ಹರಳಯ್ಯನ ಗುಡಿಗೆ ಕೊಳಚೆ ನೀರು; ಪೂಜೆ ಬಂದ್

ಬುಧವಾರ, ಮಾರ್ಚ್ 20, 2019
23 °C
ಬರಗೂರು ಎ.ಕೆ ಕಾಲೊನಿಯಲ್ಲಿ ಅವ್ಯವಸ್ಥೆ; ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ

ಹರಳಯ್ಯನ ಗುಡಿಗೆ ಕೊಳಚೆ ನೀರು; ಪೂಜೆ ಬಂದ್

Published:
Updated:
ಹರಳಯ್ಯನ ಗುಡಿಗೆ ಕೊಳಚೆ ನೀರು; ಪೂಜೆ ಬಂದ್

ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಬರಗೂರಿನ ಎ.ಕೆ.ಕಾಲೊನಿಯಲ್ಲಿ ಅವೈಜ್ಞಾನಿಕ ಸಿಸಿ ರಸ್ತೆ ಹಾಗೂ ಒಳಚರಂಡಿ ಕಾಮಗಾರಿಯಿಂದ ಶರಣ ಹರಳಯ್ಯ ಅವರ ದೇವಾಲಯಕ್ಕೆ ಕೊಳಚೆ ನೀರು ನುಗ್ಗುತ್ತಿದೆ. ಆರು ತಿಂಗಳಿನಿಂದ ಪೂಜೆಯನ್ನೇ ಬಂದ್ ಮಾಡಲಾಗಿದೆ. ಸಮಸ್ಯೆ ಪರಿಹರಿಸುವಂತೆ ಬರಗೂರು ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ನಿವಾಸಿಗಳು ದೂರುವರು.

ಕಾಲೊನಿಯಲ್ಲಿ 30 ಮನೆಗಳಿವೆ. ನಾಲ್ಕು ವರ್ಷಗಳ ಹಿಂದೆ ಸಿಸಿ ರಸ್ತೆ ಹಾಗೂ ರಸ್ತೆ ಬದಿ ಚರಂಡಿ ನಿರ್ಮಿಸುವಾಗ ಅವೈಜ್ಞಾನಿಕವಾಗಿ ಕಾಮಗಾರಿಯನ್ನು ನಡೆಸಲಾಗಿದೆ. ಅಂದಿನಿಂದ ಸಮಸ್ಯೆ ಎದುರಾಗಿದೆ.

ಕಾಲೊನಿ ಜನರೇ ದೇವಸ್ಥಾನದ ಸುತ್ತ ನಿಲ್ಲುತ್ತಿದ್ದ ನೀರನ್ನು ಪಕ್ಕದ ಬಯಲಿನಲ್ಲಿ ಇಂಗುವಂತೆ ಮಾಡಿದ್ದಾರೆ. ಕಳೆದ ಸೆಪ್ಟೆಂಬರ್‌ನಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಬಯಲನ್ನು ಆಕ್ರಮಿಸಿದ್ದು ಕೊಳಚೆ ನೀರು ಹರಿದು ಹೋಗದಂತೆ ಅಡ್ಡವಾಗಿ ಮಣ್ಣು ಹಾಕಿಸಿದ್ದಾರೆ ಇದರಿಂದ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ.

ದೇವಸ್ಥಾನದ ಪ್ರಾಂಗಣ ತೊಳೆದ ನೀರು ಹೊರಗೆ ಹೋಗಲು ಪೈಪ್ ಜೋಡಿಸಲಾಗಿದೆ. ಕೊಚ್ಚೆ ನೀರು ಚರಂಡಿಯಲ್ಲೇ ನಿಲ್ಲುತ್ತಿರುವುದರಿಂದ ಪೈಪ್ ಮೂಲಕ ಕೊಳಚೆ ನೀರು ದೇವಸ್ಥಾನದ ಒಳಗೆ ಬರುತ್ತಿದೆ. ಇದರಿಂದ ದೇವಸ್ಥಾನದ ಒಳಗಿರುವ ಹುತ್ತ ಕರಗುತ್ತಿದೆ. ಹುತ್ತದ ಮೇಲೆ ದುಪ್ಪಟ್ಟ ಮುಚ್ಚಲಾಗಿದೆ. ಕೊಳಚೆ ನೀರು ಒಳ ಪ್ರವೇಶಿಸುತ್ತಿರುವುದರಿಂದ 6 ತಿಂಗಳಿನಿಂದ ಪೂಜೆ ನಿಲ್ಲಿಸಲಾಗಿದೆ ಎಂದು ದಯಾನಂದ್, ನೇತ್ರಾವತಿ, ನಾಗರಾಜು, ದೇವೀರಮ್ಮ, ಭಾಗ್ಯಮ್ಮ, ಕೆಂಚಯ್ಯ ‘ಪ್ರಜಾವಾಣಿ’ ತಿಳಿಸಿದರು.

‌ಸುತ್ತಮುತ್ತ ಕೊಳಚೆ ನಿಲ್ಲುತ್ತಿದೆ. ದೇವಸ್ಥಾನದ ಆವರಣ ಸೊಳ್ಳೆಗಳ ತಾಣವಾಗಿದೆ. ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವಂತೆ ಮನವಿ ಸಲ್ಲಿಸಿದ್ದೇವೆ. ಪಂಚಾಯಿತಿ ಅಧಿಕಾರಿಗಳು ತಾತ್ಸಾರ ಅನುಸರಿಸಿದರೆ ಪಂಚಾಯಿತಿ ಕಚೇರಿ ಮುಂದೆ ಧರಣಿ ನಡೆಸುತ್ತೇವೆ ಎಂದು ನಿವಾಸಿಗಳು ಎಚ್ಚರಿಸಿದ್ದಾರೆ.

ಗ್ರಾಮ ಪಂಚಾಯಿತಿ ಅಧ್ಯಕ್ಷ ಉಮೇಶ್ ಮಾತನಾಡಿ, ಕೊಳಚೆ ನೀರು ಹೊರ ಹೋಗಲು 150 ಮೀಟರ್ ಉದ್ದದ ಒಳಚರಂಡಿ ನಿರ್ಮಿಸಬೇಕು. ಜತೆಗೆ ರಸ್ತೆ ನಿರ್ಮಾಣವೂ ಆಗಬೇಕು. ಈ ಕಾಮಗಾರಿಗೆ ₹ 10ರಿಂದ 12 ಲಕ್ಷ ಅನುದಾನ ಬೇಕಾಗುತ್ತದೆ ಎಂದು ತಿಳಿಸಿದರು. ಪಂಚಾಯಿತಿಯಿಂದ ₹ 70ಸಾವಿರ ಭರಿಸಬಹುದು ಅಥವಾ ನರೇಗಾದಲ್ಲಿ ಕಾಮಗಾರಿ ಮಾಡಲು ಯಾರಾದರೂ ಮುಂದೆ ಬಂದರೆ ಸಮಸ್ಯೆ ಬಗೆಹರಿಸಬಹುದು. ಇಲ್ಲದಿದ್ದರೆ ಶಾಸಕರ ಅಥವಾ ಜಿಲ್ಲಾ ಪಂಚಾಯಿತಿ ಸದಸ್ಯರ ಅನುದಾನ ಬರುವವರೆಗೆ ಕಾಯಬೇಕು ಎಂದರು.

–ದೇವರಹಳ್ಳಿ ಧನಂಜಯ

*

ಚರಂಡಿ ನಿರ್ಮಿಸಿ ಕೊಳಚೆ ನೀರು ದೇವಾಲಯಕ್ಕೆ ನುಗ್ಗ<br/>ದಂತೆ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಸ್ಥಳೀಯ ಹಾಗೂ ತಾಲ್ಲೂಕು ಆಡಳಿತದ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ.

-ಶಂಕರ್,

ದಲಿತ ಮುಖಂಡ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry