ಮಸ್ಕಲ್ ಶಾಲೆಗೆ ಹೈಟೆಕ್ ಸ್ಪರ್ಶ

7
ದಾನಿಗಳ ದೇಣಿಗೆ, ಜನಪ್ರತಿನಿಧಿಗಳ ಅನುದಾನದಲ್ಲಿ ₹ 3 ಕೋಟಿ ಮೊತ್ತದಲ್ಲಿ 22 ಕೊಠಡಿಗಳ ನಿರ್ಮಾಣ

ಮಸ್ಕಲ್ ಶಾಲೆಗೆ ಹೈಟೆಕ್ ಸ್ಪರ್ಶ

Published:
Updated:
ಮಸ್ಕಲ್ ಶಾಲೆಗೆ ಹೈಟೆಕ್ ಸ್ಪರ್ಶ

ತುಮಕೂರು: ಅಯ್ಯೊ ಈ ಸರ್ಕಾರಿ ಶಾಲೆಗೆ ಹೇಗೆ ಮಕ್ಕಳನ್ನು ಕಳಿಸುವುದು. ಬಿದ್ದು ಹೋಗುವಂತಿದೆ ಕಟ್ಟಡ. ಶಾಲೆ ಕೊಠಡಿಯ ಗೋಡೆಗಳು ಬಿರುಕು ಬಿಟ್ಟಿವೆ. ಜೋರಾಗಿ ಗಾಳಿ ಬೀಸಿದರೆ ಗಾಳಿಯ ಜೊತೆಗೇ ಹೆಂಚುಗಳು ಹಾರಿ ಹೋಗುತ್ತವೆ. ಮೇಷ್ಟ್ರೇ ಹೇಗ್ರಿ ನಮ್ಮ ಮಕ್ಕಳನ್ನು ಕಳಿಸಬೇಕು?

ಕೆಲವು ತಿಂಗಳ ಹಿಂದೆ ಈ ಸರ್ಕಾರಿ ಶಾಲೆಯ ಸ್ಥಿತಿ ಕಂಡು ಮಕ್ಕಳನ್ನು ಶಾಲೆಗೆ ಸೇರಿಸಲು ಹಿಂಜರಿಯುತ್ತಿದ್ದ ಜನರು ಈಗ ಈ ಶಾಲೆಯ ನೂತನ ಕಟ್ಟಡ ಕಂಡು ನಿಬ್ಬೆರಗಾಗಿದ್ದಾರೆ.

ಒಂದೇ ವರ್ಷದಲ್ಲಿ ಹೀಗೆ ಚಿತ್ರಣವೇ ಬದಲಾದುದು ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಸ್ಕಲ್ ಸರ್ಕಾರಿ ಶಾಲೆಯದ್ದು. ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಸಂಯುಕ್ತ ಪದವಿ ಪೂರ್ವ ಕಾಲೇಜು ಇಲ್ಲಿವೆ.

ಗ್ರಾಮದ ಹಳೆಯ ಸರ್ಕಾರಿ ಶಾಲೆ ಸ್ಥಿತಿ ಕಂಡು ಕೊರುಗುತ್ತಿದ್ದ ಗ್ರಾಮದ ಶಿಕ್ಷಣ ಪ್ರೇಮಿಗಳು, ಹಳೆಯ ವಿದ್ಯಾರ್ಥಿಗಳು ಮತ್ತು ಪೋಷಕರು ಈಗ ಶಾಲೆಯ ಅಭಿವೃದ್ಧಿಯ ಚಿತ್ರಣವನ್ನು ಕಂಡು ಹೆಮ್ಮೆಪಡುತ್ತಿದ್ದಾರೆ. ಈ ವರ್ಷ ನಮ್ಮ ಮಕ್ಕಳನ್ನು ಇದೇ ಶಾಲೆಗೆ ಸೇರಿಸುತ್ತೇವೆ ಎಂದು ಶಿಕ್ಷಕರಿಗೆ ಹೇಳುತ್ತಿದ್ದಾರೆ.

ಶಾಲೆಯ ಈ ಅಭಿವೃದ್ಧಿಗೆ ಶಾಸಕ ಬಿ.ಸುರೇಶ್‌ಗೌಡ ಅವರ ಇಚ್ಛಾಶಕ್ತಿಯೇ ಕಾರಣ ಎನ್ನುವುದು ಶಿಕ್ಷಕರು ಮತ್ತು ಗ್ರಾಮಸ್ಥರ ಮಾತು.

92 ವರ್ಷಗಳಷ್ಟು ಹಳೆಯದಾದ ಶಾಲೆ ಈಗ ಮೂಲಸೌಕರ್ಯ ವಿಚಾರದಲ್ಲಿ ಯಾವುದೇ ಖಾಸಗಿ ಶಾಲೆಗಳನ್ನು ಸಮರ್ಥವಾಗಿ ಎದುರಿಸುವಂತೆ ಇದೆ.

ಏಕಕಾಲಕ್ಕೆ 40 ವಿದ್ಯಾರ್ಥಿಗಳು ಕುಳಿತು ಓದುವ ವ್ಯವಸ್ಥೆಯುಳ್ಳ ಗ್ರಂಥಾಲಯ ಮತ್ತು ವಾಚನಾಲಯ ಕೊಠಡಿ ನಿರ್ಮಾಣ ಮಾಡಲಾಗಿದೆ. ಪಠ್ಯ, ವ್ಯಕ್ತಿತ್ವ ವಿಕಸನಕ್ಕೆ, ಜ್ಞಾನಾರ್ಜನೆಗೆ ಉಪಯುಕ್ತ ಪುಸ್ತಕಗಳು ಇಲ್ಲಿವೆ. ‘ಶಾಲೆಯಲ್ಲಿ ಅನೇಕ ಪುಸ್ತಕಗಳು ಇದ್ದವು. ಗ್ರಂಥಾಲಯ ಇಲ್ಲದ ಕಾರಣ ಮಕ್ಕಳಿಗೆ ಮನೆಗೆ ಓದಲು ಕೊಡಲಾಗುತ್ತಿತ್ತು. ಈಗ ಗ್ರಂಥಾಲಯದಲ್ಲಿಯೇ ಪುಸ್ತಕಗಳನ್ನು ಇಡಲಾಗುವುದು’ ಎಂದು ಶಿಕ್ಷಕರು ಹೇಳುತ್ತಾರೆ.

‘ಅಲ್ಲದೇ, 30 ವಿದ್ಯಾರ್ಥಿಗಳು ಏಕಕಾಲಕ್ಕೆ ಕಂಪ್ಯೂಟರ್ ಬಳಸುವ ವ್ಯವಸ್ಥೆಯುಳ್ಳ ಕಂಪ್ಯೂಟರ್ ಕೊಠಡಿ ನಿರ್ಮಾಣ ಪೂರ್ಣಗೊಂಡಿದೆ. ಕಂಪ್ಯೂಟರ್ ಕಲಿಸಲು ಶಿಕ್ಷಕರನ್ನು ನಿಯೋಜಿಸಲಾಗುವುದು. ಈ ಶಿಕ್ಷಕರಿಗೆ ತಮ್ಮ ಅನುದಾನದಲ್ಲಿ ಗೌರವಧನ ನೀಡುವೆ ಎಂದು ಬಿ.ಸುರೇಶ್‌ಗೌಡ ಹೇಳಿದ್ದಾರೆ’ ಎಂದು ಪ್ರೌಢ ಶಾಲೆಯ ಮುಖ್ಯಶಿಕ್ಷಕರು ’ಪ್ರಜಾವಾಣಿ’ಗೆ ತಿಳಿಸಿದರು.

***

ಶಾಲೆ ಅಭಿವೃದ್ಧಿಗೆ ಕೈ ಜೋಡಿಸಿದವರು

ಇನ್‌ ಕ್ಯಾಪ್ ಸಂಸ್ಥೆಯು ಕಾರ್ಪೊರೇಟ್ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆಯಡಿ (ಸಿಎಸ್‌ಆರ್ ಫಂಡ್) ₹ 60 ಲಕ್ಷ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ₹ 25 ಲಕ್ಷ , ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ₹ 5 ಲಕ್ಷ, ಸ್ಥಳೀಯ ಶಾಸಕರ ಅನುದಾನ ₹ 40 ಲಕ್ಷ, ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಯೋಜನೆಯಡಿ ವಿಧಾನ ಪರಿಷತ್ ಸದಸ್ಯ ಲೆಹೆರ್‌ ಸಿಂಗ್ ಸಿರೋಯಾ ₹ 10 ಲಕ್ಷ ಅನುದಾನವನ್ನು ಶಾಲೆ ಅಭಿವೃದ್ಧಿಗಾಗಿ ನೀಡಿದ್ದಾರೆ.

***

ಕನಸು ನನಸಾಗಿಸುವ ಯತ್ನ

ಈಗಾಗಲೇ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಹಲವು ಕಡೆ ಶಾಲೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಆದರೆ, ಈ ಶಾಲೆ ವಿಶೇಷವೆಂದರೆ ಇಲ್ಲಿ ಪ್ರಾಥಮಿಕ ಶಾಲೆಯಿಂದ ಪದವಿಪೂರ್ವ ಕಾಲೇಜು ಹಂತದವರೆಗೂ (ಇಂಟಿಗ್ರೇಟೆಡ್ ಸಿಸ್ಟಮ್) ವಿದ್ಯಾರ್ಥಿಗಳಿದ್ದಾರೆ. ಹೀಗಾಗಿ, ಎಲ್ಲ ಕಡೆಗಿಂತ ಇಲ್ಲಿ ಹೆಚ್ಚು ಕೊಠಡಿ ನಿರ್ಮಾಣ ಮಾಡಲಾಗಿದೆ ಎಂದು ಶಾಸಕ ಬಿ.ಸುರೇಶ್‌ಗೌಡ ತಿಳಿಸಿದರು.

ಬಡವರು, ದಲಿತರು, ಹಿಂದುಳಿದ ವರ್ಗದವರು, ಶಿಕ್ಷಣದಿಂದ ವಂಚಿತರಾಗುತ್ತಿರುವ ಸಮುದಾಯದ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕು. ಅನೇಕ ದಾನಿಗಳು, ಜನಪ್ರತಿನಿಧಿಗಳ ಸಹಕಾರದಿಂದ ದೇಶಕ್ಕೆ ಮಾದರಿಯಾಗಬೇಕು ಎಂಬ ಉದ್ದೇಶದಿಂದ ಇಂತಹ ಶಾಲೆ ನಿರ್ಮಾಣ ಮಾಡಲಾಗಿದೆ. ಬೇರೆಯವರೂ ಸ್ಫೂರ್ತಿ ಪಡೆಯಬೇಕು ಎಂಬುದು ನನ್ನ ಆಶಯ ಎಂದು ಹೇಳಿದರು.

***

ಶಾಲೆ ಬೆಳೆದು ಬಂದ ದಾರಿ

ಗ್ರಾಮದಲ್ಲಿ 1926ರಲ್ಲಿ ಸರ್ಕಾರಿ ಶಾಲೆ ಪ್ರಾರಂಭವಾಯಿತು. 1946ರಲ್ಲಿ ಹಿರಿಯ ಪ್ರಾಥಮಿಕ ಶಾಲೆಯಾಗಿ ಮೇಲ್ದರ್ಜೆಗೇರಿತು. 1984ರಲ್ಲಿ ಪ್ರೌಢ ಶಾಲೆ, 1993ರಲ್ಲಿ ಪದವಿ ಪೂರ್ವ ಕಾಲೇಜು (ಕಲಾ) ವಿಭಾಗ ಪ್ರಾರಂಭವಾಯಿತು. 2017ರಲ್ಲಿ ವಾಣಿಜ್ಯ ವಿಭಾಗವು ಪ್ರಾರಂಭವಾಗಿದೆ.

ಉದ್ದೇಶಿತ ಯೋಜನೆ: ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸುವ ಆಶಯಕ್ಕೆ ಪೂರಕವಾಗಿ ಪೂರ್ವ ಪ್ರಾಥಮಿಕ ಶಾಲೆ(ಎಲ್‌ಕೆಜಿ–ಯುಕೆಜಿ) ಪ್ರಾರಂಭಿಸಲಾಗಿದೆ. ಶಾಲೆಯಲ್ಲಿ 8ನೇ ತರಗತಿ ಇಂಗ್ಲಿಷ್ ಮಾಧ್ಯಮ ಪ್ರಾರಂಭಿಸಲಾಗುತ್ತಿದೆ. 2018–19ನೇ ಶೈಕ್ಷಣಿಕ ಸಾಲಿಗೆ 5ನೇ ತರಗತಿಯನ್ನು ಇಂಗ್ಲಿಷ್ ಮಾಧ್ಯಮದಲ್ಲಿ ಪ್ರಾರಂಭಿಸಲು ಇಲಾಖೆಯ ಅನುಮತಿ ಪಡೆಯಲಾಗಿದೆ ಎಂದು ಮುಖ್ಯಶಿಕ್ಷಕ ಕೃಷ್ಣಮೂರ್ತಿ  ಮಾಹಿತಿ ನೀಡಿದರು.

ಹೆಚ್ಚು ಸೌಕರ್ಯ: ನಮ್ಮ ಶಾಲೆಯು 3 ಎಕರೆ 13 ಗುಂಟೆ ಜಮೀನು ಹೊಂದಿದೆ. ಇದರಲ್ಲಿ ಅರ್ಧ ಭಾಗ ಆಟಕ್ಕೆ ‌ಮೀಸಲಿರಿಸಲಾಗಿದೆ. ಉಳಿದ ಅರ್ಧ ಭಾಗದಲ್ಲಿ 22 ಕೊಠಡಿ, ಕಂಪ್ಯೂಟರ್ ಕೊಠಡಿ, ಗ್ರಂಥಾಲಯ, ವಿದ್ಯಾರ್ಥಿನಿಯರು ಮತ್ತು ವಿದ್ಯಾರ್ಥಿಗಳಿಗೆ ಪ್ರತ್ಯೇಕ ಶೌಚಾಲಯ, ವಿಜ್ಞಾನ ಪ್ರಯೋಗಾಲಯ, ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣಕ್ಕೆ ಬಳಸಲಾಗಿದೆ ಎಂದರು.

ಬಿ.ಸುರೇಶ್‌ಗೌಡ ಅವರು ಶಾಲೆ ಮತ್ತು ಕಾಲೇಜು ದತ್ತು ಪಡೆದು ಅಭಿವೃದ್ಧಿಪಡಿಸಲು ಮುಂದಾಗದೇ ಇದ್ದರೆ ಕಷ್ಟವಾಗುತ್ತಿತ್ತು. ಶಿಥಿಲಗೊಂಡ ಶಾಲೆಯಲ್ಲಿಯೇ ಮಕ್ಕಳಿಗೆ ಪಾಠ ಮಾಡಬೇಕಾಗುತ್ತಿತ್ತು ಎಂದರು.

***

ನಾಳೆ ನೂತನ ಕೊಠಡಿ– ಕಟ್ಟಡ ಉದ್ಘಾಟನೆ

ಮಸ್ಕಲ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ, ಪ್ರೌಢ ಶಾಲೆ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಿರ್ಮಾಣಗೊಂಡಿರುವ ನೂತನ ಶಾಲಾ ಕೊಠಡಿ ಮತ್ತು ಕಟ್ಟಡಗಳ ಉದ್ಘಾಟನೆ ಕಾರ್ಯಕ್ರಮ ಮಾ.7ರಂದು ಬೆಳಿಗ್ಗೆ 10.30ಕ್ಕೆ ನಡೆಯಲಿದೆ. ರಾಜ್ಯಪಾಲರಾದ ವಜುಭಾಯಿ ವಾಲಾ ಅವರು ಶಾಲಾ ಕೊಠಡಿಗಳ ಉದ್ಘಾಟನೆ ಮಾಡುವರು.

**

ಗ್ರಾಮದ ಮಕ್ಕಳಿಗೆ ಸಹಾಯ

ಈ ಶಾಲೆಗೆ ಮೊದಲು ಕಾಂಪೌಂಡ್ ಇರಲಿಲ್ಲ. ಶಾಲೆಯ ಗೋಡೆಗಳು ಬೀಳುವಂತಿದ್ದವು. ಮಕ್ಕಳನ್ನು ಕಳಿಸಲು ಹೆದರಿಕೆಯಾಗುತ್ತಿತ್ತು. ಹಾವುಗಳು ಹರಿದಾಡುತ್ತಿದ್ದವು. ಈಗ ಕಾಂಪೌಂಡ್ ನಿರ್ಮಾಣವಾಗಿದೆ. ಹೊಸ ಕಟ್ಟಡ ನಿರ್ಮಿಸಿರುವುದರಿಂದ ಗ್ರಾಮದ ಮಕ್ಕಳಿಗೆ ಶಾಲೆಗೆ ಬರಲು ಹೆಚ್ಚು ಸಹಾಯ ಆಗಿದೆ ಎಂದು ಗ್ರಾಮದ ಲಕ್ಷ್ಮಮ್ಮ ’ಪ್ರಜಾವಾಣಿ’ ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry