ಕಾಂಗ್ರೆಸ್‌ಗೆ ಖೇಣಿ ಸೇರ್ಪಡೆಯಿಂದ ಸೀದಾ ರೂಪೈಯ್ಯ ಆರೋಪ ಸಾಬೀತು:ಜಾವಡೇಕರ್‌ ; ಮೋದಿ ಕಣ್ಗಾವಲಲ್ಲಿ ಚೋಟಾಮೋದಿ ದೇಶಬಿಟ್ಟ : ಸಿದ್ದರಾಮಯ್ಯ

7

ಕಾಂಗ್ರೆಸ್‌ಗೆ ಖೇಣಿ ಸೇರ್ಪಡೆಯಿಂದ ಸೀದಾ ರೂಪೈಯ್ಯ ಆರೋಪ ಸಾಬೀತು:ಜಾವಡೇಕರ್‌ ; ಮೋದಿ ಕಣ್ಗಾವಲಲ್ಲಿ ಚೋಟಾಮೋದಿ ದೇಶಬಿಟ್ಟ : ಸಿದ್ದರಾಮಯ್ಯ

Published:
Updated:

ಬೆಂಗಳೂರು: ಚುನಾವಣಾ ಪ್ರಚಾರದ ಹಿನ್ನಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಾಯಕರ ನಡುವೆ ಇಂದು ಸಹ ಟ್ವಿಟರ್‌ನಲ್ಲಿ ಆರೋಪ–ಪ್ರತ್ಯಾರೋಪ ನಡೆಯಿತು.

ರಾಜ್ಯ ಬಿಜೆಪಿಯ ಚುನಾವಣಾ ಉಸ್ತುವಾರಿ ಹೊತ್ತಿರುವ ಪ್ರಕಾಶ್‌ ಜಾವಡೇಕರ್‌, ‘ನೈಸ್ ಹಗರಣದ ರೂವಾರಿ ಅಶೋಕ್ ಖೇಣಿ ವಿರುದ್ಧ ತನಿಖೆ ನಡೆಸಿ ಜೈಲಿಗೆ ಅಟ್ಟಬೇಕಿದ್ದ ಸಿದ್ದರಾಮಯ್ಯನವರು, ಖೇಣಿಯನ್ನು ಅಪ್ಪಿ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ಪ್ರಧಾನಿ ಹೇಳಿದಂತೆ ಅವರದು 'ಸೀದಾ ರೂಪೈಯ್ಯ' ಸರ್ಕಾರ ಎಂಬುದು ಸಾಬೀತಾಗಿದೆ’ ಎಂದು ಕುಟುಕಿದ್ದಾರೆ.

‘ನೈಸ್ ಹಗರಣದ ಭೂಗಳ್ಳ ಅಶೋಕ್ ಖೇಣಿ ರೈತರ ಸಾವಿರಾರು ಎಕರೆ ಭೂಮಿಯನ್ನು ಅಕ್ರಮವಾಗಿ ಅತಿಕ್ರಮಣ ಮಾಡಿರುವ ಆರೋಪ ಎದುರಿಸುತ್ತಿದ್ದಾರೆ. ಇಂತಹ ವ್ಯಕ್ತಿಯನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸೊಕೊಂಡಿರುವುದು ರೈತ ವಿರೋಧಿ ಮನಸ್ಥಿತಿಯನ್ನು ತೋರಿಸುತ್ತದೆ. ಇಂತಹ ಭ್ರಷ್ಟ, ರೈತ ವಿರೋಧಿ ಕಾಂಗ್ರೆಸ್ಸನ್ನು ಕನ್ನಡಿಗರು ಹೊರಹಾಕಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

  ಮುಖ್ಯಮಂತ್ರಿ ಸಿದ್ದರಾಮಯ್ಯ ನೀರವ್‌ ಮೋದಿಯ ವಂಚನೆ ಪ್ರಕರಣವನ್ನು ಉದಾಹರಿಸಿ, ಪ್ರಧಾನಿ ಮೋದಿ ವಿರುದ್ಧ ಟ್ವೀಟರ್‌ನಲ್ಲಿ ಹರಿಹಾಯ್ದಿದ್ದಾರೆ.

‘ನರೇಂದ್ರ ಮೋದಿ ಅವರೆ, ನೀವು ರಾಜ್ಯದಲ್ಲಿ ದೂರದೃಷ್ಟಿಯ (ಮಿಷನ್‌) ಸರ್ಕಾರ ಸ್ಥಾಪಿಸುವುದಾಗಿ ಭರವಸೆ ನೀಡುತ್ತಿದ್ದೀರಿ. ನೀವು ವಿಚಾರ ಮಾಡಲು ಎರಡು ಅಂಶಗಳನ್ನು ಗಮನಕ್ಕೆ ತರುತ್ತೇನೆ. ಒಂದು, ನೀವು ಕೇಂದ್ರದಲ್ಲಿ ಮಿಷನ್‌ ಸರ್ಕಾರ ನಡೆಸುವಲ್ಲಿ ಸೋತಿದ್ದಿರಾ. ನಿಮ್ಮ ಕಣ್ಗಾವಲಿನಲ್ಲಿಯೇ ಚೋಟಾ ಮೋದಿ (ನೀರವ್‌ ಮೋದಿ) 12 ಸಾವಿರ ಕೋಟಿ ವಂಚಿಸಿ ದೇಶದಿಂದ ಪಲಾಯನ ಮಾಡಿದ್ದಾನೆ. ಎರಡನೆಯದು, ರೈತರಿಗಾಗಿ ನೀವೇನು ಮಾಡಿಲ್ಲ’.

‘ಇಂತಹ ವ್ಯಕ್ತಿಯಿಂದ ಮಿಷನ್‌ ಸರ್ಕಾರ ಸ್ಥಾಪಿಸಲು ಸಾಧ್ಯವೇ!’ ಎಂದು ಯಡಿಯೂರಪ್ಪ 75ನೇ ವರ್ಷದ ಹುಟ್ಟುಹಬ್ಬ ಆಚರಿಸುತ್ತಿರುವ ಹಾಗೂ ಅದಕ್ಕೆ ಮೋದಿ ಪ್ರತಿಕ್ರಿಯಿಸುತ್ತಿರುವಂತ ವ್ಯಂಗ್ಯಚಿತ್ರ ಲಗತ್ತಿಸಿ ಕುಟುಕಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry