‘ಸುಂದರಬನ’ ಎಂದರಷ್ಟೇ ಸಾಕೆ?

7

‘ಸುಂದರಬನ’ ಎಂದರಷ್ಟೇ ಸಾಕೆ?

Published:
Updated:
‘ಸುಂದರಬನ’ ಎಂದರಷ್ಟೇ ಸಾಕೆ?

ಬಂಗಾಳ ಕೊಲ್ಲಿಯ ಜಲರಾಶಿಯ ಮೇಲೆ ನಿಧಾನವಾಗಿ ಚಲಿಸುತ್ತಿರುವ ಯಾಂತ್ರೀಕೃತ ಫೆರ್‍ರಿ ದೋಣಿ. ಹಿತವಾಗಿ ಬೀಸುತ್ತಿರುವ ತಂಗಾಳಿ. ದೋಣಿಯ ಮೇಲ್ಮಹಡಿಯಲ್ಲಿ ಕುರ್ಚಿಯಲ್ಲಿ ಆಸೀನರಾಗಿ, ಕೈಯಲ್ಲಿ ಕುರುಕಲು ತಿಂಡಿಯೊಂದಿಗೆ ಬಿಸಿ ಚಹಾದ ಕಪ್ ಇದ್ದರೆ ಅದು ಪ್ರಕೃತಿಯ ಸೊಬಗನ್ನು ಆಸ್ವಾದಿಸಲು ಹೇಳಿ ಮಾಡಿಸಿದ ವಾತಾವರಣ...

ಎತ್ತ ನೋಡಿದರೂ ನೀಲ ಜಲ, ಹಚ್ಚಹಸಿರಿನ ಮರಗಳುಳ್ಳ ದ್ವೀಪಗಳು, ಅಲ್ಲಲ್ಲಿ ಚಿಕ್ಕ–ದೊಡ್ಡ ಕಡಲುಗಾಲುವೆಗಳು, ಕಪ್ಪು-ಬೂದು ಬಣ್ಣದ ಜವುಗು ಮಣ್ಣಿನಲ್ಲಿ ಮೂಡಿರುವ ಯಾವುದೋ ಕಾಡು ಪ್ರಾಣಿಯ ಹೆಜ್ಜೆ ಗುರುತುಗಳು, ಸಮುದ್ರದ ಭರತ ಸಮಯದಲ್ಲಿ ಮೇಲೆ ತೇಲುತ್ತಿದ್ದ ದೋಣಿಯು ನೀರಿಳಿದಾಗ ಆ ಜವುಗು ಮಣ್ಣಿನಲ್ಲಿ ಮೂಡಿಸಿದ ಅಚ್ಚು, ನೀರಿನಲ್ಲಿ ಅವಿರತವಾಗಿ ತೇಲಿ ಬರುತ್ತಿರುವ ಹಳದಿ ಬಣ್ಣದ ಒಣ ಎಲೆಗಳ ಸಾಲು, ಅಲ್ಲಲ್ಲಿ ಮಿಂಚಿ ಮರೆಯಾಗುವ ಶ್ವೇತಸುಂದರಿ ಜೆಲ್ ಫಿಷ್‌ಗಳು, ಅದೃಷ್ಟವಿದ್ದರೆ  ಕಾಣಸಿಗುವ ಡಾಲ್ಫಿನ್‌ಗಳು, ನಿಂತಲ್ಲಿಂದ ಸೊಯ್ಯನೆ ಬಲೆಬೀಸುವ ಬೆಸ್ತರು, ಮೀನು ಹಿಡಿಯುವವರ ಪುಟ್ಟ ದೋಣಿಗಳು, ಸರಕು ಸಾಗಣೆಯ ಹಡಗುಗಳು, ಜನವಸತಿ ಇರುವ ಕೆಲವು ದ್ವೀಪಗಳಲ್ಲಿನ ಹುಲ್ಲಿನ ಗುಡಿಸಲುಗಳು, ಚಿಕ್ಕ–ದೊಡ್ಡ ಮನೆ ಅಥವಾ ಕಾಟೇಜುಗಳು, ಒಂದೆರಡು ರೆಸಾರ್ಟ್‌ಗಳು... ಇವೆಲ್ಲವನ್ನೂ ಗಮನಿಸುವ ಗಡಿ ಭದ್ರತಾ ಪಡೆಯವರ ದೋಣಿಗಳು, ಅರಣ್ಯ ಇಲಾಖೆಯ ಕಚೇರಿಗಳು... ಹೀಗೆ  ಕಣ್ಣು, ಮನಸ್ಸು ದಣಿಯುವಷ್ಟು ನೋಡಿದರೂ ಮುಗಿಯದು ಪ್ರಕೃತಿಯ ಸೊಬಗಿನ ಪಯಣ. ಇಷ್ಟು ಸುಂದರವಾದ ಸ್ಥಳ ಇರುವುದೆಲ್ಲಿ ಎಂಬ ಪ್ರಶ್ನೆಗೆ ಉತ್ತರ ‘ಸುಂದರಬನ’.

ಭಾರತ ಹಾಗೂ ಬಾಂಗ್ಲಾದೇಶಗಳಲ್ಲಿ ಹರಡಿಕೊಂಡಿರುವ ಸುಂದರಬನವು ಪ್ರಪಂಚದಲ್ಲಿಯೇ ಅತಿ ವಿಸ್ತಾರವಾದ ನದಿ ಮುಖಜಭೂಮಿ. ಗಂಗಾ, ಬ್ರಹ್ಮಪುತ್ರಾ, ಕೆಲವು ಉಪನದಿಗಳು ಬಂಗಾಳಕೊಲ್ಲಿಯನ್ನು ಸೇರುವ ತಾಣವಿದು. ಪ್ರಪಂಚದಲ್ಲೇ ಅತಿ ಹೆಚ್ಚು ಪ್ರಭೇದಗಳ ಮ್ಯಾಂಗ್ರೋವ್ ಸಸ್ಯವರ್ಗವನ್ನು ಹೊಂದಿರುವ ಪ್ರದೇಶವಾದ ಸುಂದರಬನವು ಪಶ್ಚಿಮ ಬಂಗಾಳ ರಾಜ್ಯದ ಕೋಲ್ಕತ್ತಾದಿಂದ 130 ಕಿ.ಮೀ ದೂರದಲ್ಲಿದೆ. ಸ್ಥಳೀಯ ಅರಣ್ಯ ಇಲಾಖೆಯ ಮಾಹಿತಿ ಪ್ರಕಾರ ಸುಂದರಬನದ ಒಟ್ಟು ವಿಸ್ತಾರ 29 ಸಾವಿರ ಚದರ ಕಿ.ಮೀ. ಇದರಲ್ಲಿ 9,630 ಚದರ ಕಿ.ಮೀ ಪ್ರದೇಶವು ಭಾರತದ ಸುಪರ್ದಿಯಲ್ಲಿದೆ. ಇದನ್ನು ರಾಷ್ಟ್ರೀಯ ಉದ್ಯಾನವೆಂದು 1984ರಲ್ಲಿ ಘೋಷಿಸಲಾಯಿತು. ಉಳಿದ ಭಾಗವು ಬಾಂಗ್ಲಾದೇಶದ ಅಧೀನದಲ್ಲಿದೆ. ‘ಬುರಿದಾಬ್ರಿ’ ಎಂಬಲ್ಲಿ, ‘ರಾಯ್ ಮಂಗಲ್’ ನದಿಯಾಚೆಗಿನ ಭಾಗವು ಬಾಂಗ್ಲಾದೇಶಕ್ಕೆ ಸೇರುತ್ತದೆ.

ಬನದಲ್ಲಿ ಕಂಡ ಬಂಗಾಳದ ಹುಲಿ

ನದಿಗಳು ತರುವ ಸಿಹಿನೀರು ಹಾಗೂ ಸಮುದ್ರದ ಉಪ್ಪುನೀರಿನ ಮಿಶ್ರಣ, ಸಮುದ್ರದ ಭರತ-ಇಳಿತಗಳಿಂದಾಗುವ ವಿಶಿಷ್ಟ ಸನ್ನಿವೇಶಗಳಿಂದಾಗಿ ಇಲ್ಲಿನ ಪರಿಸರದಲ್ಲಿ ಬೆಳೆಯುವ  ಮ್ಯಾಂಗ್ರೋವ್ ಅರಣ್ಯ ವಿಭಿನ್ನವಾಗಿದೆ. ಇಲ್ಲಿನ ಮರಗಳಲ್ಲಿ ‘ಉಸಿರಾಡುವ ಬೇರು’ಗಳಿರುತ್ತವೆ. ನೆಲದಿಂದ ಮೇಲೇರುವ ಬಿಳಲಿನಾಕಾರದ ಅಸಂಖ್ಯ ಗಟ್ಟಿ ಬೇರುಗಳಿರುವುದು ಮ್ಯಾಂಗ್ರೋವ್ ಕಾಡುಗಳ ವೈಶಿಷ್ಟ್ಯ. ಸಮುದ್ರದ ಭರತದ ಸಮಯದಲ್ಲಿ ನೀರಿನಿಂದ ಆವೃತವಾಗುವ ಬೇರುಗಳು ಇಳಿತದ ಸಮಯದಲ್ಲಿ ಆಮ್ಲಜನಕ ಉಸಿರಾಡುತ್ತವೆ. ನದಿ ಮುಖಜ ಭೂಮಿ ಅಥವಾ ಡೆಲ್ಟಾ ಪ್ರದೇಶಗಳೆಂದು ಕರೆಯಲಾಗುವ ಅಂಟಾದ ಜೌಗು ಮಣ್ಣಿನಲ್ಲಿ ‘ಸುಂದರಿ’ ಎಂಬ ಮರಗಳು ಹೆಚ್ಚಾಗಿ ಕಂಡುಬರುವುದರಿಂದ ಈ ಪ್ರದೇಶವನ್ನು ‘ಸುಂದರಬನ’ ಎಂದು ಕರೆಯಲಾಗುತ್ತದೆ. ‘ಸಮಂದರ್ ಬನ್’ ಅಥವಾ ಸಮುದ್ರದಲ್ಲಿರುವ ವನ ಎಂಬ ಕಾರಣದಿಂದಲೂ, ಸುಂದರವಾಗಿ ಇರುವ ವನವಾದುದರಿಂದಲೂ ‘ಸುಂದರ್ ಬನ್’ ಎಂಬ ಹೆಸರು ಬಂದಿದೆ ಎನ್ನಲಾಗುತ್ತದೆ. ‘ಸುಂದರ್ ಬನ್’  ಯುನೆಸ್ಕೊದ ವಿಶ್ವ ಪಾರಂಪರಿಕ ತಾಣವಾಗಿ ಗುರುತಿಸಲ್ಪಟ್ಟಿದೆ.

ಸುಂದರಬನದ ಮರಗಳು ಗಟ್ಟಿಯಾಗಿದ್ದು, ಪೀಠೋಪಕರಣಗಳ ತಯಾರಿಕೆ ಮತ್ತು ದೋಣಿಗಳ ನಿರ್ಮಾಣಕ್ಕೆ ಉಪಯೋಗವಾಗುತ್ತದೆ. ಆಹಾರವಾಗಿ ಬಳಸಬಹುದಾದ ಹಣ್ಣುಗಳನ್ನು ಬಿಡುವ ಮರಗಳು ಮ್ಯಾಂಗ್ರೋವ್ ಕಾಡಿನಲ್ಲಿ ಬಲು ಕಡಿಮೆ. ಹೆಚ್ಚಿನ ಹಣ್ಣುಗಳು ರುಚಿಯಿಲ್ಲದವು ಅಥವಾ ವಿಷಯುಕ್ತ. ಸುಂದರಿ, ಗೋಲಿಪತ್ತಾ, ಢುಂಡುಲ್, ಕಂಕ್ರಾ, ಬೈನ, ಗೇವಾ, ನೀಪಾ ಇತ್ಯಾದಿ ಹಲವಾರು ಪ್ರಭೇದದ ಮರಗಳಿವೆ. ನೂರಾರು ಹುಲ್ಲುವರ್ಗದ ಸಸ್ಯಗಳಿವೆ. ಮಣ್ಣನ್ನು ಹಿಡಿದಿಟ್ಟು ಕಡಲ ಕೊರೆತವನ್ನು ತಡೆಯುವ ಸುಂದರಬನದಲ್ಲಿ ಬಹಳಷ್ಟು ಜೀವಸಂಕುಲಗಳು ಆಶ್ರಯ ಪಡೆದಿವೆ. ಈ ಅರಣ್ಯಗಳಲ್ಲಿ ಬಂಗಾಳದ ‘ರಾಯಲ್ ಟೈಗರ್’ ತಳಿಯ ನೂರಾರು ಹುಲಿಗಳು, ಕಾಡುಹಂದಿ, ಜಿಂಕೆ, ಮೊಸಳೆ, ಮಂಗ, ವಿವಿಧ ಹಾವುಗಳು, ಕಡಲಾಮೆ, ಮಾನಿಟರ್ ಹಲ್ಲಿ ಹಾಗೂ ವಿಶಿಷ್ಟ ಪಕ್ಷಿಗಳಿವೆ. ಸುಂದರಬನದ ಸುಜನ್ ಕಾಲಿ, ಝಿಲಾ, ದೊ ಬಂಕಿ ರಿಸರ್ವ್ ಮೊದಲಾದ ದ್ವೀಪಗಳಲ್ಲಿ ಅರಣ್ಯ ಇಲಾಖೆಯವರ ಮ್ಯೂಸಿಯಂನಲ್ಲಿ ಸ್ಥಳೀಯ ಜೀವವೈವಿಧ್ಯದ ಬಗ್ಗೆ ಬಹಳಷ್ಟು ಮಾಹಿತಿ ಲಭ್ಯ.

ಭಾರತದ ಭಾಗದಲ್ಲಿರುವ ಸುಂದರಬನದಲ್ಲಿ 54 ಚಿಕ್ಕಪುಟ್ಟ ದ್ವೀಪ ಸಮೂಹಗಳಿವೆ. ಹೆಚ್ಚಿನ ದ್ವೀಪಗಳು ನಿರ್ಜನವಾಗಿದ್ದು ಅರಣ್ಯ ಇಲಾಖೆಯ ಸ್ವಾಧೀನದಲ್ಲಿವೆ. ಬೆರಳೆಣಿಕೆಯ  ದ್ವೀಪಗಳಲ್ಲಿ ಮಾತ್ರ ಜನವಸತಿಯಿದೆ. ಇನ್ನು ಕೆಲವು ದ್ವೀಪಗಳಲ್ಲಿ ಜನವಸತಿಯಿಲ್ಲ. ಆದರೆ ಅರಣ್ಯ ಇಲಾಖೆಯವರ ಅನುಮತಿ ಪಡೆದು, ವರ್ಷದ ನಿರ್ದಿಷ್ಟ ತಿಂಗಳಲ್ಲಿ ಮಾತ್ರ, ಜೇನು ಸಂಗ್ರಹಿಸಲು ಅರಣ್ಯದೊಳಕ್ಕೆ ಹೋಗಲು ಸ್ಥಳೀಯರಿಗೆ ಅವಕಾಶವಿದೆ. ಕೆಲವು ದ್ವೀಪಗಳಲ್ಲಿ ಮೀನುಗಾರಿಕೆಗೆ ಅನುಮತಿ ಇದೆ. ದ್ವೀಪಗಳಲ್ಲಿ ನರಭಕ್ಷಕ ಹುಲಿಗಳಿರುವುದರಿಂದ ಜೀವವಿಮೆ ಮಾಡಿಯೇ ಕಾಡಿಗೆ ಹೋಗಲು ಅನುಮತಿ ಕೊಡುವ ಪದ್ಧತಿಯಂತೆ! ಇಲ್ಲಿನ ಜನ ಹುಲಿಯನ್ನು ಕಾಡಿನ ರಾಜನಾದ ‘ದಕ್ಷೀನ್ ರೇ’ ಎಂದೂ, ತಮ್ಮನ್ನು ರಕ್ಷಿಸುವ ಮಾತೆಯಾಗಿ ಬನದೇವಿಯನ್ನೂ ಭಯ-ಭಕ್ತಿಯಿಂದ ಆರಾಧಿಸುತ್ತಾರೆ. ಜೇನು ಸಂಗ್ರಹಣೆಗಾಗಿ ಕಾಡಿಗೆ ತೆರಳುವ ಮೊದಲು, ಬನದೇವಿಗೆ ಪೂಜೆ ಸಲ್ಲಿಸಿ ಹೊರಡುವುದು ಅವರ ಸಂಪ್ರದಾಯ.

ಹುಲಿಗಳು ನೀರಿನಲ್ಲಿ ಈಜುತ್ತಾ ಒಂದೆಡೆಯಿಂದ ಇನ್ನೊಂದೆಡೆಗೆ ಸಾಗುವುದು ಸಾಮಾನ್ಯ. ನಾಡದೋಣಿಯಲ್ಲಿ ಮೀನುಗಾರಿಕೆ ನಡೆಸುವ ಹಾಗೂ ಜೇನು ಸಂಗ್ರಹಕ್ಕಾಗಿ ಕಾಡಿಗೆ ತೆರಳುವವರಲ್ಲಿ ಪ್ರತಿವರ್ಷ ಕನಿಷ್ಠ 10 ಮಂದಿ ಹುಲಿಗೆ ಆಹಾರವಾಗುತ್ತಾರಂತೆ! ನಮ್ಮ ಗೈಡ್ ಆಗಿದ್ದ ಎಳೆಯ ಯುವಕ, ನಾಡದೋಣಿಯಲ್ಲಿ ಮೀನುಗಾರಿಕೆಗೆ ಹೋಗಿದ್ದಾಗ ತನ್ನ ದೊಡ್ಡಪ್ಪನನ್ನು ಹುಲಿ ಎಳೆದುಕೊಂಡು ಹೋಗಿದ್ದುದನ್ನು ಕಣ್ಣಾರೆ ಕಂಡು ಪ್ರಜ್ಞಾಹೀನನಾಗಿದ್ದೆನೆಂದು ವಿವರಿಸಿದ!

ಬನದೇವಿಯ ಆಲಯ

ಬದಲಾದ ಹವಾಮಾನ, ಚಂಡಮಾರುತ, ಕಡಿಮೆಯಾದ ನಿಹಿನೀರಿನ ಸೆಲೆಗಳಿಂದಾಗಿ ಸುಂದರಬನದ ಸಹಜತೆ ಕಡಿಮೆಯಾಗುತ್ತಿದೆ. ಸಮುದ್ರದ ನೀರಿನ ಮಟ್ಟ ಏರುತ್ತಿರುವುದರಿಂದ ಮುಂದೆ ಕೆಲವು ದ್ವೀಪಗಳು ಮುಳುಗಡೆಯಾಗುವ ಸಾಧ್ಯತೆಗಳಿವೆ. ಬದಲಾಗುತ್ತಿರುವ ಜೀವನ ಶೈಲಿಯ ಅಗತ್ಯಗಳು, ಮನುಷ್ಯ ಮತ್ತು ಕಾಡು ಪ್ರಾಣಿಗಳ ನಡುವಿನ ಸಂಘರ್ಷದಿಂದಾಗಿ ಸುಂದರಬನ ದ್ವೀಪದ ಜನರ ಜೀವನ ನಿಜಕ್ಕೂ ತ್ರಾಸದಾಯಕ. ಪ್ರವಾಸಿಗರ ದೃಷ್ಟಿಯಲ್ಲಿ ಹಾಗೂ ಕ್ಯಾಮೆರಾ ಕಣ್ಣಿಗೆ ಬಲು ಅಂದವಾಗಿ ಕಾಣುವ ಸುಂದರಬನದ  ಹಿಂದೆ ಬಹಳಷ್ಟು ತಲ್ಲಣಗಳಿವೆ. ಸ್ಥಳೀಯ ನಿವಾಸಿಗಳಿಗೆ  ತೀರಾ ಅವಶ್ಯವಾದ ಔಷಧಿ, ಆಹಾರ, ಬಟ್ಟೆ ಇತ್ಯಾದಿ ಸಾಮಗ್ರಿಗಳನ್ನು ಪಡೆಯಲು ಮನೆಯಂಗಳದಿಂದಲೇ ದೋಣಿ ಪ್ರಯಾಣ ಮಾಡಬೇಕಾದ ಅನಿವಾರ್ಯತೆ. ಸಾಮಗ್ರಿಗಳನ್ನು ತಲೆಹೊರೆಯಲ್ಲಿಯೇ ತರಬೇಕು. ಹೆಚ್ಚಿನ ಮನೆಗಳು ಹುಲ್ಲಿನ ಗುಡಿಸಲುಗಳು. ವಿದ್ಯುಚ್ಚಕ್ತಿ ಇಲ್ಲದ ಹಳ್ಳಿಗಳೇ ಹೆಚ್ಚು. ಪ್ರತಿ ಮನೆಯ ಮುಂದೆ ಮಳೆನೀರಿನ ವಿಶಾಲವಾದ ಇಂಗುಗುಂಡಿ ಮಾಡಿ, ಸಿಹಿನೀರು ಪಡೆಯುವುದರೊಂದಿಗೆ ಮೀನು ವ್ಯವಸಾಯವನ್ನೂ ಮಾಡುತ್ತಾರೆ.

ಇಲ್ಲಿರುವ  ಪ್ರಾಥಮಿಕ ಶಾಲೆಗೆ ನಿಯೋಜಿತರಾಗುವ ಅಧ್ಯಾಪಕರು ಆದಷ್ಟು ಬೇಗನೆ ಬೇರೆಡೆಗೆ ವರ್ಗಾವಣೆಗೆ ಅರ್ಜಿ ಹಾಕುತ್ತಾರಂತೆ. ಹಾಗಾಗಿ ವಿದ್ಯಾಭ್ಯಾಸದ ಮಟ್ಟ ಕಡಿಮೆ. ಆರೋಗ್ಯ ಸಮಸ್ಯೆ, ಹೆರಿಗೆ ಇತ್ಯಾದಿಗಳಿಗೆ ಸನಿಹದ ನಗರಿಯಾದ ‘ಕ್ಯಾನಿಂಗ್’ನಲ್ಲಿರುವ ಆಸ್ಪತ್ರೆಗೆ ಹೋಗಲು ಕನಿಷ್ಠ ನಾಲ್ಕು ಗಂಟೆ ಬೇಕು! ಯಾವುದೇ ಸಮಯದಲ್ಲಿ ಸಮುದ್ರದಲ್ಲಿ ಏಳಬಹುದಾದ ಚಂಡಮಾರುತದ ಭೀತಿ ಹಾಗೂ ಕಾಡುಪ್ರಾಣಿಗಳ ಭಯ ಸದಾ ಇರುತ್ತದೆ. ಉಪ್ಪುನೀರಿನ ಜವುಗು ಮಣ್ಣಿನಲ್ಲಿ ಕೃಷಿ ಮಾಡಲಾಗದು. ಮೀನುಗಾರಿಕೆ, ಜೇನು ಸಂಗ್ರಹ ಹಾಗೂ ಸ್ವಲ್ಪಮಟ್ಟಿಗೆ ಪ್ರವಾಸೋದ್ಯಮ ಇಷ್ಟೇ ಅವರ ಆದಾಯದ ಮೂಲ. ಯುವಕರು ಸಹಜವಾಗಿಯೇ ಉದ್ಯೋಗ ಅರಸಿ ದೇಶದ ದೂರದ ನಗರಗಳಿಗೆ ವಲಸೆ ಹೋಗುತ್ತಾರೆ. ಇದು ಸುಂದರ ಬನದ ಇನ್ನೊಂದು ಮುಖ. ಆದರೂ, ಪ್ರವಾಸಿಯ ದೃಷ್ಟಿಯಿಂದ ಸುಂದರಬನಕ್ಕೆ ಭೇಟಿ ಕೊಡುವುದು ಬಹಳ ರೋಚಕವಾದ ಅವಿಸ್ಮರಣೀಯ ಅನುಭವ.

***

ತಲುಪುವುದು ಹೀಗೆ...

ಕೊಲ್ಕತ್ತಾ ನಗರದಿಂದ ಅರ್ಧ ಗಂಟೆ ರಸ್ತೆ ಮಾರ್ಗವಾಗಿ ಅಥವಾ ರೈಲಿನಲ್ಲಿ ಪ್ರಯಾಣಿಸಿ  10 ಕಿ.ಮೀ ದೂರದಲ್ಲಿರುವ ‘ಸಿಯಾಲ್ಡಾ’ ರೈಲು ನಿಲ್ದಾಣಕ್ಕೆ ಹೋಗಿ, ಅಲ್ಲಿಂದ 45 ಕಿ.ಮೀ ದೂರದಲ್ಲಿರುವ ‘ಕ್ಯಾನಿಂಗ್’ ಎಂಬ ರೈಲ್ವೇ ಸ್ಟೇಷನ್ ತಲುಪಬೇಕು. ಇದು ಸುಂದರಬನಕ್ಕೆ ಹತ್ತಿರವಾದ ರೈಲ್ವೇ ಸ್ಟೇಷನ್. ಇಲ್ಲಿಂದ ಆಟೋ ರಿಕ್ಷಾದಲ್ಲಿ ಅರ್ಧ ಗಂಟೆ ಪಯಣಿಸಿದರೆ ‘ಸಜನ್ ಕಾಲಿ’ ಜೆಟ್ಟಿ ಸಿಗುತ್ತದೆ. ಇಲ್ಲಿಂದ ಫೆರ್‍ರಿಗಳ ಮೂಲಕ ಪ್ರಯಾಣಿಸಿ ಸುಂದರಬನವನ್ನು ಕಣ್ತುಂಬಿಸಿಕೊಳ್ಳುತ್ತಾ, ಬಾಂಗ್ಲಾದೇಶದ ಗಡಿಯವರೆಗೂ ಪ್ರಯಾಣಿಸಬಹುದು. ಸ್ಥಳೀಯ ಪ್ಯಾಕೇಜ್‌ ಟೂರ್‌ನವರು ಅರಣ್ಯ ಇಲಾಖೆಯವರ ಪೂರ್ವಾನುಮತಿ, ಫೆರ್‍ರಿ ಪ್ರಯಾಣ, ಆಹಾರ, ವಾಸ್ತವ್ಯಕ್ಕೆ ವ್ಯವಸ್ಥೆ ಮಾಡುತ್ತಾರೆ. ಕೆಲವು ದ್ವೀಪಗಳಲ್ಲಿ ಮಾತ್ರ ವಾಸ್ತವ್ಯಕ್ಕೆ ರೆಸಾರ್ಟ್‌ಗಳಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry