ವಿಜಯ ಸಂಕೇಶ್ವರ ಕಾಂಗ್ರೆಸ್‌ಗೆ ಬಂದರೆ ಸ್ವಾಗತ: ಸಚಿವ ರಾಯರಡ್ಡಿ

5

ವಿಜಯ ಸಂಕೇಶ್ವರ ಕಾಂಗ್ರೆಸ್‌ಗೆ ಬಂದರೆ ಸ್ವಾಗತ: ಸಚಿವ ರಾಯರಡ್ಡಿ

Published:
Updated:
ವಿಜಯ ಸಂಕೇಶ್ವರ ಕಾಂಗ್ರೆಸ್‌ಗೆ ಬಂದರೆ ಸ್ವಾಗತ: ಸಚಿವ ರಾಯರಡ್ಡಿ

ಕಲಬುರ್ಗಿ: ‘ಉದ್ಯಮಿ ವಿಜಯ ಸಂಕೇಶ್ವರ ಕಾಂಗ್ರೆಸ್‌ಗೆ ಬರುವುದಾದರೆ ನಾನು ಸ್ವಾಗತಿಸುವೆ. ಆದರೆ, ಅವರನ್ನು ಸೇರಿಸಿಕೊಳ್ಳುವುದು–ಬಿಡುವುದು ಪಕ್ಷಕ್ಕೆ ಬಿಟ್ಟ ವಿಚಾರ’ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.

ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿ ಮಂಗಳವಾರ ಅಧಿಕಾರ ಸ್ವೀಕರಿಸಿ ಅವರು ಮಾತನಾಡಿದರು.

‘ಸಂಕೇಶ್ವರ ಅವರು ಪತ್ರಿಕೆ ಸೇರಿದಂತೆ ಹಲವು ರಂಗದಲ್ಲಿ ತೊಡಗಿಸಿಕೊಂಡಿರುವ ಗಣ್ಯರು. ಬಿಜೆಪಿಯಲ್ಲಿ ಈಗ ವ್ಯಾಪಾರಿ ಮನೋಭಾವ ಹೆಚ್ಚಾಗಿದೆ’ ಎಂದು ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ರಾಜ್ಯಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ರಾಜೀವ್‌ ಚಂದ್ರಶೇಖರ್‌ ಅವರು ಹಿಂದೆ ಜೆಡಿಎಸ್‌ನೊಂದಿಗೆ ವ್ಯಾಪಾರ ಕುದುರಿಸಿಕೊಂಡಿದ್ದರು. ಈಗ ಬಿಜೆಪಿಯೊಂದಿಗೆ ಕುದುರಿಸಿಕೊಂಡಿದ್ದಾರೆ’ ಎಂದು ಟೀಕಿಸಿದರು.

‘ಹೈ.ಕ. ಅಭಿವೃದ್ಧಿಗೆ ಕೇಂದ್ರವೂ ಅನುದಾನ ನೀಡಲಿ’:  ‘ಹೈದರಾಬಾದ್‌ ಕರ್ನಾಟಕದ ಅಭಿವೃದ್ಧಿಗೆ ಕೇಂದ್ರ ಸರ್ಕಾರವೂ ಅನುದಾನ ನೀಡಬೇಕು. ನಾವು ಅವರಿಗೆ ಕೋರಿಕೆ ಸಲ್ಲಿಸುತ್ತೇವೆ’ ಎಂದು ರಾಯರಡ್ಡಿ ಹೇಳಿದರು.

‘ಈ ಪ್ರದೇಶ ಹಿಂದುಳಿದಿದೆ ಎಂಬ ಕಾರಣಕ್ಕೇ ಕೇಂದ್ರ ಸರ್ಕಾರ ಸಂವಿಧಾನಕ್ಕೆ ತಿದ್ದುಪಡಿ ತಂದು ವಿಶೇಷ ಸ್ಥಾನಮಾನ ನೀಡಿದೆ.  ಈ ಭಾಗದ ಅಭಿವೃದ್ಧಿಗೆ ಶೇ 50ರಷ್ಟು ಅನುದಾನ ನೀಡುವುದು ಕೇಂದ್ರ ಸರ್ಕಾರದ ಕರ್ತವ್ಯ’ ಎಂದರು.

‘ಆರಂಭದಿಂದಲೂ ನಾವು ಅನುದಾನ ಕೇಳುತ್ತಿದ್ದರೂ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ’ ಎಂದು ಮಂಡಳಿಯ ಹಿಂದಿನ ಅಧ್ಯಕ್ಷ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.

ಸೇರ್ಪಡೆ ಇಲ್ಲ: ಹೈದರಾಬಾದ್‌ ಕರ್ನಾಟಕ ಪ್ರದೇಶದ 371 (ಜೆ) ಮೀಸಲಾತಿ ವ್ಯಾಪ್ತಿಗೆ ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕನ್ನು ಮಾತ್ರ ಸೇರಿಸಲು ನಿರ್ಧರಿಸಲಾಗಿದೆ. ರೋಣ ತಾಲ್ಲೂಕಿನ ಆರು ಗ್ರಾಮಗಳ ಸೇರ್ಪಡೆಯ ವಿಷಯವನ್ನು ಸಚಿವ ಸಂಪುಟ ತಿರಸ್ಕರಿಸಿದೆ. ಈ ಪ್ರದೇಶದಲ್ಲಿ ಯಾವುದೇ ಗ್ರಾಮಗಳ ಸೇರ್ಪಡೆಗೆ ಅವಕಾಶ ಇಲ್ಲ’ ಎಂದು ಸಚಿವರು ತಿಳಿಸಿದರು.

ಸಮಗ್ರ ಅಭಿವೃದ್ಧಿ ಯೋಜನೆ: ‘ತಾಲ್ಲೂಕುಗಳಲ್ಲಿ ಮುಂದಿನ 10 ವರ್ಷಗಳಲ್ಲಿ ಕೈಗೊಳ್ಳಬಹುದಾದ ಅಭಿವೃದ್ಧಿ ಕಾಮಗಾರಿಗಳ ಕುರಿತು ಸಮಗ್ರ ಯೋಜನೆ ಸಿದ್ಧಪಡಿಸಲಾಗುವುದು. ಶಿಕ್ಷಣ,ಆರೋಗ್ಯದಂತಹ ಆದ್ಯತಾ ವಲಯ, ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತಿತರ ಅಂಶಗಳನ್ನು ಈ ಯೋಜನೆ ಒಳಗೊಳ್ಳಲಿದೆ. ಇದಕ್ಕೆ ರಾಜ್ಯ ಸರ್ಕಾರ ಮತ್ತು ಮಂಡಳಿಯಿಂದ ಎಷ್ಟು ಹಣ ವಿನಿಯೋಗಿಸಬೇಕು ಎಂಬುದನ್ನು ನಿರ್ಧರಿಸಲಾಗುವುದು’ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry