ಮತ್ತೆ ಮುಷ್ಕರಕ್ಕೆ ಸಜ್ಜಾದ ‘ನಮ್ಮ ಮೆಟ್ರೊ’ ಸಿಬ್ಬಂದಿ

7

ಮತ್ತೆ ಮುಷ್ಕರಕ್ಕೆ ಸಜ್ಜಾದ ‘ನಮ್ಮ ಮೆಟ್ರೊ’ ಸಿಬ್ಬಂದಿ

Published:
Updated:
ಮತ್ತೆ ಮುಷ್ಕರಕ್ಕೆ ಸಜ್ಜಾದ ‘ನಮ್ಮ ಮೆಟ್ರೊ’ ಸಿಬ್ಬಂದಿ

ಬೆಂಗಳೂರು: ಎಂಟು ವರ್ಷ ಸೇವೆ ಸಲ್ಲಿಸಿದ ಸಿಬ್ಬಂದಿಗೂ ಬಡ್ತಿ ನೀಡದಿರುವ ಕ್ರಮವನ್ನು ಖಂಡಿಸಿ ಹಾಗೂ ವೇತನ ಪರಿಷ್ಕರಣೆಗೆ ಒತ್ತಾಯಿಸಿ ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್‌) ಕಾರ್ಯಾಚರಣೆ ವಿಭಾಗದ ಸಿಬ್ಬಂದಿ ಮತ್ತೊಮ್ಮೆ ಮುಷ್ಕರ ನಡೆಸಲು ಸಿದ್ಧತೆ ನಡೆಸಿದ್ದಾರೆ.

2017ರ ಜುಲೈ 7ರಂದು ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ ಹಾಗೂ ಮೆಟ್ರೊ ಸಿಬ್ಬಂದಿ ನಡುವೆ ಘರ್ಷಣೆ ನಡೆದಿತ್ತು. ಸಿಬ್ಬಂದಿ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾದರೂ ನಿಗಮದ ಅಧಿಕಾರಿಗಳು ರಕ್ಷಣೆಗೆ ಧಾವಿಸಿಲ್ಲ ಎಂದು ಆರೋಪಿಸಿ ಕಾರ್ಯಾಚರಣೆ ವಿಭಾಗದ ಸಿಬ್ಬಂದಿ ದಿಢೀರ್‌ ಮುಷ್ಕರ ನಡೆಸಿದ್ದರು. ಇದರಿಂದಾಗಿ ಮೆಟ್ರೊ ಸೇವೆ ಬೆಳಿಗ್ಗೆಯಿಂದ ಮಧ್ಯಾಹ್ನ 12 ಗಂಟೆವರೆಗೆ ಸ್ಥಗಿತಗೊಂಡಿತ್ತು.

ಆಗ ನಡೆದ ಸಂಧಾನ ಸಭೆಯಲ್ಲಿ, ಸಿಬ್ಬಂದಿಯ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ನಿಗಮದ ಅಧಿಕಾರಿಗಳು ಒಪ್ಪಿದ್ದರು. ಆ ಬಳಿಕವಷ್ಟೇ ಸಿಬ್ಬಂದಿ ಮುಷ್ಕರ ಹಿಂದಕ್ಕೆ ಪಡೆದಿದ್ದರು.

ಮೆಟ್ರೊ ಸಿಬ್ಬಂದಿ ಸೇರಿ ಕಾರ್ಮಿಕ ಸಂಘಟನೆಯನ್ನು ನಿರ್ಮಿಸಿಕೊಂಡಿದ್ದಾರೆ. ಅದಕ್ಕೆ ಮಾನ್ಯತೆ ನೀಡಬೇಕು ಎಂಬುದು ಅವರ ಪ್ರಮುಖ ಬೇಡಿಕೆ ಆಗಿತ್ತು. ಆದರೆ, ಈ ಸಂಘಟನೆಗೆ ಮಾನ್ಯತೆ ನೀಡಲು ಬಿಎಂಆರ್‌ಸಿಎಲ್‌ ಒಪ್ಪಿಲ್ಲ. ಇದು ಕೂಡಾ ಸಿಬ್ಬಂದಿಯ ಅಸಮಾಧಾನಕ್ಕೆ ಕಾರಣವಾಗಿದೆ.

‘ನಮ್ಮ ಸಂಘಕ್ಕೆ ಮಾನ್ಯತೆ ನೀಡುವಂತೆ ಅನೇಕ ಬಾರಿ ನಿಗಮಕ್ಕೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ನಮ್ಮ ಕೆಲ ಬೇಡಿಕೆಗಳನ್ನೂ ಅಧಿಕಾರಿಗಳು ಈಡೇರಿಸಿಲ್ಲ. ಹಾಗಾಗಿ ಮುಷ್ಕರದ ಬಗ್ಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಹಾಗೂ ಕಾರ್ಮಿಕ ಇಲಾಖೆಗೆ ಮಾಹಿತಿ ನೀಡಲಿದ್ದೇವೆ. ಗಡುವಿನ ಒಳಗೆ ಬೇಡಿಕೆ ಈಡೇರಿಸದಿದ್ದರೆ ಮುಷ್ಕರ ನಡೆಸುವುದು ಅನಿವಾರ್ಯ’ ಎಂದು ಹೆಸರು ಹೇಳಲಿಚ್ಛಿಸದ ನಿಗಮದ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ನಿಗಮದ ಕಾರ್ಯಾಚರಣೆ ವಿಭಾಗದ ಕೆಲವು ಸಿಬ್ಬಂದಿ 8 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಅವರಿಗೆ ಯಾವುದೇ ಬಡ್ತಿ ನೀಡಿಲ್ಲ. ಸೆಕ್ಷನ್‌ ಎಂಜಿನಿಯರ್‌ಗಳಿಗೆ ಸಹಾಯಕ ವ್ಯವಸ್ಥಾಪಕರಾಗಿ ಬಡ್ತಿ ನೀಡಲು ಅವಕಾಶವಿದೆ. ಆದರೆ, ನಿಗಮವು ಸಹಾಯಕ ವ್ಯವಸ್ಥಾಪಕ ಹುದ್ದೆಗಳಿಗೆ ನೇರ ನೇಮಕಾತಿ ಮಾಡಿಕೊಳ್ಳಲು ಮುಂದಾಗಿದೆ. ನಿಗಮದ ಸಿಬ್ಬಂದಿಗೆ ಬಡ್ತಿ ನೀಡಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆ’ ಎಂದರು.

‘ಕೇಂದ್ರ ಸರ್ಕಾರ ಸ್ವಾಮ್ಯದ ಉದ್ದಿಮೆಗಳ ಸಿಬ್ಬಂದಿಯ ವೇತನ ಪರಿಷ್ಕರಣೆಗಾಗಿ ರಚಿಸಿರುವ 3ನೇ ವೇತನ ಆಯೋಗದ ವರದಿಯನ್ನು ಜಾರಿಗೊಳಿಸುವುದಕ್ಕೂ ನಿಗಮ ಹಿಂದೇಟು ಹಾಕುತ್ತಿದೆ’ ಎಂದು ಅವರು ದೂರಿದರು.

‘ಬೈಯಪ್ಪನಹಳ್ಳಿಯಲ್ಲಿನ ವಸತಿಗೃಹಗಳನ್ನು ವಿವಾಹಿತ ಸಿಬ್ಬಂದಿಗೆ ಹಂಚಿಕೆ ಮಾಡಲು ನಿಗಮ ಮುಂದಾಗಿತ್ತು. ಈ ನಿರ್ಧಾರದಿಂದ ದಿಢೀರ್‌ ಹಿಂದೆ ಸರಿಯಿತು. ಸಿಬ್ಬಂದಿಗಾಗಿ ಪೀಣ್ಯದಲ್ಲಿ ಹಾಗೂ ಬೈಯಪ್ಪನಹಳ್ಳಿಯಲ್ಲಿ ವಸತಿ ಸಮುಚ್ಚಯ ನಿರ್ಮಿಸುವ ಯೋಜನೆಯನ್ನೂ ಅನುಷ್ಠಾನಗೊಳಿಸಿಲ್ಲ’ ಎಂದು ಅವರು ತಿಳಿಸಿದರು.

‘ಶಾಂತಿನಗರದಲ್ಲಿರುವ ಬಿಎಂಆರ್‌ಸಿಎಲ್‌ ಕೇಂದ್ರ ಕಚೇರಿಯ ಸಿಬ್ಬಂದಿಗೆ ಯಾವುದೇ ತಕರಾರು ಮಾಡದೆಯೇ ಬಡ್ತಿ ನೀಡಲಾಗಿದೆ. ಆದರೆ, ಕಾರ್ಯಾಚರಣೆ ವಿಭಾಗದ ಸಿಬ್ಬಂದಿಗೆ ಸವಲತ್ತುಗಳನ್ನು ನೀಡುವಾಗ ತಾರತಮ್ಯ ಮಾಡಲಾಗುತ್ತಿದೆ. ‘ನಮ್ಮ ಮೆಟ್ರೊ’ ಮೊದಲ ಹಂತದಲ್ಲಿ ಪೂರ್ಣ ಪ್ರಮಾಣದ ಕಾರ್ಯಾಚರಣೆ ಆರಂಭವಾದ ಬಳಿಕ ಕೆಲಸದ ಒತ್ತಡ ಹೆಚ್ಚುತ್ತಲೇ ಇದೆ’ ಎಂದು ಮತ್ತೊಬ್ಬ ಸಿಬ್ಬಂದಿ ಅಳಲು ತೋಡಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry