ಯಾರದೋ ಜಮೀನು, ಇನ್ಯಾರಿಗೋ ಪರಿಹಾರ!

ಸೋಮವಾರ, ಮಾರ್ಚ್ 25, 2019
21 °C
ಸಿಂಗಟಾಲೂರು ಏತ ನೀರಾವರಿ ಯೋಜನೆ: ಸಂತ್ರಸ್ತ ರೈತನಿಂದ ಸತ್ಯಾಗ್ರಹ

ಯಾರದೋ ಜಮೀನು, ಇನ್ಯಾರಿಗೋ ಪರಿಹಾರ!

Published:
Updated:
ಯಾರದೋ ಜಮೀನು, ಇನ್ಯಾರಿಗೋ ಪರಿಹಾರ!

ಹೂವಿನಹಡಗಲಿ: ‘ಸಿಂಗಟಾಲೂರು ಏತ ನೀರಾವರಿ ಯೋಜನೆಯಲ್ಲಿ ಮುಳುಗಡೆಯಾಗಿರುವ ತಮ್ಮ ಜಮೀನಿಗೆ ಬೇರೊಬ್ಬರು ನಕಲಿ ದಾಖಲೆ ಸೃಷ್ಟಿಸಿ ಭೂ ಪರಿಹಾರ ಪಡೆದಿದ್ದಾರೆ. ಪ್ರಕರಣದ ತನಿಖೆ ನಡೆಸಿ ತಮಗೆ ನ್ಯಾಯ ಕೊಡಿಸಬೇಕು’ ಎಂದು ಆಗ್ರಹಿಸಿ ಮುಂಡರಗಿ ತಾಲ್ಲೂಕು ಹಮ್ಮಿಗಿ ಗ್ರಾಮದ ರೈತ ರೆಹಮಾನ್‌ ಸಾಬ್ ಅಬ್ದುಲ್‌ ಸಾಬ್ ಶಿರಹಟ್ಟಿ ಅವರು ಇಲ್ಲಿನ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿ ಮುಂದೆ ಕುಟುಂಬ ಸಮೇತ ಸೋಮವಾರ ಉಪವಾಸ ಸತ್ಯಾಗ್ರಹ ನಡೆಸಿದರು.

‘ಹಮ್ಮಿಗಿ ಗ್ರಾಮದಲ್ಲಿ 9.39 ಎಕರೆ ಪಿತ್ರಾರ್ಜಿತ ಜಮೀನು ನಮಗೆ ಸೇರಿದ್ದು, ಮೂಲ ದಾಖಲೆಗಳು ನಮ್ಮ ತಂದೆಯ ಹೆಸರಲ್ಲೇ ಇವೆ. ನೀರಾವರಿ ಯೋಜನೆಗೆ ಜಮೀನು ಮುಳುಗಡೆಯಾದ ಸಂದರ್ಭದಲ್ಲಿ ಗ್ರಾಮದ ಅಬ್ದುಲ್‌ ರಜಾಕ್‌ ಹುಸೇನ್‌ ಸಾಬ್‌ ಎಂಬುವವರು ನಕಲಿ ದಾಖಲೆ ಸೃಷ್ಟಿಸಿ ನಮಗೆ ಬರಬೇಕಾದ ಭೂ ಪರಿಹಾವನ್ನು ಕಬಳಿಸಿದ್ದಾರೆ’ ಎಂದು ರೆಹಮಾನ್‌ ಸಾಬ್ ದೂರಿದರು.

‘ನಮಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿಕೊಡುವಂತೆ ಒತ್ತಾಯಿಸಿ ಈ ಹಿಂದೆ ಹಮ್ಮಿಗಿ ಗ್ರಾಮ ಪಂಚಾಯಿತಿ ಮತ್ತು ಮುಂಡರಗಿ ತಾಲ್ಲೂಕು ಕಚೇರಿ ಎದುರು ಕುಟುಂಬ ಸಮೇತ ಧರಣಿ ನಡೆಸಿದ್ದೇವೆ. 10 ವರ್ಷಗಳಿಂದ ಅಧಿಕಾರಿಗಳು ಕಚೇರಿಯಿಂದ ಕಚೇರಿಗೆ ಅಲೆದಾಡಿಸುತ್ತಿದ್ದಾರೆಯೇ ಹೊರತು ಯಾರೂ ನ್ಯಾಯ ದೊರಕಿಸಿಕೊಟ್ಟಿಲ್ಲ’ ಎಂದು ಅಳಲು ತೋಡಿಕೊಂಡರು.

‘ನಮ್ಮ ಮೂಲ ದಾಖಲೆಗಳನ್ನು ಪರಿಶೀಲಿಸಿ ಜಮೀನನ್ನು ನಮ್ಮ ಹೆಸರಿಗೆ ಖಾತೆ ಮಾಡಿಸಿಕೊಡಬೇಕು. ನೈಜ ಸಂತ್ರಸ್ತರು ನಾವೇ ಆಗಿರುವುದರಿಂದ ಭೂ ಪರಿಹಾರವನ್ನು ನಮಗೆ ನೀಡಬೇಕು. ಪರಿಹಾರ ಕಬಳಿಸಲು ನಕಲಿ ದಾಖಲೆ ಸೃಷ್ಟಿಸಿರುವ ವ್ಯಕ್ತಿಯ ವಿರುದ್ಧ ಕ್ರಿಮಿನಲ್ ಕೇಸ್‌ ದಾಖಲಿಸಬೇಕು. ಈ ಬೇಡಿಕೆಗಳು ಈಡೇರುವ ತನಕ ಪ್ರತಿಭಟನೆ ಕೈ ಬಿಡುವುದಿಲ್ಲ’ ಎಂದು ಪಟ್ಟು ಹಿಡಿದರು.

ರೆಹಮಾನ್‌ ಸಾಬ್‌ ಪತ್ನಿ ಬೀಬಿಜಾನ್‌, ಕುಟುಂಬದ ಸದಸ್ಯರಾದ ನೂರ್‌ಸಾಬ್‌, ಮಹಜನ್‌ಬೀ, ಹುಸೇನ್‌ ಬೀ ಇದ್ದರು. ಸಂತ್ರಸ್ತ ರೈತ ಕುಟುಂಬ ಇಡೀ ದಿನ ಕಚೇರಿ ಮುಂದೆ ಉಪವಾಸ ಕುಳಿತರೂ ಸಂಬಂಧಿಸಿದ ಅಧಿಕಾರಿ ಬಂದು ಸಮಸ್ಯೆ ಆಲಿಸಲಿಲ್ಲ. ಭೂ ಸ್ವಾಧೀನಾಧಿಕಾರಿ ಹುದ್ದೆ ಅನೇಕ ದಿನಗಳಿಂದ ಖಾಲಿ ಇದ್ದು, ಕಚೇರಿಯ ಪ್ರಭಾರ ವಹಿಸಿಕೊಂಡಿರುವ ಗದಗ ಸಹಾಯಕ ಆಯುಕ್ತರು ಇಲ್ಲಿಗೆ ಬರುವುದೇ ವಿರಳವಾಗಿದೆ. ಅಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸುವವರೆಗೂ ಸತ್ಯಾಗ್ರಹ ಮುಂದುವರಿಯಲಿದೆ ಎಂದು ರೆಹಮಾನ್‌ ಸಾಬ್‌ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry