ಅಧಿಕಾರಿ ವಿರುದ್ಧ ದೇವರಿಗೂ ಪತ್ರ ಬರೆದಿದ್ದ ತೇಜ್‌ರಾಜ್‌!

ಭಾನುವಾರ, ಮಾರ್ಚ್ 24, 2019
34 °C

ಅಧಿಕಾರಿ ವಿರುದ್ಧ ದೇವರಿಗೂ ಪತ್ರ ಬರೆದಿದ್ದ ತೇಜ್‌ರಾಜ್‌!

Published:
Updated:
ಅಧಿಕಾರಿ ವಿರುದ್ಧ ದೇವರಿಗೂ ಪತ್ರ ಬರೆದಿದ್ದ ತೇಜ್‌ರಾಜ್‌!

ತುಮಕೂರು: ‘₹ 1 ಲಕ್ಷ ಮೊತ್ತದ ಪೀಠೋಪಕರಣಗಳ ಸರಬರಾಜು ಮಾಡಲು ಅವಕಾಶ ಮಾಡಿಕೊಡದ ಈತನನ್ನು ಸುಮ್ಮನೆ ಬಿಡಬೇಡ ಚೌಡೇಶ್ವರಿ. ಏನಾದರೂ ಶಿಕ್ಷೆ ಕೊಡು, ಶಾಪ ಕೊಡು’– ಇದು ಲೋಕಾಯುಕ್ತ ನ್ಯಾಯಮೂರ್ತಿ ವಿಶ್ಬನಾಥ ಶೆಟ್ಟಿ ಅವರಿಗೆ ಚಾಕುವಿನಿಂದ ಇರಿದಿರುವ ಜಿಲ್ಲೆಯ ತಿಪಟೂರಿನ ತೇಜ್‌ರಾಜ್‌ ಶರ್ಮಾ ತುಮಕೂರಿನ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಂಜುನಾಥ್‌ ಅವರಿಗೆ ಬರೆದಿದ್ದ ಪತ್ರವೊಂದರ ಸಾರಾಂಶ ಇದು.

’ಪತ್ರವನ್ನು ದೇವರಿಗೂ ಬರೆದಿದ್ದೇನೆ’ ಎಂದು ಆತ ಎಚ್ಚರಿಸಿದ್ದ.

ಸರ್ಕಾರಿ ಕಚೇರಿಗಳಿಗೆ ಪೀಠೋಪಕರಣಗಳನ್ನು ಸರಬರಾಜು ಮಾಡುವ ಕೆಲಸ ಮಾಡುತ್ತಿದ್ದ ಶರ್ಮಾ ಇದೇ ಕಾರಣಕ್ಕಾಗಿ ಜಿಲ್ಲೆಯ 16 ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದ ಎಂದು ತಿಳಿದುಬಂದಿದೆ.

ಜಿಲ್ಲಾ ಪಂಚಾಯಿತಿ ಹಣದಲ್ಲಿ ಆಯಾ ಶಾಲೆಗಳ ಎಸ್‌ಡಿಎಂಸಿ ಮೂಲಕ ಕೊಂಡುಕೊಳ್ಳುವ ಪೀಠೋಪಕರಣಗಳ ಖರೀದಿಯಲ್ಲಿ ಅವ್ಯವಹಾರ ಆಗಿದೆ ಎಂದು ಡಿಡಿಪಿಐ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದ. ಇದಕ್ಕೂ ಮೊದಲು ಡಿಡಿಪಿಐ ಕಚೇರಿಗೆ ’ರಿವಾಲ್ವಿಂಗ್ ಚೇರ್‌’ ಪೂರೈಕೆ ಮಾಡಿದ್ದ. ಇದರಲ್ಲಿ ಒಂದು ಚೇರ್‌ ಕೆಲವೇ ದಿನಗಳಲ್ಲಿ ಮುರಿದು ಹೋಗಿತ್ತು.

‘ಮುರಿದು ಹೋಗಿರುವ ಚೇರ್‌ ಬದಲಿಸಿಕೊಡುವಂತೆ ಆತನಿಗೆ ಮೊಬೈಲ್‌ ಕರೆ ಮಾಡಿ ತಿಳಿಸಿದ್ದೆ. ಅದಕ್ಕೆ ಆತ ಒಂದು ಲಕ್ಷ ಮೌಲ್ಯದ ಪೀಠೋಪಕರಣಗಳ ಸರಬರಾಜಿಗೆ ಟೆಂಡರ್‌ ನೀಡಿದರೆ ಮುರಿದ ಕುರ್ಚಿ ಬದಲಾಯಿಸಿ ಕೊಡುವುದಾಗಿ ಪತ್ರ ಬರೆದ. ಇದಕ್ಕೆ ಒಪ್ಪದ ಕಾರಣ ನನ್ನ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ. ಆತ ಬರೆದಿದ್ದ ಪತ್ರ ತೋರಿಸಿದ ಬಳಿಕ ಲೋಕಾಯುಕ್ತರು ಈ ಪ್ರಕರಣ ಕೈ ಬಿಟ್ಟಿದ್ದರು’ ಎಂದು ಮಂಜುನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.

’ಆರೋಪಿ ನನಗೆ ಆಗಾಗ ಕರೆ ಮಾಡುತ್ತಿದ್ದ. ಒಮ್ಮೊಮ್ಮೆ ಮೆಲು ಧ್ವನಿಯಲ್ಲಿ ಮಾತನಾಡಿದರೆ, ಕೆಲವೊಮ್ಮೆ ಏರು ಧ್ವನಿಯಲ್ಲಿ ಕಿರಚುತ್ತಿದ್ದ’ ಎಂದು ಹೇಳಿದರು.

‘ಬಾಲಕಿಯರ ಬಾಲ ಮಂದಿರದಲ್ಲಿ ಮಂಚ ಖರೀದಿಗೆ ಸಂಬಂಧಿಸಿದಂತೆ ನನ್ನ ವಿರುದ್ಧವೂ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದ. ಇದಕ್ಕೂ ಮೊದಲು ಖರೀದಿಗೆ ಸಂಬಂಧಿಸಿದಂತೆ ಆರ್‌ಟಿಐ ಮೂಲಕ ಮಾಹಿತಿ ಕೇಳಿದ್ದ. ಇದು ನನ್ನ ವ್ಯಾಪ್ತಿಗೆ ಬರುವುದಿಲ್ಲ ಎಂದು ಉತ್ತರ ಕೊಟ್ಟಿದ್ದೆ’ ಎಂದು ಮಕ್ಕಳ ರಕ್ಷಣಾಧಿಕಾರಿ ವಾಸಂತಿ ಉಪ್ಪಾರ್‌ ತಿಳಿಸಿದರು.

‘ದೂರಿನ ವಿಚಾರಣೆ ಆಗಸ್ಟ್ ತಿಂಗಳಲ್ಲಿ ನಡೆಯಿತು. ಉಪ ಲೋಕಾಯುಕ್ತರು ತುಮಕೂರಿಗೆ ಬಂದು ಎಲ್ಲ ದಾಖಲೆಗಳನ್ನು ಪರಿಶೀಲಿಸಿದ್ದರು. ದೂರಿನಲ್ಲಿ ಸತ್ಯಾಂಶ ಇಲ್ಲ ಎಂದು ಪ್ರಕರಣ ಕೈಬಿಟ್ಟರು. ಆಗ ನನ್ನೊಂದಿಗೆ ಮಾತನಾಡಿದ ಆತ, ನಿಮ್ಮನ್ನು ನಾನು ನೋಡೇ ಇರಲಿಲ್ಲ. ತುಮಕೂರಿನ ಹದಿನೆಂಟು ಅಧಿಕಾರಿಗಳ ವಿರುದ್ಧ ದೂರು ನೀಡಿದ್ದೇನೆ’ ಎಂದು ಹೇಳಿದ್ದಾಗಿ ನೆನಪು ಮಾಡಿಕೊಂಡರು.

’ಈ ಮೊದಲು ತುಮಕೂರಿನ ಶಾರದಾ ನಗರದಲ್ಲಿದ್ದೆ ಎಂದು ಹೇಳಿ ಆಧಾರ್‌ ಕಾರ್ಡ್ ತೋರಿಸಿ ಬಾಡಿಗೆ ಗಿಟ್ಟಿಸಿಕೊಂಡಿದ್ದ. ಕೊಠಡಿ  ಮುಂದೆ ಅಂಬಾ ಕೃಪಾ ಒನ್ ಮಾರ್ಕೆಟ್‌ ಎಂದು ಬೋರ್ಡ್‌ ಹಾಕಿದ್ದ. ಯಾರೊಂದಿಗೂ ಹೆಚ್ಚು ಮಾತನಾಡುತ್ತಿರಲಿಲ್ಲ. ಬೆಳಿಗ್ಗೆ ಹೋದರೆ ರಾತ್ರಿ 

ಬರುತ್ತಿದ್ದ. ನಾವು ಸಹ ಹೆಚ್ಚು ಮಾತನಾಡಿಸುತ್ತಿರಲಿಲ್ಲ. ನಾಲ್ಕು ತಿಂಗಳು ವಾಸವಿದ್ದ. ಎರಡು ತಿಂಗಳ ಹಿಂದೆ ಕೊಠಡಿ ಖಾಲಿ ಮಾಡಿದ್ದ’ ಎಂದು ಎಸ್‌.ಎಸ್‌.ಪುರಂನ ಶಶಿಶೇಖರ್‌ ’ಪ್ರಜಾವಾಣಿ’ಗೆ ತಿಳಿಸಿದರು.

‘ಮೊದಲು ಚಿಕ್ಕಪೇಟೆಯಲ್ಲಿದ್ದೆ ಎಂದು ಹೇಳಿ ಕೊಠಡಿ ಬಾಡಿಗೆಗೆ ಪಡೆದಿದ್ದ. ಕೆಲವು ದಿನ ಟಿ.ವಿಎಸ್‌ ಮೊಪೆಡ್‌ ಬಳಸುತ್ತಿದ್ದ. ಆನಂತರ ಅದು ಇರಲಿಲ್ಲ’ ಎಂದು ಬಿದಿರು ಮಳೆ ತೋಟದ ಮನೆ ಮಾಲೀಕರಾದ ವೆಂಕಟಮ್ಮ ಹೇಳಿದರು.

ಮೊದಲು ಎಸ್‌.ಎಸ್‌.ಪುರಂ ಬಾಡಿಗೆ ಮನೆ ಪರಿಶೀಲಿಸಿದ ಪೊಲೀಸರು ನಂತರ ಬಿದಿರುಮಳೆ ತೋಟದ ಬಳಿಯ ಮನೆಗೆ ತೆರಳಿದರು. ಕೊಠಡಿಗೆ ಬೀಗ ಹಾಕಿದ್ದ ಕಾರಣ ಬೀಗ ಒಡೆದು ಒಳಪ್ರವೇಶಿಸಿ ಪರಿಶೀಲಿಸಿದರು.

ದೇವರ ಫೋಟೊಗಳು

ಶರ್ಮಾ ತನ್ನ ಕೊಠಡಿಯಲ್ಲಿ ಅನೇಕ ದೇವರ ‍ಪಟಗಳನ್ನು ಪೂಜಿಸಿದ್ದಾನೆ. ದೇವರುಗಳಿಗೆ ಸಂಬಂಧಿಸಿದ ಅನೇಕ ದಪ್ಪದಪ್ಪ ಪುಸ್ತಿಕೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.

ಲೋಕಾಯುಕ್ತ, ಮಾಹಿತಿ ಹಕ್ಕು ಕಾಯ್ದೆಗೆ ಸಂಬಂಧಿಸಿದ ಕೆಲವು ಪುಸ್ತಕಗಳು, ದಾಖಲೆಗಳು, ಬಿಳಿ ಅಂಗಿಗಳು ಅಲ್ಲಿ ಕಂಡುಬಂದವು.

ಇಟ್ಟಿಗೆ ಫ್ಯಾಕ್ಟರಿ ನಡೆಸುತ್ತಿದ್ದ

ಶರ್ಮಾ ಕುಟುಂಬ ಅನೇಕ ವರ್ಷಗಳ ಹಿಂದೆಯೇ ರಾಜಸ್ತಾನದಿಂದ ಬಂದು ಜಿಲ್ಲೆಯ ತಿಪಟೂರಿನಲ್ಲಿ ವಾಸವಿದೆ. ಅವರ ತಂದೆ ರೂಪ್‌ಸಿಂಗ್ ಬಾಣಸಿಗ. ಇಬ್ಬರು ಸಹೋದರರಿದ್ದು ಇಬ್ಬರೂ ತುಮಕೂರಿನಲ್ಲಿದ್ದಾರೆ. ಒಬ್ಬರು ಬ್ಯಾಗ್ ರಿಪೇರಿ ಕೆಲಸ ಮಾಡುತ್ತಾರೆ. ಇನ್ನೊಬ್ಬರು ಖಾಸಗಿ ಬಸ್‌ನಲ್ಲಿ ಕ್ಲೀನರ್‌ ಕೆಲಸ ಮಾಡುತ್ತಿದ್ದಾರೆ.

’ಹದಿನೈದು ವರ್ಷಗಳ ಹಿಂದೆಯೇ ಕುಟುಂಬ ಇಬ್ಭಾಗವಾಗಿದೆ. ಶರ್ಮಾ ಕೆಲವು ವರ್ಷ ಕಾಲ ಗುಬ್ಬಿ–ತಿಪಟೂರು ರಸ್ತೆಯಲ್ಲಿ ಬರುವ ಹಳ್ಳಿಯೊಂದರಲ್ಲಿ ಇಟ್ಟಿಗೆ ಫ್ಯಾಕ್ಟರಿ ನಡೆಸುತ್ತಿದ್ದ. ನಷ್ಟದಿಂದಾಗಿ ಅದನ್ನು ಮುಚ್ಚಿ ತುಮಕೂರಿನಲ್ಲಿ ಪೀಠೋಪಕರಣಗಳ ಸರಬರಾಜು ಮಾಡುತ್ತಿದ್ದ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

‘ಪಿಯುಸಿವರೆಗೂ ತಿಪಟೂರಿನಲ್ಲಿ ಓದಿದ್ದಾನೆ. ಕೆಲವೊಮ್ಮೆ ಇದ್ದಕ್ಕಿದ್ದಂತೆ ಉದ್ರೇಕಕಾರಿಯಾಗಿ ವರ್ತಿಸುತ್ತಿದ್ದ’ ಎಂದು ತಿಳಿದುಬಂದಿದೆ.

ಒಂಬತ್ತು ಅಧಿಕಾರಿಗಳ ವಿರುದ್ಧದ ದೂರು ಮುಕ್ತಾಯ

ಬೆಂಗಳೂರು: ವಿವಿಧ ಇಲಾಖೆಯ 16 ಅಧಿಕಾರಿಗಳ ವಿರುದ್ಧ ತೇಜರಾಜ್ ನೀಡಿದ್ದ ದೂರುಗಳ ಪೈಕಿ ಒಂಬತ್ತು ಅಧಿಕಾರಿಗಳ ಮೇಲಿನ ಆರೋಪವನ್ನು ಲೋಕಾಯುಕ್ತರು ಮುಕ್ತಾಯಗೊಳಿಸಿದ್ದರು.

ಶಿಕ್ಷಣ ಇಲಾಖೆಯ ಇಬ್ಬರು, ರೇಷ್ಮೆ ಇಲಾಖೆಯ ಇಬ್ಬರು, ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂವರು ಅಧಿಕಾರಿಗಳು, ವಾಣಿಜ್ಯ ತೆರಿಗೆ ಇಲಾಖೆಯ ಇಬ್ಬರು, ಕಾಲೇಜು ಶಿಕ್ಷಣ ಇಲಾಖೆಯ ಒಬ್ಬರು ಸೇರಿ 16 ಅಧಿಕಾರಿಗಳ ವಿರುದ್ಧ ದೂರು ನೀಡಿದ್ದರು.

ಸಾಕ್ಷ್ಯಾಧಾರದ ಕೊರತೆ ಕಾರಣದಿಂದ ಒಂಬತ್ತು ಅಧಿಕಾರಿಗಳ ವಿರುದ್ಧದ ದೂರುಗಳನ್ನು ಮುಕ್ತಾಯಗೊಳಿಸಲಾಗಿದೆ. ಉಳಿದ ಪ್ರಕರಣಗಳು ವಿಚಾರಣೆ ಹಂತದಲ್ಲಿವೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.

ಯಾರ ವಿರುದ್ಧ ದೂರು

* ಮಂಜುನಾಥ್, ಡಿಡಿಪಿಐ ಶಿಕ್ಷಣ ಇಲಾಖೆ, ತುಮಕೂರು.

* ಶಿವಕುಮಾರ್, ಎಸ್‌ಡಿಎ, ಶಿಕ್ಷಣ ಇಲಾಖೆ, ತುಮಕೂರು.

* ದೇವರಾಜ್, ಸಹಾಯಕ ನಿರ್ದೇಶಕರು, ರೇಷ್ಮೆ ಗೂಡಿನ ಮಾರುಕಟ್ಟೆ, ಕೋಲಾರ.

* ಮಹಲಿಂಗಪ್ಪ, ಕ್ಲರ್ಕ್, ಖರೀದಿ ವಿಭಾಗ, ಕೆಎಂಎಫ್, ತುಮಕೂರು.

* ಚಂದ್ರಪ್ಪ, ಮ್ಯಾನೇಜರ್, ಕೆಎಂಎಫ್, ತುಮಕೂರು.

* ಎ.ಆರ್. ಚಂದ್ರಶೇಖರ್, ವ್ಯವಸ್ಥಾಪಕ ನಿರ್ದೇಶಕ ಕೆಎಂಎಫ್, ತುಮಕೂರು.

* ಪ್ರಭಾಕರ್, ಜಂಟಿ ನಿರ್ದೇಶಕ ರೇಷ್ಮೆ ಇಲಾಖೆ, ಬೆಂಗಳೂರು.

* ಕುಮಾರ್, ಎಸ್‍ಡಿಸಿ ವಾಣಿಜ್ಯ ಹಾಗೂ ಕೈಗಾರಿಕೆ ಇಲಾಖೆ, ತುಮಕೂರು.

* ಗಿರಿರಾಜ್, ಗುಮಾಸ್ತ, ಅಕೌಂಟ್ ಸೆಕ್ಷೆನ್, ಡಿಐಎಟಿ, ತುಮಕೂರು

* ನರಸಿಂಹ, ಸಹಾಯಕ ಕಮೀಷನರ್, ವಾಣಿಜ್ಯ ತೆರಿಗೆ ಇಲಾಖೆ

* ವಸಂತಿ ಉಪ್ಪಾರ್, ಮಹಿಳೆ ಮತ್ತು ಮಕ್ಕಳ ರಕ್ಷಣಾಧಿಕಾರಿ, ತುಮಕೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry