ಕಣಿವೆ ರಾಜ್ಯಗಳ ಸಲಹೆಗೆ ಸೂಚನೆ

ಭಾನುವಾರ, ಮಾರ್ಚ್ 24, 2019
27 °C
ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ರಚನೆಗೆ ಆದೇಶಿಸಿದ್ದ ‘ಸುಪ್ರೀಂ’

ಕಣಿವೆ ರಾಜ್ಯಗಳ ಸಲಹೆಗೆ ಸೂಚನೆ

Published:
Updated:
ಕಣಿವೆ ರಾಜ್ಯಗಳ ಸಲಹೆಗೆ ಸೂಚನೆ

ನವದೆಹಲಿ: ಕಾವೇರಿ ನೀರು ಹಂಚಿಕೆ ಕುರಿತಂತೆ ಸುಪ್ರೀಂ ಕೋರ್ಟ್‌ ನಿರ್ದೇಶನದ ಮೇರೆಗೆ ಯೋಜನೆ (ಸ್ಕೀಂ) ರೂಪಿಸಬೇಕಿರುವ ಕೇಂದ್ರ ಸರ್ಕಾರ, ಈ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಮೂಲಕ ಸಲಹೆ ನೀಡುವಂತೆ ಕಣಿವೆ ವ್ಯಾಪ್ತಿಯ ಎಲ್ಲ ರಾಜ್ಯಗಳಿಗೆ ಸೂಚಿಸಿದೆ.

ಕೇಂದ್ರದ ಜಲಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿ ಉಪೇಂದ್ರ ಪ್ರಸಾದ್‌ ಸಿಂಗ್‌ ನೇತೃತ್ವದಲ್ಲಿ ಶುಕ್ರವಾರ ನಡೆದ ಕಣಿವೆ ವ್ಯಾಪ್ತಿಯ ರಾಜ್ಯಗಳ ಮುಖ್ಯ ಕಾರ್ಯದರ್ಶಿಯವರ ಸಭೆಯಲ್ಲಿ ಈ ಸೂಚನೆ ನೀಡಲಾಗಿದ್ದು, ಕರ್ನಾಟಕವೂ ಸೇರಿದಂತೆ ಎಲ್ಲ ನಾಲ್ಕೂ ರಾಜ್ಯಗಳು ನದಿ ನಿರ್ವಹಣಾ ಮಂಡಳಿ ರಚನೆಯ ಪ್ರಸ್ತಾವಕ್ಕೆ ತಮ್ಮ ಒಪ್ಪಿಗೆ ಸೂಚಿಸಿವೆ.

ಸಭೆಯಲ್ಲಿ ಭಾಗವಹಿಸಿದ್ದ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ, ತಮಿಳುನಾಡಿನ ಗಿರಿಜಾ ವೈದ್ಯನಾಥನ್‌ ಅವರು, ‘ನಮ್ಮ

ರಾಜ್ಯಗಳ ರೈತರ ಹಿತಾಸಕ್ತಿಗೆ ಅನುಗುಣವಾಗಿಯೇ ಮಂಡಳಿ ಕಾರ್ಯ ನಿರ್ವಹಿಸಲಿ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಕೇರಳ ಮತ್ತು ಪುದುಚೇರಿ ಸರ್ಕಾರಗಳ ಪರ ಹಾಜರಾಗಿದ್ದ ಅಧಿಕಾರಿಗಳು, ಸಭೆಯಲ್ಲಿ ಪ್ರಸ್ತಾಪಿ ಸಲಾದ ವಿಷಯಗಳ ಕುರಿತು ತಮ್ಮ ಸಮ್ಮತಿ ಸೂಚಿಸಿದರು.

ನೀರು ಹಂಚಿಕೆಗಾಗಿ ಯೋಜನೆ ರೂಪಿಸುವ ನಿಟ್ಟಿನಲ್ಲಿ ನಿರ್ವಹಣಾ ಮಂಡಳಿಯ ನಿಖರ ಸ್ವರೂಪ, ಸಂಯೋಜನೆ ಮತ್ತು ಜವಾಬ್ದಾರಿಗಳ ಬಗ್ಗೆ ಸಮಗ್ರವಾಗಿ ಚರ್ಚಿಸಲಾಯಿತು. ಆಯಾ ರಾಜ್ಯಗಳ ಸುಪರ್ದಿಯಲ್ಲಿರುವ ಜಲಾಶಯಗಳ ನಿರ್ವಹಣೆ ಜವಾಬ್ದಾರಿಯು ಆಯಾ ಸರ್ಕಾರಗಳ ವ್ಯಾಪ್ತಿಯಲ್ಲೇ ಇರಲಿ. ತಟಸ್ಥ

ವ್ಯವಸ್ಥೆ ಅಥವಾ ಪ್ರಾಧಿಕಾರದ ಮೂಲಕ ನೀರು ಹಂಚಿಕೆ ಪ್ರಕ್ರಿಯೆ ನಡೆಯಲಿ ಎಂಬ ಅಭಿಪ್ರಾಯವನ್ನು ಕರ್ನಾಟಕ ಮತ್ತು ಕೇರಳದ ಅಧಿಕಾರಿಗಳು ವ್ಯಕ್ತಪಡಿಸಿದರು ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

ಕಾವೇರಿ ಜಲವಿವಾದಕ್ಕೆ ಸಂಬಂಧಿಸಿದಂತೆ ಕಳೆದ ಫೆಬ್ರುವರಿ 16ರಂದು ಸುಪ್ರೀಂಕೋರ್ಟ್‌ ಪ್ರಕಟಿಸಿರುವ ಆದೇಶಕ್ಕೆ ಅನುಗುಣವಾಗಿ ಆರು ವಾರಗಳೊಳಗೆ ನೀರು ಹಂಚಿಕೆ ಕುರಿತ ‘ಸ್ಕೀಂ’ ರೂಪಿಸುವ ಬಗ್ಗೆಯೇ ಸಭೆಯಲ್ಲಿ ಪ್ರಧಾನವಾಗಿ ಚರ್ಚಿಸಲಾಯಿತು. ನೀರು ಹಂಚಿಕೆಗಾಗಿ ನದಿ ನೀರು ನಿರ್ವಹಣಾ ಮಂಡಳಿ ರಚಿಸಬೇಕಿದ್ದು, ಅದರ ಸ್ವರೂಪ, ಕಾರ್ಯವೈಖರಿ ಯಾವ ರೀತಿ ಇರಬೇಕು ಎಂಬ ಕುರಿತು ಎಲ್ಲ ರಾಜ್ಯಗಳು ಒಂದು ವಾರದೊಳಗೆ ತಮ್ಮ ಅಭಿಪ್ರಾಯ ಸಲ್ಲಿಸುವಂತೆ ತಿಳಿಸಲಾಗಿದೆ ಎಂದು ಉಪೇಂದ್ರ ಪ್ರಸಾದ್‌ ಸಿಂಗ್‌ ಸಭೆಯ ನಂತರ ತಿಳಿಸಿದರು.

ಕೋರ್ಟ್‌ ಆದೇಶ ಜಾರಿಗೊಳಿಸುವ ಮುನ್ನ ಕೇಂದ್ರದ ಜಲಸಂಪನ್ಮೂಲ ಸಚಿವ ನಿತಿನ್‌ ಗಡ್ಕರಿ ಅಧ್ಯಕ್ಷತೆಯಲ್ಲಿ ಕಣಿವೆ ರಾಜ್ಯಗಳ ಮುಖ್ಯಮಂತ್ರಿಯವರ ಸಭೆ ಆಯೋಜಿಸಲಾಗುವುದು.

ಆಯಾ ರಾಜ್ಯ ಸರ್ಕಾರಗಳು ತಮ್ಮ ಅಭಿಪ್ರಾಯ ತಿಳಿಸಿದ ನಂತರ ಸಭೆಯ ದಿನಾಂಕ ಪ್ರಕಟಿಸಲಾಗುವುದು ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry