ಮೇಲ್ಸೇತುವೆ ಕಾಮಗಾರಿ ಶೀಘ್ರವೇ ಆರಂಭ

7
ಮೂಲ ಯೋಜನೆಯಲ್ಲಿ ಯಾವುದೇ ಬದಲಾವಣೆಯಿಲ್ಲ: ಎನ್‌ಎಚ್‌ಎಐ ಸ್ಪಷ್ಟನೆ

ಮೇಲ್ಸೇತುವೆ ಕಾಮಗಾರಿ ಶೀಘ್ರವೇ ಆರಂಭ

Published:
Updated:
ಮೇಲ್ಸೇತುವೆ ಕಾಮಗಾರಿ ಶೀಘ್ರವೇ ಆರಂಭ

ಕಾರವಾರ: ನಗರದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಶೀಘ್ರವೇ ಆರಂಭವಾಗಲಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಮಂಗಳೂರು ಕಚೇರಿಯ ಯೋಜನಾ ನಿರ್ದೇಶಕ ಸ್ಯಾಮ್ಸನ್ ವಿಜಯ್ ಕುಮಾರ್ ತಿಳಿಸಿದ್ದಾರೆ.

ಪ್ರವಾಸೋದ್ಯಮದ ಅಭಿವೃದ್ಧಿ ದೃಷ್ಟಿಯಿಂದ ಮೇಲ್ಸೇತುವೆ ನಿರ್ಮಾಣ ಮಾಡುವುದು ಬೇಡ ಎಂದು ಜಿಲ್ಲಾಡಳಿತದಿಂದ ಎನ್‌ಎಚ್‌ಎಐಗೆ ಪತ್ರ ಬರೆಯಲಾಗಿತ್ತು ಎಂದು ಈ ಹಿಂದೆ ನಗರದಲ್ಲಿ ವದಂತಿ ಹಬ್ಬಿತ್ತು. ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ಅವರು, ‘ಹೆದ್ದಾರಿ ವಿಸ್ತರಣೆಯ ಮೂಲ ನಕ್ಷೆಯಲ್ಲಿ ಯಾವುದೇ ಬದಲಾವಣೆಯಿಲ್ಲ. ರಾಜ್ಯ ಸರ್ಕಾರದ ಮನವಿ ಮೇರೆಗೆ ಕಾರವಾರದಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಲಾಗುತ್ತದೆ. ಈಗಾಗಲೇ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಮುಕ್ತಾಯವಾಗಿದೆ. ಈ ಹಂತದಲ್ಲಿ ಯೋಜನೆಯಲ್ಲಿ ಬದಲಾವಣೆ ಮಾಡಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.

ಜಿಲ್ಲೆಯ ಕರಾವಳಿಯಲ್ಲಿ ಅರಬ್ಬೀ ಸಮುದ್ರದ ಪಕ್ಕದಲ್ಲೇ ಸಾಗುವ ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪಥವನ್ನಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಬಹುತೇಕ ಪ್ರದೇಶಗಳಲ್ಲಿ ಕಾಮಗಾರಿಯು ಅಂತಿಮ ಹಂತ ತಲುಪಿದೆ. ಇದರ ಭಾಗವಾಗಿ ಕಾರವಾರ

ದಲ್ಲಿ ಜಿಲ್ಲಾಧಿಕಾರಿ ಬಂಗಲೆಯ ಕೆಳಗೆ ಬೆಟ್ಟವನ್ನು ಕೊರೆದು ಸುರಂಗವನ್ನೂ ನಿರ್ಮಾಣ ಮಾಡಲಾಗುತ್ತಿದೆ. ಇದರ ಸಮೀಪದಲ್ಲಿರುವ ಲಂಡನ್ ಬ್ರಿಜ್‌ನಿಂದ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಯವರೆಗೆ ಸುಮಾರು 1.5 ಕಿ.ಮೀ ಉದ್ದದ ಮೇಲ್ಸೇತುವೆ ನಿರ್ಮಾಣ

ವಾಗಲಿದೆ.

ಈ ಪ್ರದೇಶದಲ್ಲಿ ದಿನವೂ ಸಾವಿರಾರು ಜನರು ರಸ್ತೆ ದಾಟಿ ಕಡಲ ತೀರಕ್ಕೆ ಹೋಗಬೇಕಿದೆ. ಒಂದುವೇಳೆ ಮೇಲ್ಸೇತುವೆ ನಿರ್ಮಾಣವಾಗದಿದ್ದರೆ ಜನರ ಓಡಾಟಕ್ಕೆ ತೊಂದರೆಯಾಗಲಿದೆ ಎಂಬುದು ನಾಗರಿಕರ ಆತಂಕವಾಗಿತ್ತು. ಮೇಲ್ಸೇತುವೆಯಲ್ಲಿ ಪ್ರಯಾಣಿಸುವಾಗ ರವೀಂದ್ರನಾಥ ಟ್ಯಾಗೋರ್ ಕಡಲ ತೀರದ ಸೌಂದರ್ಯ ಮತ್ತಷ್ಟು ಮನಮೋಹಕವಾಗಿ ಕಾಣಲಿದೆ. ಆದ್ದರಿಂದ ಇದು ಪ್ರವಾಸೋದ್ಯಮಕ್ಕೆ ಪೂರಕವಾಗಲಿದೆ ಎಂಬ ಅಭಿಪ್ರಾಯ ಮೂರು ವರ್ಷಗಳ ಹಿಂದೆ ಕರೆಯಲಾಗಿದ್ದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ವ್ಯಕ್ತವಾಗಿತ್ತು.

ಆ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳೂ ಭಾಗವಹಿಸಿದ್ದರು. ಆದರೆ, ಕೆಲವು ಪ್ರಭಾವಿ ಉದ್ಯಮಿಗಳು ಇದರಿಂದ ತಮ್ಮ ವ್ಯಾಪಾರೋದ್ಯಮಕ್ಕೆ ತೊಂದರೆಯಾಗಲಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು.

***

‘ಪುನರ್‌ ಪರಿಶೀಲನೆಗೆ ಮನವಿ ಮಾಡಿದ್ದೆವು’‌

ಜಿಲ್ಲಾಡಳಿತದಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಬರೆದಿದ್ದ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ‘ಮೇಲ್ಸೇತುವೆ ನಿರ್ಮಾಣ ಯೋಜನೆಯನ್ನೇ ರದ್ದು ಮಾಡಿ ಎಂದು ನಾವು ಪತ್ರ ಬರೆದಿರಲಿಲ್ಲ. ಅದರಿಂದ ಕಾರವಾರದಲ್ಲಿ ಪ್ರವಾಸೋದ್ಯಮಕ್ಕೆ ತೊಂದರೆಯಾಗಲಿದೆ. ಆದ್ದರಿಂದ ಯೋಜನೆಯನ್ನು ಪುನರ್‌ಪರಿಶೀಲಿಸಬೇಕು ಎಂದು ಮನವಿ ಮಾಡಿದ್ದೆವು’ ಎಂದು ಹೇಳಿದ್ದಾರೆ.

***

ಕಾರವಾರದಲ್ಲಿ ಮೇಲ್ಸೇತುವೆ ನಿರ್ಮಾಣ ಸಂಬಂಧ ಉತ್ತರ ಕನ್ನಡ ಜಿಲ್ಲಾಧಿಕಾರಿಯಿಂದ ನಮಗೆ ಪತ್ರ ಬಂದಿದೆ. ಅದಕ್ಕೆ ಪ್ರತಿಕ್ರಿಯೆ ನೀಡಲಾಗುವುದು

– ಸ್ಯಾಮ್ಸನ್ ವಿಜಯ್ ಕುಮಾರ್, ಯೋಜನಾ ನಿರ್ದೇಶಕ, ಎನ್‌ಎಚ್‌ಎಐ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry