ಮತ ನಿರ್ಣಯಕ್ಕೆ ಜಾತಿ ನಗಣ್ಯ, ಅಭ್ಯರ್ಥಿಯೇ ಅಗ್ರಮಾನ್ಯ

7
‘ದಕ್ಷ್‌’, ‘ಪ್ರಜಾವಾಣಿ’ ಸಮೀಕ್ಷೆಯಲ್ಲಿ ಮತದಾರರ ಮನದಾಳ

ಮತ ನಿರ್ಣಯಕ್ಕೆ ಜಾತಿ ನಗಣ್ಯ, ಅಭ್ಯರ್ಥಿಯೇ ಅಗ್ರಮಾನ್ಯ

Published:
Updated:
ಮತ ನಿರ್ಣಯಕ್ಕೆ ಜಾತಿ ನಗಣ್ಯ, ಅಭ್ಯರ್ಥಿಯೇ ಅಗ್ರಮಾನ್ಯ

ಬೆಂಗಳೂರು: ‘ಜಾತಿ ರಾಜಕಾರಣ’ ವಿಜೃಂಭಿಸಲು ಆರಂಭವಾದ ಮೇಲೆ ಲೋಕಸಭೆ, ವಿಧಾನಸಭೆ ಮಾತ್ರವಲ್ಲ, ಎಲ್ಲ ಸ್ತರಗಳ ಚುನಾವಣೆಯಲ್ಲೂ ಗೆಲುವಿಗೆ ‘ಜಾತಿ’ಯೇ ಮಾನದಂಡ ಎಂಬ ಅಭಿ‍ಪ್ರಾಯ ಸಾಮಾನ್ಯವಾಗಿದೆ. ಟಿಕೆಟ್‌ ನೀಡುವಾಗಲೂ ಜಾತಿಯೇ ಪ್ರಧಾನ ‘ಅರ್ಹತೆ’ಯಾಗುತ್ತಿರುವುದನ್ನೂ ನೋಡುತ್ತಿದ್ದೇವೆ.

‘ದಕ್ಷ್‌’ ಸಂಸ್ಥೆ ಜತೆಗೂಡಿ ‘ಪ್ರಜಾವಾಣಿ’ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಮಾತ್ರ ಇದಕ್ಕೆ ಭಿನ್ನವಾದ ಅಭಿಮತ ವ್ಯಕ್ತವಾಗಿದೆ. ಚುನಾವಣೆಯಲ್ಲಿ ಮತ ಹಾಕಲು ಜಾತಿ, ಧರ್ಮಕ್ಕಿಂತ ಅಭ್ಯರ್ಥಿ ಯಾರೆಂಬುದು ಪ್ರಮುಖವಾಗುತ್ತದೆ ಎಂದು ಜನರು ಹೇಳಿದ್ದಾರೆ.

ಅಭ್ಯರ್ಥಿಗೆ ಮತ ಹಾಕಲು ಜಾತಿಯೇ ನಿರ್ಣಾಯಕ ಎಂದು ಕೇವಲ ಶೇ 6ರಷ್ಟು ಜನರು ಪ್ರತಿಪಾದಿಸಿದ್ದರೆ, ಜಾತಿ ಪ್ರಮುಖವೇನಲ್ಲ ಎಂದು ಶೇ 64 ಜನರು ಹೇಳಿದ್ದಾರೆ. ಶೇ 30ರಷ್ಟು ಜನ ಮಾತ್ರ ‘ಜಾತಿ ವಾದ’ಕ್ಕೆ ಕಟ್ಟುಬಿದ್ದಿದ್ದಾರೆ. ಸಮೀಕ್ಷೆಯಲ್ಲಿ ಸಂಗ್ರಹಿಸಿದ ಮಾಹಿತಿಯನ್ನು ಒಗ್ಗೂಡಿಸಿ ಸರಾಸರಿ ಪ್ರಮಾಣವನ್ನು ವಿಭಜಿಸಿದಾಗ ಇಂತಹ ಅಭಿಪ್ರಾಯ ಹೊರಬಂದಿದೆ.

ಈ ವಿಷಯದಲ್ಲಿ ರಾಜ್ಯವ್ಯಾಪಿ ಏಕಮತದ ಧ್ವನಿಯಿಲ್ಲ. ಬೃಹತ್ ಬೆಂಗಳೂರು ಮಹಾನಗರ ವ್ಯಾಪ್ತಿಯನ್ನೂ (ಬಿಬಿಎಂಪಿ) ಒಳಗೊಂಡಂತೆ ರಾಜ್ಯವನ್ನು ಆರು ವಲಯಗಳಾಗಿ ವಿಂಗಡಿಸಿ ನೋಡಿದರೆ ಆಯಾ ಪ್ರಾದೇಶಿಕತೆಗೆ ತಕ್ಕುದಾದ ವೈವಿಧ್ಯಗಳಿರುವ ಜನಮತವೂ ಸಮೀಕ್ಷೆಯಲ್ಲಿ ಲಭ್ಯವಾಗಿದೆ. ಕೆಲವು ವಲಯಗಳಲ್ಲಿ  ಹೆಚ್ಚಿನವರು ಜಾತಿಗೆ ಮಣೆ ಹಾಕಿದ್ದಾರೆ. ಆದರೆ, ಮುಖ್ಯ, ಅತಿಮುಖ್ಯ ಎಂದು ಹೇಳಿದವರನ್ನು ಸೇರಿಸಿಕೊಂಡರೂ ಈ ಪ್ರಮಾಣ  ಶೇ 48ನ್ನೂ ದಾಟಿಲ್ಲ. ಹೈದರಾಬಾದ್ ಕರ್ನಾಟಕ ವಲಯದಲ್ಲಿ ಶೇ 81ರಷ್ಟು ಜನರು ಜಾತಿ ನಗಣ್ಯ ಎಂಬ ಭಾವನೆ ಹೊಂದಿದ್ದಾರೆ.

ಜಾತಿ–ಧರ್ಮ ಹಂಗು: ಎಲ್ಲ ಜಾತಿ, ಧರ್ಮ, ಭಾಷಿಕರನ್ನು ಒಡಲೊಳಗೆ ಇಟ್ಟುಕೊಂಡಿರುವ, ವಿದೇಶಿಯರೂ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಗೊಂಡಿರುವ ಬೆಂಗಳೂರು ‘ಮಿನಿ ಇಂಡಿಯಾ’ ದಂತೆ ಇರುವುದನ್ನು ಎಲ್ಲರೂ ಬಲ್ಲರು. ಇಲ್ಲಿಯೇ ಜಾತಿಯ ಹಂಗನ್ನು ಬಿಟ್ಟು ಜನ ಮತದಾನ ಮಾಡುತ್ತಾರೆ ಎಂದು ನಂಬಲಾಗಿದೆ.

ಆದರೆ, ಉಳಿದ ವಲಯಗಳಿಗೆ ಹೋಲಿಸಿದರೆ ಬಿಬಿಎಂಪಿ ವ್ಯಾಪ್ತಿಯ ಮತದಾರರು ಅಭ್ಯರ್ಥಿಯ ಜಾತಿ ಧರ್ಮದ ಪರ ಹೆಚ್ಚು ಒಲವು ಹೊಂದಿದ್ದಾರೆ. ಜಾತಿ ಅತಿಮುಖ್ಯ, ಮುಖ್ಯ ಎಂದು ಹೇಳಿದವರ ಪ್ರಮಾಣ ಶೇ 48 ರಷ್ಟಿದ್ದರೆ, ಅಭ್ಯರ್ಥಿಯ ಧರ್ಮ ಮುಖ್ಯ ಎಂದವರು ಶೇ 50ರಷ್ಟಿದ್ದಾರೆ.

ಜಾತಿ–ಧರ್ಮಕ್ಕೆ ಸೇರಿದ ಮಠಗಳು ಹೆಚ್ಚಿನ ಸಂಖ್ಯೆಯಲ್ಲಿರುವ, ಜಾತಿಯೇ ಮತದಾರರನ್ನು ಪ್ರಭಾವಿಸುವ ಶಕ್ತಿ ಎಂದು ಭಾವಿಸಲಾದ ಮಧ್ಯ ಕರ್ನಾಟಕ (ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ),ಮುಂಬೈ ಕರ್ನಾಟಕ(ಬೆಳಗಾವಿ, ವಿಜಯಪುರ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ) ಜಿಲ್ಲೆಗಳಲ್ಲಿ ಕೂಡ ಜಾತಿಯೇ ಪ್ರಧಾನವಾಗಿಲ್ಲ. ಮಧ್ಯ ಕರ್ನಾಟಕದಲ್ಲಿ ಜಾತಿ ಮತ್ತು ಧರ್ಮ ಮುಖ್ಯ ಎಂದವರ ಪ್ರಮಾಣ ಕ್ರಮವಾಗಿ ಶೇ 47, ಶೇ 50ರಷ್ಟಿದೆ. ಮುಂಬೈ ಕರ್ನಾಟಕದಲ್ಲಿ ಜಾತಿಗೆ ಶೇ 29 ಹಾಗೂ ಧರ್ಮಕ್ಕೆ ಶೇ 33ರಷ್ಟು ಜನ ಮಣೆ ಹಾಕಿದ್ದಾರೆ.

ಕರಾವಳಿ ಕರ್ನಾಟಕದಲ್ಲಿ ಜಾತಿ, ಧರ್ಮಕ್ಕೆ ಕ್ರಮವಾಗಿ ಶೇ 40 ಹಾಗೂ ಶೇ 49 ಜನ ಆದ್ಯತೆ ನೀಡುವುದಾಗಿ ಹೇಳಿದ್ದಾರೆ.

ಆದರೆ, ಮತಕ್ಕೆ ಜಾತಿಯೇ ಪ್ರಧಾನ ನೆಲೆಯಂತಿರುವ ಹಳೆ ಮೈಸೂರು ವಲಯದ ಮೈಸೂರು, ಹಾಸನ, ಮಂಡ್ಯ, ರಾಮನಗರ, ತುಮಕೂರು, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ಕೂಡ ಇದಕ್ಕೆ ವ್ಯತಿರಿಕ್ತ ಅಭಿಪ್ರಾಯ ಹೊರಬಂದಿದೆ. ಜಾತಿ ನಗಣ್ಯ ಎಂದು ಶೇ 52ರಷ್ಟು, ಧರ್ಮ ಮುಖ್ಯವಲ್ಲ ಎಂದು ಶೇ 63 ಜನರು ಪ್ರತಿಪಾದಿಸಿದ್ದಾರೆ.

ಶೇ 53 ಜನರಿಗೆ ಪಕ್ಷ ಮುಖ್ಯ: ಪಕ್ಷವನ್ನು ನೋಡಿ ಚುನಾವಣೆಯಲ್ಲಿ ಮತ ಹಾಕುತ್ತೀರಾ ಎಂಬ ಪ್ರಶ್ನೆಗೆ ಶೇ 53ರಷ್ಟು ಜನರು ಮುಖ್ಯ ಎಂದಿದ್ದರೆ, ಶೇ 14 ಜನ ಅತ್ಯಂತ ಮುಖ್ಯ ಎಂದಿದ್ದಾರೆ. ಪಕ್ಷ ನಗಣ್ಯ ಎಂದವರು ಶೇ 33ರಷ್ಟು ಜನರು ಮಾತ್ರ. ಇದು ಇಡೀ ರಾಜ್ಯದ ಲೆಕ್ಕಾಚಾರವಾದರೆ, ಬೇರೆ ಬೇರೆ ವಲಯಗಳಲ್ಲಿ ಬೇರೆ ತೆರನಾದ ಅಭಿಮತ ಹೊರಬಿದ್ದಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಶೇ 66, ಕರಾವಳಿ ಕರ್ನಾಟಕದಲ್ಲಿ ಶೇ 65, ಮುಂಬೈ ಕರ್ನಾಟಕದಲ್ಲಿ ಶೇ 58 ಜನ ಪಕ್ಷದ ಗುರುತೇ ಪ್ರಧಾನ ಎಂದು ಹೇಳಿದ್ದಾರೆ. ಆದರೆ, ಮಧ್ಯ ಕರ್ನಾಟಕದಲ್ಲಿ ಶೇ 48, ಹೈದರಾಬಾದ್ ಕರ್ನಾಟಕದಲ್ಲಿ ಶೇ 47, ಹಳೆ ಮೈಸೂರಿನಲ್ಲಿ ಶೇ 46 ಜನರು ಪಕ್ಷ ಮುಖ್ಯವಾಗುತ್ತದೆ ಎಂದಿದ್ದಾರೆ.

ಮುಖ್ಯಮಂತ್ರಿ ಯಾರಾಗುತ್ತಾರೆಂಬ ಗೊಡವೆಯಿಲ್ಲ

ಮುಖ್ಯಮಂತ್ರಿ ಅಭ್ಯರ್ಥಿ ಯಾರು? ನಿರ್ದಿಷ್ಟ ಪಕ್ಷ ಅಧಿಕಾರಕ್ಕೆ ಬಂದರೆ ಯಾರು ಮುಖ್ಯಮಂತ್ರಿಯಾಗುತ್ತಾರೆ ಎಂಬ ವಿಷಯ ಮತದಾರರಿಗೆ ಮುಖ್ಯವೇ ಅಲ್ಲ ಎಂಬ ಮಾಹಿತಿ ಸಮೀಕ್ಷೆಯಲ್ಲಿ ಲಭ್ಯವಾಗಿದೆ.

ಇಡೀ ರಾಜ್ಯದ ಸರಾಸರಿ ಲೆಕ್ಕದಲ್ಲಿ ಶೇ 58ರಷ್ಟು ಜನ ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂಬುದು ಮುಖ್ಯವೇ ಅಲ್ಲ ಎಂದು ಹೇಳಿದ್ದರೆ, ಶೇ 9ರಷ್ಟು ಜನ ಮಾತ್ರ ಯಾರು ಮುಖ್ಯಮಂತ್ರಿ ಅಭ್ಯರ್ಥಿ ಎಂಬುದೇ ಅತಿ ಮುಖ್ಯ ಎಂದು ಪ್ರತಿಪಾದಿಸಿದ್ದಾರೆ.

ಆದರೆ, ವಲಯವಾರು ಅಭಿಪ್ರಾಯಗಳಲ್ಲಿ ಭೇದವಿದೆ. ಬಿಬಿಎಂಪಿ ಹಾಗೂ ಮಧ್ಯ ಕರ್ನಾಟಕ ಭಾಗದಲ್ಲಿ ಮುಖ್ಯಮಂತ್ರಿ ವಿಷಯದ ಪರವಾಗಿ ಶೇ 55ರಷ್ಟು ಜನ ಮತ ಹಾಕಿದ್ದಾರೆ. ಕರಾವಳಿಯಲ್ಲಿ ಶೇ 57, ಹೈದರಾಬಾದ್ ಕರ್ನಾಟಕದಲ್ಲಿ ಶೇ 74 ಹಾಗೂ ಹಳೆ ಮೈಸೂರಿನಲ್ಲಿ ಶೇ 50 ಜನರು ಮುಖ್ಯಮಂತ್ರಿ ಯಾರೆಂಬುದು ಅಪ್ರಸ್ತುತ ಎಂಬ ನಿಲುವು ತಾಳಿದ್ದಾರೆ.

ಶೇ 86 ಜನರಿಗೆ ಅಭ್ಯರ್ಥಿಯೇ ಪ್ರಮುಖ

ಚುನಾವಣೆಯಲ್ಲಿ ಮತ ಹಾಕುವಾಗ ಅಭ್ಯರ್ಥಿ ಯಾರು, ಆತನ ಸಾಮರ್ಥ್ಯವೇನು ಎಂಬುದೇ ಮುಖ್ಯ ಎಂದು ಶೇ 68 ಜನರು ಪ್ರತಿಪಾದಿಸಿದ್ದಾರೆ. ಶೇ 18ರಷ್ಟು ಜನ ಅತಿ ಮುಖ್ಯ ಎಂದಿದ್ದಾರೆ. ಅಲ್ಲಿಗೆ ಶೇ 86ರಷ್ಟು ಮತದಾರರು ಅಭ್ಯರ್ಥಿಯ ಮುಖ ನೋಡಿ ಮಣೆ ಹಾಕುತ್ತಾರೆ ಎಂಬುದಾಗಿ ಸಮೀಕ್ಷೆ ವಿವರಿಸಿದೆ.

ಆರು ವಲಯಗಳ ಪೈಕಿ ಹಳೆ ಕರಾವಳಿ ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ಅಭ್ಯರ್ಥಿ ಮುಖ್ಯವಲ್ಲ ಎಂದು ಶೇ 24 ಜನರು ಹೇಳಿದ್ದರೆ, ಶೇ 76ರಷ್ಟು ಜನರು ಅಭ್ಯರ್ಥಿಯೇ ಮುಖ್ಯ ಎಂದು ಹೇಳಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಶೇ 88, ಮಧ್ಯ ಕರ್ನಾಟಕದಲ್ಲಿ ಶೇ 81, ಹೈದರಾಬಾದ್ ಕರ್ನಾಟಕದಲ್ಲಿ ಶೇ 92, ಮುಂಬೈ ಕರ್ನಾಟಕದಲ್ಲಿ ಶೇ 88 ಹಾಗೂ ಹಳೆ ಮೈಸೂರು ಭಾಗದಲ್ಲಿ ಶೇ 84ರಷ್ಟು ಜನ ಅಭ್ಯರ್ಥಿಯನ್ನು ನೋಡಿಯೇ ಮತ ಹಾಕುವುದಾಗಿ ತಿಳಿಸಿದ್ದಾರೆ.

*

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry