ರವಿ ಬೆಳಗೆರೆ, ಶಶಿಕಾಂತ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ

7
ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ಪ್ರಕರಣ

ರವಿ ಬೆಳಗೆರೆ, ಶಶಿಕಾಂತ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ

Published:
Updated:

ಬೆಂಗಳೂರು: ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ್ದ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ಸಿಸಿಬಿ ಪೊಲೀಸರು, ಆರೋಪಿಗಳಾದ ಪತ್ರಕರ್ತ ರವಿಬೆಳಗೆರೆ ಹಾಗೂ ಶಶಿಧರ ಮುಂಡೆವಾಡಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಆರೋಪದಡಿ ಶಶಿಧರ ಮುಂಡೆವಾಡಿಯನ್ನು 2017ರ ಡಿ.7ರಂದು ಬಂಧಿಸಿದ್ದ ಸಿಸಿಬಿ ಪೊಲೀಸರು, ಸುನೀಲ್ ಹತ್ಯೆಗೆ ಬೆಳಗೆರೆ ಸುಪಾರಿ ನೀಡಿದ್ದ ಸಂಗತಿ ಬಯಲು ಮಾಡಿದ್ದರು. ನಂತರ ಬೆಳಗೆರೆ ಅವರನ್ನು ಬಂಧಿಸಲಾಗಿತ್ತು. ನಂತರ ಇಬ್ಬರೂ ಜಾಮೀನು ಪಡೆದುಕೊಂಡಿದ್ದಾರೆ.

ತನಿಖೆ ನಡೆಸಿದ್ದ ತನಿಖಾಧಿಕಾರಿ ಆರ್.ಪಿ.ಅನಿಲ್ 454 ಪುಟಗಳ ದೋಷಾರೋಪಪಟ್ಟಿಯನ್ನು 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ರವಿ ಬೆಳಗೆರೆ ಹೇಳಿಕೆಯ ವಿವರ: ‘ನನ್ನ ಎರಡನೇ ಪತ್ನಿ ಯಶೋಮತಿ ಜತೆ ಸುನೀಲ್ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಬಗ್ಗೆ ಮಾಹಿತಿ ಸಿಕ್ಕಿತ್ತು. ಆತನಿಗೆ ಬುದ್ಧಿ ಕಲಿಸಬೇಕು ಎಂದು ಶಶಿಧರ ಮುಂಡೆವಾಡಿಯನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದೆ’ ಎಂದು ರವಿ ಬೆಳಗೆರೆ ಹೇಳಿಕೆ ಕೊಟ್ಟಿರುವುದಾಗಿ ಉಲ್ಲೇಖಿಸಲಾಗಿದೆ.

‘ಅಕ್ರಮ ಸಂಬಂಧದ ಬಗ್ಗೆ ಶಶಿಧರನಿಗೆ ತಿಳಿಸಿ, ಸುನೀಲ್‌ನನ್ನು ಮುಗಿಸಲು ಹೇಳಿದ್ದೆ. ಅದಕ್ಕಾಗಿ ಶಸ್ತ್ರಾಸ್ತ್ರ ಸಿದ್ಧಪಡಿಸಿಕೊಳ್ಳುವಂತೆ ಸೂಚಿಸಿದ್ದೆ. ಶಾರ್ಪ್‌ ಶೂಟರ್‌ ಒಬ್ಬನನ್ನು ಕರೆದುಕೊಂಡು ಬಂದು ಕೊಲೆ ಮಾಡುವುದಾಗಿ ಹೇಳಿದ್ದ. ಅದಕ್ಕೆ ಪ್ರತಿಯಾಗಿ ಮುಂಗಡವಾಗಿ ₹ 5,000 ಕೊಟ್ಟು ಕಳುಹಿಸಿದ್ದೆ.’

‘ಕೆಲ ದಿನಗಳ ಬಳಿಕ ನನ್ನನ್ನು ಭೇಟಿಯಾದ ಶಶಿಧರ, ಹತ್ಯೆ ಮಾಡಲು ಶಸ್ತ್ರಾಸ್ತ್ರ ಸಿಗಲಿಲ್ಲ ಎಂದು ಹೇಳಿದ್ದ. ನನ್ನ ಬಳಿ ಇದ್ದ ಪರವಾನಗಿ ಹೊಂದಿದ ಗನ್‌, ನಾಲ್ಕು ಜೀವಂತ ಗುಂಡುಗಳು, ಒಂದು ಚಾಕು ಕೊಟ್ಟಿದ್ದೆ. ಕೆಲ ದಿನಗಳ ಬಳಿಕ ಬಂದ ಆತ, ಕೆಲಸ ಆಗಿಲ್ಲ ಎಂದು ಹೇಳಿ ಅವುಗಳನ್ನು ವಾಪಸ್ ನೀಡಿದ್ದ’ ಎಂದು ಹೇಳಿಕೆ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry