ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳು ಗಣಿಗಾರಿಕೆ ತಡೆದರೆ ನದಿ ಸುರಕ್ಷಿತ

ಪರಿಸರವಾದಿ ಸಿ.ಯತಿರಾಜು ಅಭಿಮತ
Last Updated 12 ಮಾರ್ಚ್ 2018, 7:27 IST
ಅಕ್ಷರ ಗಾತ್ರ

ಮೈಸೂರು: ಪ್ರಮುಖ ನದಿ ಪಾತ್ರಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಮರಳು ಗಣಿಗಾರಿಕೆಯನ್ನು ತಡೆದು, ಸಂರಕ್ಷಿತ ಪ್ರದೇಶವೆಂದು ಘೋಷಿಸುವ ಅಗತ್ಯವಿದೆ. ನದಿ, ಕೆರೆ ಸಂರಕ್ಷಿಸದೆ ಇದ್ದರೆ ಬರದಿಂದ ಮುಕ್ತಿ ಹೊಂದಲು ಸಾಧ್ಯವಿಲ್ಲ ಎಂದು ಪರಿಸರವಾದಿ ಸಿ.ಯತಿರಾಜು ಅಭಿಪ್ರಾಯಪಟ್ಟರು.

ಇಲ್ಲಿನ ಕಲಾಮಂದಿರದ ಮನೆಯಂಗಳದಲ್ಲಿ ಭಾನುವಾರ ಏರ್ಪಡಿಸಿದ್ದ ‘ಬರ ಮುಕ್ತ ಕರ್ನಾಟಕ’ ಸಮಾವೇಶದಲ್ಲಿ ಅವರು ಮಾತನಾಡಿದರು.

ನದಿ ಪಾತ್ರ ಹಾಗೂ ಜಲಾನಯನ ಪ್ರದೇಶ ಸಂರಕ್ಷಿಸುವ ತುರ್ತು ಅಗತ್ಯ ಎದುರಾಗಿದೆ. ಕೊಳಚೆ ನೀರಿನಿಂದ ನದಿಗಳು ಮಾಲಿನ್ಯಗೊಳ್ಳುತ್ತಿವೆ. ನದಿ ನೀರು ಸರಾಗವಾಗಿ ಹರಿಯುವಂತೆ ನೋಡಿಕೊಳ್ಳುವ ಹಾಗೂ ಪರಿಸರ ಮಲಿನ್ಯ ತಡೆಯುವ ಹೊಣೆಗಾರಿಕೆ ಸರ್ಕಾರದ ಮೇಲಿದೆ ಎಂದು ಹೇಳಿದರು.

ರಾಜ್ಯದಲ್ಲಿ 3,580 ಕೆರೆಗಳಿದ್ದು, 100 ಟಿಎಂಸಿ ಅಡಿ ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿವೆ. 4 ಲಕ್ಷ ಹೆಕ್ಟೇರ್‌ ಭೂಮಿಗೆ ನೀರು ಪೂರೈಕೆ ಮಾಡಬಹುದಾಗಿದೆ. 2015ರಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ 2,452 ಕೆರೆಗಳು ಬತ್ತಿಹೋಗಿವೆ. ಸಾವಿರಕ್ಕೂ ಹೆಚ್ಚು ಕೆರೆಗಳ ಸಂಗ್ರಹಣಾ ಸಾಮರ್ಥ್ಯ ಶೇ 50ರಷ್ಟು ಕುಸಿದಿದೆ. ಒಟ್ಟು ನೀರಾವರಿ ಪ್ರದೇಶದಲ್ಲಿ ಕೆರೆ ನೀರಿನ ಪಾಲು ಶೇ 4.4ಕ್ಕೆ ಸೀಮಿತವಾಗಿದೆ ಎಂದು ಮಾಹಿತಿ ನೀಡಿದರು.

ಸಹಜ ಬೇಸಾಯ ಶಾಲೆಯ ಡಾ.ಮಂಜುನಾಥ್‌, ‘ರಾಜ್ಯದ 11 ಲಕ್ಷ ಎಕರೆಯಲ್ಲಿ ಕಬ್ಬು ಬೆಳೆಯಲಾಗುತ್ತಿದೆ. ಸಕ್ಕರೆ ಉತ್ಪಾದನೆಯಲ್ಲಿ ರಾಜ್ಯವು ದೇಶದಲ್ಲಿಯೇ 3ನೇ ಸ್ಥಾನದಲ್ಲಿದೆ. ಒಂದು ಕೆ.ಜಿ. ಭತ್ತ ಬೆಳೆಯಲು 2,497 ಲೀಟರ್‌ ನೀರು ಹಾಗೂ ಒಂದು ಕೆ.ಜಿ. ಸಕ್ಕರೆಗೆ 884 ಲೀಟರ್ ನೀರಿನ ಅಗತ್ಯವಿದೆ. ಹೆಚ್ಚು ನೀರು ಬೇಡುವ ಕಬ್ಬು, ಭತ್ತಕ್ಕೆ ಪರ್ಯಾಯ ಬೆಳೆ ಬೆಳೆಯುವಂತೆ ರೈತರ ಮನವೊಲಿಸಬೇಕಿದೆ’ ಎಂದು ಅಭಿಪ್ರಾಯಪಟ್ಟರು.

‘900–1,200 ಮಿ.ಮೀ ಮಳೆ ಬೀಳುವ ಪ್ರದೇಶದಲ್ಲಿ ಅಡಿಕೆ ಚೆನ್ನಾಗಿ ಬೆಳೆಯುತ್ತದೆ. ಆದರೆ, 600 ಮಿ.ಮೀ ಮಳೆ ಬೀಳುವ ಪ್ರದೇಶವಾದ ಪಾವಗಡ ಹಾಗೂ ಶಿರಾ ತಾಲ್ಲೂಕು ವ್ಯಾಪ್ತಿಯಲ್ಲಿಯೂ ಅಡಿಕೆ ತೋಟಗಳಿವೆ. ಕೊಳವೆ ಬಾವಿ ಕೊರೆಸುವ ಸಾಮರ್ಥ್ಯ ಹೊಂದಿದ ರೈತರು ಅಂತರ್ಜಲವನ್ನು ಶೋಷಣೆ ಮಾಡುತ್ತಿದ್ದಾರೆ. ರಸಗೊಬ್ಬರ, ಕ್ರಿಮಿನಾಶಕಗಳು ಬರ ಪರಿಸ್ಥಿತಿಗೆ ಕೊಡುಗೆ ನೀಡಿವೆ. ಹೀಗಾಗಿ, ಮಳೆ ಪ್ರಮಾಣ ಆಧಾರಿತ ಬೆಳೆ ಬೆಳೆಯುವಂತೆ ರೈತರಲ್ಲಿ ಅರಿವು ಮೂಡಿಸುವ ಅಗತ್ಯವಿದೆ’ ಎಂದು ಪ್ರತಿಪಾದಿಸಿದರು.

ಪಶ್ಚಿಮ ಘಟ್ಟ ಸಂರಕ್ಷಣಾ ಸಮನ್ವಯ ಸಮಿತಿಯ ಶೇಖರ್ ಗೌಳೇರ್, ಸಮಗ್ರ ಸುಸ್ಥಿರ ಅಭಿವೃದ್ಧಿ ಸಮಿತಿ ಕೆ.ಎನ್‌.ಸೋಮಶೇಖರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT