ಹೆಣ್ಣು ಮಗುವೇ ಬೇಕೆನುವರು...

7

ಹೆಣ್ಣು ಮಗುವೇ ಬೇಕೆನುವರು...

Published:
Updated:
ಹೆಣ್ಣು ಮಗುವೇ ಬೇಕೆನುವರು...

ಹೆಣ್ಣು ಮಗು ಬೇಕು ಎನ್ನುವ ದಂಪತಿಗಳ ಸಂಖ್ಯೆ ಈಚೆಗೆ ಹೆಚ್ಚುತ್ತಿದೆ. ‘ಮೊದಲ ಮಗು ಹೆಣ್ಣು, ಎರಡನೆಯದ್ದೂ ಹೆಣ್ಣೇ ಆಗಲಿ ಅಂತ ದೇವರಿಗೆ ಹರಕೆ ಹೊತ್ತಿದ್ದೀವಿ’ ಎನ್ನುವವರ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿದೆ. ನಗರ ಬದುಕಿಗೆ ಒಗ್ಗಿರುವ ದಂಪತಿಗಳಲ್ಲಿ ಈ ಪಲ್ಲಟ ಕಾಣಿಸಲು ಕಾರಣವೇನು?

ಗಂಡು ಮಕ್ಕಳಿಗೆ ಅದದೇ ಬಟ್ಟೆ, ಅದೇ ಚಡ್ಡಿ, ಪ್ಯಾಂಟು, ಶರ್ಟು–ಟೀಶರ್ಟು. ಆದರೆ ಹೆಣ್ಣು ಮಕ್ಕಳಿಗೆ ಹಾಗಲ್ಲ. ನೂರು ಬಗೆಯ ದಿರಿಸು ತೊಡಿಸಿ ಸಂಭ್ರಮಿಸಬಹುದು. ಚೆಂದದ ಅಲಂಕಾರ ಮಾಡಿ ಕಣ್ತುಂಬಿಕೊಳ್ಳಬಹುದು. ಆಟಿಕೆ ವಿಚಾರದಲ್ಲಿಯೂ ಹೆಣ್ಣುಮಕ್ಕಳಿಗೆ ಇರುವಷ್ಟು ಆಯ್ಕೆ ಗಂಡು ಮಕ್ಕಳಿಗೆ ಇರುವುದಿಲ್ಲ. ಈಗ ಪರಿಸ್ಥಿತಿ ಮೊದಲಿನಂತೆ ಇಲ್ಲ. ದುಡಿಯುವ ಯುವತಿ ತನ್ನ ಹೆತ್ತವರನ್ನೂ ಪೋಷಿಸಬಲ್ಲಳು. ಅಡುಗೆಮನೆಯಲ್ಲಿ ಅಮ್ಮನಿಗೆ ಮನೆ ನಿರ್ವಹಣೆಯಲ್ಲಿ ಅಪ್ಪನಿಗೆ ಸಹಾಯ ಮಾಡಬಲ್ಲಳು.

ಗಂಡು ಮಕ್ಕಳು ಮಾತು ಕೇಳಲ್ಲ, ಭಾವನೆಗಳನ್ನು ಅರ್ಥ ಮಾಡಿಕೊಳ್ಳುವುದಿಲ್ಲ, ಮನೆಯಲ್ಲಿ ಇರುವುದಕ್ಕಿಂತ ಬೀದಿ ಸುತ್ತುವುದರಲ್ಲಿಯೇ ಹೆಚ್ಚು ಕಾಲ ಕಳೆಯುತ್ತಾರೆ ಎಂಬ ದೂರುಗಳು ಇವೆ. ಎಲ್ಲ ಗಂಡು ಮಕ್ಕಳೂ ಹೀಗೆಯೇ ಇರುತ್ತಾರೆ ಎನ್ನಲು ಸಾಧ್ಯವಿಲ್ಲ. ‘ಮಕ್ಕಳು ಅಂದ್ರೆ ಮಕ್ಕಳಷ್ಟೇ, ಹೆಣ್ಣಾದರೂ ಸರಿ, ಗಂಡಾದರೂ ಸರಿ’ ಎನ್ನುವವರ ಸಂಖ್ಯೆಯೂ ಸಾಕಷ್ಟು ಇದೆ.

ಯಶೋಧಾ ರಾಜ್

‘ಗಂಡು ಮಕ್ಕಳೇ ವಂಶೋದ್ಧಾರಕರು ಎಂಬ ನಂಬಿಕೆ ಬೇರೂರಿದ್ದ ಕಾಲದಲ್ಲಿ ಹೆಣ್ಣುಮಕ್ಕಳೇ ಹುಟ್ಟಲೆಂದು ಆಸೆಪಟ್ಟವರು ನನ್ನ ತಂದೆ. ತನ್ನಿಬ್ಬರು ಹೆಣ್ಣು ಮಕ್ಕಳನ್ನು ಗಂಡು ಮಕ್ಕಳಿಗಿಂತ ಹೆಚ್ಚು ಸ್ವತಂತ್ರರಾಗಿ ಬೆಳೆಸಿ, ಸಮಾಜದಲ್ಲಿ ಗೌರವಯುತವಾಗಿ ಬದುಕಲು ಕಲಿಸಿದರು. ನನಗಿಬ್ಬರು ಹೆಣ್ಣು ಮಕ್ಕಳು ಅಂತ ಎದೆ ತಟ್ಟಿಕೊಂಡು ಹೇಳುತ್ತಿದ್ದ ಅಪ್ಪನ ಮಗಳು ನಾನು. ನನಗೂ ನಾ ಆಸೆಪಟ್ಟಂತೆ ಮಗಳೇ ಹುಟ್ಟಿದಾಗ ಜೀವನ ಸಾರ್ಥಕ ಅನ್ನಿಸಿದ್ದು ನಿಜ’ ಎಂದು ತಮ್ಮ ಬದುಕು ಸಾಗಿಬಂದ ಹಾದಿಯನ್ನು ನೆನಪಿಸಿಕೊಂಡರು ಲೇಖಕಿ ಸಬಿತಾ ಹರ್ಷ.

‘ನಮ್ಮನೆಯಲ್ಲಿ ಎಲ್ಲರಿಗೂ ಗಂಡುಮಗುವಿನ ಆಸೆ ಇತ್ತು. ಆದರೆ ನಾನು ಮತ್ತು ನನ್ನ ಪತಿ ಯಾವುದಾದರೂ ಸರಿ ಎಂದುಕೊಂಡಿದ್ದೆವು. ಮಗಳು ಹುಟ್ಟಿದ ಮೇಲೆಯೇ ಮಗಳ ಬೆಲೆ ಗೊತ್ತಾಗಿದ್ದು. ನನ್ನ ಮಗಳು ನನ್ನಮ್ಮನ ಪ್ರತಿರೂಪ. ನಾನು ಸುಸ್ತಾದರೆ, ನನಗೆ ಹುಷಾರಿಲ್ಲ ಎಂದಾದರೆ ಅಮ್ಮನಂತೆಯೇ ಆರೈಕೆ ಮಾಡುತ್ತಾಳೆ. ಅವಳನ್ನು ನೋಡಿದಾಗ ಬದುಕು ಪರಿಪೂರ್ಣ ಅನ್ನುವ ಭಾವ ಮೈದುಂಬುತ್ತದೆ’ ಎನ್ನುವುದು ಸಾಮಾಜಿಕ ಕಾರ್ಯಕರ್ತೆ ದೀಪಾ ಗಿರೀಶ.ದೀಪಾ ಗಿರೀಶ್

‘ಅಮ್ಮನ ಪಾಲಿಗೆ ಹೆಣ್ಣುಮಗು ನಿಜವಾದ ಗೆಳತಿ’ ಎನ್ನುವುದು ಬ್ಯೂಟಿಷಿಯನ್ ದೀಪಾ ಹೊಳಿಮಠ ಅವರ ಅಭಿಪ್ರಾಯ. ‘ಅಮ್ಮ–ಅಪ್ಪನಿಗೆ ಮಗಳು ಹೆಚ್ಚು ಅಕ್ಕರೆ ತೋರುತ್ತಾಳೆ. ಹರೆಯ ತಲುಪಿದ ಹುಡುಗರು ಮನೆಯಲ್ಲಿ ಹೆಚ್ಚು ಇರುವುದೇ ಇಲ್ಲ, ಮನಸು ಬಿಚ್ಚಿ ಅಮ್ಮನೊಡನೆ ಮಾತನಾಡುವುದೂ ಇಲ್ಲ. ಆದರೆ ಹೆಣ್ಣುಮಕ್ಕಳು ಹಾಗಲ್ಲ. ಯಾರಲ್ಲೂ ಹೇಳಲಾಗದ ಭಾವನೆಗಳನ್ನು ಹಂಚಿಕೊಳ್ಳಲು ಹೆಣ್ಣುಮಕ್ಕಳೇ ಬೇಕು’ ಎನ್ನುತ್ತಾರೆ ಅವರು.

‘ಹೆತ್ತವರಿಗೆ ವಯಸ್ಸಾದ ಕಾಲಕ್ಕೆ ಗಂಡುಮಕ್ಕಳು ನೋಡಿಕೊಳ್ಳುತ್ತಾರೆ, ಹೆಣ್ಣುಮಕ್ಕಳು ಹತ್ತಿರದಲ್ಲಿ ಇರುವುದಿಲ್ಲ ಎನ್ನುವುದು ಭ್ರಮೆ. ಜೀವನದ ಸಂಧ್ಯಾಕಾಲದಲ್ಲಿ ಹೆಣ್ಣುಮಕ್ಕಳೇ ಅಮ್ಮ ಅಪ್ಪನ ಜೊತೆಗೆ ನಿಂತ ಅನೇಕ ಉದಾಹರಣೆಗಳನ್ನು ನಾನು ಬಲ್ಲೆ’ ಎನ್ನುತ್ತಾರೆ ಹಿರಿಯರಾದ ಯಶೋಧಾ ರಾಜ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry