ರಾಜಕೀಯ ಪಕ್ಷಗಳಿಂದ ರೈತರ ಬ್ಲ್ಯಾಕ್‌ಮೇಲ್

ಶುಕ್ರವಾರ, ಮಾರ್ಚ್ 22, 2019
24 °C
‘ವೈದ್ಯರ ನಡಿಗೆ ರೈತರ ಕಡೆಗೆ’ ಪಾದಯಾತ್ರೆ ನರಗುಂದದಲ್ಲಿ ಸಮಾರೋಪ

ರಾಜಕೀಯ ಪಕ್ಷಗಳಿಂದ ರೈತರ ಬ್ಲ್ಯಾಕ್‌ಮೇಲ್

Published:
Updated:
ರಾಜಕೀಯ ಪಕ್ಷಗಳಿಂದ ರೈತರ ಬ್ಲ್ಯಾಕ್‌ಮೇಲ್

ನರಗುಂದ (ಗದಗ ಜಿಲ್ಲೆ): ‘ಮಹದಾಯಿ ಹೋರಾಟ ಬೆಂಬಲಿಸಿ, ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಸಹಯೋಗದಲ್ಲಿ ವೈದ್ಯರು ಬೆಂಗಳೂರಿನಿಂದ ಆರಂಭಿಸಿದ್ದ ಪಾದಯಾತ್ರೆ ಬುಧವಾರ ಇಲ್ಲಿ ಸಮಾರೋಪಗೊಂಡಿತು.

ತಾಲ್ಲೂಕಿನ ಕಲಕೇರಿ ಗ್ರಾಮಕ್ಕೆ ಪಾದಯಾತ್ರೆ ತಂಡ ಮಂಗಳವಾರ ತಲುಪಿ ರಾತ್ರಿ ಅಲ್ಲಿಯೇ ವಾಸ್ತವ್ಯ ಹೂಡಿತ್ತು. ಬುಧವಾರ ಬೆಳಿಗ್ಗೆ ಕಲಕೇರಿಯಿಂದ ನರಗುಂದದ ಧರಣಿ ವೇದಿಕೆ ತನಕ ನಡೆದ ಮೆರವಣಿಗೆಯಲ್ಲಿ ವೈದ್ಯಕೀಯ ಸಿಬ್ಬಂದಿ ಹಾಗೂ ವೈದ್ಯರು ಹೆಗಲಿಗೆ ಹಸಿರು ಶಾಲು ಹಾಕಿಕೊಂಡು ಭಾಗವಹಿಸಿದರು.

ಹುಬ್ಬಳ್ಳಿ– ವಿಜಯಪುರ ರಾಷ್ಟ್ರೀಯ ಹೆದ್ದಾರಿ ಮೂಲಕ ಪಟ್ಟಣ ಪ್ರವೇಶಿಸಿದ ವೈದ್ಯರ ತಂಡ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ರಾಜ್ಯ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿತು. ಪಾದಯಾತ್ರೆಯಿಂದ ಕೆಲಕಾಲ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ಪರದಾಡಿದರು.

ಧರಣಿ ವೇದಿಕೆಯ ಎದುರು ವೈದ್ಯರ ಸಮಾವೇಶಕ್ಕೆ ಪ್ರತ್ಯೇಕ ವೇದಿಕೆ ಸಿದ್ಧಪಡಿಸಲಾಗಿತ್ತು. ಐ.ಎಂ.ಎ ರಾಜ್ಯ ಘಟಕದ ಅಧ್ಯಕ್ಷ ಡಾ.ಎಚ್‌.ಎನ್.ರವೀಂದ್ರ, ‘ಮಹದಾಯಿ ವಿವಾದ ಪರಿಹರಿಸುವ ವಿಷಯವಾಗಿ ಮತದಾರರನ್ನು ರಾಜಕೀಯ ಪಕ್ಷಗಳು ಬ್ಲ್ಯಾಕ್‌ಮೇಲ್ ಮಾಡುತ್ತಿವೆ’ ಎಂದು ದೂರಿದರು.

‘ಮೂರು ವರ್ಷಗಳಿಂದ ರೈತರು ನಿರಂತರ ಹೊರಾಟ ನಡೆಸುತ್ತಿದ್ದರೂ, ಅದಕ್ಕೆ ಸ್ಪಂದಿಸದ ರಾಜಕಾರಣಿಗಳು, ಈಗ ನಮ್ಮನ್ನು ಆಯ್ಕೆ ಮಾಡಿದರೆ ಮಾತ್ರ ಮಹದಾಯಿಗೆ ಪರಿಹಾರ ಎಂದು ಹೇಳುತ್ತಿದ್ದಾರೆ. ರೈತರು ಇಂಥ ಖಳನಾಯಕರನ್ನು ತಿರಸ್ಕರಿಸಬೇಕು’ ಎಂದರು.

‘ನಾವೂ ರೈತರ ಮಕ್ಕಳೇ. ಆದ್ದರಿಂದ ಮಹದಾಯಿ ಹೋರಾಟಕ್ಕೆ ಬೆಂಬಲ ಸೂಚಿಸಿ 20 ದಿನಗಳಲ್ಲಿ 500 ಕಿ.ಮೀ ಪಾದಯಾತ್ರೆ ಕೈಗೊಂಡಿದ್ದೇವೆ’ ಎಂದು ಅವರು ಹೇಳಿದರು.

ಐ.ಎಂ.ಎ ಪದಾಧಿಕಾರಿಗಳಾದ ಡಾ.ಗೀತಾ ದೊಪ್ಪ, ಡಾ.ಅನ್ನದಾನ ಮೇಟಿ, ಡಾ.ಶ್ರೀಧರ ಕುರಡಗಿ, ಡಾ.ಎಸ್‌.ಆರ್‌.ನಾಗನೂರು, ಡಾ.ವಿ.ಎನ್‌.ಆಲೂರ, ಡಾ.ಆರ್‌.ಎಸ್‌.ಬಳ್ಳಾರಿ, ಡಾ.ಪವಾಡಶೆಟ್ರ ಇದ್ದರು.

**

ಸಮಾವೇಶದ ನಿರ್ಣಯಗಳು

* ಮಹದಾಯಿ ವಿವಾದವನ್ನು ನ್ಯಾಯಮಂಡಳಿ ಹೊರಗೆ ಇತ್ಯರ್ಥಪಡಿಸಿಕೊಳ್ಳಬೇಕು

* ಮಹದಾಯಿ ಸಮಸ್ಯೆ ಪರಿಹರಿಸಲು ಪ್ರಧಾನಿ ಪಕ್ಷಾತೀತ ಪ್ರಯತ್ನ ಮಾಡಬೇಕು

* ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರು ಒಂದಾಗಿ ಮೂರೂ ರಾಜ್ಯಗಳ ಮನವೊಲಿಸಬೇಕು

* ಯೋಜನೆ ಅನುಷ್ಠಾಗೊಳಿಸದಿದ್ದರೆ ರಾಜ್ಯದ ಸಂಸದರು ರಾಜೀನಾಮೆ ನೀಡಬೇಕು

* ಮುಖ್ಯಮಂತ್ರಿ ನೇತೃತ್ವದಲ್ಲಿ ಮತ್ತೊಮ್ಮೆ ಪ್ರಧಾನಿ ಬಳಿ ಸರ್ವಪಕ್ಷ ನಿಯೋಗ ಕೊಂಡೊಯ್ಯಬೇಕು

* ರೈತರ ಸಮಸ್ಯೆ ಪರಿಹರಿಸಲು ಹಾಗೂ ಆತ್ಮವಿಶ್ವಾಸ ತುಂಬಲು ಕಾರ್ಯಕ್ರಮ ರೂಪಿಸಬೇಕು

* ಮಠಾಧೀಶರು ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು

**

ಮಹದಾಯಿ ಹೋರಾಟಕ್ಕೆ ವೈದ್ಯರ ಬೆಂಬಲದಿಂದ ದೇವರ ಬೆಂಬಲ ಸಿಕ್ಕಂತಾಗಿದೆ. ಪಾದಯಾತ್ರೆ ಮೂಲಕ ರಾಜಕೀಯ ನಿರ್ಲಕ್ಷ್ಯಕ್ಕೆ ಚಿಕಿತ್ಸೆ ನೀಡಲು ಬಂದ ಅವರಿಗೆ ಸ್ವಾಗತ.

-ವಿರೇಶ ಸೊಬರದಮಠ, ರೈತ ಸೇನೆ ರಾಜ್ಯ ಘಟಕದ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry