ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಲಪತಿ ಹುದ್ದೆಗೆ ಮತ್ತೆ ಅರ್ಜಿ ಆಹ್ವಾನ

Last Updated 13 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಕುಲಪತಿ ನೇಮಕಾತಿಗೆ ಹೊಸ ತಿರುವು ಸಿಕ್ಕಿದೆ. ಅರ್ಹ ಅಭ್ಯರ್ಥಿಗಳಿಂದ ಹೊಸದಾಗಿ ಅರ್ಜಿ ಆಹ್ವಾನಿಸಲು ತೀರ್ಮಾನವಾಗಿದೆ.

2018ರ ಜ. 10ಕ್ಕೆ ಕುಲಪತಿ ಹುದ್ದೆ ತೆರವಾಗಿ 1 ವರ್ಷ ಪೂರ್ಣಗೊಂಡಿದೆ. ಅಂದಿನಿಂದಲೂ ಪ್ರಭಾರ ಕುಲಪತಿಗಳೇ ಅಧಿಕಾರ ನಡೆಸುತ್ತಿದ್ದಾರೆ. ಕುಲಪತಿ ನೇಮಕಕ್ಕಾಗಿ ರಚನೆಯಾಗಿರುವ ಶೋಧನಾ ಸಮಿತಿಯು ನೀಡಿದ ಪಟ್ಟಿಯನ್ನು ರಾಜ್ಯಪಾಲರು ಮೂರು ಬಾರಿ ತಿರಸ್ಕರಿಸಿದ್ದು, ನೇಮಕ ಮುಂದೂಡುತ್ತಲೇ ಇತ್ತು. ರಾಜ್ಯಪಾಲರು ಹೊಸ ಹೆಸರುಗಳ ಪಟ್ಟಿ ನೀಡುವಂತೆ ಆದೇಶಿಸಿರುವ ಹಿನ್ನೆಲೆಯಲ್ಲಿ ಈಚೆಗೆ ಶೋಧನಾ ಸಮಿತಿ ಸಭೆಯನ್ನೂ ನಡೆಸಿತ್ತು.

ಆದರೆ, ಹೊಸ ಬೆಳವಣಿಗೆಯಲ್ಲಿ ಕುಲಪತಿ ಹುದ್ದೆಗೆ ಅರ್ಜಿ ಸಲ್ಲಿಸಲು ಜಾಹೀರಾತು ನೀಡುವಂತೆ ಉನ್ನತ ಶಿಕ್ಷಣ ಇಲಾಖೆ ಸೂಚಿಸಿದೆ. ಜಾಹೀರಾತು ಪ್ರಕಟವಾದ ನಂತರ ಅರ್ಜಿ ಸಲ್ಲಿಸಲು 1 ತಿಂಗಳು ಕಾಲಾವಕಾಶ ಇರುತ್ತದೆ. ಆ ನಂತರ, ಪ್ರಕ್ರಿಯೆಗಳು ಆರಂಭವಾಗುತ್ತವೆ ಎಂದು ವಿ.ವಿ ಮೂಲಗಳು ತಿಳಿಸಿವೆ.

ಶೋಧನಾ ಸಮಿತಿ ಮುಂದುವರಿಕೆ?:

ಕುಲಪತಿ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸುವ ಶೋಧನಾ ಸಮಿತಿಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಡಾ.ಎಚ್‌.ಪಿ.ಖಿಂಚಾ ಅಧ್ಯಕ್ಷರಾಗಿದ್ದಾರೆ. ಕೇಂದ್ರೀಯ ವಿ.ವಿ ಕುಲಪತಿ ಡಾ.ಎಚ್‌.ಎಂ.ಮಹೇಶ್ವರಯ್ಯ (ರಾಜ್ಯಪಾಲರ ನಾಮನಿರ್ದೇಶನ), ಗುಲ್ಬರ್ಗಾ ವಿ.ವಿ ವಿಶ್ರಾಂತ ಕುಲಪತಿ ಪ್ರೊ.ವಿ.ಬಿ.ಕುಟಿನೊ (ಮೈಸೂರು ವಿ.ವಿ ನಾಮನಿರ್ದೇಶನ), ಚವ್ಹಾಣ್‌ (ವಿಶ್ವವಿದ್ಯಾಲಯ ಅನುದಾನ ಆಯೋಗದ ನಾಮನಿರ್ದೇಶನ) ಇದ್ದಾರೆ. ಈ ಸಮಿತಿಯನ್ನು ಮುಂದುವರಿಸಬೇಕೆ, ಬದಲಾವಣೆ ಮಾಡಬೇಕೆ ಎಂಬ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎನ್ನಲಾಗಿದೆ.

ಹಿಂದಿನ ಪಟ್ಟಿ: ಈ ಹಿಂದೆ ಶೋಧನಾ ಸಮಿತಿಯು ಪ್ರೊ.ಸಿ.ಪಿ.ಸಿದ್ದಾಶ್ರಮ, ಪ್ರೊ.ಎನ್‌.ಎಸ್‌.ಅಶೋಕಕುಮಾರ್‌, ಪ್ರೊ.ಸೋಮಶೇಖರ ಅವರ ಹೆಸರಿನ ಪಟ್ಟಿ ನೀಡಿತ್ತು. ಈ ಪಟ್ಟಿಯನ್ನು ರಾಜ್ಯಪಾಲರು ತಿರಸ್ಕರಿಸಿದ್ದರು. ಪ್ರೊ.ಸಿ.ಪಿ.ಸಿದ್ದಾಶ್ರಮ ಅವರನ್ನು ಕುಲಪತಿ ಹುದ್ದೆಗೆ ಪರಿಗಣಿಸಬೇಕು ಎಂದು ಸರ್ಕಾರವು ಮೂರು ಬಾರಿ ರಾಜ್ಯಪಾಲರಿಗೆ ಶಿಫಾರಸು ಮಾಡಿತ್ತು. ಈ ಶಿಫಾರಸನ್ನು ರಾಜ್ಯಪಾಲರು ತಿರಸ್ಕರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT