ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪನ್ಮೂಲ ನಿರ್ವಹಣೆಯಲ್ಲಿ ಹೊಸ ತಂತ್ರಜ್ಞಾನ ಬಳಕೆ

Last Updated 12 ಮಾರ್ಚ್ 2018, 19:53 IST
ಅಕ್ಷರ ಗಾತ್ರ

ಬೆಂಗಳೂರು: ಇದು ಮಾಹಿತಿ ದತ್ತಾಂಶಗಳ ಯುಗ. ಜಗತ್ತಿನ ಹಲವು ಪ್ರಮುಖ ರಾಷ್ಟ್ರಗಳು ದೊಡ್ಡ ದತ್ತಾಂಶಗಳನ್ನು ನವೀನ ಭೌಗೋಳಿಕ ತಂತ್ರಜ್ಞಾನದ (ಇನೋವೇಟಿವ್‌ ಜಿಯೊಸ್ಪೇಷಿಯಲ್‌ ಟೆಕ್ನಾಲಜಿ) ಮೂಲಕವೇ ನಿರ್ವಹಿಸುತ್ತಿವೆ. ಪ್ರಕೃತಿ ವಿಕೋಪ ಮತ್ತು ಸಂಪನ್ಮೂಲಗಳ ನಿರ್ವಹಣೆಯಲ್ಲೂ ಈ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಲಾಗುತ್ತಿದೆ ಎಂದು ರಾಜ್ಯ ಜ್ಞಾನ ಆಯೋಗದ ಸದಸ್ಯ ಕಾರ್ಯದರ್ಶಿ ಡಾ.ಮುಕುಂದ್‌ ಕಡೂರು ಶ್ರೀನಿವಾಸ್‌ರಾವ್‌ ತಿಳಿಸಿದರು.

ಬೆಂಗಳೂರು ವಿಶ್ವವಿದ್ಯಾಲಯದ ಭೂಗೋಳ ವಿಜ್ಞಾನ ಮತ್ತು ಜಿಯೊಇನ್ಫಾರ್ಮ್ಯಾಟಿಕ್ಸ್ ವಿಭಾಗ ಸೋಮವಾರ ಆಯೋಜಿಸಿದ್ದ ನವೀನ ಭೌಗೋಳಿಕ ತಂತ್ರಜ್ಞಾನಗಳು (ಜಿಯೋಸ್ಪೇಷಿಯಲ್ ಟೆಕ್ನಾಲಜೀಸ್) ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ವಿಶ್ವವಿದ್ಯಾಲಯಗಳು ಮತ್ತು ಭೂಗೋಳ ವಿಜ್ಞಾನ ವಿಭಾಗಗಳು ಭೌಗೋಳಿಕ ತಂತ್ರಜ್ಞಾನದ ಬಗ್ಗೆ ಅರಿವು ಮೂಡಿಸಬೇಕು. ಈ ಕ್ಷೇತ್ರದಲ್ಲಿ ಸಂಶೋಧನೆ, ಹೊಸ ಆವಿಷ್ಕಾರದಲ್ಲಿ ವಿದ್ಯಾರ್ಥಿಗಳು ತೊಡಗಿಕೊಳ್ಳುವಂತೆ ಉತ್ತೇಜನ ನೀಡಬೇಕು ಎಂದು ಸಲಹೆ ನೀಡಿದರು.

ತಂತ್ರಜ್ಞಾನ ದಿನ ಬೆಳಗಾಗುವುದರೊಳಗೆ ಬದಲಾಗುತ್ತಲೇ ಇರುತ್ತದೆ ಮತ್ತು ಅಷ್ಟೇ ವೇಗದಲ್ಲಿ ಬೆಳವಣಿಗೆಯಾಗುತ್ತಿರುತ್ತದೆ. ಅಪಾರ ದತ್ತಾಂಶವೂ ಸೃಷ್ಟಿಯಾಗುತ್ತಿದೆ. ಇದನ್ನು ನಿರ್ವಹಿಸುವುದು ಕೂಡ ದೊಡ್ಡ ಸವಾಲು. ಇದಕ್ಕಾಗಿ ಹೊಸ ತಂತ್ರಜ್ಞಾನಗಳ ಆವಿಷ್ಕಾರ ನಡೆಯುತ್ತಲೇ ಇರುತ್ತದೆ. ‘ನಮ್ಮದು ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ಅರ್ಥವ್ಯವಸ್ಥೆ. ಅರ್ಥ ವ್ಯವಸ್ಥೆ ಬೆಳೆದಷ್ಟೇ ಪ್ರಮಾಣದಲ್ಲಿ ದತ್ತಾಂಶವೂ ಸೃಷ್ಟಿಯಾಗುತ್ತದೆ. ಇದು ಮಾಹಿತಿಯಾಗಿ ಎಲ್ಲರಿಗೂ ಮುಕ್ತವಾಗಿ ಲಭಿಸುವಂತಿರಬೇಕು’ ಎಂದರು.

‘80ರ ದಶಕದಲ್ಲಿ ನಮ್ಮ ಉಪಗ್ರಹಗಳು ಹೆಚ್ಚು ದೂರದ ಚಿತ್ರಗಳನ್ನು ನಿಖರವಾಗಿ ಸೆರೆ ಹಿಡಿಯುವಷ್ಟು ಸಾಮರ್ಥ್ಯ ಹೊಂದಿರಲಿಲ್ಲ. ಆದರೆ, ಈಗ ನಾವು ಈ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮಾಡಿದ್ದೇವೆ. ಪ್ರತಿ ಎರಡು ಅಥವಾ ಮೂರು ತಿಂಗಳಿಗೊಂದು ಉಪಗ್ರಹ ಉಡಾವಣೆ ಮಾಡುತ್ತಿದ್ದೇವೆ’ ಎಂದರು.

ಭೂಗೋಳ ವಿಜ್ಞಾನ ಮತ್ತು ಜಿಯೊಇನ್ಫಾರ್ಮ್ಯಾಟಿಕ್ಸ್ ವಿಭಾಗದ ನಿರ್ದೇಶಕ ಡಾ.ಅಶೋಕ್ ಡಿ. ಹಂಜಗಿ ಮಾತನಾಡಿ, ‘ಸಂಪನ್ಮೂಲ ಸುಸ್ಥಿರ ನಿರ್ವಹಣೆಯು ಜಿಯೋಸ್ಪೇಷಿಯಲ್ ತಂತ್ರಜ್ಞಾನ ಬಳಕೆಯಿಂದ ಸುಲಭ ಸಾಧ್ಯವಾಗುತ್ತಿದೆ. ಸಂಶೋಧನಾ ವಿದ್ಯಾರ್ಥಿಗಳು ಇಂತಹ ನವೀನ ತಂತ್ರಜ್ಞಾನ ಆವಿಷ್ಕಾರದ ಕಡೆಗೆ ಗಮನ ಹರಿಸಬೇಕು’ ಎಂದು ಸಲಹೆ ನೀಡಿದರು.

ಭೂಗೋಳ ವಿಭಾಗದ ಮುಖ್ಯಸ್ಥ ಪ್ರೊ.ಎ.ಎಸ್.ರಾಯಮಾನೆ ಮಾತನಾಡಿ, ‘ಜಿಪಿಎಸ್ ಮತ್ತು ಗೂಗಲ್‌ ನಕ್ಷೆಗಳಿಂದ ಇಂದು ಅನೇಕ ಅನುಕೂಲಗಳಾಗುತ್ತಿವೆ. ಸಮಯ ಹಾಗೂ ಸಂಪನ್ಮೂಲ ಉಳಿತಾಯವಾಗುತ್ತಿದೆ. ಸಾರಿಗೆ, ಸಂವಹನ ಸುಲಭವಾಗಿದೆ. ಮನುಕುಲದ ಅಭ್ಯುದಯಕ್ಕೆ ಹೊಸ ತಂತ್ರಜ್ಞಾನ ಬಳಕೆಯಾಗಬೇಕು’ ಎಂದರು.

ನೀರು ನಿರ್ವಹಣೆಗೆ ಶೀಘ್ರವೇ ಹೊಸ ನೀತಿ

ಬೆಂಗಳೂರು: ರಾಜ್ಯದಲ್ಲಿ ನೀರಿನ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಕರ್ನಾಟಕ ಜ್ಞಾನ ಆಯೋಗವು ‘ಜಲ ನಿರ್ವಹಣಾ ನೀತಿ’ (ವಾಟರ್‌ ಮ್ಯಾನೇಜ್‌ಮೆಂಟ್‌ ಪಾಲಿಸಿ) ರೂಪಿಸುತ್ತಿದೆ.

‘3–4 ತಿಂಗಳಲ್ಲಿ ನೀತಿಯ ಕರಡು ವರದಿ ಸಿದ್ಧವಾಗಲಿದ್ದು, ಅಕ್ಟೋಬರ್‌ನಲ್ಲಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದು’ ಎಂದು ಆಯೋಗದ ಸದಸ್ಯ ಕಾರ್ಯದರ್ಶಿ ಡಾ.ಮುಕುಂದ್‌ ಕಡೂರ್‌ ಶ್ರೀನಿವಾಸ್‌ರಾವ್‌ ‘ಪ್ರಜಾವಾಣಿ’ಗೆ ಸೋಮವಾರ ತಿಳಿಸಿದರು.

‘ಭೂಮಿ ಮೇಲ್ಭಾಗದಲ್ಲಿ ಲಭ್ಯವಿರುವ ನೀರು, ಅಂತರ್ಜಲ ಹಾಗೂ ಮಳೆ ನೀರಿನ ಪ್ರಮಾಣ ಆಧರಿಸಿ ನೀತಿ ರೂಪಿಸಲಾಗುತ್ತಿದೆ. ಯೋಜನಾ ಆಯೋಗದ ಸದಸ್ಯರಾಗಿದ್ದ ತಜ್ಞ ಮಿಹಿರ್‌ ಶಾ ನೇತೃತ್ವದಲ್ಲಿ 14 ಪರಿಣಿತರನ್ನು ಒಳಗೊಂಡ ಕಾರ್ಯಪಡೆಯನ್ನು ರಚಿಸಲಾಗಿದೆ’ ಎಂದರು.

‘ರಾಜ್ಯವನ್ನು ಒಂದು ಪ್ರಾಂತ್ಯವಾಗಿ ಪರಿಗಣಿಸಿ ಜಲ ನೀತಿ ರೂಪಿಸಿದರೆ ಅದು ಕಾರ್ಯಸಾಧುವಾಗುವುದಿಲ್ಲ. ಒಂದು ಕಡೆ ಚೆನ್ನಾಗಿ ಮಳೆ ಸುರಿದರೆ, ಕೆಲವು ಕಡೆ ಮಳೆಯಾಗುವುದೇ ಇಲ್ಲ. ಹಳ್ಳಿ ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಎಲ್ಲಿ ನೀರು ಹೆಚ್ಚಿದೆ, ಎಲ್ಲಿ ಕಡಿಮೆ ಇದೆ, ಎಲ್ಲಿ ವ್ಯರ್ಥವಾಗುತ್ತಿದೆ ಎನ್ನುವ ದತ್ತಾಂಶ ಸಿದ್ಧಪಡಿಸ
ಬೇಕಾಗಿದೆ. ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು (ಕೆಎಸ್‌ಎನ್‌ಎಂಡಿಸಿ) ಮಳೆ ಪ್ರಮಾಣದ ದತ್ತಾಂಶ ಸಿದ್ಧಪಡಿಸುತ್ತಿದೆ’ ಎಂದರು.

‘ಮುಂದಿನ ದಿನಗಳಲ್ಲಿ ನೀರಿಗೆ ಇನ್ನಷ್ಟು ತತ್ವಾರ ಎದುರಾಗುವುದು ನಿಶ್ಚಿತ. ರಾಜ್ಯದಲ್ಲಿ ನೀರಿನ ಪುನರ್‌ ಬಳಕೆ ಸರಿಯಾಗಿ ಆಗುತ್ತಿಲ್ಲ. ಇದರ ಬಗ್ಗೆಯೂ ಹೆಚ್ಚು ಗಮನ ಕೇಂದ್ರೀಕರಿಸಿದ್ದೇವೆ’ ಎಂದರು.

‘ಜಲಮಾಲಿನ್ಯ ತಡೆಯುವ ಬಗ್ಗೆ, ಜನಸಂಖ್ಯೆ ಮತ್ತು ನೀರಿನ ಲಭ್ಯತೆ ನೋಡಿಕೊಂಡು, 10ರಿಂದ 15 ವರ್ಷಗಳಲ್ಲಿ ಎದುರಾಗುವ ನೀರಿನ ಸಮಸ್ಯೆ ನಿಭಾಯಿಸಲು ಈಗಿನಿಂದಲೇ ಹೇಗೆ ಸಜ್ಜಾಗ ಬೇಕು ಎಂಬ ಕುರಿತ ಶಿಫಾರಸುಗಳು ವರದಿಯಲ್ಲಿ ಇರಲಿವೆ. ಭವಿಷ್ಯದ ದೃಷ್ಟಿಯಿಂದ ಈ ನೀತಿಯನ್ನು ರಾಜ್ಯ ಸರ್ಕಾರ ಜಾರಿಗೆ ತರಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT