ನಾಲ್ಕು ಸುರಂಗಗಳಾಗಿ 100 ಅಡಿ ರಸ್ತೆ ಕವಲು

7
ಚಲ್ಲಘಟ್ಟದ ಮೆಟ್ರೊ ಡಿಪೊ ಕೆಳಗಡೆ ಹಾದು ಹೋಗಲಿದೆ ಷಟ್ಪಥ ರಸ್ತೆ: 40 ಎಕರೆ ಜಾಗದಲ್ಲಿ ನಿರ್ಮಾಣ

ನಾಲ್ಕು ಸುರಂಗಗಳಾಗಿ 100 ಅಡಿ ರಸ್ತೆ ಕವಲು

Published:
Updated:
ನಾಲ್ಕು ಸುರಂಗಗಳಾಗಿ 100 ಅಡಿ ರಸ್ತೆ ಕವಲು

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಮಾಗಡಿ ರಸ್ತೆ– ಮೈಸೂರು ರಸ್ತೆ ನಡುವೆ ನಿರ್ಮಿಸಲು ಉದ್ದೇಶಿಸಿರುವ 100 ಅಡಿ ಅಗಲದ ಷಟ್ಪಥ ರಸ್ತೆಯು ಚಲ್ಲಘಟ್ಟದಲ್ಲಿ ನಿರ್ಮಾಣವಾಗಲಿರುವ ‘ನಮ್ಮ ಮೆಟ್ರೊ’ ಡಿಪೊ ಕೆಳಗಡೆ ಹಾದು ಹೋಗಲಿದೆ. ನಾಲ್ಕು ಕವಲುಗಳಾಗಿ ಮೈಸೂರು ರಸ್ತೆಯನ್ನು ಸೇರಲಿದೆ.

ಷಟ್ಪಥ ರಸ್ತೆಯು ರಾಜರಾಜೇಶ್ವರಿ ವೈದ್ಯಕೀಯ ಕಾಲೇಜು ಆಸ್ಪತ್ರೆ ಸಮೀಪ ಮೈಸೂರು ರಸ್ತೆಯನ್ನು ಸೇರುವಲ್ಲಿಯೇ ಮೆಟ್ರೊ ಡಿಪೊ ನಿರ್ಮಿಸಲು ಉದ್ದೇಶಿಸಲಾಗಿದೆ. ಡಿಪೊಗೆ ಸಂಪರ್ಕ ಕಲ್ಪಿಸುವ ಸುಮಾರು 20 ಮೆಟ್ರೊ ಹಳಿಗಳು ಇಲ್ಲಿ ಹಾದುಹೋಗುತ್ತವೆ. ಹಾಗಾಗಿ, ಮೈಸೂರು ರಸ್ತೆ ಹಾಗೂ ಬೆಂಗಳೂರು– ಮೈಸೂರು ರೈಲು ಮಾರ್ಗದ ಹಳಿಗಳ ನಡುವಿನ ಜಾಗದಲ್ಲಿ ನಾಲ್ಕು ಸುರಂಗಗಳನ್ನು ನಿರ್ಮಿಸಲಾಗುತ್ತದೆ.

ಮೈಸೂರು ರಸ್ತೆ ಹಾಗೂ ಮಾಗಡಿ ರಸ್ತೆ ನಡುವೆ ಆರ್ಟಿರಿಯಲ್‌ ರಸ್ತೆ ನಿರ್ಮಿಸುವ ಸಲುವಾಗಿ ಭೂಸ್ವಾಧೀನ ನಡೆಸಲು 2005ರಲ್ಲೇ ಪ್ರಾಥಮಿಕ ಅಧಿಸೂಚನೆ ಪ್ರಕಟಿಸಲಾಗಿತ್ತು. 2011ರಲ್ಲಿ ಅಂತಿಮ ಅಧಿಸೂಚನೆ ಹೊರಡಿಸಲಾಗಿತ್ತು. ಬಿಡಿಎ ಸ್ವಾಧೀನಪಡಿಸಿಕೊಂಡ ಜಾಗದಲ್ಲೇ ಡಿಪೊ ನಿರ್ಮಿಸಲು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್) ನಿಗಮ ನಿರ್ಧರಿಸಿತು.

‘ಸುರಂಗ ಮಾರ್ಗ ನಿರ್ಮಿಸುವುದನ್ನು ತಪ್ಪಿಸಬೇಕಿದ್ದರೆ ಷಟ್ಪಥ ರಸ್ತೆಯ ದಿಕ್ಕು ಬದಲಿಸಬೇಕಾಗುತ್ತದೆ. ರಸ್ತೆಯ ವಿನ್ಯಾಸದಲ್ಲೂ ಮಾರ್ಪಾಡು ಮಾಡಬೇಕಾಗುತ್ತದೆ. ಇದಕ್ಕಾಗಿ ಹೆಚ್ಚುವರಿ ಭೂಸ್ವಾಧೀನ ನಡೆಸಬೇಕು. ಇವುಗಳಿಂದಾಗಿ ಕಾಮಗಾರಿ ವಿಳಂಬವಾಗಲಿದೆ. ಈ ಸಮಸ್ಯೆಗಳನ್ನು ತಪ್ಪಿಸುವ ಸಲುವಾಗಿ ಈ ಹಿಂದೆ ಭೂಸ್ವಾಧೀನ ನಡೆಸಿದ ಜಾಗದಲ್ಲೇ ರಸ್ತೆ ನಿರ್ಮಿಸುವುದು ಅನಿವಾರ್ಯವಾಯಿತು’ ಎಂದು ಎಂದು ಬಿಡಿಎ ಎಂಜಿನಿಯರಿಂಗ್ ಸದಸ್ಯ ಬಿ.ಎಲ್‌.ರವೀಂದ್ರಬಾಬು ‘ಪ್ರಜಾವಾಣಿ’ಗೆ ತಿಳಿಸಿದರು.

ಚಲ್ಲಘಟ್ಟದಲ್ಲಿ ಒಟ್ಟು 40 ಎಕರೆ ಜಾಗದಲ್ಲಿ ಮೆಟ್ರೊ ಡಿಪೊ ನಿರ್ಮಾಣವಾಗಲಿದೆ. ಇದಕ್ಕೆ ಬಿಡಿಎ ಸ್ವಾಧೀನದಲ್ಲಿರುವ 17 ಎಕರೆ ಜಾಗವನ್ನೂ ನಿಗಮವು ಬಳಸಿಕೊಳ್ಳಲಿದೆ.

‘ಜಾಗವನ್ನು ಉಚಿತವಾಗಿ ನೀಡಲು ಬಿಡಿಎ ಒಪ್ಪಿದೆ. ಹಾಗಾಗಿ, ಡಿಪೊ ಕೆಳಗೆ ಸುರಂಗ ಮಾರ್ಗಗಳನ್ನು ನಿರ್ಮಿಸುವ ವೆಚ್ಚವನ್ನು ಭರಿಸಲು ನಾವು ತಾತ್ವಿಕ ಒಪ್ಪಿಗೆ ನೀಡಿದ್ದೇವೆ’ ಎಂದು ನಿಗಮದ ವಿಶೇಷ ಅಧಿಕಾರಿ (ಭೂಸ್ವಾಧೀನ) ಚನ್ನಪ್ಪ ಗೌಡರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಎರಡು ಸುರಂಗಗಳಲ್ಲಿ 30 ಅಡಿ ಅಗಲದ ರಸ್ತೆ ಹಾಗೂ ಇನ್ನೆರಡರಲ್ಲಿ 25 ಅಡಿ ಅಗಲದ ರಸ್ತೆಗಳು ನಿರ್ಮಾಣವಾಗಲಿದೆ. ನಾಲ್ಕೂ ಸುರಂಗಗಳು ರೈಲ್ವೆ ಹಳಿಯ ಆಚೆ ಷಟ್ಪಥ ರಸ್ತೆಯನ್ನು ಸೇರಲಿವೆ.

ಬೆಂಗಳೂರು ನಗರದ ಕಡೆಗೆ ಸಾಗುವ ಹಾಗೂ ನಗರದಿಂದ ಷಟ್ಪಥ ರಸ್ತೆಯನ್ನು ಸೇರುವ ವಾಹನಗಳ ಸಂಚಾರಕ್ಕೆ ಎರಡು ಸುರಂಗಗಳು ಬಳಕೆ ಆಗಲಿವೆ. ಕುಂಬಳಗೋಡು ಕಡೆಗೆ ಹೋಗುವ ಹಾಗೂ ಕುಂಬಳಗೋಡು ಕಡೆಯಿಂದ ಷಟ್ಪಥ ರಸ್ತೆಯನ್ನು ಸೇರುವ ವಾಹನಗಳ ಸಂಚಾರಕ್ಕೆ ಇನ್ನೆರಡು ಸುರಂಗಗಳು ಬಳಕೆ ಆಗಲಿವೆ. ಸುರಂಗವನ್ನು ಕೊರೆಯುವ ಹಾಗೂ ಅದರಲ್ಲಿ ರಸ್ತೆ ನಿರ್ಮಿಸುವ ಕಾಮಗಾರಿಯನ್ನೂ ಮೆಟ್ರೊ ನಿಗಮವೇ ನಿರ್ವಹಿಸಲಿದೆ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದರು.

ಷಟ್ಪಥ ರಸ್ತೆಯು ಮೈಸೂರು ರಸ್ತೆಯ ರಾಜರಾಜೇಶ್ವರಿ ವೈದ್ಯಕೀಯ ಕಾಲೇಜು ಆಸ್ಪತ್ರೆ ಬಳಿಯಿಂದ ಆರಂಭವಾಗಿ ಕಡಬಗೆರೆ ಕ್ರಾಸ್‌ ಬಳಿ ಮಾಗಡಿ ರಸ್ತೆಯನ್ನು ಸೇರಲಿದೆ. ನೈಸ್‌ ರಸ್ತೆಗೆ ಸಮಾನಾಂತರವಾಗಿ (ಸುಮಾರು 1 ಕಿ.ಮೀ ದೂರದಲ್ಲಿ) ಸಾಗುವ ಈ ರಸ್ತೆ ನಾಡಪ್ರಭು ಕೆಂಪೇಗೌಡ ಬಡಾವಣೆ ಮೂಲಕ ಹಾದು ಹೋಗುತ್ತದೆ. ಈ ರಸ್ತೆ ಕಾಮಗಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಶಂಕುಸ್ಥಾಪನೆ

ನೆರವೇರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry