ದೇಶದ ರಕ್ಷಣಾ ನಗರಿ ಬೆಂಗಳೂರು

ಭಾನುವಾರ, ಮಾರ್ಚ್ 24, 2019
33 °C

ದೇಶದ ರಕ್ಷಣಾ ನಗರಿ ಬೆಂಗಳೂರು

Published:
Updated:
ದೇಶದ ರಕ್ಷಣಾ ನಗರಿ ಬೆಂಗಳೂರು

ಪಾಕಿಸ್ತಾನದ ಗಡಿಯಲ್ಲಿ ರಸ್ತೆ ನಿರ್ಮಿಸಲು ಶ್ರಮಿಸುವ ‘ಮದ್ರಾಸ್ ಎಂಜಿನಿಯರ್ ಗ್ರೂಪ್’ (ಎಂಇಜಿ) ಹಲಸೂರಿನಲ್ಲಿ ಕಸರತ್ತು ನಡೆಸಿರುತ್ತಾರೆ. ಚೀನಾ ಗಡಿಯ ಹಿಮಚ್ಛಾದಿತ ರಸ್ತೆಯಲ್ಲಿ ಓಡುವ ಸೇನೆಯ ಟ್ರಕ್‌ಗಳಿಗೂ ತಿಪ್ಪಸಂದ್ರದ ಬಿಇಎಲ್ ಭಾರತ್‌ ಅರ್ಥ್ ಮೂವರ್ಸ್‌ ಲಿಮಿಟೆಡ್‌ಗೂ ಸಂಬಂಧವಿದೆ. ಬಾಂಗ್ಲಾದೇಶದಿಂದ ಅಕ್ರಮವಾಗಿ ನುಸುಳುವವರನ್ನು ತಡೆಯಲು ನಿಂತವರ ಕೈಲಿ ನಾಗವಾರದ ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ನಲ್ಲಿ ತಯಾರಾದ ಶಸ್ತ್ರಾಸ್ತ್ರಗಳು.

ಸಾಗರದ ಜಲರಾಶಿ, ಬಾನಂಗಳ ಕಾಯಲು ಹಾರುವ ಯುದ್ಧವಿಮಾನ, ಹೆಲಿಕಾಪ್ಟರ್‌ಗಳ ಪ್ರಸೂತಿ ಗೃಹಗಳು ಇರುವುದು ಎಚ್‌ಎಎಲ್‌ನ ನಿರ್ಬಂಧಿತ ಬಯಲುಗಳಲ್ಲಿ. ಆ ಯುದ್ಧವಿಮಾನಗಳು ಕಾದಾಟಕ್ಕೆ ಸಮರ್ಥವಾಗಿವೆಯೇ ಎಂಬುದರ ಪರೀಕ್ಷಾರ್ಥ ಹಾರಾಟ ನಡೆಸುವ ಎಎಸ್‌ಟಿಇ ಸಂಸ್ಥೆ ಇರುವುದು ಎಚ್‌ಎಎಲ್‌ ಬದಿಯ ಚಲ್ಲಘಟ್ಟದಲ್ಲಿ. ಆ ಉಕ್ಕಿನ ಹಕ್ಕಿಗಳನ್ನು ಹಾರಿಸುವ ಪೈಲಟ್‌ಗಳ ಮಿದುಳಿಗೆ ತಾಂತ್ರಿಕ ಜ್ಞಾನವನ್ನು ಜಾಲಹಳ್ಳಿಯಲ್ಲಿ ವಾಯುಸೇನಾ ತಾಂತ್ರಿಕ ತರಬೇತಿ ಕೇಂದ್ರದಲ್ಲಿ ತುಂಬಲಾಗುತ್ತೆ.

ಹೀಗೆ ಹುಡುಕುತ್ತ ಹೋದರೆ ಬೆಂಗಳೂರಿಗೂ ರಕ್ಷಣಾ ಇಲಾಖೆಯ ಪ್ರತಿ ವಿಭಾಗಕ್ಕೂ ಸಂಬಂಧ ಇರುವುದು ತಿಳಿಯುತ್ತದೆ. ಅಷ್ಟರಮಟ್ಟಿಗೆ ನಮ್ಮ ಬೆಂಗಳೂರಿನಲ್ಲಿ ಸೇನಾ ವಲಯಕ್ಕೆ ಸಂಬಂಧಿಸಿದ ಸಂಸ್ಥೆಗಳು ನೆಲೆನಿಂತಿವೆ. ಅವುಗಳಲ್ಲಿ ಕೆಲ ಮುಖ್ಯ ಸಂಸ್ಥೆಗಳ ಪರಿಚಯ ಇಲ್ಲಿದೆ.

ಮದ್ರಾಸ್‌ ಎಂಜಿನಿಯರ್ ಗ್ರೂಪ್: ಬ್ರಿಟಿಷರ ಕಾಲದಲ್ಲಿ ಮೊಳಕೆಯೊಡೆದ ಈ ಸಶಸ್ತ್ರ ಸೇನಾ ತುಕಡಿಯ ಬಳ್ಳಿ ಇಂದಿಗೂ ಬೆಳೆಯುತ್ತಿದೆ. ಹಲಸೂರು ಕೆರೆ ಪಕ್ಕದಲ್ಲಿರುವ ಕೇಂದ್ರದಲ್ಲಿ ಹತ್ತಾರು ತಿಂಗಳು ತರಬೇತಿ ಪಡೆದ ದೇಹಗಳು ಯೋಧರೆಂಬ ಅರ್ಹತೆ ಗಳಿಸಿ, ದೇಶಸೇವೆಗೆ ಹೊರಡುತ್ತವೆ. ಪಾಕಿಸ್ತಾನದೊಂದಿಗೆ ನಡೆದ ಯುದ್ಧಗಳಲ್ಲಿ ನಮ್ಮ ದೇಶ ಮೇಲುಗೈ ಸಾಧಿಸುವಲ್ಲಿ ಹಾಗೂ ಬಾಂಗ್ಲಾ ವಿಮೋಚನೆಯಲ್ಲಿ ಈ ತುಕಡಿಯ ಶ್ರಮ ಇದೆ.

ಆರ್ಮಿ ಸರ್ವಿಸ್‌ ಕಾರ್ಪ್ಸ್ ಸೆಂಟರ್‌ ಅಂಡ್ ಕಾಲೇಜ್‌: ಭೂಸೇನೆಯ ಮುಖ್ಯ ಅಂಗ ಎನಿಸಿರುವ ಈ ತುಕಡಿಯ ಕೇಂದ್ರ ದೊಮ್ಮಲೂರಿನಲ್ಲಿದೆ. ಸೇನಾಳುಗಳಿಗೆ ಬೇಕಾದ ಸರಕುಗಳನ್ನು ತಲುಪಿಸುವುದು, ಸಾರಿಗೆ ವ್ಯವಸ್ಥೆ ಕಲ್ಪಿಸುವುದು ಈ ತುಕಡಿಯ ಜವಾಬ್ದಾರಿ. ಆ ಸರಕಿನಲ್ಲಿ ಪಡಿತರ, ತಾಜಾ ಮತ್ತು ಒಣ ಆಹಾರ ಪದಾರ್ಥಗಳು, ಇಂಧನ, ದೇಹಾರೋಗ್ಯಕ್ಕೆ ಬೇಕಾದ ಪರಿಕರಗಳು ಸೇರಿರುತ್ತವೆ. ಕಾದಾಡುವ ವಾಹನಗಳನ್ನು ಬಿಟ್ಟು ಉಳಿದವವನ್ನು ಶಾಂತಿಸ್ಥಾಪನಾ ಪ್ರದೇಶಕ್ಕೆ ಇವರು ಸಾಗಿಸುತ್ತಾರೆ. ಸೇನಾಳುಗಳಿಗೆ ಕ್ಯಾಟರಿಂಗ್‌ ವ್ಯವಸ್ಥೆಯೊಂದಿಗೆ, ದುರ್ಗಮ ಪ್ರದೇಶಗಳಿಗೆ ಅಂಚೆ ಸೇವೆ ಒದಗಿಸುತ್ತಾರೆ. 1962ರಲ್ಲಿ ಚೀನಾದೊಂದಿಗೆ ನಡೆದ ಕಾದಾಟದಲ್ಲಿ ಇವರು ಭೂಸೇನೆಗೆ ಬೆನ್ನೆಲುಬಾಗಿ ನಿಂತಿದ್ದರು.

ಕಾಪ್ಸ್ ಆಫ್‌ ಮಿಲಿಟರಿ ಪೊಲೀಸ್‌ ಸೆಂಟರ್‌ ಆ್ಯಂಡ್‌ ಸ್ಕೂಲ್: ಭಾರತೀಯ ಸೇನೆಯಲ್ಲಿರುವ ಪೊಲೀಸ್‌ ಪಡೆಯ ಕಟ್ಟಾಳುಗಳು ತಯಾರಾಗುವ ಕೇಂದ್ರವಿದು. 65 ವಾರಗಳ ಕಠಿಣ ತರಬೇತಿ ಬಳಿಕ, ನೆಲ, ಜಲ, ವಾಯುಪಡೆಗಳಿಗೆ ಸಂವಹನ ಕಲ್ಪಿಸುವ ಕಲೆಯನ್ನು ಈ ಪೊಲೀಸರು ಕರಗತ ಮಾಡಿಕೊಳ್ಳುತ್ತಾರೆ. ಜತೆಗೆ ಯುದ್ಧ ಖೈದಿಗಳನ್ನು ನಿಭಾಯಿಸುವುದನ್ನು ತಿಳಿಯುತ್ತಾರೆ. 1971ರ ಭಾರತ–ಪಾಕ್‌ ಕದನದ ತರುವಾಯ 90 ಸಾವಿರ ಯುದ್ಧಖೈದಿಗಳನ್ನು ಸಮರ್ಥವಾಗಿ ನಿಭಾಯಿಸಿದ ಕೀರ್ತಿ ಇಲ್ಲಿ ತರಬೇತಿ ಪಡೆದವರಿಗೆ ಸಂದಿದೆ. ವಿಶ್ವಸಂಸ್ಥೆಯ ಶಾಂತಿ ಸ್ಥಾಪನಾ ಪಡೆಯ ಭಾಗವಾಗಿ, ಹಲವಾರು ದೇಶಗಳಲ್ಲಿನ ಉದ್ವಿಗ್ನ ಪರಿಸ್ಥಿತಿಯನ್ನು ತಹಬದಿಗೆ ತರಲು ಈ ತಂಡದ ಪೊಲೀಸರು ಶ್ರಮಿಸುತ್ತಿದ್ದಾರೆ. ಈ ಕೇಂದ್ರ ಇರುವುದು ಶಾಂತಿನಗರದಲ್ಲಿ.

ಟೆಸ್ಟ್‌ ಪೈಲಟ್‌ ಸ್ಕೂಲ್‌: ವಾಯುಪಡೆಯ ಈ ವಿಶೇಷ ಶಾಲೆ ಇರುವುದು ಎಚ್‌ಎಎಲ್‌ ಪ್ರದೇಶದಲ್ಲಿ. 1957ರಲ್ಲಿ ಕಾರ್ಯಾರಂಭ ಮಾಡಿದ ಈ ಬಯಲು ಶಾಲೆಯಲ್ಲಿ ಯುದ್ಧ ವಿಮಾನಗಳ ಕಾರ್ಯಕ್ಷಮತೆ ಅಳೆಯಲಾಗುತ್ತದೆ. ಹಾಗೆಯೇ ಪೈಲಟ್‌ಗಳ ವೃತ್ತಿಪರತೆ ವೃದ್ಧಿಸಲಾಗುತ್ತದೆ. ಇಲ್ಲಿನ ಪೈಲಟ್‌ಗಳು ಎಂಜಿನಿಯರ್‌ ಕೂಡ ಆಗಿರುತ್ತಾರೆ. ಎಂಜಿನಿಯರ್‌ಗಳು ಪೈಲಟ್‌ ಕೌಶಲಗಳನ್ನು ಕಲಿತಿರುತ್ತಾರೆ. ಕಾರ್ಯಾಚರಣೆಯಲ್ಲಿ ಲೋಹದ ಹಕ್ಕಿಗಳು ನಿಗದಿತ ಗುರಿ ತಲುಪಲು, ಅವುಗಳ ಪ್ರತಿಯೊಂದು ಭಾಗವನ್ನು ಸೂಕ್ಷ್ಮವಾಗಿ ಪರೀಕ್ಷಿಸುತ್ತಾರೆ. ಅವುಗಳನ್ನು ಆಗಸದಲ್ಲಿ ಹಾರಾಡಿಸುತ್ತಾರೆ. ರಕ್ಷಣಾ ಇಲಾಖೆ ಯಾವುದೇ ದೇಶದಿಂದ ಯುದ್ಧವಿಮಾನ ಖರೀದಿಗೂ ಮುನ್ನ, ಅದನ್ನು ಈ ಕೇಂದ್ರದಲ್ಲಿನ ಪರಿಣಿತರಿಂದ ಪರೀಕ್ಷೆಗೆ ಒಳಪಡಿಸುತ್ತದೆ. ನಮ್ಮ ದೇಶದ ಮೊದಲ ಗಗನಯಾತ್ರಿ ರಾಕೇಶ್‌ ಶರ್ಮಾ ಅವರು ಇದೇ ಶಾಲೆಯಲ್ಲಿ ಕಲಿತವರು.  

ವಾಯುಸೇನಾ ತಾಂತ್ರಿಕ ತರಬೇತಿ ಕಾಲೇಜು: ವಾಯುಸೇನೆಯು ಜಾಲಹಳ್ಳಿಯಲ್ಲಿ ಸ್ಥಾಪಿಸಿರುವ ಈ ಸಂಸ್ಥೆಯಲ್ಲಿ ಒಂದೂವರೆ ವರ್ಷ ಕಲಿತು, ನೂರಾರು ಪದವೀಧರರು ಹೊರಬರುತ್ತಾರೆ. ಎಲೆಕ್ಟ್ರಾನಿಕ್ಸ್‌, ಲಾಜಿಸ್ಟಿಕ್‌, ಏರೊನಾಟಿಕಲ್‌ ಎಂಜಿನಿಯರಿಂಗ್‌ನಲ್ಲಿ ಪರಿಣಿತರಾದ ಅವರು ವಾಯುಪಡೆಯ ಸೇವೆಗೆ ಸೇರ್ಪಡೆಗೊಳ್ಳುತ್ತಾರೆ. ವಿಮಾನಪುರದಲ್ಲಿರುವ ಏರ್‌ ಸ್ಪೇಸ್‌ ಮೆಡಿಸನ್‌ ಸಂಸ್ಥೆಯು ವೈಮಾನಿಕ ರಂಗದಲ್ಲಿ ದುಡಿಯುತ್ತಿರುವವರನ್ನು ಬಾಧಿಸುವ ಕಾಯಿಲೆಗಳನ್ನು ವಾಸಿ ಮಾಡಲು ಶ್ರಮಿಸುತ್ತಿದೆ. ಇದಕ್ಕೆ ಕಮಾಂಡ್‌ ಆಸ್ಪತ್ರೆಯ ಸಹಕಾರವಿದೆ.

ಹಿಂದೂಸ್ತಾನ್‌ ಏರೊನಾಟಿಕ್ಸ್‌ ಲಿಮಿಟೆಡ್‌: ನಗರದಲ್ಲಿ 1940ರಿಂದ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆ ಭಾರತೀಯ ವಾಯುದಳಕ್ಕೆ ಜೆಟ್‌ ವಿಮಾನಗಳಾದ ಹಾಕ್‌, ತೇಜಸ್‌ ಮತ್ತು ಕರಾವಳಿ ಕಣ್ಗಾವಲಿಗಾಗಿ ಡಾರ್ನಿಯರ್‌ ವಿಮಾನಗಳನ್ನು ತಯಾರಿಸಿಕೊಟ್ಟಿದೆ. ಧ್ರುವಾ, ಚೀತಾ, ಚೇತಕ್‌, ಲ್ಯಾನ್ಸರ್, ಚೀತಲ್‌ ಮತ್ತು ಶಸ್ತ್ರಾಸ್ತ್ರ ಜೋಡಿಸಬಹುದಾದ ರುದ್ರ ಹೆಲಿಕಾಪ್ಟರ್‌ಗಳು ಹುಟ್ಟಿದ್ದು ಇಲ್ಲೇ. ವಿವಿಧ ಯುದ್ಧವಿಮಾನಗಳ ಎಂಜಿನ್‌ಗಳು, ವಾಯುಸಾರಿಗೆಯ ಸಂವಹನದ ಸಲಕರಣೆಗಳು, ಡಿಜಿಟಲ್‌ ಮ್ಯಾಪ್‌ಗಳು, ಲೇಜರ್‌ ರೇಂಜರ್‌ಗಳು ಇಲ್ಲಿ ರೂಪುಗೊಳ್ಳುತ್ತವೆ. ಇಲ್ಲಿನ ಏರೋಸ್ಪೇಸ್‌ ವಿಭಾಗದಲ್ಲಿ ಪಿಎಸ್‌ಎಲ್‌ವಿ, ಜಿಎಸ್‌ಎಲ್‌ವಿ ರಾಕೆಟ್‌ ಮತ್ತು ಕೃತಕ ಉಪಗೃಹಗಳ ವಿನ್ಯಾಸಗಳು ತಯಾರಾಗುತ್ತವೆ. ಸೇನೆಯ ವಿಮಾನಗಳ ಸರ್ವಿಸಿಂಗ್‌ ಸಹ ಇಲ್ಲಿಯೇ ನಡೆಯುತ್ತದೆ. ರಾಡಾರ್‌ನ ಬಿಡಿಭಾಗಗಳನ್ನು ಇಲ್ಲಿ ಉತ್ಪಾದಿಸಲಾಗುತ್ತೆ.

ಬಿಇಎಲ್‌: ನಾಗವಾರದಲ್ಲಿ 1954ರಲ್ಲಿ ಸ್ಥಾಪನೆಯಾದ ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ ರಕ್ಷಣಾ ಪಡೆಗಳಿಗೆ ಬೇಕಾದ ಸಂವಹನ ಸಾಧನಗಳನ್ನು ತಯಾರಿಸಿಕೊಡುತ್ತಿದೆ. ಸಮರನೌಕೆ, ಯುದ್ಧಟ್ಯಾಂಕರ್‌ಗಳಲ್ಲಿ ತಾಂತ್ರಿಕ ವ್ಯವಸ್ಥೆ ಕಲ್ಪಿಸುವ ಯಂತ್ರೋಪಕರಣಗಳು, ಸೈನಿಕರಿಗೆ ಸಂಚಾರಿ ಸೆಲ್ಟರ್‌ಗಳು, ರಾಡಾರ್‌ಗಳು, ದುರ್ಬಿನುಗಳು, ನಾನ್‌ ಚಾರ್ಚೆಬಲ್‌ ಬ್ಯಾಟರಿಗಳನ್ನು ಇದು ಉತ್ಪಾದಿಸುತ್ತದೆ.

ಬಿಇಎಂಎಲ್‌: ಹೊಸ ತಿಪ್ಪಸಂದ್ರದಲ್ಲಿರುವ ಭಾರತ್‌ ಅರ್ಥ್‌ ಮೂವರ್ಸ್‌ ಲಿಮಿಟೆಡ್‌ 1964ರಿಂದ ಅಸ್ತಿತ್ವದಲ್ಲಿರುವ ಹಳೆಯ ಸಂಸ್ಥೆ. ಸಾರ್ವಜನಿಕ ಉದ್ಯಮವಾಗಿರುವ ಇದರಲ್ಲಿ ಸೇನಾ ಟ್ರಕ್‌ಗಳು, ರಾಕೆಟ್‌ ಲಾಂಚರ್‌ಗಳು, ಟ್ಯಾಂಕರ್‌ಗಳು, ಪೃಥ್ವಿ ಮಿಸೈಲ್‌ ಲಾಂಚರ್‌ಗಳು ಮತ್ತು ಅಗ್ನಿಶಾಮಕ ವಾಹನಗಳು ತಯಾರಾಗುತ್ತವೆ.

ಡಿಆರ್‌ಡಿಒ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಒಂಬತ್ತು ವಿಭಾಗಗಳು ಸಿ.ವಿ.ರಾಮನ್‌ ನಗರದಲ್ಲಿವೆ. ಶಸ್ತ್ರಾಸ್ತ್ರಗಳ ವಿನ್ಯಾಸ ರೂಪಿಸುವುದು, ಅಭಿವೃದ್ಧಿಪಡಿಸುವುದು, ವೈಮಾನಿಕ ಸಾಧನಗಳ ತಾಂತ್ರಿಕತೆ ಪರಿಶೀಲಿಸುವುದು ಅವುಗಳ ಕೆಲಸ. ಮಾನವ ರಹಿತ ಕಣ್ಗಾವಲು ವಿಮಾನಗಳಾದ ನಿಶಾಂತ್‌, ಲಕ್ಷ್ಯ ಹಾಗೂ ರುಸ್ತುಂಗಳು ಜನ್ಮ ತಳೆದದ್ದು ಈ ಸಂಸ್ಥೆಯಲ್ಲಿಯೇ. ಈ ಸಂಸ್ಥೆಯ ಏರೊನಾಟಿಕಲ್‌ ಡೆವಲಪ್‌ಮೆಂಟ್‌ ಎಸ್ಟಾಬ್ಲಿಷ್‌ಮೆಂಟ್‌, ಸೆಂಟರ್‌ ಫಾರ್‌ ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌ ಆ್ಯಂಡ್‌ ರೊಬೊಟಿಕ್ಸ್‌ ಮತ್ತು ಡಿಫೆನ್ಸ್‌ ಏವಿಯೊನಿಕ್ಸ್‌ ರಿಸರ್ಚ್‌ ಎಸ್ಪಾಬ್ಲಿಷ್‌ಮೆಂಟ್‌ ವಿಭಾಗಗಳು ಎಚ್‌ಎಎಲ್ ಮತ್ತು ವಾಯುಪಡೆಗೆ ಬೆನ್ನೆಲುಬು ಆಗಿವೆ. ಇದಲ್ಲದೆ ಸೇನಾಳುಗಳು ದೀರ್ಘ ಕಾಲದವರೆಗೂ ಶೇಖರಿಸಿ ತಿನ್ನಬಹುದಾದ ಪದಾರ್ಥಗಳು ಮತ್ತು ಅವುಗಳನ್ನು ಇಡುವ ಪೊಟ್ಟಣಗಳ ಸಂಶೋಧನೆ ಇಲ್ಲಿ ಆಗುತ್ತದೆ.

ಇವುಗಳಲ್ಲದೆ, ಪ್ಯಾರಾಚೂಟ್‌ ರೆಜಿಮೆಂಟ್‌ನ ತರಬೇತಿ ಕೇಂದ್ರ (ಪಿಆರ್‌ಟಿಸಿ), ಕೇಂದ್ರಿಯ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್‌), ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ (ಎನ್‌ಡಿಆರ್‌ಎಫ್‌) ಕೇಂದ್ರಗಳು ನಮ್ಮ ನಗರದಲ್ಲಿವೆ. ದೇಶದ ರಕ್ಷಣಾ ವ್ಯವಸ್ಥೆಯ ಬೆನ್ನೆಲುಬು ಬೆಂಗಳೂರು ಎನ್ನುವುದು ನಮ್ಮ ಹೆಮ್ಮೆ.

***

ರಾಷ್ಟ್ರೀಯ ಭದ್ರತಾ ದಿನ

ದೇಶದಲ್ಲಿ ಶಾಂತಿ–ಸುವ್ಯವಸ್ಥೆ ಸ್ಥಾಪನೆಗಾಗಿ ಜೀವ ಒತ್ತೆಯಿಟ್ಟು ಕಾರ್ಯನಿರ್ವಹಿಸುವ ಪೊಲೀಸ್‌, ಸಶಸ್ತ್ರ ಸೇನಾಪಡೆ, ಅರೆಸೇನಾದಳದ ಸುಮಾರು 13 ಲಕ್ಷ ಸೇನಾಳುಗಳ ಶ್ರಮ ಸ್ಮರಿಸಿ, ಗೌರವ ಸೂಚಿಸಲು ಪ್ರತಿವರ್ಷ ಮಾರ್ಚ್‌ 4 ರಂದು ‘ರಾಷ್ಟ್ರೀಯ ಭದ್ರತಾ ದಿನ’ ಆಚರಿಸುತ್ತಾರೆ. ಇದನ್ನು ‘ರಾಷ್ಟ್ರೀಯ ಸುರಕ್ಷಾ ದಿವಸ್‌’ ಎಂತಲೂ ಕರೆಯುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry