಸಿಲ್ಲ. ಕೊಡಗಿನ ಶೈಲಿಯಲ್ಲಿ ಸೀರೆ ಉಡುವುದು ನನಗಿಷ್ಠ. ಆದರೆ, ನಾವು ಹಾಗೆ ಸೀರೆ ಉಟ್ಟು ಪ್ರಯಾಣಿಸುವಾಗ ಕೆಲ ಆಟೊ ಚಾಲಕರು ನಾವು ಬೆಂಗಳೂರಿಗೆ ಅಪರಿಚಿತರು ಎಂದು ಭಾವಿಸಿ, ಹೆಚ್ಚು ಹಣ ವಸೂಲಿ ಮಾಡಿದ್ದಾರೆ. ಈಚೆಗೆ ನಾನು ಸಾಂಪ್ರದಾಯಿಕ ಉಡುಗೆ ತೊಡುವುದನ್ನೇ ನಿಲ್ಲಿಸಿದ್ದೇನೆ. ಸಾರ್ವಜನಿಕ ಸಾರಿಗೆಗಳ ಪ್ರಯಾಣದಲ್ಲಿ ಎದುರಾಗುವ ದೌರ್ಜನ್ಯಗಳಿಗೆ ಹೆದರಿ ನಮ್ಮತನವನ್ನೇ ಮರೆಮಾಚಿ ಬದುಕುಬೇಕಾಗಿದೆ. ಆಟೊ ಚಾಲಕರು ಸೇರಿದಂತೆ ಎಲ್ಲರೂ ಸಹಕರಿಸಿದರೆ ಮಾತ್ರ ಮಹಿಳೆಯರು ನೆಮ್ಮದಿಯಿಂದ ಸಂಚರಿಸಲು ಸಾಧ್ಯ.


–ಮಲ್ಲಿಗೆ, ಕನಕಪುರ ರಸ್ತೆ

ಪುರುಷರೇ ಅರ್ಥಮಾಡಿಕೊಳ್ಳಿ
ಕೆಲ ಪುರುಷ ಪ್ರಯಾಣಿಕರಲ್ಲಿ ತಪ್ಪು ಕಲ್ಪನೆಗಳಿವೆ. ಮಹಿಳೆಯರು ಕೇವಲ ಮೆಟ್ರೊದ ಮೊದಲ ಎರಡು ಬಾಗಿಲುಗಳಲ್ಲೇ ಪ್ರಯಾಣಿಸಬೇಕು, ಇತರ ಬೋಗಿಗಳಿಗೆ ಹತ್ತಬಾರದು ಎಂದೆಲ್ಲಾ ಅಂದುಕೊಂಡಿದ್ದಾರೆ. ಬಿಎಂಟಿಸಿ ಬಸ್ಸುಗಳಲ್ಲಿಯೂ ಇದೇ ಥರ ಆಗುತ್ತೆ. ಮಹಿಳೆಯರು ಹಿಂದಿನ ಬಾಗಿಲುಗಳಲ್ಲಿ ಹತ್ತಬಾರದು, ಅವರಿಗೆ ಮೀಸಲಲ್ಲದ ಆಸನಗಳಲ್ಲಿ ಕುಳಿತುಕೊಳ್ಳಬಾರದು ಎಂದೆಲ್ಲಾ ವಾದಿಸುತ್ತಾರೆ. ಮೆಟ್ರೊ ಮತ್ತು ಬಿಎಂಟಿಸಿಯ ಕೆಲ ಸಿಬ್ಬಂದಿಯಲ್ಲೂ ಇಂಥದ್ದೇ ತಪ್ಪು ಕಲ್ಪನೆಗಳು ಉಳಿದಿವೆ. ‘ಮಹಿಳೆಯರಿಗೆ ಮೀಸಲಿಟ್ಟ ಬಾಗಿಲು ಅಥವಾ ಆಸನಗಳನ್ನು ಹೊರತುಪಡಿಸಿ, ಬೇರೆಡೆ ಹತ್ತುವ ಮತ್ತು ಖಾಲಿ ಆಸನಗಳಲ್ಲಿ ಕುಳಿತುಕೊಳ್ಳುವ ಹಕ್ಕು ಮಹಿಳೆಯರಿಗೆ ಇದೆ’ ಎಂಬ ಸಂಗತಿಯನ್ನು ಸಾರ್ವಜನಿಕರಲ್ಲಿ ಮನಗಾಣಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು.
–ಪ್ರಿಯಾ, ಬನಶಂಕರಿ

ಪುರುಷರ ಸಹಕಾರ ಬೇಕು

ಸರ್ಕಾರ ಒಂದು ನಿಯಮ ಮಾಡಬಹುದು. ಅದರ ಉದ್ದೇಶ ಅರ್ಥಮಾಡಿಕೊಂಡು ಅನುಷ್ಠಾನಕ್ಕೆ ತರುವುದು ಸಮಾಜದ ಅಂದರೆ, ನಮ್ಮನಿಮ್ಮೆಲ್ಲರ ಹೊಣೆ. ಮೆಟ್ರೊ ಮತ್ತು ಬಿಎಂಟಿಸಿ ಪ್ರಯಾಣದಲ್ಲಿ ಸರ್ಕಾರದ ನಿಯಮಗಳಿಗಿಂತ ಸಹಪ್ರಯಾಣಿಕರ ಮಾನವೀಯ ಸ್ಪಂದನೆ ಬಹುಮುಖ್ಯ. ‘ಮಹಿಳೆಯರಿಗೆ ಆಸನಗಳನ್ನು ಬಿಟ್ಟುಕೊಡಿ’ ಎಂದು ಮೆಟ್ರೊ ನಿಗಮ ಬೋಗಿಗಳ ಒಳಗೂ ಫಲಕಗಳನ್ನು ಹಾಕಿದೆ. ಇದೇ ಘೋಷಣೆಯೂ ಆಗಾಗ ಮೊಳಗುತ್ತದೆ. ಆದರೂ ಹಲವರದು ಜಾಣಕುರುಡು. ಪುಟ್ಟಮಕ್ಕಳ ತಾಯಂದಿರು ಬೋಗಿಗಳ ನೆಲಹಾಸುಗಳ ಮೇಲೆಯೇ ಕುಳಿತು ಎದೆಹಾಲು ಕುಡಿಸುತ್ತಿರುತ್ತಾರೆ. ಫಲಕಗಳು, ಘೋಷಣೆಗಳಿಂದ ಬದಲಾವಣೆ ಅಸಾಧ್ಯ. ಸಾಮಾಜಿಕ ಶಿಕ್ಷಣದಿಂದ ಮಾತ್ರ ಇದು ಸಾಧ್ಯ.
–ರಾಜೇಶ್ವರಿ, ನಂದಿನಿ ಬಡಾವಣೆ

ಉತ್ತಮ ಪ್ರಯತ್ನ
ಮಹಿಳೆಯರೇ ಚಾಲಕರಾಗಿರುವ ಪಿಂಕ್ ಆಟೊಗಳನ್ನು ನಗರದಲ್ಲಿ ಪರಿಚಯಿಸಲು ನಿರ್ಧರಿಸಿರುವುದು ಉತ್ತಮ ಬೆಳವಣಿಗೆ. ಚಾಲಕಿಯರಾಗಲು ಬಯಸಲು ಮಹಿಳೆಯರಿಗೆ ಉತ್ತಮ ಚಾಲನಾ ತರಬೇತಿ ಸಿಗಬೇಕು. ಬಿಎಂಟಿಸಿ ಮತ್ತು ಮೆಟ್ರೊದಲ್ಲಿ ಮಕ್ಕಳನ್ನು ಎತ್ತಿಕೊಂಡು ಬರುವವರಿಗೆ ಪ್ರತ್ಯೇಕ ಆಸನ ಮೀಸಲಿಡಬೇಕು.


-ತಾರಾ, ಬಸವೇಶ್ವರನಗರ

ಸಿಬ್ಬಂದಿ ನೇಮಿಸಿ
ಮೆಟ್ರೊದಲ್ಲಿ ಮಹಿಳೆಯರ ಪ್ರಯಾಣಕ್ಕೆ ಪ್ರತ್ಯೇಕ ಬಾಗಿಲು ಕಲ್ಪಿಸಿರುವುದು ಸ್ವಾಗತಾರ್ಹ. ಪಯಣಿಸುವ ಮಹಿಳೆಯರ ಸಂಖ್ಯೆಗೆ ಹೋಲಿಸಿದರೆ ಅದು ಏನೇನೂ ಸಾಲದು. ಹತ್ತುವಾಗ ಮಾತ್ರ ಮಹಿಳೆಯರ ಸಾಲಿರುತ್ತದೆ. ಬೋಗಿಗಳ ಒಳಗೆ ಪುರುಷರೇ ತುಂಬಿರುತ್ತಾರೆ. ಆರಂಭದಲ್ಲಿ ಕೆಲ ದಿನಗಳ ಮಟ್ಟಿಗಾದರೂ ಬೋಗಿಗಳ ಒಳಗೂ ಸಿಬ್ಬಂದಿಯನ್ನು ನೇಮಿಸಬೇಕು.
–ರಾಜೇಶ್ವರಿ, ಶೇಷಾದ್ರಿಪುರ

ನಮ್ಮ ಮಾತು ಕೇಳಲ್ಲ
ಮುಂದಿನ ಬೋಗಿಯಲ್ಲಿ ಹತ್ತಿಕೊಳ್ಳಿ ಎಂದರೆ ಮಹಿಳಾ ಪ್ರಯಾಣಿಕರು ಕೇಳುವುದೇ ಇಲ್ಲ. ರೈಲಿನಲ್ಲಿ ಪ್ರಯಾಣಿಕರ ಸಂದಣಿ ಹೆಚ್ಚಿದ್ದಾಗಲೂ ಹಿಂಬಾಲಿನಲ್ಲೇ ಹತ್ತಲು ಇಷ್ಟಪಡುತ್ತಾರೆ.
–ಶಿಲ್ಪಾ, ಮೆಟ್ರೊ ಭದ್ರತಾ ಸಿಬ್ಬಂದಿ

ಪಿಂಕ್ ಬಸ್ ಬರಲಿ
ನಾವು ಕಾಲೇಜಿಗೆ ಹೋಗುವ ದಿನಗಳಲ್ಲಿ ಮಹಿಳೆಯರಿ ಗಾಗಿಯೇ ಪಿಂಕ್ ಬಸ್‌ಗಳಿರುತ್ತಿದ್ದವು. ಕೆ.ಆರ್.ವೃತ್ತ, ವಿಧಾನಸೌಧಗಳ ಮಾರ್ಗದಲ್ಲಿ ನಾವು ಆ ಬಸ್ಸುಗಳಲ್ಲಿ ಸಂಚರಿಸುತ್ತಿದ್ದೆವು. ಅದು ಆರಾಮದಾಯಕ ಪ್ರಯಾಣವಾಗಿತ್ತು. ಪಿಂಕ್‌ ಆಸನಗಳ ಬದಲಾಗಿ ಪಿಂಕ್‌ ಬಸ್ಸುಗಳನ್ನು ಬಿಟ್ಟರೆ ಕೆಲಸಕ್ಕೆ ತೆರಳುವ ಮಹಿಳೆಯರಿಗೆ ಅನುಕೂಲ. ಯಾವುದೇ ಕಿರಿಕಿರಿ ಇಲ್ಲದೆ ಪ್ರಯಾಣಿಸಬಹುದು.


–ಉಷಾ, ಚಿಕ್ಕಬಣಾವರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT