‘17 ವರ್ಷ ಸೇವೆ ಪೂರೈಸಿ ಬರುವುದಾಗಿ ಹೇಳಿದ್ದ..’

ಶುಕ್ರವಾರ, ಮಾರ್ಚ್ 22, 2019
26 °C

‘17 ವರ್ಷ ಸೇವೆ ಪೂರೈಸಿ ಬರುವುದಾಗಿ ಹೇಳಿದ್ದ..’

Published:
Updated:
‘17 ವರ್ಷ ಸೇವೆ ಪೂರೈಸಿ ಬರುವುದಾಗಿ ಹೇಳಿದ್ದ..’

ಹಾಸನ: ನಾಲ್ಕು ವರ್ಷಗಳಿಂದ ದೇಶ ಕಾಯುತ್ತಿದ್ದ ಯೋಧ ಎಚ್.ಎಸ್.ಚಂದ್ರ ಅವರಿಗೆ ಹುಟ್ಟೂರಲ್ಲಿ ಮನೆ ಕಟ್ಟುವ ಕನಸು ನನಸಾಗಿತ್ತು. ಇನ್ನೇನು ಕೆಲವೇ ದಿನಗಳಲ್ಲಿ ಕಂದನನ್ನು ಕಾಣುವ ಮಹದಾಸೆ ಹೊಂದಿದ್ದರು. ಆದರೆ, ವಿಧಿಯಾಟವೇ ಬೇರೆಯಾಗಿತ್ತು.

ಛತ್ತೀಸಗಡದ ಸುಕ್ಮಾ ಜಿಲ್ಲೆಯಲ್ಲಿ ಮಂಗಳವಾರ ನಕ್ಸಲರು ನಡೆಸಿದ ಸ್ಫೋಟಕ್ಕೆ ಚಂದ್ರ ಬಲಿಯಾಗಿದ್ದು, ಅವರ ಮನೆಯಲ್ಲೀಗ ಮೌನ. ಕುಟುಂಬ ಸದಸ್ಯರ ನಿಲ್ಲದ ಕಣ್ಣೀರು.

ಅರಕಲಗೂಡು ತಾಲ್ಲೂಕು ಹರದೂರು ಗ್ರಾಮದ ಸ್ವಾಮಿಗೌಡ-ಕಾಳಮ್ಮ ಮನೆಯಲ್ಲಿ ಮಾರ್ಚ್ 8ರಂದು ನಡೆದಿದ್ದ ಗೃಹಪ್ರವೇಶ ಸಂಭ್ರಮ ಮನಸ್ಸಿನಿಂದ ಮಾಸುವ ಮುನ್ನವೇ ಸಾವಿನ ಬರಸಿಡಿಲು ಬಡಿದಿದೆ. ಮನೆಯಷ್ಟೇ ಅಲ್ಲ, ಊರನ್ನೂ ದುಃಖ ಸಾಗರದಲ್ಲಿ ಮುಳುಗಿಸಿದೆ.

ನಾಲ್ಕು ವರ್ಷಗಳ ಹಿಂದೆಯಷ್ಟೇ ಕೇಂದ್ರ ಮೀಸಲು ಪೊಲೀಸ್‌ ಪಡೆಯ (ಸಿಆರ್‌ಪಿಎಫ್‌) ಯೋಧನಾಗಿ ದೇಶ ಕಾಯುವ ಕೆಲಸಕ್ಕೆ ಸೇರಿದ್ದರು. ವರ್ಷದ ಹಿಂದಷ್ಟೇ ದೂರದ ಸಂಬಂಧಿ, ಮಾರಗೌಡನಹಳ್ಳಿಯ ಪೃಥ್ವಿ ಜತೆ ಸಪ್ತಪದಿ ತುಳಿದು ಹೊಸ ಜೀವನ ಆರಂಭಿಸಿದ್ದರು.

ಫೆಬ್ರುವರಿ 17ರಂದು ರಜೆ ಮೇಲೆ ಊರಿಗೆ ಬಂದಿದ್ದ ಚಂದ್ರ, 18ರಂದು ಪತ್ನಿಗೆ ನಡೆದ ಸೀಮಂತ ಕಾರ್ಯದಲ್ಲಿ ಭಾಗವಹಿಸಿದ್ದರು. ಮಾರ್ಚ್ 8ರಂದು ಅಣ್ಣಂದಿರ ಮನೆಗಳ ಗೃಹಪ್ರವೇಶ ಮಾಡಿ ಮಾರ್ಚ್ 11ರಂದು ಮತ್ತೆ ಕರ್ತವ್ಯಕ್ಕೆ ಮರಳಿದ್ದರು.

ಸ್ವಾಮಿಗೌಡ ತನ್ನ ಮೂವರು ಮಕ್ಕಳಿಗೂ ಮೂರು ಮನೆ ಕಟ್ಟಿಸಿದ್ದಾರೆ. ಮೂರು ಕಳಶಗಳಾಗುತ್ತವೆ ಎನ್ನುವ ಕಾರಣಕ್ಕೆ ಎರಡು ಮನೆಗಳ ಪ್ರವೇಶ ಕಾರ್ಯವನ್ನಷ್ಟೇ ಮುಗಿಸಿ, ಚಂದ್ರನಿಗೆ ಸೇರಿದ ಗೃಹಪ್ರವೇಶ ಕಾರ್ಯವನ್ನು ಮುಂದೂಡಲಾಗಿತ್ತು.

‘ಬಾಲ್ಯದಿಂದಲೂ ಸೇನೆ ಸೇರಿ ದೇಶಸೇವೆ ಮಾಡಬೇಕೆಂಬ ಹೆಬ್ಬಯಕೆ ಹೊಂದಿದ್ದ. ಪ್ರತಿದಿನ ಕಠಿಣ ತಯಾರಿ ನಡೆಸಿ, ನೇಮಕಾತಿ ರ‍್ಯಾಲಿಯಲ್ಲಿ ಸೇನೆಗೂ ಸೇರಿದ. ವಾರಕ್ಕೆ ಎರಡು ಬಾರಿ ಕರೆ ಮಾಡಿ ಯೋಗಕ್ಷೇಮ ವಿಚಾರಿಸುತ್ತಿದ್ದ. ಮಗು ಹುಟ್ಟಿದ ನಂತರ ಊರಿಗೆ ಬರುತ್ತೇನೆ. ಆಗ ಹೊಸ ಮನೆ ಪ್ರವೇಶ ಕಾರ್ಯ ಮಾಡಿದರಾಯಿತು ಎಂದು ಹೇಳಿ ಹೋಗಿದ್ದ’ ಎಂದು ಯೋಧನ ಅಣ್ಣ ತಮ್ಮಣ್ಣ ಗದ್ಗದಿತರಾದರು.

‘ಸೇನೆಯಲ್ಲಿ ವಾಹನ ಚಾಲಕನಾಗಿದ್ದ ಮಗನಿಗೆ ಕೆಲಸ ಬಿಟ್ಟು ಊರಿನಲ್ಲಿಯೇ ಯಾವುದಾದರೂ ಉದ್ಯೋಗ ಮಾಡಿಕೊಂಡು ಕಣ್ಣ ಮಂದೆ ಇರುವಂತೆ ಹೇಳಿದ್ದೆ. ವಾಪಸ್‌ ಬರಲು ಹಣ ಕಟ್ಟಬೇಕು ಎಂದಿದ್ದ. ಹಣದ ವ್ಯವಸ್ಥೆಯನ್ನೂ ಮಾಡುವುದಾಗಿ ಹೇಳಿದ್ದೆ. ಆದರೆ, ಅವನು 17 ವರ್ಷ ಸೇವೆ ಪೂರ್ಣಗೊಳಿಸಿಯೇ ಬರುವುದಾಗಿ ಹಟ ಹಿಡಿದ. ಪತ್ನಿಯನ್ನು ತವರು ಮನೆಗೆ ಬಿಟ್ಟು, ಭಾನುವಾರ ಸಂಜೆ ನಗುನಗುತ್ತಲೇ ಕೆಲಸಕ್ಕೆ ಹೊರಟ. ಈಗ ಆತ ನಮ್ಮೊಂದಿಗೆ ಇಲ್ಲ ಎಂಬುದನ್ನು ಊಹಿಸಿಕೊಳ್ಳಲು ಆಗುತ್ತಿಲ್ಲ’ ಎಂದು ಸ್ವಾಮೀಗೌಡ ಕಣ್ಣೀರಿಟ್ಟರು.

‘ಮಂಗಳವಾರ ಬೆಳಿಗ್ಗೆ ಕರ್ತವ್ಯಕ್ಕೆ ಹಾಜರಾಗಿದ್ದ. ಆತ ಚಾಲನೆ ಮಾಡುತ್ತಿದ್ದ ಟ್ರಕ್‌ನಲ್ಲಿ 12 ಜನ ಇದ್ದರು. ನಕ್ಸಲರು ನಡೆಸಿದ ಸ್ಫೋಟಕ್ಕೆ 9 ಮಂದಿ ಸ್ಥಳದಲ್ಲಿಯೇ ಸತ್ತರು. ನನ್ನ ಮಗನ ಕಾಲುಗಳು ತುಂಡಾಗಿ, ಸ್ಥಳದಲ್ಲಿಯೇ ಮೃತಪಟ್ಟ ಎಂದು ಮಿಲಿಟರಿ ಅಧಿಕಾರಿಗಳು ವಿಷಯ ತಿಳಿಸಿದರು’ ಎಂದು ಸ್ವಾಮೀಗೌಡ ಘಟನೆ ಕುರಿತು ವಿವರಿಸಿದರು.

‘ಚಂದ್ರ ಕಷ್ಟದಿಂದ ಬೆಳೆದವನು. ಮನೆಯವರ ವಿರೋಧದ ನಡುವೆಯೂ ದೇಶ ಸೇವೆ ಮಾಡಬೇಕು ಎಂಬ ಮಹದಾಸೆಯಿಂದ ಸೇನೆಗೆ ಸೇರಿದ್ದ. ಭವಿಷ್ಯದಲ್ಲಿ ಮತ್ತಷ್ಟು ಸೇವೆಯ ಜೊತೆಗೆ, ನಂಬಿದವರಿಗೆ ಏನಾದರೂ ಮಾಡಬೇಕು ಎಂದು ಸದಾ ತುಡಿಯುತ್ತಿದ್ದ’ ಎಂದು ಸ್ಥಳೀಯರಾದ ರಾಮಚಂದ್ರ ನೆನಪಿಸಿಕೊಂಡರು.

ಅಂತ್ಯಕ್ರಿಯೆ ಇಂದು

ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ತರಲಾಗುವ ಶವವನ್ನು, ರಾತ್ರಿ ಹಾಸನದ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಇಡಲಾಗುವುದು. ಗುರುವಾರ ಹರದೂರಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಇದಕ್ಕಾಗಿ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿದೆ.

**

ಮೃತ ಯೋಧನ ಕುಟುಂಬಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೆಚ್ಚಿನ ಪರಿಹಾರ ನೀಡಬೇಕು.

- ಎಚ್‌.ಡಿ.ರೇವಣ್ಣ, ಶಾಸಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry