‘ಕೋರ್ಟ್‌ನಲ್ಲಿರುವ ದೂರುಗಳ ಚರ್ಚೆಯಿಲ್ಲ’

7
ಜನಸ್ಪಂದನೆ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಸ್ಪಷ್ಟನೆ

‘ಕೋರ್ಟ್‌ನಲ್ಲಿರುವ ದೂರುಗಳ ಚರ್ಚೆಯಿಲ್ಲ’

Published:
Updated:

ರಾಯಚೂರು: ‘ಜನಸ್ಪಂದನ ಸಭೆಗೆ ಬರುವ ಸಾರ್ವಜನಿಕರು ತಮ್ಮ ದೂರುಗಳು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿ ಇದ್ದಾಗ ಅದನ್ನು ಜನಸಂಪರ್ಕ ಸಭೆಯಲ್ಲಿ ಚರ್ಚಿಸಲು ಬರುವುದಿಲ್ಲ’ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜನಸ್ಪಂದನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಾರ್ಡ್ ಸಂಖ್ಯೆ 34 ಅಸ್ಕಿಹಾಳ್‌ದಲ್ಲಿ ಜ್ಞಾನಜ್ಯೋತಿ ಶಾಲೆ ಹತ್ತಿರ ಮುಖ್ಯರಸ್ತೆಗೆ ಹೊಂದಿಕೊಂಡು ಬಾರ್‌ ತೆರೆಯುವುದಕ್ಕೆ ಅನುಮತಿ ನೀಡಿರುವುದನ್ನು ಬೈಪಾಸ್‌ ರಸ್ತೆಗೆ ಸ್ಥಳಾಂತರಿಸಬೇಕು ಎಂದು ಅಸ್ಕಿಹಾಳ ನಿವಾಸಿ ಎಂ.ವಸಂತಕುಮಾರ ಜಿಲ್ಲಾಧಿಕಾರಿಗೆ ಮನವಿ ನೀಡಿದರು.

‘ಅಬಕಾರಿ ಕಾಯ್ದೆ ಪ್ರಕಾರ ಕಾನೂನು ಉಲ್ಲಂಘಿಸಿ ಬಾರ್‌ ತೆರೆದಿದ್ದರೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಹೇಳಿದರು.

ರಾಯಚೂರು ನಗರದ ಉಸ್ಮಾನಿಯಾ ತರಕಾರಿ ಮಾರುಕಟ್ಟೆ ಅಧ್ಯಕ್ಷ ಎನ್.ಮಹಾವೀರ ದೂರು ಸಲ್ಲಿಸಿ, ‘ಮಾರುಕಟ್ಟೆಯಲ್ಲಿ ತರಕಾರಿ ಮಾರಾಟ ಮಾಡುವ ರೈತರಿಗೆ ಕುಡಿಯುವ ನೀರು, ಶೌಚಾಲಯ ಸೇರಿ ಇತರೆ ಅಗತ್ಯ ಮೂಲ ಸೌಕಾರ್ಯ ಕಲ್ಪಿಸಲು ಪೌರಾಯುಕ್ತರಿಗೆ ಸೂಚಿಸಬೇಕು’ ಕೋರಿದರು. ‘ಪೌರಾ ಯುಕ್ತರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಹೇಳಿದರು.

ಛಲವಾದಿ ಮಹಾಸಭಾ ಅಧ್ಯಕ್ಷ ರವೀಂದ್ರ ಪಟ್ಟಿ ದೂರು ಸಲ್ಲಿಸಿ ‘1992 ರಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಯನ್ನು ಪ್ರತಿಷ್ಠಾಪಿಸಲಾಗಿದೆ. ಪುತ್ಥಳಿ ಪ್ರತಿಷ್ಠಾಪಿಸಿ 26 ವರ್ಷವಾಗಿದ್ದು. ವೃತ್ತದ ಸುತ್ತಮುತ್ತಲಿರುವ ಗ್ರೀಲ್, ಹೈಮಾಸ್ ದೀಪ ಕಂಬಗಳು ತುಕ್ಕು ಹಿಡಿದಿವೆ. ಇವುಗಳನ್ನು ಬದಲಾಯಿಸುವಂತೆ ಅನೇಕ ಸಭೆಯಲ್ಲಿ ತಮ್ಮ ಗಮನ ಸೆಳೆದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ರಸ್ತೆ ಅಗಲೀಕರಣ ಕಾಮಗಾರಿ ಪೂರ್ಣಗೊಂಡಿರುವುದರಿಂದ ಶೀಘ್ರವೇ ಅಂಬೇಡ್ಕರ್ ವೃತ್ತವನ್ನು ನವೀಕರಿಸಿ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಬೇಕು’ ಎಂದು ಕೋರಿದರು.

ಆದಷ್ಟು ಶೀಘ್ರ ಸಮಸ್ಯೆಯನ್ನು ಪರಿಹರಿಸಲಾಗುವುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry