ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಡುಕಿನ ಫಲ

Last Updated 12 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಒಮ್ಮೆ ಕ್ರೂರಿ ರಾಜನೊಬ್ಬ ರಾಜ್ಯವನ್ನಾಳುತ್ತಿರಲು, ಆತನ ಪ್ರಜೆಗಳು ಅವನ ಅವಸಾನವನ್ನೇ ಕಾಯುತ್ತಿದ್ದರು. ಹೀಗಿರಲು ಒಂದು ದಿನ ಅನಿರೀಕ್ಷಿತವಾಗಿ ತನ್ನ ಕ್ರೂರತನವನ್ನು ಬಿಟ್ಟು ದಯೆ ಹಾಗೂ ಕರುಣೆಯಿಂದ ರಾಜ್ಯಭಾರ ನಡೆಸಲು ನಿರ್ಧರಿಸಿದ. ಬದಲಾದ ಅವನ ನಡವಳಿಕೆಯಿಂದ ಪ್ರಜೆಗಳು ಆಶ್ಚರ್ಯಚಕಿತರಾದರು. ರಾಜನನ್ನು ಪ್ರೀತಿಸತೊಡಗಿದರು. ಸ್ವಲ್ವವೇ ಕಾಲದೊಳಗೆ ರಾಜನಿಗೆ ‘ದಯಾ ಚಕ್ರವರ್ತಿ’ ಎಂಬ ಬಿರುದನ್ನೂ ನೀಡಿದರು.

ಕೆಲವು ತಿಂಗಳುಗಳ ನಂತರ, ರಾಜನ ಮಂತ್ರಿಗಳಲ್ಲಿ ಒಬ್ಬ ಧೈರ್ಯವಹಿಸಿ, ಈ ಹೃದಯ ಪರಿವರ್ತನೆಗೆ ಕಾರಣವೇನು ಎಂದು ಕೇಳಿದಾಗ ರಾಜ ಹೀಗೆ ವಿವರಿಸಿದ. ‘ನಾನು ಕುದುರೆಯೇರಿ ಅರಣ್ಯದಲ್ಲಿ ಪ್ರಯಾಣಿಸುತ್ತಿರುವಾಗ ಬೇಟೆನಾಯಿಯೊಂದು ಮೊಲವನ್ನು ಹಿಡಿಯಲು ಅದರ ಹಿಂದೆ ಓಡುತ್ತಿತ್ತು. ಮೊಲವು ವೇಗವಾಗಿ ಓಡಿ ಬಿಲದೊಳಕ್ಕೆ ಸೇರಿಕೊಂಡಿತಾದರೂ, ಆ ಪ್ರಯತ್ನದಲ್ಲಿ ಅದರ ಹಿಂಗಾಲು ನಾಯಿಯ ಬಾಯಿಗೆ ಸಿಕ್ಕಿ ಕಾಲನ್ನು ಕಳೆದುಕೊಂಡಿತು. ನಂತರ ನಾನು ಊರಿನೊಳಕ್ಕೆ ಹೋಗಲು, ಅದೇ ಬೇಟೆನಾಯಿ ಜನರನ್ನು ಕಂಡು ಬೊಗಳುತ್ತಿತ್ತು. ಗುಂಪಿನಲ್ಲಿದ್ದವನೊಬ್ಬ ಕಲ್ಲೊಂದನ್ನು ಕೈಗೆತ್ತಿಕೊಂಡು ನಾಯಿಯೆಡೆಗೆ ಬೀಸಲು ಅದು ನಾಯಿಯ ಕಾಲಿಗೆ ಬಲವಾಗಿ ಬಡಿದು ನಾಯಿಯ ಕಾಲು ಮುರಿದುಹೋಯಿತು. ಆ ವ್ಯಕ್ತಿಯು ಮುಂದೆ ಸಾಗುತ್ತಿರಲು ಕುದುರೆಯೊಂದು ತನ್ನ ಹಿಂಗಾಲಿನಿಂದ ಝಾಡಿಸಿದ ರಭಸಕ್ಕೆ ಮೊಣಕಾಲಿನ ಗಂಟು ಮುರಿದು ಅವನು ಗಂಭೀರವಾಗಿ ಗಾಯಗೊಂಡ. ಅವನ ಬಳಿಯಿಂದ ಓಡಿಹೋದ ಕುದುರೆಯ ಹಿಂಗಾಲು ನೆಲದಲ್ಲಿದ್ದ ಬಿರುಕಿನೊಳಕ್ಕೆ ಹೋಗಿ ಅದರ ಕಾಲು ತುಂಡಾಯಿತು. ಇದನ್ನೆಲ್ಲಾ ನೋಡಿ, ನಾನೂ ಚಿಂತಿಸಿದೆ; ಕೆಡುಕಿನಿಂದ ಕೆಡುಕೇ ಸಂಭವಿಸುತ್ತದೆ. ನಾನು ನನ್ನ ಕ್ರೂರತನವನ್ನು ಮುಂದುವರಿಸಿದರೆ, ನಾನೂ ಒಂದು ದಿನ ಕ್ರೂರತನಕ್ಕೆ ಬಲಿಯಾಗುತ್ತೇನೆ ಎನಿಸಿತು. ಅದಕ್ಕಾಗಿ ನಾನು ಪರಿವರ್ತನೆಗೊಂಡೆ’.

ತನ್ನ ಕ್ರೂರತನವನ್ನು ಬಿಟ್ಟು ಸಾಧುವಾಗಿದ್ದ ರಾಜನನ್ನು ಪದಚ್ಯುತಗೊಳಿಸಲು ಇದೇ ಸುಸಮಯ ಎಂದು ಚಿಂತಿಸುತ್ತಾ ಹೊರನಡೆದ ಮಂತ್ರಿಯು ಮುಂದಿದ್ದ ಮೆಟ್ಟಲುಗಳನ್ನು ನೋಡದೆ ಎಡವಿಬಿದ್ದ ರಭಸಕ್ಕೆ ಕತ್ತು ಮುರಿದು ಸತ್ತೇ ಹೋದ.

ಪರರಿಗೆ ಬಗೆದ ಯಾವುದೇ ಕೇಡು ನಮ್ಮನ್ನು ಹಿಂಬಾಲಿಸದೆ ಬಿಡುವುದಿಲ್ಲ. ಶತ್ರು ಪ್ರೀತಿಯ ಬೋಧನೆಯಲ್ಲಿ ಯೇಸುಸ್ವಾಮಿ ಹೀಗೆನ್ನುತ್ತಾರೆ. ‘ಪರರಿಗೆ ನೀವು ಕೊಟ್ಟ ಅಳತೆಯಲ್ಲೇ ನಿಮ್ಮನ್ನು ಅಳೆಯಲಾಗುವುದು. ನಿಮ್ಮ ಶತ್ರುಗಳನ್ನು ಪ್ರೀತಿಸಿರಿ. ಅವರಿಗೆ ಒಳಿತನ್ನೇ ಮಾಡಿರಿ. ಪರರಿಗೆ ಕೊಡಿ, ದೇವರು ನಿಮಗೂ ಕೊಡುವರು’.

ಆಸ್ಸಿಸಿಯ ಸಂತ ಫ್ರಾನ್ಸಿಸರು, ‘ಪರರು ನನಗೆ ಯಾವ ಒಳಿತನ್ನು ಮಾಡಬೇಕೆಂದು ನಾನು ಬಯಸುವೆನೋ, ಅದೇ ಒಳಿತನ್ನು ಪರರಿಗೆ ಮಾಡಲು ನನ್ನನ್ನು ನಿಮ್ಮ ಶಾಂತಿಯ ಸಾಧನವನ್ನಾಗಿ ಮಾಡು’ ಎಂದು ದೇವರಲ್ಲಿ ಪ್ರಾರ್ಥಿಸಿದರು. ಪರರಿಗಾಗಿ ನಮ್ಮಲ್ಲಿ ಯಾವತ್ತೂ ಒಳ್ಳೆಯ ಚಿಂತನೆ, ಒಳ್ಳೆಯ ಮಾತುಗಳು ಹಾಗೂ ಅವರ ಕಷ್ಟದಲ್ಲಿ ಸಹಾಯಹಸ್ತವನ್ನೀಯಲು ಸಿದ್ಧವಾಗಿದ್ದರೆ, ಕೆಟ್ಟತನ ನಮ್ಮಿಂದ ತೊಲಗಿ, ಎಲ್ಲರೂ ನನ್ನ ಸಹೋದರ ಸಹೋದರಿಯರು ಎಂಬ ಅರಿವು ನಮ್ಮಲ್ಲಿ ಮೂಡಿ ಬೆಳೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT