4

ಭಾರತೀಯ ವಿಜ್ಞಾನ ಸಂಸ್ಥೆಗಿಂದು ‘ತೆರೆದ ಬಾಗಿಲು’

Published:
Updated:
ಭಾರತೀಯ ವಿಜ್ಞಾನ ಸಂಸ್ಥೆಗಿಂದು ‘ತೆರೆದ ಬಾಗಿಲು’

ಜಗತ್ತಿನ ಶ್ರೇಷ್ಠ ವಿಜ್ಞಾನ ಸಂಸ್ಥೆಗಳ ಸಾಲಿನಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಮುಂಚೂಣಿಯಲ್ಲಿದೆ. ಸಂಸ್ಥೆಯಲ್ಲಿ ನಡೆಯುತ್ತಿರುವ ಸಂಶೋಧನೆಗಳು ಮತ್ತು ವಿಜ್ಞಾನ ಮಾದರಿಗಳನ್ನು ನೋಡುವ ಅವಕಾಶ ಸಾರ್ವಜನಿಕರಿಗೆ ದೊರೆಯಬೇಕೆಂಬ ಉದ್ದೇಶದಿಂದ ವರ್ಷಕ್ಕೊಮ್ಮೆ ‘ಮುಕ್ತದಿನ’ (ಓಪನ್ ಡೇ) ಆಯೋಜಿಸಲಾಗುತ್ತದೆ.

ಈ ಬಾರಿ ಮಾರ್ಚ್ 10ರಂದು ‘ಮುಕ್ತದಿನ’ ನಡೆಯಲಿದ್ದು, ವಿಜ್ಞಾನಪ್ರಿಯರಿಗೆ ಹಿಗ್ಗು ತರಲಿದೆ. ‘ತೆರೆದ ಬಾಗಿಲಿ’ನಿಂದ ವಿಜ್ಞಾನಪ್ರಿಯರನ್ನು ಕೈಬೀಸಿ ಕರೆಯುವ ಐಐಎಸ್‌ಸಿ ತನ್ನೊಡಲಲ್ಲಿ ಅಡಗಿಸಿಕೊಂಡಿರುವ ಜ್ಞಾನವನ್ನು ಅನಾವರಣ ಮಾಡಲಿದೆ.

ಶತಮಾನಕ್ಕೂ ಹೆಚ್ಚು ಕಾಲ ಸಂಶೋಧನೆಯಲ್ಲಿ ತೊಡಗಿರುವ ಐಐಎಸ್‌ಸಿಯ ಸಾಧನೆಗಳನ್ನು ಪಟ್ಟಿ ಮಾಡಿದರೆ ಮುಗಿಯಲಾರದಷ್ಟು ದೊಡ್ಡದು. ಅದು ಸಾಮಾನ್ಯ ಹಳ್ಳಿಗನಿಗೂ ಹಿಂದೆ ಪರಿಚಿತವಿದ್ದ ಅಸ್ತ್ರ ಒಲೆಯಿಂದ ಹಿಡಿದು ಸೂಪರ್ ಕಂಪ್ಯೂಟರ್, ನ್ಯಾನೋ ಟೆಕ್ನಾಲಜಿವರೆಗಿನ ವಿಜ್ಞಾನದ ವಿವಿಧ ಕ್ಷೇತ್ರಗಳವರೆಗೆ ಹರಡಿದೆ. ವಿಜ್ಞಾನದ ಈ ಎಲ್ಲಾ ಕೌತುಕಗಳನ್ನು ‘ಮುಕ್ತದಿನ’ದಂದು ಸಾರ್ವಜನಿಕರು ಕಣ್ತುಂಬಿಕೊಳ್ಳಬಹುದು. ಶಾಲಾ ಮಕ್ಕಳಿಂದ ಹಿಡಿದು ಉದ್ಯಮಶೀಲ ಪ್ರವೃತ್ತಿಯುಳ್ಳವರು, ಈ ದೇಶಕ್ಕೆ ಏನಾದರೂ ಮೌಲಿಕವಾದುದನ್ನು ಕಾಣಿಕೆಯಾಗಿ ಕೊಡಬೇಕೆಂದು ಹೊಂಗನಸು ಕಟ್ಟಿಕೊಂಡಿರುವವರು ತನ್ನಲ್ಲಿಗೆ ಬರಲೆಂದು ಐಐಎಸ್‌ಸಿ ಆಶಿಸುತ್ತದೆ. ಸಂಸ್ಥೆಯ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಮಾಡುವ ಸಂಶೋಧನೆಗಳನ್ನು ನಗರದ ಜನರೂ ನೋಡಿ, ತಿಳಿದುಕೊಳ್ಳಬೇಕು ಎನ್ನುವ ಆಶಯವೇ ಈ ಕಾರ್ಯಕ್ರಮದ ಹಿಂದಿರುವ ಉದ್ದೇಶ.

‘ಮುಕ್ತದಿನ’ದಂದು ಸಂಸ್ಥೆಯ ಎಲ್ಲ ವಿಭಾಗಗಳ ಮುಂದೆಯೂ ಎಲ್‌ಸಿಡಿ ಪರದೆ, ಮಾಹಿತಿ ನೀಡಲು ಲ್ಯಾಪ್‌ಟಾಪ್ ಸಮೇತ ಸನ್ನದ್ಧರಾಗಿ ನಿಂತಿರುವ ನೂರಾರು ಸ್ವಯಂಸೇವಕರು ಇರುತ್ತಾರೆ. ಸಂಸ್ಥೆಯ ಹಳೇ ಏರೋಸ್ಪೇಸ್ ಕಟ್ಟಡದಲ್ಲಿ ಮಕ್ಕಳಿಗಾಗಿ ‘ಕಿಡ್ಸ್ ಜೋನ್’ ಇರುತ್ತದೆ. ಇಲ್ಲಿ ಮೂಲವಿಜ್ಞಾನದ ಪ್ರಾತ್ಯಕ್ಷಿಕೆಗಳು ನಡೆಯುತ್ತವೆ.

ಅವುಗಳ ಜತೆಗೆ ಸಂಸ್ಥೆಯ ಸಭಾಂಗಣಗಳಲ್ಲಿ ವಿಡಿಯೊ ಪ್ರದರ್ಶನ, ರಸಪ್ರಶ್ನೆ, ಪ್ರಶ್ನೋತ್ತರ, ಪ್ರಾತ್ಯಕ್ಷಿಕೆಗಳು, ಉಪನ್ಯಾಸಗಳು ನಡೆಯಲಿವೆ. ಈ ಬಾರಿ ಸಂಸ್ಥೆಯ ಒಳಗೆ ತಿರುಗಾಡಲು ಇ–ರಿಕ್ಷಾಗಳ ಸೌಲಭ್ಯ ಕಲ್ಪಿಸಿರುವುದು ವಿಶೇಷ.

ಸ್ಥಳ: ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ), ಸಿ.ವಿ.ರಾಮನ್ ರಸ್ತೆ, ಬೆಂಗಳೂರು. ಬೆಳಿಗ್ಗೆ 9ರಿಂದ ಸಂಜೆ 5.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry