ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತ್ಯೇಕಿಸಿದರೆ ಸಿಎಂ ವಿರುದ್ಧ ಹೋರಾಟ

ವೀರಶೈವ –ಲಿಂಗಾಯತ ಪ್ರತ್ಯೇಕ ಮಾಡುವ ಚಿಂತನೆಗೆ ತೀವ್ರ ವಿರೋಧ– ಪ್ರತಿಭಟನೆ ಎಚ್ಚರಿಕೆ
Last Updated 15 ಮಾರ್ಚ್ 2018, 10:57 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ವೀರಶೈವ– ಲಿಂಗಾಯತ ಪ್ರತ್ಯೇಕ ಮಾಡಲು ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಂಡರೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹೋರಾಟ ಕೈಗೊಳ್ಳಲಾಗುವುದು ಎಂದು ತಾಲ್ಲೂಕು ವೀರಶೈವ ಲಿಂಗಾಯತ ಸಂಘದ ಪ್ರಧಾನ ಕಾರ್ಯದರ್ಶಿ ಪುಟ್ಟಬಸವರಾಜು ಎಚ್ಚರಿಕೆ ನೀಡಿದ್ದಾರೆ.

ಅವರು ತಾಲ್ಲೂಕು ವೀರಶೈವ ಲಿಂಗಾಯತ ಸಂಘದ ವತಿಯಿಂದ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಎಲ್ಲ ಜಾತಿಗಳಲ್ಲೂ ಒಳಪಂಗಡಗಳು ಇವೆ. ಆದರೆ ಎಲ್ಲರೂ ಒಂದಾಗಿ ಒಂದು ವೇದಿಕೆಯಡಿ ಮುನ್ನಡೆಯುತ್ತಿರುವ ಸಂದರ್ಭದಲ್ಲಿ ಜಾತಿಗಳ ನಡುವೆ ವಿಷಬೀಜ ಬಿತ್ತುವ ಕೆಲಸಕ್ಕೆ ಕಾಂಗ್ರೆಸ್‌ ಸರ್ಕಾರ ಕೈ ಹಾಕಿದೆ. ಪ್ರತ್ಯೇಕ ಧರ್ಮದ ಕುರಿತು ವರದಿ ನೀಡಲಾಗಿರುವ ನ್ಯಾಯಮೂರ್ತಿ ನಾಗಮೋಹನದಾಸ್‌ ಸಮಿತಿಯಲ್ಲಿ  ಲಿಂಗಾಯತ, ವೀರಶೈವರ ಆಚರಣೆಗಳ ಬಗ್ಗೆ ತಿಳಿಯದ ಅನ್ಯ ಜಾತಿಯವರನ್ನು ನೇಮಿಸಿ ವರದಿ ಪಡೆಯುತ್ತಿರುವುದೇ ಅವೈಜ್ಞಾನಿಕ ನಿರ್ಧಾರ ಎಂದು ದೂರಿದರು.

ಸಂಘದ ತಾಲ್ಲೂಕು ಉಪಾಧ್ಯಕ್ಷ ಬಿ.ಎಸ್‌.ಚಂದ್ರಶೇಖರ್‌ ಮಾತನಾಡಿ, ‘ವೀರಶೈವ ಲಿಂಗಾಯತರು ಎನ್ನುವ ವಿಂಗಡೆಣೆಯೊಂದಿಗೆ ಬೇರೆ ಮಾಡುವ ನಿರ್ಧಾರ ಕೈಗೊಂಡರೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗೆ ಮತ ಹಾಕದಂತೆ ಪ್ರಚಾರ ಕೈಗೊಳ್ಳಲಾಗುವುದು. ಬಸವ ತತ್ವದ ಮೇಲೆ ನಡೆಯುತ್ತಿರುವ ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮಿಗಳೇ ನಮಗೆ ಸುಪ್ರೀಂ’ ಎಂದರು.

ಸ್ವಾಮೀಜಿ ಈಗಾಗಲೇ ವೀರಶೈವ ಲಿಂಗಾಯತ ಎರಡು ಒಂದೇ ಎಂದು ಹೇಳಿದ್ದಾರೆ. ಚುನಾವಣೆಯ ಗಿಮಿಕ್‌ಗಾಗಿ ಜಾತಿಯನ್ನೇ ಇಬ್ಭಾಗ ಮಾಡಲು ಕಾಂಗ್ರೆಸ್‌ ಆಡಳಿತ ಇಳಿದಿರುವುದು ಪಕ್ಷದ ಬೆಳವಣಿಗೆಗೆ ಭಾರಿ ಹಿನ್ನಡೆಯಾಗಲಿದೆ ಎಂದು ಹೇಳಿದರು.

ನಿವೃತ್ತ ಮುಖ್ಯಶಿಕ್ಷಕ ಸದಾಶಿವಯ್ಯ ಮಾತನಾಡಿ, ಹಿರಿಯರಾದ ಶಾಮನೂರು ಶಿವಶಂಕರಪ್ಪ ಅವರ ಮಾತಿಗೆ ಬೆಲೆ ಕೊಡದ ಮುಖ್ಯಮಮತ್ರಿ ಅವರು ತಕ್ಕ ಪ್ರಾಯಶ್ಚಿತ್ತ ಅನುಭವಿಸಲಿದ್ದಾರೆ. ರಾಜ್ಯ ಸರ್ಕಾರ ಶಿಫಾರಸು ಮಾಡಿದ ಮಾತ್ರಕ್ಕೆ ಪ್ರತ್ಯೇಕ ಧರ್ಮವನ್ನಾಗಿ ಘೋಷಿಸಲು ಸಂವಿಧಾನದಲ್ಲಿ ಅವಕಾಶ ಇಲ್ಲ. ರಾಜ್ಯದಲ್ಲಿನ ಕೆಲವು ಮಠಾಧೀಶರು ರಾಜಕೀಯ ಮುಖಂಡರ ಕೈಗೊಂಬೆಗಳಂತೆ ವರ್ತಿಸುತ್ತ, ಭಾಷೆಯ ಮೇಲೆ ಹಿಡಿತ ಇಲ್ಲದವರಂತೆ ಮಾತನಾಡುತ್ತಿರುವುದನ್ನು ನಿಲ್ಲಿಸಬೇಕು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂಘಧ ಅಧ್ಯಕ್ಷ ಎಸ್‌.ಜಿ. ಸೋಮರುದ್ರಶರ್ಮ, ಗೌರವ ಅಧ್ಯಕ್ಷ ಶಿವಾನಂದಪ್ಪ, ಉಪಾಧ್ಯಕ್ಷ ಎಸ್‌.ಪಿ.ಮರಿಬಸಪ್ಪ, ಖಜಾಂಚಿ ಟಿ.ಎಸ್‌.ರುದ್ರಪ್ಪ, ಸಂಘದ ಹಿರಿಯ ಮುಖಂಡ ಸಿದ್ದಲಿಂಗಪ್ಪ, ಕೆ.ವಿ.ಪಾಪಣ್ಣ, ಜೆ.ವೈ.ಮಲ್ಲಪ್ಪ, ವಕೀಲರಾದ ವಿಜಯಕುಮಾರ್‌, ಆನಂದ್‌, ಸಂಘದ ಸಂಘಟನಾ ಕಾರ್ಯದರ್ಶಿ ಟಿ.ಎನ್‌.ಲಿಂಗಪ್ಪ, ಎಂ.ಎಸ್‌.ಸೋಮಶೇಖರ, ಸದಸ್ಯರಾದ ಸಿದ್ದರಾಮಣ್ಣ, ಕೆ.ಎಸ್‌. ಗಿರಿಯಪ್ಪ, ಎನ್‌.ಎಸ್‌.ಸೋಮಶೇಖರಯ್ಯ ಇದ್ದರು.

ವರದಿ ಒಪ್ಪಲು ಸಾಧ್ಯವೇ ಇಲ್ಲ
ವೀರಶೈವ ಸಂಘದ ಮುಖಂಡ ಎಸ್‌.ದಯಾನಂದ್‌ ಮಾತನಾಡಿ, ಮಂತ್ರಿಗಳು ನಾಡಿನ ಅಭಿವೃದ್ಧಿ ದೃಷ್ಟಿಯಿಂದ ಅಡಳಿತ ನಡೆಸುವುದನ್ನು ಬಿಟ್ಟು ಜಾತಿಗಳನ್ನು ವಿಭಜನೆ ಮಾಡಲು ಹೊರಟಿದ್ದಾರೆ. ವೀರಶೈವ ಲಿಂಗಾಯತ ಎರಡನ್ನೂ ಒಂದು ಮಾಡಿ ಪ್ರತ್ಯೇಕ ಧರ್ಮ ಮಾಡಲಿ ಎಂದರು.

ರಾಜ್ಯ ಸರ್ಕಾರ ನೇಮಿಸಿದ್ಧ ಸಮಿತಿ ವರದಿ ನೀಡಲು ಆರು ತಿಂಗಳು ಬೇಕು ಎಂದು ಕೇಳಿತ್ತು. ಆದರೆ ಚುನಾವಣೆ ಸಮೀಪವಾಗಿದ್ದರಿಂದ ಸಮಿತಿಯಿಂದ ಬಲವಂತವಾಗಿ ಎರಡೇ ತಿಂಗಳಿಗೆ ವರದಿ ಪಡೆದು ರಾಜಕೀಯವಾಗಿ ಬಳಸಿಕೊಳ್ಳಲು ಮುಂದಾಗಿದ್ದಾರೆ. ರಾಜಕೀಯ ದುರುದ್ದೇಶದ ಈ ವರದಿ ಒಪ್ಪಲು ಸಾಧ್ಯವೇ ಇಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT