ಆಕಾಂಕ್ಷಿಗಳ ಚಿತ್ತ ಕೆಪಿಸಿಸಿ ಕಚೇರಿಯತ್ತ

7
ಬೆಂಗಳೂರಿನಲ್ಲಿ ಬೀಡು ಬಿಟ್ಟ ವಿಜಯಪುರ ನಗರ, ಸಿಂದಗಿ, ದೇವರಹಿಪ್ಪರಗಿ ಕ್ಷೇತ್ರದ ಸ್ಪರ್ಧಾಕಾಂಕ್ಷಿಗಳು

ಆಕಾಂಕ್ಷಿಗಳ ಚಿತ್ತ ಕೆಪಿಸಿಸಿ ಕಚೇರಿಯತ್ತ

Published:
Updated:
ಆಕಾಂಕ್ಷಿಗಳ ಚಿತ್ತ ಕೆಪಿಸಿಸಿ ಕಚೇರಿಯತ್ತ

ವಿಜಯಪುರ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ಮೇಲೆ ಕಣ್ಣಿಟ್ಟಿರುವ ಸ್ಪರ್ಧಾಕಾಂಕ್ಷಿಗಳು, ಇದೀಗ ತಮ್ಮ ಚಿತ್ತವನ್ನು ಕೆಪಿಸಿಸಿ ಕಚೇರಿಯತ್ತ ಹರಿಸಿದ್ದಾರೆ.

ಕಾಂಗ್ರೆಸ್‌ನಿಂದ ಸ್ಪರ್ಧೆ ಬಯಸುವವರು ಮಾರ್ಚ್‌ 10ರ ಶನಿವಾರದೊಳಗೆ, ನಿಗದಿತ ಶುಲ್ಕ ತುಂಬಿ ತಮ್ಮ ಸ್ವವಿವರದ ಅರ್ಜಿ ಸಲ್ಲಿಸಬೇಕು ಎಂಬ ಕೆಪಿಸಿಸಿ ಸೂಚನೆ ಪಾಲಿಸಲು, ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿನ ಆಕಾಂಕ್ಷಿಗಳು ಇದೀಗ ಬೆಂಗಳೂರಿಗೆ ದೌಡಾಯಿಸಿದ್ದಾರೆ.

2013ರ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ‘ಕೈ’ ಮೇಲುಗೈ ದಾಖಲಿಸಿತ್ತು. ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಕಮಲ ಅರಳಿತ್ತು.

ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಜೆಡಿಎಸ್‌ಗೆ ಸೇರ್ಪಡೆಯಾಗಿದ್ದರಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಲು ತೀವ್ರ ಪೈಪೋಟಿ ಈ ಕ್ಷೇತ್ರದಲ್ಲಿ ನಡೆದಿದೆ. ಶಾಸಕರಿಲ್ಲದ ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲೂ ‘ಕೈ’ ಹುರಿಯಾಳಾಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಶುಭ ಶುಕ್ರವಾರ...: ಫೆಬ್ರುವರಿ ಅಂತ್ಯದಿಂದಲೇ ಕೆಪಿಸಿಸಿ ಕಚೇರಿಯಲ್ಲಿ ಅರ್ಜಿ ವಿತರಣೆ, ಭರ್ತಿ ಮಾಡಿದ ಅರ್ಜಿಗಳ ಸ್ವೀಕಾರ ಪ್ರಕ್ರಿಯೆ ಆರಂಭಗೊಂಡಿದ್ದರೂ; ಅರ್ಜಿ ಸಲ್ಲಿಸಿದವರ ಸಂಖ್ಯೆ ಕಡಿಮೆಯಿತ್ತು. ಕೊನೆ ದಿನ ಸಮೀಪಿಸಿದ್ದರಿಂದ ಗುರುವಾರದಿಂದ ಅರ್ಜಿ ಭರ್ತಿ ಮಾಡಿ ಸಲ್ಲಿಸುತ್ತಿರುವ ಆಕಾಂಕ್ಷಿಗಳ ಸಂಖ್ಯೆ ದಿಢೀರನೆ ಏರಿಕೆಯಾಗಿದೆ.

‘ಶುಭ ಶುಕ್ರವಾರ’ದಲ್ಲಿ ನಂಬಿಕೆ ಹೊಂದಿರುವ ಅಪಾರ ಸಂಖ್ಯೆಯ ಆಕಾಂಕ್ಷಿಗಳು ಅರ್ಜಿ ಸಲ್ಲಿಸಲು ಕೆಪಿಸಿಸಿ ಕಚೇರಿಗೆ ಜಮಾಯಿಸಿದ್ದರಿಂದ ದಟ್ಟಣೆ ಉಂಟಾಗಿತ್ತು. ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದರು ಎಂದು ಕೆಪಿಸಿಸಿ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಡಾ.ಮಕ್ಬೂಲ್‌ ಎಸ್‌.ಬಾಗವಾನ ಕಾರ್ಯವೈಖರಿ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿರುವ ಏಳು ಮಂದಿಯ ಗುಂಪು ಸೇರಿದಂತೆ ಹಲವರು ಆಕಾಂಕ್ಷಿಗಳಾಗಿ ಶುಕ್ರವಾರ ಅರ್ಜಿ ಸಲ್ಲಿಸಿದ್ದಾರೆ. ನಿಖರ ಮಾಹಿತಿ ಲಭ್ಯವಿಲ್ಲ. ಎಲ್ಲ ಪ್ರಕ್ರಿಯೆ ಮುಗಿದ ಬಳಿಕ ಸ್ಪಷ್ಟ ಮಾಹಿತಿ ಒದಗಿಸುವುದಾಗಿ ಕೆಪಿಸಿಸಿ ತಿಳಿಸಿದೆ.

ವಿಜಯಪುರ ನಗರ, ದೇವರಹಿಪ್ಪರಗಿ, ಸಿಂದಗಿ ವಿಧಾನಸಭಾ ಕ್ಷೇತ್ರಕ್ಕೆ ಹೆಚ್ಚು ಅರ್ಜಿ ಸಲ್ಲಿಕೆಯಾಗಿವೆ. ನಗರ ಕ್ಷೇತ್ರದಲ್ಲಿ ಬಾಗವಾನಗೆ ಟಿಕೆಟ್‌ ತಪ್ಪಿಸಿಯೇ ಸಿದ್ಧ ಎಂಬ ಅಚಲ ನಿರ್ಣಯ ಮಾಡಿಕೊಂಡಿರುವ ಆಕಾಂಕ್ಷಿಗಳ ತಂಡ, ಇದೇ ಸಂದರ್ಭ ಪ್ರಮುಖರನ್ನು ಭೇಟಿಯಾಗಿ ತಮ್ಮ ಅಹವಾಲು ಸಲ್ಲಿಸಲು ಯತ್ನಿಸಿದೆ ಎಂಬುದು ತಿಳಿದು ಬಂದಿದೆ.

ತಮ್ಮ ತಮ್ಮ ಬೆಂಬಲಿಗರ ಜತೆ ಅರ್ಜಿ ಸಲ್ಲಿಸಲು ಬೆಂಗಳೂರಿಗೆ ತೆರಳಿರುವ ಸ್ಪರ್ಧಾಕಾಂಕ್ಷಿಗಳು, ಅದೇ ಹುಮ್ಮಸ್ಸಿನಲ್ಲಿ ತಮ್ಮವರ ಜತೆಯೇ ಕಾಂಗ್ರೆಸ್‌ ವರಿಷ್ಠರನ್ನು ಭೇಟಿಯಾಗಿ ಟಿಕೆಟ್‌ ಲಾಬಿ ನಡೆಸಿದ್ದಾರೆ ಎನ್ನಲಾಗಿದೆ.

**

ನಾಲ್ಕು ವಿಭಾಗ...

‘ಕೆಪಿಸಿಸಿ ಕಚೇರಿಯಲ್ಲಿ ನಾಲ್ಕು ವಿಭಾಗ ತೆರೆಯಲಾಗಿದೆ. ಪರಿಶಿಷ್ಟ ಜಾತಿ, ಪಂಗಡಕ್ಕೆ ಮೀಸಲಿರುವ ವಿಧಾನಸಭಾ ಕ್ಷೇತ್ರಗಳ ಸ್ಪರ್ಧಾಕಾಂಕ್ಷಿ ಪುರುಷರು, ಮಹಿಳೆಯರಿಂದ ಅರ್ಜಿ ಪಡೆಯಲು ಪ್ರತ್ಯೇಕ ಕೌಂಟರ್ ಆರಂಭಿಸಲಾಗಿದೆ. ಇದೇ ರೀತಿ ಸಾಮಾನ್ಯ ವರ್ಗದ ಕ್ಷೇತ್ರಗಳ ಸ್ಪರ್ಧಾಕಾಂಕ್ಷಿ ಪುರುಷ–ಮಹಿಳೆಯರಿಂದ ಅರ್ಜಿ ಪಡೆಯಲೂ ಪ್ರತ್ಯೇಕ ವಿಭಾಗ ತೆರೆಯಲಾಗಿದೆ.

ನಾನು ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರದ ಹುರಿಯಾಳಾಗಿ ಬುಧವಾರವೇ ಅರ್ಜಿ ಕೊಟ್ಟೆ. ಹೆಚ್ಚಿನ ದಟ್ಟಣೆಯಿರಲಿಲ್ಲ. ಮಧುಸೂದನ್‌ ಮಿಸ್ತ್ರಿ ನೇತೃತ್ವದ ತಂಡವು ಯಾವುದೇ ಪ್ರಶ್ನೆ, ಸಂದರ್ಶನ ನಡೆಸಲಿಲ್ಲ. ಗುರುವಾರ ಅರ್ಜಿ ಕೊಟ್ಟವರ ಬಳಿಯಿಂದ ಸಮಗ್ರ ಮಾಹಿತಿ ಕಲೆ ಹಾಕಲಾರಂಭಿಸಿದೆ ಎಂಬುದು ನಮಗೂ ತಿಳಿಯಿತು’ ಎಂದು ಹೆಸರು ಬಹಿರಂಗಪಡಿಸಲಿಚ್ಚಿಸದ ಆಕಾಂಕ್ಷಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಒಳ ಮೀಸಲು...

ಕಾಂಗ್ರೆಸ್‌ನ ಆಂತರಿಕ ಸಿದ್ಧಾಂತದಂತೆ ಪ್ರತಿ ಜಿಲ್ಲೆಯ ವ್ಯಾಪ್ತಿಯಲ್ಲೂ ಎರಡು ಕ್ಷೇತ್ರಗಳನ್ನು ಮೀಸಲಿಡುವುದು ವಾಡಿಕೆ. ಒಂದು ಅಲ್ಪಸಂಖ್ಯಾತರ ಕೋಟಾ. ಇನ್ನೊಂದು ಹಿಂದುಳಿದ ವರ್ಗಗಳಿಗೆ ಮೀಸಲು. ಈ ನೀತಿಯಡಿಯೇ ವಿಜಯಪುರ ನಗರ ವಿಧಾನಸಭಾ ಕ್ಷೇತ್ರ ಅಲ್ಪಸಂಖ್ಯಾತ ವರ್ಗದ ಅಭ್ಯರ್ಥಿಗೆ ಮೀಸಲಿದ್ದರೆ, ಸಿಂದಗಿ ಹಿಂದುಳಿದ ವರ್ಗದ ಅಭ್ಯರ್ಥಿಗೆ ಮೀಸಲಾಗಿದೆ.

ಸಿಂದಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಮ್ಮೆಯೂ ಕುರುಬ ಸಮಾಜದವರು ಶಾಸಕರಾಗಿ ಆಯ್ಕೆಯಾಗಿಲ್ಲ ಎಂಬ ಜಾತಿ ಸಮೀಕರಣ ಸೂತ್ರಕ್ಕೆ ಮೊರೆ ಹೋಗಿರುವ ಕೆಪಿಸಿಸಿ, ಈ ಬಾರಿ ಕುರುಬ ಸಮುದಾಯಕ್ಕೆ ಟಿಕೆಟ್‌ ನೀಡುವ ಕುರಿತಂತೆ ಆಂತರಿಕವಾಗಿ ಚರ್ಚಿಸಿದೆ. ಇದರ ಸುಳಿವರಿತಿರುವ ಸ್ಪರ್ಧಾಕಾಂಕ್ಷಿಗಳು ‘ಕೈ’ ಟಿಕೆಟ್‌ಗಾಗಿ ತೀವ್ರ ಪೈಪೋಟಿ ನಡೆಸಲಾರಂಭಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry