ಮಲ್ಯ ಆಸ್ಪತ್ರೆ, ವೈದ್ಯರಿಗೆ ಸಿಸಿಬಿ ನೋಟಿಸ್‌

7

ಮಲ್ಯ ಆಸ್ಪತ್ರೆ, ವೈದ್ಯರಿಗೆ ಸಿಸಿಬಿ ನೋಟಿಸ್‌

Published:
Updated:
ಮಲ್ಯ ಆಸ್ಪತ್ರೆ, ವೈದ್ಯರಿಗೆ ಸಿಸಿಬಿ ನೋಟಿಸ್‌

ಬೆಂಗಳೂರು: ವಿದ್ವತ್‌ ಮೇಲೆ ನಡೆದ ಹಲ್ಲೆ ಪ್ರಕರಣ ಸಂಬಂಧ ಮಲ್ಯ ಆಸ್ಪತ್ರೆ ಆಡಳಿತ ಮಂಡಳಿ ಹಾಗೂ ವೈದ್ಯ ಡಾ. ಆನಂದ್‌ ಅವರಿಗೆ ಸಿಸಿಬಿ ಪೊಲೀಸರು ನೋಟಿಸ್‌ ನೀಡಿದ್ದಾರೆ.

‘ಗಾಯಾಳು ವಿದ್ವತ್‌ಗೆ ಚಿಕಿತ್ಸೆ ನೀಡಿದ್ದ ಆನಂದ್‌, ವೈದ್ಯಕೀಯ ವರದಿಯನ್ನು ಸಿಸಿಬಿಗೆ ನೀಡಬೇಕಿತ್ತು. ಅದಕ್ಕೂ ಮುನ್ನವೇ ವರದಿಯನ್ನು ಮಾಧ್ಯಮಗಳಿಗೆ ನೀಡಿದ್ದಾರೆ. ಇದು ತನಿಖೆಯ ಮೇಲೆ ಪರಿಣಾಮ ಬೀರಿದ್ದು, ಹೀಗಾಗಿ ನೋಟಿಸ್‌ ನೀಡಿದ್ದೇವೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಶಾಸಕ ಎನ್‌.ಎ.ಹ್ಯಾರಿಸ್‌ ಅವರು ವೈದ್ಯಕೀಯ ವರದಿಯನ್ನು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ಆರೋಪಿ ನಲಪಾಡ್‌ ಹಾಗೂ ಆತನ ಸಹಚರರ ಜಾಮೀನು ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್‌ನಲ್ಲೂ ಈ ವಿಷಯ ಪ್ರಸ್ತಾಪವಾಗಿದೆ. ಹೀಗಾಗಿ ಆಸ್ಪತ್ರೆ ಆಡಳಿತ ಮಂಡಳಿ ಹಾಗೂ ವೈದ್ಯರ ಹೇಳಿಕೆಯ ಅವಶ್ಯಕತೆ ಇದೆ. ಜತೆಗೆ ಹ್ಯಾರಿಸ್‌ ಅವರಿಗೂ ನೋಟಿಸ್‌ ನೀಡುವ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಕೇಳಿದ್ದೇವೆ’ ಎಂದರು.

‘ನೋಟಿಸ್‌ಗೆ ಉತ್ತರಿಸಲು ಕಾಲಾವಕಾಶ ನೀಡಿದ್ದೇವೆ. ನಿಗದಿತ ದಿನದಂದು ಉತ್ತರ ಬಾರದಿದ್ದರೆ ಆಸ್ಪತ್ರೆಗೆ ಹೋಗಿ ವಿಚಾರಣೆಗೆ ಒಳಪಡಿಸಲಿದ್ದೇವೆ’ ಎಂದರು.

ಮೊಹಮದ್‌ ನಲಪಾಡ್‌ ಹೇಳಿಕೆ ಬಹಿರಂಗ: ಘಟನೆ ಸಂಬಂಧ ಕಬ್ಬನ್‌ ಪಾರ್ಕ್‌ ಪೊಲೀಸರಿಗೆ ನಲಪಾಡ್‌ ನೀಡಿರುವ ಹೇಳಿಕೆ ಬಹಿರಂಗವಾಗಿದೆ.

‘ನಾನು ಮೊಹಮದ್ ಹ್ಯಾರಿಸ್‌ ನಲಪಾಡ್‌ ಅಲಿಯಾಸ್‌ ಶಬ್ಬು. ಫೆ. 17ರಂದು ನಾನು ಮತ್ತು ನನ್ನ ಕಾರು ಚಾಲಕ ಅರುಣ್, ಸ್ನೇಹಿತರಾದ ಮಂಜುನಾಥ್‌, ಬಾಲಕೃಷ್ಣ, ಮೊಹಮ್ಮದ್ ಅಪ್ರಾಸ್, ಅಭಿಷೇಕ್‌ ಹಾಗೂ ನಫಿ ಊಟಕ್ಕೆಂದು ಫರ್ಜಿ ಕೆಫೆಗೆ ಹೋಗಿದ್ದೆವು. 23ರಿಂದ 24 ವರ್ಷದ ಅಪರಿಚಿತ ಹುಡುಗ (ವಿದ್ವತ್) ತನ್ನ ಸ್ನೇಹಿತರೊಂದಿಗೆ ನಿಂತುಕೊಂಡು ಮದ್ಯ ಕುಡಿಯುತ್ತಿದ್ದ. ನಾವು ಒಳಗೆ ಹೋದಾಗ ಆತ ಅರುಣ್‌ನನ್ನು ತಳ್ಳಿದ. ಅದನ್ನು ಪ್ರಶ್ನಿಸಿದ್ದಕ್ಕೆ ಜಗಳ ತೆಗೆದ. ನಾನು ಜಗಳ ಬಿಡಿಸಲು ಯತ್ನಿಸಿದೆ. ನನ್ನ ಜತೆಯೂ ಆ ಹುಡುಗ ಜಗಳವಾಡಲು ಆರಂಭಿಸಿದ. ಆಗ ಒಂದು ಏಟು ಹೊಡೆದೆ. ಆ ಹುಡುಗ ನನಗೆ ಹೊಡೆಯಲು ಬಂದ. ಅದನನ್ನು ಗಮನಿಸಿದ ಅರುಣ್‌ಕುಮಾರ್‌, ಐಸ್ ಕ್ಯೂಬ್ ಬಕೆಟ್‌ನಿಂದ ಆತನಿಗೆ ಹೊಡೆದ’ ಎಂಬುದು ಹೇಳಿಕೆಯಲ್ಲಿದೆ.

‘ಆತನ ಮೇಲೆ ನಫಿ ಹಾಗೂ ಶ್ರೀಕೃಷ್ಣ ಬಾಟಲಿಗಳನ್ನು ಎಸೆದರು. ಆತನ ಮುಖ, ಕಪಾಳ, ಎದೆ ಹಾಗೂ ಬೆನ್ನಿಗೆ ಮಂಜುನಾಥ್‌ ಹೊಡೆದ. ನಂತರ ನಾವೆಲ್ಲರೂ ಕೆಫೆಯಿಂದ ಹೊರಗೆ ಬಂದೆವು. ಕೆಲಹೊತ್ತು ಯು.ಬಿ ಸಿಟಿಯಲ್ಲೇ ಓಡಾಡಿ, ರಾತ್ರಿ 11.30ಕ್ಕೆ ದ್ವಾರ ಬಾಗಿಲು ಬಳಿ ಬಂದೆವು. ಅಪರಿಚಿತ ಹುಡುಗನನ್ನು ಮಲ್ಯ ಆಸ್ಪತ್ರೆಗೆ ದಾಖಲಿಸಿದ್ದ ಮಾಹಿತಿ ತಿಳಿದುಕೊಂಡು, ಅಲ್ಲಿಗೆ ಹೋದೆವು.’

‘ನಾವು ಹೋಗುವಷ್ಟರಲ್ಲೇ ಗಾಯಾಳು ಸಂಬಂಧಿಕರು ಹಾಗೂ ಇತರೆ ವ್ಯಕ್ತಿಗಳು ಅಲ್ಲಿ ಸೇರಿದ್ದರು. ನಮಗೆ ಗಾಯಾಳು ವ್ಯಕ್ತಿಯನ್ನು ಮಾತನಾಡಿಸಲು ಆಗದಿದ್ದರಿಂದ ವಾಪಸ್‌ ಬಂದಿದ್ದೇವೆ. ಈ ದಿನ (ಫೆ. 19) ನಾನು ಖುದ್ದು ಠಾಣೆಗೆ ಹಾಜರಾಗಿರುತ್ತೇನೆ. ನನ್ನನ್ನು ಜೊತೆಯಲ್ಲಿ ಕರೆದುಕೊಂಡು ಹೋದರೆ, ನಾವು ಗಲಾಟೆ ಮಾಡಿದ ಜಾಗವನ್ನು ತೊರಿಸುತ್ತೇನೆ’ ಎಂದು ನಲಪಾಡ್‌ ಹೇಳಿಕೆ ನೀಡಿದ್ದಾನೆ.

ಆಸ್ಪತ್ರೆಗೆ ಶಾಸಕ ಹ್ಯಾರಿಸ್‌ ಭೇಟಿ

ಮಲ್ಯ ಆಸ್ಪತ್ರೆಗೆ ಶಾಸಕ ಎನ್‌.ಎ.ಹ್ಯಾರಿಸ್‌ ಶನಿವಾರ ಸಂಜೆ ಭೇಟಿ ನೀಡಿದರು. ಅರ್ಧ ಗಂಟೆ ಆಸ್ಪತ್ರೆಯಲ್ಲಿದ್ದ ಅವರು, ನಂತರ ಹೊರಟು ಹೋದರು. ಈ ವೇಳೆ ಸುದ್ದಿಗಾರರ ಜತೆ ಮಾತನಾಡಲು ನಿರಾಕರಿಸಿದರು.

‘ಲೋಕಾಯುಕ್ತ ವಿಶ್ವನಾಥ್‌ ಶೆಟ್ಟಿ ಅವರ ಆರೋಗ್ಯ ವಿಚಾರಿಸಲು ಶಾಸಕರು ಬಂದಿದ್ದರು. ಬೇರೆ ಯಾವುದೇ ವಿಷಯ ಇರಲಿಲ್ಲ’ ಎಂದು ಅವರ ಬೆಂಬಲಿಗರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry