ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಕ್ಕೆ ಬಂದರೆ ಪ್ರತಿ ಕ್ಷೇತ್ರದಲ್ಲಿ ಕ್ಯಾಂಪ್

ರೈತರು, ಸಾರ್ವಜನಿಕರೊಂದಿಗಿನ ಸಂವಾದದಲ್ಲಿ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಹೇಳಿಕೆ
Last Updated 15 ಮಾರ್ಚ್ 2018, 7:25 IST
ಅಕ್ಷರ ಗಾತ್ರ

ಶಿರಸಿ: ‘ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಒಂದು ವಾರ ಕ್ಯಾಂಪ್ ಹಾಕಿ, ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿಕೊಂಡು, ಸಮಸ್ಯೆಗಳನ್ನು ಪರಿಹರಿಸಲಾಗುವುದು’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಉತ್ತರ ಕನ್ನಡ ಜಿಲ್ಲೆಯ ಜ್ವಲಂತ ಸಮಸ್ಯೆಗಳ ಕುರಿತು ಬುಧವಾರ ಇಲ್ಲಿನ ರೈತರು, ಸಹಕಾರಿಗಳು, ಅತಿಕ್ರಮಣದಾರರು, ಸಾರ್ವಜನಿಕರೊಂದಿಗೆ ನಡೆಸಿದ ಸಂವಾದದಲ್ಲಿ ಮಾತನಾಡಿದರು. ‘ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಐಎಎಸ್ ಅಧಿಕಾರಿಗಳು ಮಾಡುವ ಕಾನೂನು, ಜನಸಾಮಾನ್ಯರಿಗೆ ಹೊರೆಯಾಗಿ ಪರಿಣಮಿಸುತ್ತಿದೆ. ಅರಣ್ಯ ಹಕ್ಕು ಕಾಯ್ದೆಯಡಿ ಹಕ್ಕುಪತ್ರ ಪಡೆಯಲು, ಅತಿಕ್ರಮಣದಾರರಿಗೆ ವಿಧಿಸಿರುವ ಮೂರು ತಲೆಮಾರುಗಳ ದಾಖಲೆ ಪೂರೈಕೆಯ ನಿಯಮವನ್ನು, ನಾವು ಅಧಿಕಾರಕ್ಕೆ ಬಂದರೆ ಸರಳೀಕರಣಗೊಳಿಸುತ್ತೇವೆ’ ಎಂದರು.

ಕೆರೆಗಳ ಪುನರುಜ್ಜೀವನ ಕುರಿತಂತೆ ಶಿರಸಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, ‘ಜಲ ಮೂಲಗಳಾದ ಕೆರೆಗಳನ್ನು ತುಂಬಿಸುವ ವಿಚಾರದಲ್ಲಿ ಸರ್ಕಾರಗಳು ಎಡವುತ್ತಿವೆ. ಕೆರೆಗಳ ಹೂಳೆತ್ತುವ ಹೆಸರಿನಲ್ಲಿ ದುಡ್ಡು ಹೊಡೆಯಲಾಗುತ್ತಿದೆ. ಜೆಡಿಎಸ್ ಅಧಿಕಾರಕ್ಕೆ ಬಂದರೆ ಸರ್ಕಾರ ಮತ್ತು ಸಾರ್ವಜನಿಕರ ನಡುವಿನ ಅಂತರ ಕಡಿಮೆ ಮಾಡಿ, ಸಾರ್ವಜನಿಕರ ಸಹಭಾಗಿತ್ವದಲ್ಲಿ ಕೆರೆಗಳ ಹೂಳೆತ್ತುವ ಕಾರ್ಯ ಮಾಡಲಾಗುವುದು. 5–10 ಲಕ್ಷ ಕುಟುಂಬಗಳ ಒಳಗೊಳ್ಳುವಿಕೆಯಲ್ಲಿ ಸಸಿಗಳನ್ನು ಬೆಳೆಸಿ, ಅರಣ್ಯ ವಿಸ್ತರಣೆಗೆ ಆದ್ಯತೆ ನೀಡಲಾಗುವುದು. ಶಿರಸಿ ಜೀವಜಲ ಕಾರ್ಯಪಡೆ ಕೆರೆ ಹೂಳೆತ್ತಿರುವ ಕಾರ್ಯ ಮಾಡಿರುವುದು ಅಭಿನಂದನೀಯ’ ಎಂದರು.

ಘಟ್ಟದ ಮೇಲಿನ ತಾಲ್ಲೂಕುಗಳನ್ನೊಳಗೊಂಡ ಪ್ರತ್ಯೇಕ ಜಿಲ್ಲೆ ರಚನೆ ಸಂಬಂಧ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ದೊಡ್ಡ ಜಿಲ್ಲೆಯಾಗಿರುವ ಉತ್ತರ ಕನ್ನಡದಲ್ಲಿ, ಸಾರ್ವಜನಿಕರು ಕೆಲಸ–ಕಾರ್ಯಗಳಿಗೆ ಜಿಲ್ಲಾ ಕೇಂದ್ರಕ್ಕೆ ಹೋಗಲು ನೂರಾರು ಕಿ.ಮೀ ಪ್ರಯಾಣಿಸಬೇಕಾಗುತ್ತದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಈ ಕುರಿತು ಹಿರಿಯರು, ತಜ್ಞರೊಂದಿಗೆ ಚರ್ಚಿಸಿ ನಿರ್ಧರಿಸುತ್ತೇನೆ’ ಎಂದರು.

ಇ–ಸ್ವತ್ತು ಸಮಸ್ಯೆ, ಬೆಟ್ಟಭೂಮಿ, ವೈದ್ಯರ ಕೆಪಿಎನ್ ಕಾಯ್ದೆಯಲ್ಲಿ ತೊಡಕು, ಫಾರ್ಮ್‌ ನಂಬರ್ 3, ಆಟೊರಿಕ್ಷಾ ಚಾಲಕರ ಸಮಸ್ಯೆ, ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಹಸ್ತಕ್ಷೇಪ, ಸ್ತ್ರೀಶಕ್ತಿ ಸಂಘಗಳ ಸಬಲೀಕರಣ, ದೇವಾಲಯಗಳ ಆಡಳಿತದಲ್ಲಿ ಸರ್ಕಾರದ ಹಸ್ತಕ್ಷೇಪ, ಬೈಪಾಸ್ ರಸ್ತೆ ನಿರ್ಮಾಣ ಹೀಗೆ ಸಾರ್ವಜನಿಕರು ಕೇಳಿದ ಹಲವಾರು ಪ್ರಶ್ನೆಗಳಿಗೆ, ಅವರು ಶಾಂತವಾಗಿ ಉತ್ತರಿಸಿದರು. ಒಂದೂವರೆ ತಾಸಿಗೂ ಅಧಿಕ ಕಾಲ ಸಂವಾದ ನಡೆಯಿತು. ಜೆಡಿಎಸ್ ಅಭ್ಯರ್ಥಿ ಶಶಿಭೂಷಣ ಹೆಗಡೆ ಸಂವಾದ ನಡೆಸಿಕೊಟ್ಟರು. ಪಕ್ಷದ ಪ್ರಮುಖರಾದ ಬಸವರಾಜ ಹೊರಟ್ಟಿ, ಮಧು ಬಂಗಾರಪ್ಪ, ಆನಂದ ಅಸ್ನೋಟಿಕರ, ಬಿ.ಆರ್.ನಾಯ್ಕ ಇದ್ದರು.

ನಿಮ್ಮ ಹುಡುಗನನ್ನು ಕಳುಹಿಸಿಕೊಡಿ
‘ನಿಮ್ಮ ಮನೆ ಹುಡುಗನನ್ನು ವಿಧಾನಸಭೆಗೆ ಕಳುಹಿಸಿಕೊಡಿ. ಶಿರಸಿ ಭಾಗದ ಅಭಿವೃದ್ಧಿ ಮಾಡಲು ನಮಗೂ ಸುಲಭವಾಗುತ್ತದೆ’ ಎಂದು ಕುಮಾರಸ್ವಾಮಿ, ಜೆಡಿಎಸ್ ಅಭ್ಯರ್ಥಿ ಶಶಿಭೂಷಣ ಹೆಗಡೆ ಅವರೆಡೆಗೆ ಕೈ ತೋರಿಸುತ್ತ ಹೇಳಿದರು.

ಖಾತೆ ಸಾಲ ದೊಡ್ಡ ಮೊತ್ತವಲ್ಲ: ‘ಜೆಡಿಎಸ್ ಅಧಿಕಾರಕ್ಕೆ ಬಂದರೆ, ರೈತರ ₹ 51ಸಾವಿರ ಕೋಟಿ ಸಾಲ ಮನ್ನಾ ಮಾಡುವು
ದಾಗಿ ಹೇಳಿದ್ದೇನೆ. ಇಷ್ಟು ದೊಡ್ಡ ಮೊತ್ತದಲ್ಲಿ ರೈತರು ಮಾಡಿರುವ ಖಾತೆಸಾಲದ ₹ 300 ಕೋಟಿ ದೊಡ್ಡ ಮೊತ್ತವೇನು ಆಗಲಾರದು. ತಾಂತ್ರಿಕ ಸಮಸ್ಯೆ ಪರಿಹರಿಸಿ, ಸಾಲ ಮನ್ನಾ ಮಾಡಲಾಗುವುದು’ ಎಂದರು.

‘ಸಂಸದರು ಒಡೆದು ಆಳುವ ನೀತಿ ಬಿಡಲಿ’
ಶಿರಸಿ:
‘ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಸ್ಥಳೀಯ ಸಂಸದರು ಸಮಾಜದಲ್ಲಿ ಒಡೆದಾಳುವ ನೀತಿಯನ್ನು ಬಿಡಬೇಕು. ಜವಾಬ್ದಾರಿ ಸ್ಥಾನದಲ್ಲಿರುವ ಅವರು ಘನತೆಯಿಂದ ಮಾತನಾಡಿ, ಜಿಲ್ಲೆಯ ಸಾಮರಸ್ಯ ಕಾಪಾಡಲು ಪ್ರಯತ್ನಿಸಬೇಕು’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಬುಧವಾರ ಇಲ್ಲಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಂಸದರು ತಾವು ಹಿಂದೂ ಎಂದು ಹೇಳಿಕೊಳ್ಳುತ್ತಾರೆ. ಆದರೆ, ಅವರ ಮಾತುಗಳು ಅವರನ್ನು ಹಿಂದೂವಾಗಿ ನೋಡುವಂತೆ ಮಾಡುವುದಿಲ್ಲ. ಅನಾಗರಿಕ ಮಾತುಗಳು ಅವರ ಬಾಯಿಂದ ಹೊರಬರುತ್ತವೆ. ಸಮಾಜ ಒಡೆಯುವ ಕೆಲಸದಿಂದ ಯಾವ ಸಾಧನೆಯೂ ಆಗದು. ಅಭಿವೃದ್ಧಿಯ ಕಡೆ ಸಚಿವರು ಗಮನ ಕೊಡಬೇಕು. ಅನಂತಕುಮಾರ ಹೆಗಡೆ ಅವರು ಬಾಯಿಗೆ ಬಂದಂತೆ ಮಾತನಾಡಿಕೊಂಡು ಓಡಾಡುವ ಬದಲು, ಜಿಲ್ಲೆಯ ಇ ಸ್ವತ್ತು, ಅರಣ್ಯ ಅತಿಕ್ರಮಣದಂತಹ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಲಿ. ಜಿಲ್ಲಾ ಉಸ್ತುವಾರಿ ಸಚಿವರಿಂದಲೂ, ಜಿಲ್ಲೆಗೆ ಯಾವುದೇ ಪ್ರಯೋಜನ ಆಗಿಲ್ಲ. ಹಲವಾರು ಕಾರ್ಖಾನೆಗಳು ಅವರಿಂದಲೇ ಮುಚ್ಚಿವೆ. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಿಂದ ಜಿಲ್ಲೆಗೆ ಯಾವುದೇ ಕೊಡುಗೆ ಇಲ್ಲ’ ಎಂದರು.

‘ನಾವು ಕಿಂಗ್ ಮೇಕರ್ ಆಗುವುದಿಲ್ಲ. ಆ ಬಗ್ಗೆ ಯೋಚನೆಯನ್ನೂ ಮಾಡಿಲ್ಲ. ಬಿಎಸ್ಪಿ ಜೊತೆ ಸೇರಿ ಸ್ವತಂತ್ರವಾಗಿ ಅಧಿಕಾರ ಹಿಡಿದು, ಎರಡೂ ರಾಷ್ಟ್ರೀಯ ಪಕ್ಷಗಳನ್ನು ಅಧಿಕಾರದಿಂದ ವಿಮುಕ್ತಿ ಮಾಡಲಿದ್ದೇವೆ. ಜಿಲ್ಲಾವಾರು ಪ್ರಣಾಳಿಕೆ ರಚಿಸುವ ಸಿದ್ಧತೆ ನಡೆಸಲಾಗಿದ್ದು, ಜಿಲ್ಲೆಯ ಎಲ್ಲ 6 ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ’ ಎಂದು ಹೇಳಿದರು. ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಶಾಸಕ ಮಧು ಬಂಗಾ
ರಪ್ಪ, ಜಿಲ್ಲಾ ಘಟಕದ ಅಧ್ಯಕ್ಷ ಬಿ. ಆರ್.ನಾಯ್ಕ, ಶಶಿಭೂಷಣ ಹೆಗಡೆ, ಆನಂದ ಅಸ್ನೋಟಿಕರ್ ಇದ್ದರು.

ಸ್ವಾಗತಕ್ಕೆ ಸಿದ್ಧತೆ
ಯಲ್ಲಾಪುರ:
ಜೆಡಿಎಸ್‌ನ ಕುಮಾರಪರ್ವ ಕಾರ್ಯಕ್ರಮದ ಅಂಗವಾಗಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಗುರುವಾರ (ಮಾ.15) ಪಟ್ಟಣಕ್ಕೆ ಭೇಟಿ ನೀಡಲಿದ್ದಾರೆ.

‘ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಫ್ಲೆಕ್ಸ್, ಬಂಟಿಂಗ್ಸ್, ಪತಾಕೆಗಳು ಕಂಗೊಳಿಸುತ್ತಿವೆ. ವೈಟಿಎಸ್ಎಸ್ ಮೈದಾನದಲ್ಲಿ ವೇದಿಕೆ ಸಿದ್ಧಗೊಳ್ಳುತ್ತಿದೆ. 10ಸಾವಿರ ಆಸನ ವ್ಯವಸ್ಥೆಗೊಳಿಸಲಾಗಿದೆ. 50ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆಯಿದೆ’ ಎಂದು ತಾಲ್ಲೂಕು ಘಟಕದ ಕಾರ್ಯಾಧ್ಯಕ್ಷ ಎನ್.ವಿ.ಭಟ್ ದೇವಸ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT