ಗೂಗಲ್‍ನ ಸುಧಾರಿತ ‘ಹ್ಯಾಂಗ್‍ಔಟ್ಸ್’ ಚಾಟ್

7

ಗೂಗಲ್‍ನ ಸುಧಾರಿತ ‘ಹ್ಯಾಂಗ್‍ಔಟ್ಸ್’ ಚಾಟ್

Published:
Updated:
ಗೂಗಲ್‍ನ ಸುಧಾರಿತ ‘ಹ್ಯಾಂಗ್‍ಔಟ್ಸ್’ ಚಾಟ್

ಗೂಗಲ್ ಈಚೆಗೆ ಅಂತರ್ಜಾಲ ಆಧಾರಿತ ಚಾಟ್ ಆ್ಯಪ್ ‘ಹ್ಯಾಂಗ್‍ಔಟ್ಸ್’ನ ಸುಧಾರಿತ ಮಾದರಿಯನ್ನು ಬಿಡುಗಡೆ ಮಾಡಿದೆ. ಇದರಿಂದ ಅಲ್ಫಾಬೆಟ್ ಇಂಕ್ ಕಂಪನಿಯು ಇತರ ವಾಣಿಜ್ಯ ಉದ್ದೇಶದ ಸಾಫ್ಟವೇರ್ ತಯಾರಕ ಸಂಸ್ಥೆಗಳಾದ ಮೈಕ್ರೊಸಾಫ್ಟ್ ಕಾರ್ಪ್ ಮತ್ತು ಸ್ಲ್ಯಾಕ್ ಟೆಕ್ನಾಲಜೀಸ್ ಇಂಕ್‍ಗಳ ಜತೆ ಸ್ಪರ್ಧಿಸುವಂತಾಗಿದೆ.

ಈ ಸುಧಾರಿತ ಆ್ಯಪ್ ಬಳಸಿ, ಒಂದು ಕಂಪನಿಯ ಅಥವಾ ಗುಂಪಿನ ಸದಸ್ಯರು ಪರಸ್ಪರ ಚಾಟ್ ಮಾಡಬಹುದು. ಗುಂಪು ಸಂವಹನ ನಡೆಸಬಹುದು. ಜತೆಗೆ ಇತರ ಕಾರ್ಪೋರೇಟ್ ಸಾಫ್ಟವೇರ್‍ಗಳಿಂದ ದತ್ತಾಂಶ ಪಡೆಯಬಹುದು. ಈ ಆ್ಯ‍ಪ್‌ ಗೂಗಲ್‍ನ ‘ಜಿ’ ಸೂಟ್‍ನಲ್ಲಿ ಹೊಂದಿಕೆಯಾಗುತ್ತದೆ.

‘ಇದು ಹ್ಯಾಂಗ್‍ಔಟ್‍ನ ಎರಡನೇ ಅದ್ಭುತ. ಇದನ್ನು ಬಳಸಿಕೊಂಡು, ಕಡಿಮೆ ಸಮಯದಲ್ಲಿ ಉದ್ಯೋಗಿಗಳು ಹೆಚ್ಚು ಸಾಮರ್ಥ್ಯ ತೋರಲು  ಸಹಕಾರಿಯಾಗಲಿದೆ’ ಎಂದು ಗೂಗಲ್‍ನ ಉತ್ಪನ್ನ ನಿರ್ವಹಣೆಯ ನಿರ್ದೇಶಕ ಸ್ಕಾಟ್ ಜಾನ್ಸಟನ್ ತಿಳಿಸಿದ್ದಾರೆ.

ಆದರೆ, ಉದ್ಯಮಗಳಿಗೆ ಇತರ ಆಯ್ಕೆಗಳೂ ಇವೆ. ‘ಸ್ಲ್ಯಾಕ್’ ಚಾಟ್ ಅಪ್ಲಿಕೇಷನ್‍ಗೆ 50 ಸಾವಿರ ಗುಂಪುಗಳು ಹಣ ಪಾವತಿಸಿ ನೋಂದಾಯಿಸಿಕೊಂಡಿವೆ. ಆ ಮೂಲಕ ಇ-ಮೇಲ್‍ಗೆ ಪರ್ಯಾಯವಾಗಿ ‘ಸ್ಲ್ಯಾಕ್’ ಬಳಸುತ್ತವೆ.

ಮೈಕ್ರೊಸಾಫ್ಟ್ ಕಂಪನಿಯು ಇದೇ ಕಾರ್ಯ ನಿರ್ವಹಿಸುವ ‘ಆಫೀಸ್ 365’ ಎಂಬ ಪ್ಯಾಕೇಜ್ ಒದಗಿಸುತ್ತದೆ. ಇದು ‘ಜಿ’ ಸೂಟ್‍ಗಿಂತ ಸುಧಾರಿತ ಆ್ಯಪ್ ಎಂದು ಗ್ರಾಹಕರು ತಿಳಿಸಿದ್ದಾರೆ. ಗೂಗಲ್, ಈ ಹಿಂದೆ ಜಿ-ಮೇಲ್ ಮತ್ತು ಡಾಕ್ಸ್‌ಗಳನ್ನು ಉಚಿತ ಮಾದರಿ ಬಿಡುಗಡೆ ಮಾಡಿದಂತೆ, ಹ್ಯಾಂಗ್‍ಔಟ್ಸ್‌ ಅನ್ನು ಕೂಡ ಉಚಿತವಾಗಿ ಒದಗಿಸಿದೆ.

ಪಾವತಿಸಿ ಬಳಸುವ ‘ಹ್ಯಾಂಗ್‍ಔಟ್ಸ್’ನಿಂದ 8 ಸಾವಿರ ಸದಸ್ಯರವರೆಗೂ ಏಕಕಾಲಕ್ಕೆ ಸಂವಹನ ನಡೆಸಬಹುದು. ಎಲ್ಲ ಸಂದೇಶಗಳೂ ತಾನೇ ತಾನಾಗಿ ಸೇವ್ ಆಗುತ್ತವೆ. ಗೂಗಲ್ ಕಳೆದ ವರ್ಷ ಬಿಡುಗಡೆ ಮಾಡಿದ್ದ, ಟೆಲಿಕಾನ್ಫರೆನ್ಸಿಂಗ್ ಆ್ಯಪ್ ‘ಹ್ಯಾಂಗ್‍ಔಟ್ಸ್ ಮೀಟ್’ ಜತೆಗೂ ಇದು ಹೊಂದಿಕೆಯಾಗುತ್ತದೆ.

***

ಪ್ರಾಕೃತಿಕ ವಿಕೋಪ: ಮೊಬೈಲ್ ನೆರವು

ಪ್ರವಾಹ, ಭೂಕಂಪ ಮತ್ತಿತರ ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ನಿರ್ದಿಷ್ಟವಾಗಿ ಯಾವ ಪ್ರದೇಶದಲ್ಲಿ ಸಹಾಯದ ಅಗತ್ಯವಿದೆ ಎಂದು ತಿಳಿಸಲು ಮೊಬೈಲ್ ಫೋನ್‍ಗಳು ಬಳಕೆ ಆಗುತ್ತಿವೆ. ಅಲ್ಲದೆ, ವಿಕೋಪ ಪರಿಹಾರ ನಿಧಿಗೆ ದೇಣಿಗೆ ನೀಡಲು ಕೆಲವು ಆ್ಯಪ್‍ಗಳು ಸಹಕರಿಸುತ್ತಿವೆ.

ವಿಕೋಪದ ಸಂದರ್ಭದಲ್ಲಿ ಹೆಚ್ಚು ಮಂದಿ ಎಲ್ಲಿ ನೆರೆದಿದ್ದಾರೆ ಎಂಬುದನ್ನು ತಿಳಿಸಲು ಟೆಲಿಕಾಂ ಕಂಪನಿಗಳು ಶ್ರಮಿಸುತ್ತವೆ. ಈ ಮಾಹಿತಿಯನ್ನು ಇನ್ನಿತರ ಮಾಹಿತಿ ಜತೆ ಸೇರಿಸಿ, ವಿಕೋಪ ನಿರ್ವಹಣೆಗೆ ಮುಂದಾಗುವ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳಿಗೆ ನೀಡಲಾಗುತ್ತಿದೆ. ಇದರಿಂದ ಸಂದರ್ಭಕ್ಕೆ ತಕ್ಕಂತೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಸಹಾಯವಾಗುತ್ತದೆ.

ವಿಶ್ವಸಂಸ್ಥೆಯ ‘ವಿಶ್ವ ಆಹಾರ ಕಾರ್ಯಕ್ರಮ’ (ಡಬ್ಲೂಎಫ್‍ಪಿ) ಕೂಡ ಮೊಬೈಲ್ ಕಂಪನಿಗಳ ‘ನೋ ವೇರ್ ಪೀಪಲ್ ಗೋ’ ಯೋಜನೆಯಡಿ ಸಂತ್ರಸ್ತರನ್ನು ಪತ್ತೆ ಹಚ್ಚಿ, ಅವರಿಗೆ ನೆರವಾಗುತ್ತಿದೆ. ‘ಸಂತ್ರಸ್ತರು ಇರುವ ಪ್ರದೇಶದ ಮಾಹಿತಿಯು ಅವರಿಗೆ ಸಹಾಯ ಮಾಡಲು ಅಗತ್ಯ’ ಎಂದು ವಿಶ್ವಸಂಸ್ಥೆಯ ಮಾಹಿತಿ ತಂತ್ರಜ್ಞಾನ ನಿರ್ದೇಶಕಿ ಎನ್ರಿಕಾ ಪೋರ್ಕರಿ ತಿಳಿಸಿದ್ದಾರೆ. ಅಮೆರಿಕದ ‘ಫೆಡರಲ್ ಎಮರ್ಜೆನ್ಸಿ ಮ್ಯಾನೇಜ್‍ಮೆಂಟ್ ಏಜೆನ್ಸಿ’ಯು  ಪ್ರತ್ಯೇಕ ಆ್ಯಪ್ ಅಳವಡಿಸಿಕೊಂಡಿದೆ. ಇದರ ಮೂಲಕ ವಿಕೋಪದಿಂದ ಹಾನಿಯ ಚಿತ್ರಗಳನ್ನು ತೆಗೆದು, ಇತರರ ಜತೆ ಹಂಚಿಕೊಳ್ಳಬಹುದು. 

ವಿಕೋಪ ನಿರ್ವಹಣೆಗೆ ಸಂತ್ರಸ್ತರ ಪುನರ್ವಸತಿ, ದೇಣಿಗೆ ನೀಡಲು ಈಗ ಹಲವು ಆ್ಯಪ್‍ಗಳು ಇವೆ. ‘‘ShareTheMeal’’ ಆ್ಯಪ್ ಅನ್ನು ಇದುವರೆಗೆ 10 ಲಕ್ಷಕ್ಕೂ ಅಧಿಕ ಮಂದಿ ಡೌನ್‍ಲೋಡ್ ಮಾಡಿಕೊಂಡಿದ್ದಾರೆ. ಕ್ರೆಡಿಟ್‍ಕಾರ್ಡ್ ಅಥವಾ ಪೇಪಲ್ ಬಳಸಿ ದೇಣಿಗೆ ನೀಡಬಹದು.

***

ಹೈಪ್‍ಸ್ಟಾರ್ ಕ್ವಿಜ್ ಜನಪ್ರಿಯತೆ

ಎಕ್ಸೀಡ್ ಎಂಟರ್‌ಟೈನ್‌ಮೆಂಟ್ ಸಂಸ್ಥೆಯ ವಿಡಿಯೊ ಎಡಿಟಿಂಗ್ ಆ್ಯಪ್ ‘ಹೈಪ್‍ಸ್ಟಾರ್’ ತನ್ನ ಕ್ವಿಜ್‍ನಿಂದಾಗಿ ಬಹುಜನಪ್ರಿಯವಾಗಿದೆ. ಮೊದಲು 500 ಮಂದಿ ಮಾತ್ರ ನೋಡುತ್ತಿದ್ದ ಈ ರಸಪ್ರಶ್ನೆ ಕಾರ್ಯಕ್ರಮವನ್ನು ಈಗ 1.4 ಲಕ್ಷ ಮಂದಿ ವೀಕ್ಷಿಸುತ್ತಿದ್ದಾರೆ. ಕ್ವಿಜ್ ಕಾರ್ಯಕ್ರಮ ನಿರೂಪಣೆಗೆ ಈ ಮೊದಲು ತಾರೆಯರಾದ ಪರಿಣಿತಿ ಚೋಪ್ರಾ ಮತ್ತು ಬಿಪಾಷಾ ಬಸು ಬಂದಿದ್ದರು. ಇತ್ತೀಚಿನ ಕ್ವಿಜ್ ಕಾರ್ಯಕ್ರಮ ನಡೆಸಿಕೊಡಲು ನಟಿ ಸೋನಾಕ್ಷಿ ಸಿನ್ಹಾ ಬಂದಿದ್ದರು.

ಅಂದಿನ ಬಹುಮಾನದ ಮೊತ್ತ ₹ 6.7 ಲಕ್ಷ ಇತ್ತು. ಕ್ವಿಜ್‍ನಲ್ಲಿ ಪ್ರಶ್ನೆಗಳನ್ನು ಕೇಳುವುದಲ್ಲದೆ,ಆಸ್ಕರ್ ಪ್ರಶಸ್ತಿಗಳ ಕುರಿತು ಸೋನಾಕ್ಷಿ ಮಾಹಿತಿ ನೀಡಿದ್ದಾರೆ. ಜತೆಗೆ ಕೆಲವು ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಕಾರ್ಯಕ್ರಮವು ಅತ್ಯಂತ ಜನಪ್ರಿಯವಾಗಿದ್ದು, ಇನ್ನುಮುಂದೆಯೂ ಬಾಲಿವುಡ್ ತಾರೆಯರನ್ನು ಕರೆಸಲು ಸಂಸ್ಥೆ ತಿಳಿಸಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry