ಮದ್ಯವೇ ದೇವರಿಗೆ ನೈವೇದ್ಯ!

7
ಅಡ್ಡ ಬೀಳುವ ಭಕ್ತರ ಬೆನ್ನ ಮೇಲೆಯೇ ನಡೆಯುವ ಸುಂಗಟಾನ ಸಿದ್ದಪ್ಪ ಮುತ್ಯಾ

ಮದ್ಯವೇ ದೇವರಿಗೆ ನೈವೇದ್ಯ!

Published:
Updated:
ಮದ್ಯವೇ ದೇವರಿಗೆ ನೈವೇದ್ಯ!

ಮುದ್ದೇಬಿಹಾಳ: ಹಾಲುಮತ (ಕುರುಬ) ಸಮಾಜದವರು ಹೆಚ್ಚಾಗಿ ನಡೆದುಕೊಳ್ಳುವ ಸುಂಗಟಾನ ಸಿದ್ದಪ್ಪ ಮುತ್ಯಾನ ಪಲ್ಲಕ್ಕಿ ವಿಶೇಷವೆಂದರೆ, ಪಲ್ಲಕ್ಕಿ ಹೊತ್ತವರು ಜನರ ಮೇಲೆಯೇ ನಡೆಯುತ್ತ ಹೋಗುತ್ತಾರೆ. ತಮ್ಮ ವಿವಿಧ ಬೇಡಿಕೆಗಳ ಈಡೇರಿಸುವಂತೆ ಬೇಡಿಕೊಂಡವರು ಈ ಮುತ್ಯಾನ ಪಲ್ಲಕ್ಕಿ ಬರುವ ಸಮಯದಲ್ಲಿ ಮಾರ್ಗದಲ್ಲಿಯೇ ಅಡ್ಡ ಬೀಳುತ್ತ ಹೋಗುತ್ತಾರೆ. ಸಿದ್ದಪ್ಪ ಮುತ್ಯಾನ ಪಲ್ಲಕ್ಕಿ ಹೊತ್ತವರು ಭಕ್ತರ ಮೇಲೆಯೇ ನಡೆಯುತ್ತಲೇ ಹೋಗುತ್ತಾರೆ. ಮದ್ಯವೇ ಇಲ್ಲಿ ದೇವರಿಗೆ ನೈವೇದ್ಯ ಎಂಬುದು ವಿಶೇಷ.

‘ಏಳು ಕೋಟಿ, ಏಳು ಕೋಟಿಗೋ’ ಎಂದು ಜಯ ಘೋಷ ಮಾಡುತ್ತ ಸಾಗುವ ಈ ಪಲ್ಲಕ್ಕಿ ಮಾರ್ಗ ಆರಂಭವಾಗುವುದು ಸಿಂದಗಿ ತಾಲ್ಲೂಕಿನ ಸುಂಗಟಾನ ಗ್ರಾಮದಿಂದ. ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಈ ಪಲ್ಲಕ್ಕಿ ಯಾತ್ರೆ, ದಾರಿಯುದ್ದಕ್ಕೂ ಬರುವ ಗ್ರಾಮಗಳಲ್ಲಿ ತಂಗಿ, ಅಲ್ಲಿಯ ಭಕ್ತರನ್ನು ಹರಸುತ್ತ ಬರಲಿದೆ.

ಹೋಳಿ ಹುಣ್ಣಿಮೆ ಆದ ಮರುದಿನ ಸುಂಗಟಾನ ಬಿಡುವ ಈ ಭಕ್ತರು ಅಲ್ಲಿಂದ ಕೃಷ್ಣಾ ನದಿಯಲ್ಲಿ ದೇವರ ಮೂರ್ತಿಗಳನ್ನು, ಪಲ್ಲಕ್ಕಿ, ದೇವರಿಗೆ ತೊಡಿಸುವ ಬಟ್ಟೆಗಳನ್ನು ತೊಳೆದುಕೊಂಡು ಮರಳಿ ಯುಗಾದಿ ದಿನದಂದು ಮರಳಿ ಸುಂಗಟಾನ ಗ್ರಾಮ ಸೇರುತ್ತಾರೆ.

ಸೋಮವಾರ ಸಂಜೆ ತಂಗಡಗಿಗೆ ಬಂದ ಸುಂಗಟಾನ ಸಿದ್ದಪ್ಪ ಮುತ್ಯಾನ ಪಲ್ಲಕ್ಕಿ ಉತ್ಸವವನ್ನು ಸಹಸ್ರಾರು ಭಕ್ತರು ಸಂಭ್ರಮದಿಂದ ಸ್ವಾಗತಿಸಿದರು. ದೂರದ ಊರುಗಳಿಂದ ಬರುವ ಭಕ್ತರನ್ನು ಸ್ವಾಗತಿಸುವದರ ಜೊತೆಗೆ ಅವರಿಗೆ ಎಲ್ಲ ರೀತಿಯ ಆದರ ಅತಿಥ್ಯವನ್ನು ತಂಗಡಗಿಯ ಜನತೆ ಮಾಡುತ್ತ ಬಂದಿದ್ದಾರೆ.

ಸೋಮವಾರ ಸಂಜೆ ತಂಗಡಗಿ ಸಮೀಪದ ಕುಂಚಗನೂರ ಬಳಿ ಇರುವ ಕೃಷ್ಣಾ ನದಿ ದಂಡೆಯಲ್ಲಿ ಪಲ್ಲಕ್ಕಿ, ಬೆಳ್ಳಿ ದೇವರುಗಳ ಮೂರ್ತಿಗಳನ್ನು ತೊಳೆಯುವ (ಗಂಗಾಸ್ನಾನ) ಕೆಲಸ ಪೂಜಾರಿಗಳಿಂದ ಶೃದ್ಧೆಯಿಂದ ನಡೆಯಿತು. ದೂರದ ಊರುಗಳಿಂದ ಬಂದ ಭಕ್ತರು ತಮ್ಮೂರಿನಿಂದ ತಂದ ಬಾನ ( ಕಲಿಸಿದ ಅನ್ನ, ಮೊಸರು), ರೊಟ್ಟಿ ಸೇರಿದಂತೆ ಮದ್ಯದ ಬಾಟಲಿಗಳನ್ನು ಹಾಗೂ ಮತ್ತಿತರ ಪದಾರ್ಥಗಳನ್ನು ದೇವರಿಗೆ ಎಡೆಯ ರೂಪದಲ್ಲಿ ಕೊಡುವ ಸಂಪ್ರದಾಯದೊಂದಿಗೆ ಮದ್ಯವನ್ನೂ ಸ್ಥಳದಲ್ಲಿಯೇ ಸ್ವೀಕರಿಸುವ ರೂಢಿ ಈ ಪಲ್ಲಕ್ಕಿ ಉತ್ಸವದ ವೈಶಿಷ್ಟ್ಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry