ಕೆಪಿಜೆಪಿಗೆ ನಟ ಉಪೇಂದ್ರ ಬೈ?

ಬುಧವಾರ, ಮಾರ್ಚ್ 20, 2019
31 °C

ಕೆಪಿಜೆಪಿಗೆ ನಟ ಉಪೇಂದ್ರ ಬೈ?

Published:
Updated:
ಕೆಪಿಜೆಪಿಗೆ ನಟ ಉಪೇಂದ್ರ ಬೈ?

ಬೆಂಗಳೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ, ಟಿಕೆಟ್‌ ಹಂಚಿಕೆ ವಿಚಾರದಲ್ಲಿ ಕರ್ನಾಟಕ ಪ್ರಜಾಕೀಯ ಜನತಾ ಪಕ್ಷದ (ಕೆಪಿಜೆಪಿ) ಸಂಸ್ಥಾಪಕ ಮಹೇಶ್‌ ಗೌಡ ಮತ್ತು ಪಕ್ಷದ ನೇತೃತ್ವ ವಹಿಸಿರುವ ನಟ ಉಪೇಂದ್ರ ಮಧ್ಯೆ ಭಿನ್ನಮತ ಸ್ಫೋಟಗೊಂಡಿದೆ.

ಪಕ್ಷದೊಳಗಿನ ಆಂತರಿಕ ಬೆಳವಣಿಗೆಗೆ ಬೇಸತ್ತಿರುವ ಉಪೇಂದ್ರ, ಪಕ್ಷ ಬಿಡುವ ಬಗ್ಗೆ ನೇರವಾಗಿ ಯಾವುದೇ ಹೇಳಿಕೆ ನೀಡದಿದ್ದರೂ, ‘ಮಂಗಳವಾರದ

ವರೆಗೆ (ಮಾ. 6) ಕಾದು ನೋಡಿ’ ಎಂದು ಟ್ವೀಟ್ ಮಾಡಿದ್ದಾರೆ.

ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಸಹಿ ಮಾಡುವ (ಸೈನಿಂಗ್ ಅಥಾರಿಟಿ) ಅಧಿಕಾರಕ್ಕೆ ಸಂಬಂಧಪಟ್ಟಂತೆ ಮಹೇಶ್ ಗೌಡ ಮತ್ತು ಉಪೇಂದ್ರ ಮಧ್ಯೆ ಭಿನ್ನಮತ ಮೂಡಿದೆ. ಇದರಿಂದಾಗಿ ಪಕ್ಷವೇ ಇಬ್ಭಾಗವಾಗಿದೆ.

ಕೆಪಿಜೆಪಿಯ ಕೋರ್‌ ಸಮಿತಿಯ 13 ಸದಸ್ಯರ ಪೈಕಿ ಕೆಲವರು ಉಪೇಂದ್ರ ವಿರುದ್ಧ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಉಪೇಂದ್ರ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುತ್ತಿದ್ದರು ಎನ್ನಲಾಗಿದ್ದು, ಇದು ಪದಾಧಿಕಾರಿಗಳ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಗೊತ್ತಾಗಿದೆ.

ಇದೇ 3ರಂದು ಮಹೇಶ್ ಗೌಡ ಕರೆದಿದ್ದ ಪಕ್ಷದ ಪ್ರಮುಖರ ಸಭೆಗೆ ಉಪೇಂದ್ರ ಗೈರಾಗಿದ್ದರು. ಉಪೇಂದ್ರ ಪರವಾಗಿ ಅವರ ಸಹೋದರ ಈ ಸಭೆಯಲ್ಲಿ ಭಾಗವಹಿಸಿದ್ದರು. ಸಹಿ ಹಾಕುವ ಅಧಿಕಾರವನ್ನು ಉಪೇಂದ್ರ ಒಬ್ಬರಿಗೇ ನೀಡಬೇಕು ಎಂಬ ಪ್ರಸ್ತಾಪವನ್ನು ಅವರು ಈ ಸಭೆಯಲ್ಲಿ ಮುಂದಿಟ್ಟಿದ್ದರು. ಆದರೆ, ಸಮಿತಿ ಇದಕ್ಕೆ ಒಪ್ಪಿಗೆ ಸೂಚಿಸಿರಲಿಲ್ಲ.

ಪಕ್ಷದಲ್ಲಿ ಭಿನ್ನಮತ ಉಂಟಾಗಲು ಸಹಿ ಹಾಕುವ ಕುರಿತ ಗೊಂದಲವೇ ಕಾರಣ ಎಂಬುದನ್ನು ಉಪೇಂದ್ರ ಕೂಡಾ ಒಪ್ಪಿಕೊಂಡಿದ್ದಾರೆ. ಸೋಮವಾರ ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಪಕ್ಷದಲ್ಲಿ ಯಾವ ಕಾರಣಕ್ಕಾಗಿ ಭಿನ್ನಮತ ಉಂಟಾಗಿದೆ ಎಂಬುದು ನಿಖರವಾಗಿ ಗೊತ್ತಾಗುತ್ತಿಲ್ಲ. ಪಕ್ಷಕ್ಕೆ ಕಾರ್ಮಿಕರು ಬೇಕೆ ವಿನಾ ನಾಯಕರು ಬೇಡ ಎಂದು ಮೊದಲಿನಿಂದಲೂ ಹೇಳುತ್ತಿದ್ದೆ. ಆಂತರಿಕ ಸಮಸ್ಯೆ ಬಗೆಹರಿಸಲು ಪ್ರಯತ್ನ ನಡೆಸಿದರೂ ಮಹೇಶ್‍ ಗೌಡ ಒಪ್ಪುತ್ತಿಲ್ಲ. ಸಹಿ ಹಾಕುವ ಅಧಿಕಾರ ನನಗೆ ಕೊಡಿ, ಬಿ-ಫಾರಂ ನೀವೇ ಕೊಡಿ ಎಂದು ಕೇಳಿದ್ದೆ’ ಎಂದರು.

‘ಪಕ್ಷಕ್ಕೆ ಅನ್ಯಾಯ ಮಾಡಬಾರದು. ನಾನು ಪಕ್ಷವನ್ನು ಕೊಂಡುಕೊಳ್ಳಲು ಯತ್ನಿಸಿಲ್ಲ. ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಬಹುತೇಕ ಮುಕ್ತಾಯವಾಗಿದೆ. ಆದರೆ, ಈಗಾಗಲೇ ಆಯ್ಕೆ ನಡೆದಿರುವ ಕೆಲವು ಕ್ಷೇತ್ರಗಳಿಗೆ ಮಹೇಶ್‍ ಗೌಡ ಬೇರೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದಾರೆ. ಕೆಲವರಿಗೆ ತಾವೇ ಪತ್ರ ನೀಡಿ ಪಕ್ಷದ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ. ಶಿಸ್ತುಬದ್ಧವಾಗಿ ನಡೆಯಬೇಕು ಎಂಬ ಉದ್ದೇಶದಿಂದ ಇಂಥ ನಡೆ ಸರಿಯಲ್ಲವೆಂದರೂ ಕೇಳಲಿಲ್ಲ. ಇದೀಗ ಮಾಧ್ಯಮಗಳ ಮುಂದೆ ಬಂದು ಆರೋಪಗಳನ್ನು ಮಾಡಿದ್ದಾರೆ. ಇದಕ್ಕೆ ಮಂಗಳವಾರ ಉತ್ತರ ನೀಡುತ್ತೇನೆ’ ಎಂದು ಸ್ಪಷ್ಟಪಡಿಸಿದರು.

ವಾಸ್ತವಕ್ಕೆ ಇಳಿಯಬೇಕು: ಮಹೇಶ್ ಗೌಡ

‘ಪ್ರಜಾಕೀಯವಾಗಿ ನಡೆಸಿಕೊಂಡು ಹೋಗಬೇಕಾದರೆ ಒಬ್ಬರಿಗೆ ಅಧಿಕಾರ ಬೇಡ. ಕನಿಷ್ಠ ಇಬ್ಬರಿಗೆ ಇರಬೇಕು ಎಂಬುದು ಪಕ್ಷದ ಪ್ರಮುಖರ ಅಭಿಪ್ರಾಯವಾಗಿದ್ದರೂ ಉಪೇಂದ್ರ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ’ ಎಂದು ಮಹೇಶ್‍ ಗೌಡ ಆರೋಪಿಸಿದರು.

ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ‘ಪಕ್ಷವನ್ನು ಸಂಘಟಿಸಬೇಕಾದರೆ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಬೇಕು. ಪ್ರತಿಯೊಬ್ಬರ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕು. ಸಹಿ ಹಾಕುವ ಅಧಿಕಾರ ಒಬ್ಬರಿಗೆ ಇರುವುದಕ್ಕಿಂತ ಕನಿಷ್ಠ ಇಬ್ಬರಿಗೆ ಇರಬೇಕು ಎಂಬುದು ನಮ್ಮ ವಾದ. ಆದರೆ, ಇದಕ್ಕೆ ಉಪೇಂದ್ರ ಒಪ್ಪುತ್ತಿಲ್ಲ. ಆಟೊ, ಪ್ರಜಾಕೀಯ ಮತ್ತು ಉಪೇಂದ್ರ ಮಾತ್ರ ಇರಬೇಕು ಎಂದು ಹೇಳುತ್ತಿದ್ದು, ಇದು ಸಮಿತಿ ಸದಸ್ಯರಿಗೆ ನೋವು ಉಂಟು ಮಾಡಿದೆ’ ಎಂದರು.

‘ಮುಖ್ಯಮಂತ್ರಿ ಮತ್ತು ಪ್ರಧಾನ ಮಂತ್ರಿಗಳೇ ಪ್ರಚಾರ ಆರಂಭಿಸಿರುವಾಗ ನಾವು ಕೂಡಾ ಆರಂಭಿಸಬೇಕಲ್ಲವೇ. ಚುನಾವಣೆ ಸಮೀಪಿಸುತ್ತಿದ್ದರೂ ಪ್ರಚಾರ ಆರಂಭಿಸಿಲ್ಲ. ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಿಧಾನ ಗತಿಯಲ್ಲಿ ನಡೆಯುತ್ತಿದೆ. ಮನೆಯಲ್ಲಿ ಕುಳಿತು ಸಾಮಾಜಿಕ ಜಾಲ ತಾಣಗಳ ಮೂಲಕ ಪ್ರಚಾರ ಮಾಡುವುದಾಗಿ ಉಪೇಂದ್ರ ಹೇಳುತ್ತಾರೆ. ಆದರೆ, ವಾಸ್ತವಕ್ಕೆ ಇಳಿಯಬೇಕು ಎಂಬುದು ನಮ್ಮ ಬಯಕೆ. ಜನರ ಬಳಿಗೆ ಹೋಗಬೇಕು. ಗ್ರಾಮ, ಗ್ರಾಮಗಳಿಗೆ ಹೋಗಿ ಪಕ್ಷ ಕಟ್ಟಬೇಕು ಎಂಬುದು ನಮ್ಮ ಅಭಿಪ್ರಾಯ’ ಎಂದು ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry