ಶ್ವೇತ ಸುಂದರಿಯ ನಟನಾಯಾನ

7

ಶ್ವೇತ ಸುಂದರಿಯ ನಟನಾಯಾನ

Published:
Updated:
ಶ್ವೇತ ಸುಂದರಿಯ ನಟನಾಯಾನ

ಜೀವನ ತುಂಬಾ ಸುಂದರವಾಗಿದೆ. ನಾವು ಅದನ್ನು ನೋಡುವ ದೃಷ್ಟಿಕೋನದಲ್ಲೇ ಅದು ನಮ್ಮನ್ನು ನೋಡುತ್ತದೆ. ಕಷ್ಟ ಎಂದುಕೊಂಡರೆ ಜೀವನ ನಮಗೆ ಕಷ್ಟವೇ ಆಗುತ್ತದೆ. ಯಾರನ್ನೂ ಅವರು ಹೀಗೆ, ಇವರು ಹಾಗೆ ಎಂದು ನಿರ್ಧಾರ ಮಾಡದೆ, ಯಾರನ್ನೂ ವಿಮರ್ಶೆ ಮಾಡದೇ ಮುಂದೆ ಸಾಗಿದರೆ ನಿಜಕ್ಕೂ ಜೀವನ ಸ್ವರ್ಗ ಎನ್ನುವ ಈ ಸುಂದರಿ ಕೊಡಗಿನ ವಿರಾಜಪೇಟೆಯ ಅನು ಪೂವಮ್ಮ.

ನೀಳಕಾಯದ, ಹಾಲುಬಿಳುಪಿನ, ಸುಂದರ ನಗುವಿನ ಈ ಸೌಂದರ್ಯದ ಖನಿ ‘ಮುದ್ದುಲಕ್ಷ್ಮಿ’ ಧಾರಾವಾಹಿಯ ಮಿಸ್ ವರ್ಲ್ಡ್ ಸೌಂದರ್ಯ. ನಟನೆಯ ಒಳಹೊರಗು ಅರಿಯದ ಇವರನ್ನು ನಟಿಯಾಗಿಸಿದ್ದು ಇವರ ಸೌಂದರ್ಯವೇ. ಐಬಿಎಂನಲ್ಲಿ ಉದ್ಯೋಗಿಯಾಗಿದ್ದ ಇವರು ಶಾಲಾ ದಿನಗಳಿಂದಲೂ ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಬ್ಯಾಸ್ಕೆಟ್‌ಬಾಲ್‌ನಲ್ಲಿ ರಾಷ್ಟ್ರಮಟ್ಟದಲ್ಲೂ ಮಿಂಚಿದ್ದಾರೆ.

ಕಾಲೇಜು ಹಾಗೂ ಶಾಲಾ ದಿನಗಳಲ್ಲಿ ಕ್ರೀಡೆಯಲ್ಲೇ ಇವರಿಗೆ ಹೆಚ್ಚು ಆಸಕ್ತಿ. ದಿನದಲ್ಲಿ ಅರ್ಧದಿನವನ್ನು ಅಂಗಳದಲ್ಲೇ ಕಳೆಯುತ್ತಿದ್ದ ಇವರು ತಮ್ಮ ಬ್ಯೂಟಿ ಬಗ್ಗೆ ಎಂದೂ ತಲೆ ಕೆಡಿಸಿಕೊಂಡವರೇ ಅಲ್ಲ. ಆ ದಿನಗಳಲ್ಲಿ ನನಗೆ ಸೌಂದರ್ಯದ ಮೇಲೆ ಒಲವು, ಕಾಳಜಿ ಎರಡೂ ಕಡಿಮೆ ಇತ್ತು ಎಂದು ಅವರೇ ಹೇಳುತ್ತಾರೆ.

ನಟ- ನಟಿಯರು ಸಾಮಾನ್ಯವಾಗಿ ಕಿರುತೆರೆಯಿಂದ ಹಿರಿತೆರೆಗೆ ಕಾಲಿರಿಸಿದರೆ ಇವರು ಸ್ವಲ್ಪ ಭಿನ್ನವಾಗಿ ಹಿರಿತೆರೆಯಿಂದ ಕಿರುತೆರೆಯತ್ತ ಪಾದ ಬೆಳೆಸಿದ್ದಾರೆ. ಈಗಾಗಾಲೇ ‘ಕರ್ವ’, ‘ಲೈಫ್ ಸೂಪರ್’, ‘ಪಾನಿಪುರಿ’, ‘ಕಥಾವಿಚಿತ್ರ’ ಸಿನಿಮಾಗಳಲ್ಲಿ ನಟಿಸಿರುವ ಅವರು ಇನ್ನೇನು ತೆರೆ ಕಾಣಲಿರುವ ತಮಿಳಿನ ‘ಅಂಜಲಿಪಾಪಾ’ ಸಿನಿಮಾದಲ್ಲೂ ತಮ್ಮ ನಟನೆಯ ಛಾಪು ತೋರಿದ್ದಾರೆ.

ಮನೆಯವರ ತೀವ್ರ ವಿರೋಧದ ನಡುವೆಯೇ ನಟನೆಯೆಂಬ ಸಾಗರಕ್ಕೆ ಧುಮುಕಿದ ಈಕೆಗೆ ನಟನಾ ಸಾಗರದಲ್ಲಿ ಈಜಲು ಕಷ್ಟವಾಗಲಿಲ್ಲವಂತೆ. ಮೊದಲು ವಿರೋಧಿಸಿದ್ದ ಮನೆಯವರು ‘ಮಗಳು ನದಿಗೆ ಹಾರಿದ್ದಾಳೆ. ಈಗ ಈಜಲೇಬೇಕು’ ಎಂಬಂತೆ ಬೇರೆ ದಾರಿ ಕಾಣದೆ ಮಗಳ ನಟನೆಯ ಹಂಬಲಕ್ಕೆ ಬೆಂಬಲ ಸೂಚಿಸಿದ್ದಾರೆ.

‘ಮುದ್ದುಲಕ್ಷ್ಮಿ’ ಧಾರಾವಾಹಿ ಬಗ್ಗೆ ಮಾತನಾಡುತ್ತಾ, ಕಪ್ಪುಬಣ್ಣ ಎಂದರೆ ನಿಮಗೆ ಅಷ್ಟು ಅಸಹ್ಯವೇ ಎಂದರೆ ‘ಬಣ್ಣ ನಮ್ಮ ವ್ಯಕ್ತಿತ್ವವನ್ನು ಸೂಚಿಸುತ್ತದೆ. ಬಣ್ಣ, ರೂಪ ಎಂಬುದೇ ಸರ್ವಸ್ವ ಎಂಬುದೆಲ್ಲಾ ಸುಳ್ಳು. ಮನುಷ್ಯ ಲಕ್ಷಣವಾಗಿದ್ದರೆ ಅದೇ ಅವನ ರೂಪ. ಗುಣವೇ ಮನುಷ್ಯನ ರೂಪವನ್ನು ಪ್ರತಿನಿಧಿಸುತ್ತದೆ. ನನಗೆ ಬಣ್ಣದ ಮೇಲೆ ವ್ಯಾಮೋಹವಿಲ್ಲ. ಧಾರಾವಾಹಿಯಲ್ಲಿ ಪಾತ್ರಕ್ಕೆ ತಕ್ಕಂತೆ ನಟಿಸುತ್ತೇನೆ’ ಎನ್ನುತ್ತಾರೆ.

ಧಾರಾವಾಹಿಯಂತೆ ನಿಮ್ಮದು ಜೋರಿನ ವ್ಯಕ್ತಿತ್ವವೇ ಎಂದು ಕೇಳಿದರೆ, ‘ಹೇ, ಇಲ್ಲಮ್ಮಾ… ನಾನು ನೇರ ವ್ಯಕ್ತಿತ್ವದವಳು. ಇಷ್ಟವಾದುದನ್ನು ಇಷ್ಟ ಎಂದು, ಇಷ್ಟವಾಗದ್ದನ್ನು ಇಷ್ಟವಿಲ್ಲ ಎಂದು ಹೇಳುತ್ತೇನೆ. ಆ ಥರದ ವ್ಯಕ್ತಿತ್ವ ನನ್ನದು. ಇದು ಕೆಲವರಿಗೆ ಇಷ್ಟವಾದರೆ ಇನ್ನು ಕೆಲವರಿಗೆ ಇಷ್ಟವಾಗುವುದಿಲ್ಲ. ಅದು ಅವರವರ ಭಾವಕ್ಕೆ ಬಿಟ್ಟಿದ್ದು. ನಾನು ಅದಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ’ ಎಂದು ನೇರವಾಗಿ ಉತ್ತರಿಸುತ್ತಾರೆ.

ಹಣ, ಬಣ್ಣ ಎಲ್ಲವೂ ಅವರವರ ವ್ಯಕ್ತಿತ್ವವನ್ನು ಆಧರಿಸಿದ್ದು. ಸಮಾಜದಲ್ಲಿ ಇವೆಲ್ಲಾ ಅಪರೂಪಕ್ಕೆ ದೊಡ್ಡ ವಿಷಯ ಎನ್ನಿಸಿಕೊಳ್ಳುತ್ತವೆ. ಕಪ್ಪು ಬಣ್ಣ ಇರುವವರೆಲ್ಲಾ ಒಳ್ಳೆಯವರು, ಬಿಳಿ ಬಣ್ಣ ಇರುವವರೆಲ್ಲಾ ಕೆಟ್ಟವರು ಎಂದರೆ ಅದು ತಪ್ಪಾಗುತ್ತದೆ. ಬಣ್ಣ ನೋಡಿ ಮನುಷ್ಯರ ವ್ಯಕ್ತಿತ್ವ ಅಳೆಯಲು ಸಾಧ್ಯವಿಲ್ಲ. ಎಷ್ಟೋ ಮಂದಿ ಕಪ್ಪಗಿರುವವರು ಸುಂದರವಾಗಿ, ನೋಡಲು ಲಕ್ಷಣವಾಗಿರುತ್ತಾರೆ ಎನ್ನುವ ಮುದ್ದುಲಕ್ಷ್ಮಿಯ ಸೌಂದರ್ಯಗೆ ನಟಿ ರಮ್ಯಾ ಎಂದರೆ ಹಿಡಿ ಪ್ರೀತಿ ಜಾಸ್ತಿ.

ಒಬ್ಬ ನಟ ಅಥವಾ ನಟಿಗೆ ಎಂಥ ಪಾತ್ರವಾದರೂ ಸರಿ, ಅದರಲ್ಲಿ ಪರಕಾಯ ಪ್ರವೇಶ ಮಾಡಲು ತಿಳಿದಿರಬೇಕು ಎನ್ನುವ ಅವರಿಗೆ ಕನಸಿನ ಪಾತ್ರ ಎಂಬುದೆಲ್ಲಾ ಇಲ್ಲ. ಒಳ್ಳೆಯ ಕಥೆ ಇದ್ದರೆ ಎಂತಹ ಪಾತ್ರ ನಟಿಸಲೂ ಸೈ ಎನ್ನುತ್ತಾರೆ ಈ ಬೆಡಗಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry