ಕಲಾಪ ನುಂಗಿದ ಬ್ಯಾಂಕ್‌ ಹಗರಣ

ಸೋಮವಾರ, ಮಾರ್ಚ್ 25, 2019
21 °C

ಕಲಾಪ ನುಂಗಿದ ಬ್ಯಾಂಕ್‌ ಹಗರಣ

Published:
Updated:
ಕಲಾಪ ನುಂಗಿದ ಬ್ಯಾಂಕ್‌ ಹಗರಣ

ನವದೆಹಲಿ: ಮೂರು ವಾರಗಳ ಬಿಡುವಿನ ಬಳಿಕ ಸಂಸತ್ತಿನ ಬಜೆಟ್‌ ಅಧಿವೇಶನದ ಎರಡನೇ ಭಾಗ ಸೋಮವಾರ ಆರಂಭವಾದರೂ ವಿರೋಧ ಪಕ್ಷಗಳ ಗದ್ದಲಕ್ಕೆ ಕಲಾಪ ಸಂಪೂರ್ಣವಾಗಿ ಬಲಿಯಾಯಿತು. ವಿರೋಧ ಪಕ್ಷಗಳ ಸದಸ್ಯರು ಘೋಷಣೆ ಕೂಗಿ ಕಲಾಪ ನಡೆಯಲು ಅವಕಾಶ ಕೊಡದ್ದರಿಂದಾಗಿ ಲೋಕಸಭೆ ಮತ್ತು ರಾಜ್ಯಸಭೆಗಳೆರಡನ್ನೂ ದಿನದ ಮಟ್ಟಿಗೆ ಮುಂದೂಡಲಾಯಿತು.

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನ (ಪಿಎನ್‌ಬಿ) ₹12,700 ಕೋಟಿ ಹಗರಣಕ್ಕೆ ಸಂಬಂಧಿಸಿ ಕಾಂಗ್ರೆಸ್‌ ಸದಸ್ಯರು ಪ್ರತಿಭಟನೆ ನಡೆಸಿದರು. ಆಂಧ್ರ ಪ‍್ರದೇಶಕ್ಕೆ ವಿಶೇಷ ಸ್ಥಾನ ನೀಡಬೇಕು ಎಂದು ಟಿಡಿಪಿ ಸಂಸದರು ಆಗ್ರಹಿಸಿದರು. ಲೋಕಸಭೆಯಲ್ಲಿ  ಟಿಆರ್‌ಎಸ್‌, ಎಐಎಡಿಎಂಕೆ, ಕಾಂಗ್ರೆಸ್‌ ಮತ್ತು ಟಿಡಿಪಿ ಸಂಸದರು ಸ್ಪೀಕರ್‌ ಪೀಠದ ಮುಂದೆ ಜಮಾಯಿಸಿ ಕೋಲಾಹಲ ಎಬ್ಬಿಸಿದರು.

ಕಲಾಪ ಆರಂಭವಾಗುತ್ತಿದ್ದಂತೆಯೇ ತೃಣಮೂಲ ಕಾಂಗ್ರೆಸ್‌ ಸದಸ್ಯರು ಸ್ಪೀಕರ್‌ ಪೀಠದ ಮುಂದೆ ಸೇರಿ ನೀರವ್ ಮೋದಿ ಮತ್ತು ಮೆಹುಲ್‌ ಚೋಕ್ಸಿ ಅವರು ಪಿಎನ್‌ಬಿಗೆ ವಂಚನೆ ಮಾಡಿರುವುದರ ವಿರುದ್ಧ ಘೋಷಣೆಗಳನ್ನು ಕೂಗಲಾರಂಭಿಸಿದರು. ಕಾಂಗ್ರೆಸ್‌ ಸಂಸದರನ್ನು ಹಿಂದಿಕ್ಕಿ ಉಳಿದ ವಿರೋಧ ಪಕ್ಷಗಳ ಸದಸ್ಯರೇ ಪ್ರತಿಭಟನೆಯ ಮುಂಚೂಣಿಯಲ್ಲಿದ್ದರು.

ಸ್ಪೀಕರ್‌ ಸುಮಿತ್ರಾ ಮಹಾಜನ್‌ ಕಲಾಪವನ್ನು ಮಧ್ಯಾಹ್ನದವರೆಗೆ ಮುಂದೂಡಿದಾಗ ಕಾಂಗ್ರೆಸ್‌ ಸಂಸದರು ತಮ್ಮ ಆಸನಗಳಲ್ಲಿಯೇ ಕುಳಿತಿದ್ದರು. ಮಧ್ಯಾಹ್ನದ ಬಳಿಕ ತೃಣಮೂಲ ಕಾಂಗ್ರೆಸ್‌ ಸಂಸದರ ಜತೆಗೆ ಕಾಂಗ್ರೆಸ್‌ ಸಂಸದರೂ ಸೇರಿಕೊಂಡರು.

ಪಿಎನ್‌ಬಿಗೆ ವಂಚನೆ ಮಾಡಿದ ನೀರವ್‌ ಮೋದಿ ಎಲ್ಲಿದ್ದಾರೆ ಎಂಬ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಬೇಕು ಎಂದು ಆಗ್ರಹಿಸಿದರು.

ತಮ್ಮ ಪಕ್ಷ ಪ್ರಸ್ತಾಪಿಸುವ ವಿಚಾರಗಳ ಬಗ್ಗೆಯೇ ಮೊದಲು ಚರ್ಚೆ ನಡೆಯಬೇಕು ಎಂದು ರಾಜ್ಯಸಭೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷ ನಿಲುವಳಿ ನೋಟಿಸ್‌ಗಳನ್ನು ನೀಡಿವೆ. ಮುಂದಿನ ದಿನಗಳಲ್ಲಿಯೂ ಕಲಾಪ ಸಂಘರ್ಷಭರಿತವಾಗಿಯೇ ಇರಲಿದೆ ಎಂಬ ಸುಳಿವನ್ನು ಇದು ನೀಡಿದೆ.

ಪ್ರತಿಧ್ವನಿಸಿದ ಕಾವೇರಿ: ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡಬೇಕೆಂದು ಎಐಎಡಿಎಂಕೆ ಸಂಸದರು ಘೋಷಣೆ ಕೂಗಿದರು. ತೆಲಂಗಾಣದಲ್ಲಿ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು ಎಂದು ತೆಲಂಗಾಣ ರಾಷ್ಟ್ರ ಸಮಿತಿ ಸದಸ್ಯರು ಒತ್ತಾಯಿಸಿದರು.

ಪಿಎನ್‌ಬಿ ವಂಚನೆ ಚರ್ಚೆಗೆ ಒತ್ತಾಯ

ಬ್ಯಾಂಕುಗಳಿಗೆ ವಂಚನೆ ವಿಚಾರವೇ ಲೋಕಸಭೆಯಲ್ಲಿ ಮೊದಲು ಚರ್ಚೆಯಾಗಬೇಕು. ಉಳಿದೆಲ್ಲ ವಿಚಾರಗಳನ್ನು ಬಳಿಕವೇ ಕೈಗೆತ್ತಿಕೊಳ್ಳಬೇಕು ಎಂದು ಪ್ರಮುಖ ವಿರೋಧ ಪಕ್ಷಗಳು ಸರ್ಕಾರವನ್ನು ಆಗ್ರಹಿಸಿವೆ.

ಮಂಗಳವಾರ ಮಧ್ಯಾಹ್ನ 12 ಗಂಟೆಯಿಂದ ನಾಲ್ಕು ತಾಸು ಈ ವಿಚಾರದ ಚರ್ಚೆ ನಡೆಯಬೇಕು ಎಂದು ಸ್ಪೀಕರ್‌ ಸುಮಿತ್ರಾ ಮಹಾಜನ್‌ ಅಧ್ಯಕ್ಷತೆಯಲ್ಲಿ ನಡೆದ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಕಾಂಗ್ರೆಸ್‌, ತೃಣಮೂಲ ಕಾಂಗ್ರೆಸ್‌ ಮತ್ತು ಬಿಜೆಡಿ ಪ್ರತಿನಿಧಿಗಳು ಒತ್ತಾಯಿಸಿದರು.

ಯಾವುದೇ ವಿಚಾರದ ಚರ್ಚೆಗೆ ಸರ್ಕಾರ ಸಿದ್ಧವಿದೆ. ಆದರೆ ಮಂಗಳವಾರ ಪ್ರಶ್ನೋತ್ತರ ಅವಧಿಯ ಬಳಿಕ ಬ್ಯಾಂಕಿಂಗ್‌ ಹಗರಣದ ಚರ್ಚೆ ನಡೆಯಲಿದೆಯೇ ಎಂಬುದನ್ನು ಹೇಳಲಾಗದು ಎಂದು ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್‌ ಹೇಳಿದರು ಎಂದು ವಿರೋಧ ಪಕ್ಷದ ಸದಸ್ಯ ತಿಳಿಸಿದ್ದಾರೆ.

‘ಮುಂದಿನ ಸರದಿ ಕರ್ನಾಟಕ’

ತ್ರಿಪುರಾ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಸಂಭ್ರಮ ಸಂಸತ್ತಿನಲ್ಲಿಯೂ ಸೋಮವಾರ ಕಾಣಿಸಿಕೊಂಡಿತು. ಬಿಜೆಪಿ ಅಧ್ಯಕ್ಷ ಅಮಿತ್‌ ಶಾ, ಹಿರಿಯ ಸಚಿವರಾದ ರಾಜನಾಥ್‌ ಸಿಂಗ್‌, ನಿತಿನ್‌ ಗಡ್ಕರಿ, ಅನಂತಕುಮಾರ್‌, ಸುರೇಶ್‌ ಪ್ರಭು ಮತ್ತು ಸಂಸದರು ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನ ಆವರಣಕ್ಕೆ ಬರುತ್ತಿದ್ದಂತೆಯೇ ಭವ್ಯ ಸ್ವಾಗತ ನೀಡಿದರು.

‘ಗೆಲುವಿನ ಓಟ ಮುಂದುವರಿಯಲಿದೆ, ಕರ್ನಾಟಕದ್ದು ಮುಂದಿನ ಸರದಿ’ ಎಂಬ ಘೋಷಣೆಗಳನ್ನು ಬಿಜೆಪಿ ಸಂಸದರು ಕೂಗಿದರು.

ಪ್ರಧಾನಿ ಮೋದಿ ಲೋಕಸಭೆಗೆ ಬಂದಾಗ ಆಡಳಿತ ಪಕ್ಷದ ಸದಸ್ಯರು ಚಪ್ಪಾಳೆ ಮೂಲಕ ಸ್ವಾಗತಿಸಿದರು. ಬಿಜೆಪಿಯ ಹಲವು ಸಂಸದರು ಅಸ್ಸಾಮ್‌ನ ಸಾಂಪ್ರದಾಯಿಕ ಗಮೋಸಾ (ಶಾಲು) ಧರಿಸಿ ಬಂದಿದ್ದರು.  ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ರಾಜ್ಯಸಭೆಗೆ ಬಂದಾಗಲೂ ಮೇಜು ಗುದ್ದಿ ಸ್ವಾಗತಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry