ಬೇಸಿಗೆಯಲ್ಲಿ ಕಾಡುವ ಅತಿಸಾರ

ಬುಧವಾರ, ಮಾರ್ಚ್ 27, 2019
22 °C

ಬೇಸಿಗೆಯಲ್ಲಿ ಕಾಡುವ ಅತಿಸಾರ

Published:
Updated:
ಬೇಸಿಗೆಯಲ್ಲಿ ಕಾಡುವ ಅತಿಸಾರ

ನಿರ್ಜಲೀಕರಣವು ಒಮ್ಮೊಮ್ಮೆ ಮೂತ್ರಪಿಂಡಗಳ ವೈಫಲ್ಯಕ್ಕೂ ಕಾರಣವಾಗಬಹುದು. ಆ ಬಗೆಯ ಮೂತ್ರಪಿಂಡಗಳ ವೈಫಲ್ಯದಿಂದ ಕೆಲವೊಮ್ಮೆ ಸಾವೂ ಸಂಭವಿಸಬಹುದು. ಹಾಗಾಗಿಯೇ ಅತಿಸಾರವನ್ನು ನಿರ್ಲಕ್ಷಿಸುವಂತಿಲ್ಲ. ಅದರಲ್ಲಿಯೂ ಮಕ್ಕಳು ಬಹು ಬೇಗ ನಿರ್ಜಲೀಕರಣಕ್ಕೆ ಒಳಗಾಗುವ ಸಾಧ್ಯತೆಗಳು ಹೆಚ್ಚು. ಆದ್ದರಿಂದ ಮಕ್ಕಳಲ್ಲಿ ಅತಿಸಾರದ ಸಮಸ್ಯೆಯನ್ನು ಗುರುತಿಸಿದ ಕೂಡಲೇ ಚಿಕಿತ್ಸೆಗೆ ಮುಂದಾಗಬೇಕು.

ಅತಿಸಾರಕ್ಕೆ ಸಾಮಾನ್ಯ ಕಾರಣಗಳೇನು?

ದೊಡ್ಡ ಕರುಳಿನಲ್ಲಿ ತಗಲುವ ಸೋಂಕು ಅತಿಸಾರಕ್ಕೆ ಮುಖ್ಯ ಕಾರಣ. ಸೂಕ್ಷ್ಮಾಣು, ವೈರಾಣು ಮತ್ತು ಪರಾವಲಂಬಿ ಸೂಕ್ಷ್ಮಾಣುಗಳು ದೊಡ್ಡಕರುಳಿನ ಪದರಗಳಲ್ಲಿ ವ್ಯತ್ಯಾಸವನ್ನು ಉಂಟುಮಾಡಿದಾಗ ವ್ಯಕ್ತಿ ಅತಿಸಾರದ ಸಮಸ್ಯೆಯಿಂದ ಬಳಲುತ್ತಾನೆ. ಈ ಸೂಕ್ಷ್ಮಾಣುಗಳಿಂದ ಕಲುಷಿತಗೊಂಡ ನೀರು ಹಾಗೂ ಆಹಾರ ಪದಾರ್ಥಗಳ ಸೇವನೆಯೇ ಅತಿಸಾರಕ್ಕೆ ಕಾರಣವಾಗುತ್ತದೆ.

ಬೇಸಿಗೆಯಲ್ಲಿಯೇ ಹೆಚ್ಚು ಏಕೆ?

ಬೇಸಿಗೆಯ ಕಾಲವು ಸೂಕ್ಷ್ಮಾಣುಗಳ ಸಂತಾನ ಅಭಿವೃದ್ಧಿಗೆ ಪೂರಕವಾಗಿರುತ್ತದೆ. ಅಲ್ಲದೆ ಅತಿಸಾರದ ಹರಡುವಿಕೆಗೆ ಕಾರಣವಾಗುವ ನೊಣಗಳ ಸಂತಾನೋತ್ಪತ್ತಿಗೂ ಈ ಕಾಲ ಸಹಕರಿಸುತ್ತದೆ. ಆದ್ದರಿಂದಲೇ ಬೇಸಿಗೆಯ ಆಗಮನದೊಂದಿಗೇ ಅತಿಸಾರದ ಸಮಸ್ಯೆಯೂ ಸಮುದಾಯದಲ್ಲಿ ಕಾಣಿಸಿಕೊಳ್ಳುತ್ತದೆ.

ಸಮಸ್ಯೆ ಕಾಣಿಸಿಕೊಂಡಾಗ ಮಾಡಬೇಕಾದುದೇನು?

ಮನೆಯಲ್ಲಿಯೇ ವ್ಯಕ್ತಿಗೆ ಹೆಚ್ಚು ನೀರನ್ನು ಕುಡಿಯಲು ತಿಳಿಸಬೇಕು. ಕುಡಿಯುವ ನೀರು ಶುದ್ಧವಾಗಿರಬೇಕು. ಓಆರ್‌ಎಸ್‌ ದ್ರಾವಣವು ಲಭ್ಯವಿದ್ದಲ್ಲಿ ಅದನ್ನು ಪ್ರತಿ ಅರ್ಧ ಗಂಟೆಗೊಮ್ಮೆ ಕುಡಿಸಬೇಕು. ಒಂದು ವೇಳೆ, ಓಆರ್‌ಎಸ್‌ ದ್ರಾವಣವು ದೊರಕದಿದ್ದಲ್ಲಿ, ಮನೆಯಲ್ಲಿಯೇ ಒಂದು ಲೋಟ ಶುಚಿಯಾದ ನೀರಿಗೆ ಒಂದು ಚಮಚ ಸಕ್ಕರೆ ಮತ್ತು ಒಂದು ಚಿಟಿಕೆ ಉಪ್ಪನ್ನು ಬೆರೆಸಿ ಅದನ್ನೇ ಅರ್ಧ ಗಂಟೆಗೊಮ್ಮೆ ಕುಡಿಸಬೇಕು.

* ಎಳನೀರು, ಶುಚಿಯಾದ ಹಣ್ಣಿನ ರಸಗಳನ್ನು ಕೊಡಬಹುದು.

* ಎದೆಹಾಲು ಕುಡಿಯುವ ಮಕ್ಕಳಾಗಿದ್ದಲ್ಲಿ, ಎದೆಹಾಲು ಕುಡಿಸುವುದನ್ನು ಮುಂದುವರೆಸಬೇಕು. ಯಾವ ಕಾರಣಕ್ಕೂ ಹಾಲುಣಿಸುವುದನ್ನು ನಿಲ್ಲಿಸಬಾರದು.

* ಪೌಷ್ಟಿಕಾಂಶಯುಕ್ತ ಇತರ ಆಹಾರ ಪದಾರ್ಥಗಳನ್ನು ತಿನ್ನಲು ಪ್ರೋತ್ಸಾಹಿಸಬೇಕು. ಅತಿಯಾದ ಮಸಾಲೆಯುಕ್ತ ಪದಾರ್ಥಗಳು ಬೇಡ.

* ಒಂದು ವೇಳೆ ತೀವ್ರತೆ ಹೆಚ್ಚಾದರೆ ಕೂಡಲೇ ಹತ್ತಿರದ ಆಸ್ಪತ್ರೆಗೆ ಆ ವ್ಯಕ್ತಿಯನ್ನು ಕರೆದೊಯ್ಯಬೇಕು.

ಬರದಂತೆ ತಡೆಗಟ್ಟುವುದು ಹೇಗೆ?

* ವೈಯಕ್ತಿಕ ಶುಚಿತ್ವಕ್ಕೆ ಸದಾ ಆದ್ಯತೆ ನೀಡಬೇಕು.

* ಅಡುಗೆಮನೆಯಲ್ಲಿ ಆಹಾರಪದಾರ್ಥಗಳನ್ನು ಶೇಖರಿಸಿ ಇಡುವ ಸ್ಥಳ ಹಾಗೂ ವಿಧಾನಗಳು ಸ್ವಚ್ಛವಾಗಿರಬೇಕು.

* ಮನೆಯ ಒಳಗೂ ಹಾಗೂ ಹೊರಗೂ ಶುಚಿತ್ವವನ್ನು ಕಾಪಾಡಿಕೊಳ್ಳಬೇಕು. ಕಸವನ್ನು ಎಲ್ಲೆಂದರಲ್ಲಿ ವಿಲೇವಾರಿ ಮಾಡಿದಾಗ ನೊಣಗಳು ಹೆಚ್ಚಾಗಿ ರೋಗ ಹರಡುವಿಕೆಗೆ ಕಾರಣವಾಗಬಹುದು.

* ಕುಡಿಯಲು ಬಳಸುವ ನೀರು ಶುಚಿಯಾಗಿರಬೇಕು. ಕುದಿಸಿ ಆರಿಸಿದ ಅಥವಾ ಶೋಧಿಸಿದ ನೀರನ್ನೇ ಕುಡಿಯಬೇಕು.

* ಆಹಾರಪದಾರ್ಥಗಳ ತಯಾರಿಕೆಗೆ ಮೊದಲು ಮತ್ತು ಊಟವನ್ನು ಬಡಿಸುವ ಮೊದಲು ತಪ್ಪದೇ ಸಾಬೂನನ್ನು ಬಳಸಿ ಕೈಗಳನ್ನು ತೊಳೆದುಕೊಳ್ಳಬೇಕು.

* ಮಕ್ಕಳಿಗೆ ಹಾಲುಣಿಸುವ ಮೊದಲು ಅಥವಾ ಊಟವನ್ನು ಉಣಿಸುವ ಮೊದಲು ಮರೆಯದೇ ಕೈಗಳನ್ನು ತೊಳೆದುಕೊಳ್ಳಬೇಕು.

* ಶೌಚಾಲಯಕ್ಕೆ ಹೋಗಿ ಬಂದ ನಂತರ ತಪ್ಪದೇ ಕೈಗಳನ್ನು ಸಾಬೂನನ್ನು ಬಳಸಿ ತೊಳೆದುಕೊಳ್ಳಬೇಕು.

* ಮಗುವಿನ ಮಲವಿಸರ್ಜನೆಯನ್ನು ಸ್ವಚ್ಛಗೊಳಿಸಿದ ನಂತರವೂ ತಪ್ಪದೇ ಕೈಗಳನ್ನು ತೊಳೆದುಕೊಳ್ಳಬೇಕು. ರಸ್ತೆ ಬದಿಯಲ್ಲಿ ಮಾರಾಟಮಾಡುವ ತೆರೆದಿಟ್ಟ ಆಹಾರ ಪದಾರ್ಥಗಳನ್ನು ತಿನ್ನಬಾರದು.

* ಹೊಟೇಲುಗಳಲ್ಲಿ ಮತ್ತು ಸಮಾರಂಭಗಳ ಔತಣಗಳಲ್ಲಿ ಊಟ ಮಾಡುವಾಗ ಆದಷ್ಟು ಬೇಯಿಸಿದ ಆಹಾರ ಪದಾರ್ಥಗಳನ್ನೇ ಸೇವಿಸಬೇಕು. ಅರ್ಧ ಬೇಯಿಸಿದ ಅಥವಾ ಹಸಿಯಾಗಿ ತಯಾರಿಸಿದ ಆಹಾರ ಪದಾರ್ಥಗಳ (ಮಜ್ಜಿಗೆ, ಮೊಸರು, ಕೋಸಂಬರಿ ಮೊದಲಾದವು) ಸೇವನೆಯನ್ನು ಆದಷ್ಟು ಕಡಿಮೆ ಮಾಡಿದರೆ ಒಳಿತು.

* ಸಮತೋಲನ ಆಹಾರಸೇವನೆಗೆ ಮಹತ್ವವನ್ನು ಕೊಡಬೇಕು. ಇದರಿಂದ ಶರೀರದ ರೋಗನಿರೋಧಕ ಶಕ್ತಿಯು ಸಬಲಗೊಂಡು ಅನೇಕ ಬಗೆಯ ಸೌಮ್ಯ ಸ್ವರೂಪದ ಸೋಂಕುಗಳು ಯಾವುದೇ ಚಿಕಿತ್ಸೆಯ ನೆರವಿಲ್ಲದೆಯೇ ನಿಯಂತ್ರಣಕ್ಕೆ ಬರುತ್ತವೆ.

ಮಕ್ಕಳಿಗೆ ಲಸಿಕೆ ಲಭ್ಯ

ರೋಟಾ ಎಂಬ ವೈರಾಣುವಿನಿಂದ ಉಂಟಾಗುವ ಅತಿಸಾರವು ಮಕ್ಕಳಲ್ಲಿ ಸಾಮಾನ್ಯ. ಈ ವೈರಾಣುವಿನ ವಿರುದ್ಧ ಲಸಿಕೆಯು ಲಭ್ಯವಿದ್ದು, ಇದರ ಬಳಕೆಯಿಂದ ಸುಮಾರು ಶೇ 30ರಷ್ಟು ಮಕ್ಕಳು ಅತಿಸಾರದಿಂದ ಬಳಲುವುದನ್ನು ತಡೆಗಟ್ಟಬಹುದಾಗಿದೆ. ಆದ್ದರಿಂದ ಈ ಲಸಿಕೆಯನ್ನು ಮಕ್ಕಳ ತಜ್ಞರ ಸಲಹೆಯಂತೆ ಪ್ರತಿಯೊಂದು ಮಗುವಿಗೂ ಕೊಡಿಸಬೇಕು.

ಮಗುವಿಗೆ ಆರು ತಿಂಗಳು ತುಂಬುವವರೆಗೂ ಕಡ್ಡಾಯವಾಗಿ ಎದೆಹಾಲನ್ನು ಕುಡಿಸಬೇಕು. ಎದೆಹಾಲಿನಲ್ಲಿರುವ ರೋಗನಿರೋಧಕ ಅಂಶಗಳು ಮಗುವನ್ನು ಅತಿಸಾರದ ವಿರುದ್ಧ ರಕ್ಷಿಸುತ್ತವೆ.

**

ಸಮುದಾಯದ ಮಟ್ಟದಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆಗಳು

ಬಯಲು ಶೌಚಾಲಯ ಪದ್ಧತಿಯನ್ನು ಬಳಸದಿರುವುದು. ಸರ್ಕಾರವು ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತಿಯಾಗಿದೆಯಾದಾರೂ ದೇಶದ ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಈ ಪದ್ಧತಿ ಇನ್ನೂ ಮುಂದುವರೆದಿರುವುದು ಅಪಾಯಕರ. ಅಂತಹ ಪ್ರದೇಶಗಳಲ್ಲಿ ಶೌಚಕ್ಕೆ ಬಳಸುವ ಜಾಗವು ಕುಡಿಯುವ ನೀರಿನ ಮೂಲದಿಂದ ದೂರವಿರುವುದನ್ನು ಖಾತ್ರಿ ಪಡಿಸಿಕೊಳ್ಳಬೇಕು.

* ಸಮುದಾಯಗಳಿಗೆ ಕುಡಿಯುವ ನೀರನ್ನು ಪೂರೈಸುವ ತೊಟ್ಟಿ ಮತ್ತು ಕೊಳವೆಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುತ್ತಿರಬೇಕು.

* ನಗರ ಹಾಗೂ ಗ್ರಾಮಗಳಲ್ಲಿ ಒಳಚರಂಡಿ ವ್ಯವಸ್ಥೆಯು ಸಮರ್ಪಕವಾಗಿರಬೇಕು. ಅದರಲ್ಲಿ ದೋಷವಿದ್ದಾಗ ಅಂತರ್ಜಲವು ಕಲುಷಿತಗೊಳ್ಳುವ ಸಾಧ್ಯತೆಗಳು ಹೆಚ್ಚು.

ಶಾಲೆಗಳಲ್ಲಿ ಮಕ್ಕಳಿಗೆ ಕಡ್ಡಾಯವಾಗಿ ಅತಿಸಾರದ ಕಾರಣ ಹಾಗೂ ಅದು ಹರಡುವುದರ ಬಗ್ಗೆ ಆರೋಗ್ಯಶಿಕ್ಷಣವನ್ನು ಕೊಡಬೇಕು. ಸ್ವಚ್ಛವಾಗಿಲ್ಲದಿರುವಿಕೆ ಹಾಗೂ ಎಲ್ಲೆಂದರಲ್ಲಿ ಸಿಗುವ ನೀರು ಹಾಗೂ ಆಹಾರಪದಾರ್ಥಗಳ ಸೇವನೆಯಿಂದ ಆಗುವ ದುಷ್ಪರಿಣಾಮಗಳನ್ನು ಮಕ್ಕಳಿಗೆ ತಿಳಿ ಹೇಳಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry