ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹುಭಾಷೆಯ ಹಕ್ಕಿ: ನಿಕ್ಕಿ

Last Updated 15 ಮಾರ್ಚ್ 2018, 19:30 IST
ಅಕ್ಷರ ಗಾತ್ರ

‘ಈಗ ನಿಮ್ಮ ಜತೆ ಮಾತಾಡುತ್ತಿರುವಾಗ ನನಗೇ ಗೊಂದಲವಾಗ್ತಿದೆ. ಕನ್ನಡದ ಮಧ್ಯ ತಮಿಳು, ತೆಲುಗು, ಮಲಯಾಳಂ ಭಾಷೆಯ ಒಂದೊಂದು ಶಬ್ದಗಳು ನುಸುಳಿಬಿಡುತ್ತವೇನೋ’ ಎಂದು ನಗುತ್ತಲೇ ಮಾತಿಗಿಳಿದರು ನಿಕ್ಕಿ ಗರ್ಲಾನಿ. ಈ ಮಾತು ಅವರ ಕಾರ್ಯಕ್ಷೇತ್ರಗಳ ವೈವಿಧ್ಯವನ್ನೂ ಹೇಳುವಂತಿತ್ತು. ಅದನ್ನು ಸೂಚಿಸುವುದಕ್ಕಾಗಿಯೇ ಹೀಗೆ ಹೇಳಿದರೇನೋ ಎಂದು ಅನಿಸುವ ಹಾಗೆ ಅವರ ಕನ್ನಡ ಸ್ಪಷ್ಟವಾಗಿಯೇ ಇತ್ತು.

ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದ ಹುಡುಗಿ ನಿಕ್ಕಿ ಈಗ ಚೆನ್ನೈ ನಿವಾಸಿ. ಕನ್ನಡದ ಜತೆಗೇ ತಮಿಳು, ತೆಲುಗು ಮಲಯಾಳ ಭಾಷೆಗಳ ಚಿತ್ರಗಳಲ್ಲಿ ಅವಕಾಶಗಳನ್ನು ಗಿಟ್ಟಿಸಿಕೊಂಡು, ಹಲವು ಕಡೆ ಬೇರೂರಿ ಬೆಳೆಯುತ್ತಿರುವ ನಟಿ. ನಿಕ್ಕಿ ನಟಿಸಿರುವ ‘ಓ ಪ್ರೇಮವೇ’ ಚಿತ್ರ ಶುಕ್ರವಾರ(ಮಾ.16) ತೆರೆಕಾಣುತ್ತಿದೆ.

ಮನೋಜ್‌ ಕುಮಾರ್‌ ನಿರ್ದೇಶಿಸಿ, ನಾಯಕನಾಗಿ ನಟಿಸಿರುವ ‘ಓ ಪ್ರೇಮವೇ’ ಚಿತ್ರದಲ್ಲಿ ನಿಕ್ಕಿ, ಮೇಲ್ಮಧ್ಯಮ ವರ್ಗದ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ.

‘ಚಿತ್ರದ ಕಥೆ ಮತ್ತು ನನ್ನ ಪಾತ್ರದಲ್ಲಿನ ಗಟ್ಟಿತನವನ್ನು ನೋಡಿ ಈ ಚಿತ್ರವನ್ನು ಒಪ್ಪಿಕೊಂಡೆ. ಯುವಪೀಳಿಗೆಯ ಮನಸ್ಥಿತಿಗೆ ಸಂಬಂಧಿಸಿದ ಕಥೆ ಇದು. ಎಲ್ಲರೂ ತಮ್ಮ ಬದುಕಿನೊಟ್ಟಿಗೆ ಈ ಚಿತ್ರದ ಕಥೆಯನ್ನು ಹೋಲಿಸಿಕೊಳ್ಳಬಹುದು. ಇದು ಐದು ವರ್ಷಗಳ ಹಿಂದೆಯೇ ಶುರುವಾದ ಸಿನಿಮಾ. ಆದರೆ ಈ ಚಿತ್ರಕ್ಕೆ ಅದೊಂದು ಕೊರತೆ ಆಗುವುದಿಲ್ಲ. ಯಾಕೆಂದರೆ ಕೆಲವು ಭಾವನೆಗಳು ಸದಾಕಾಲ ಪ್ರಸ್ತುತ ಆಗಿರುತ್ತವೆ. ಎಷ್ಟೇ ಕಾಲ ಕಳೆದರೂ ಅವು ತಾಜಾ ಆಗಿಯೇ ಇರುತ್ತದೆ. ಇದು ಒಂದು ಕಾಲದ ಜನರಿಗೆ ಎಂದು ಮಾಡಿದ ಸಿನಿಮಾ ಅಲ್ಲ. ಎಲ್ಲ ವಯೋಮಾನದವರಿಗೆ ಎಲ್ಲ ಕಾಲದಲ್ಲಿಯೂ ಇಷ್ಟವಾಗುವಂಥ ಕಥೆ ಇದು. ಪ್ರೇಮಕಥೆಯ ಜತೆಗೇ ಕೌಟುಂಬಿಕ ಮೌಲ್ಯ, ಸ್ನೇಹ, ಸಂಬಂಧಗಳ ಪ್ರಾಮುಖ್ಯ ಎಲ್ಲವೂ ಈ ಸಿನಿಮಾದಲ್ಲಿದೆ’ ಎಂದು ‘ಓ ಪ್ರೇಮವೇ’ ಚಿತ್ರದ ಕುರಿತು ವಿವರಿಸುತ್ತಾರೆ ಅವರು.

ಹಲವು ಭಾಷೆಗಳ ಚಿತ್ರಗಳಲ್ಲಿ ನಟಿಸುತ್ತಿರುವುದು ಅವರಿಗೆ ಯಾವತ್ತೂ ಒಂದು ತೊಡಕು ಎಂದು ಅನಿಸಿಲ್ಲ. ‘ನನಗೆ ಅಂತ ಅಲ್ಲ, ಯಾವ ಕಲಾವಿದರಿಗೂ ಭಾಷೆ ಎನ್ನುವುದು ಒಂದು ತೊಡಕು ಅಲ್ಲವೇ ಅಲ್ಲ. ಯಾವುದೇ ಭಾಷೆಯಾದರೂ ನನ್ನ ಕೆಲಸ ನಟಿಸುವುದು. ಸಿನಿಮಾ ಮಾಡುವ ಕ್ರಮ ಎಲ್ಲ ಕಡೆಗಳಲ್ಲಿ ಒಂದೇ ಆಗಿರುತ್ತದೆ. ಆದ್ದರಿಂದ ಭಾಷೆಗಿಂತ ಒಳ್ಳೆಯ ಸಿನಿಮಾದಲ್ಲಿ ನಟಿಸುವುದು ನನಗೆ ಮುಖ್ಯ’ ಎನ್ನುತ್ತಾರೆ ನಿಕ್ಕಿ.

ಪಾತ್ರ, ಮತ್ತು ಚಿತ್ರಕಥೆಯನ್ನು ನೋಡಿ ಇಷ್ಟವಾದರೆ ಮಾತ್ರ ಅವರು ಸಿನಿಮಾವನ್ನು ಒಪ್ಪಿಕೊಳ್ಳುತ್ತಾರಂತೆ ನಿಕ್ಕಿ.

‘ನಿರ್ದೇಶಕರ ಕನಸಿಗೆ ನಾವು ಕಲಾವಿದರು ಜೀವ ಕೊಡುತ್ತೇವೆ. ಅದನ್ನು ಎಷ್ಟು ಸಮರ್ಥವಾಗಿ ನಿರ್ವಹಿಸುತ್ತೇವೆ ಎನ್ನುವುದು ನಮ್ಮ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ’ ಎಂದು ನಟನೆಯನ್ನು ಅವರು ವ್ಯಾಖ್ಯಾನಿಸುತ್ತಾರೆ.

ಈ ವ್ಯಾಖ್ಯಾನಕ್ಕೆ ತಕ್ಕ ಹಾಗೆ ಅವರು ತಮ್ಮನ್ನು ತಾವು ಸಜ್ಜುಗೊಳಿಸಿಕೊಳ್ಳುತ್ತಾರೆ. ‘ಒಂದೊಂದು ಪಾತ್ರ ಒಂದೊಂದು ಬಗೆಯ ಸಿದ್ಧತೆಯನ್ನು ಬೇಡುತ್ತದೆ. ಹಾಗೆಯೇ ಕೆಲವು ಪಾತ್ರಗಳು ಯಾವ ಸಿದ್ಧತೆಯನ್ನೂ ಮಾಡಿಕೊಳ್ಳದೆ ತಲೆಯನ್ನು ಪೂರ್ತಿ ಖಾಲಿ ಮಾಡಿಕೊಂಡು ನಿರ್ದೇಶಕನ ಮಾರ್ಗದರ್ಶನದ ಅನುಗುಣವಾಗಿ ನಟಿಸುವುದನ್ನು ಬೇಡುತ್ತವೆ. ಪಾತ್ರ ಬೇಡಿದ ಹಾಗೆ ಸಜ್ಜುಗೊಳ್ಳುವುದು ಕಲಾವಿದನ ಕರ್ತವ್ಯ’ ಎಂಬುದು ಅವರ ನಂಬಿಕೆ.

ತಮ್ಮ ಹುಟ್ಟೂರಾದ ಬೆಂಗಳೂರು ಎಂದರೆ ನಿಕ್ಕಿಗೆ ಅಚ್ಚುಮೆಚ್ಚು. ಆದರೆ ಅವರೀಗ ಚೆನ್ನೈನಲ್ಲಿದ್ದಾರೆ. ಸಮಯ ಸಿಕ್ಕಾಗಲ್ಲ ಬೆಂಗಳೂರಿಗೆ ಓಡಿ ಬಂದು ಅಕ್ಕ, ಅಪ್ಪ, ಅಮ್ಮನೊಟ್ಟಿಕೆ ಕಾಲ ಕಳೆಯುತ್ತಾರೆ ಅವರು.

‘ನಾನು ಹುಟ್ಟಿ ಬೆಳೆದಿದ್ದೆಲ್ಲ ಬೆಂಗಳೂರಿನಲ್ಲಿಯೇ. ಅದು ನನ್ನ ಮನೆ. ನನ್ನ ಸ್ನೇಹಿತರೆಲ್ಲರೂ ಅಲ್ಲಿಯೇ ಇದ್ದಾರೆ. ಮನೆಯವರೊಂದಿಗೆ ಕಾಲ ಕಳೆಯುವುದೆಂದರೆ ನನಗೆ ತುಂಬ ಇಷ್ಟ. ಆದರೆ ಇತ್ತೀಚೆಗೆ ಅವರೊಂದಿಗೆ ಹೆಚ್ಚು ಸಮಯ ಕಳೆಯುವುದು ಸಾಧ್ಯವಾಗುತ್ತಿಲ್ಲ’ ಎಂದು ತುಸು ಬೇಸರದಿಂದಲೇ ಹೇಳುವ ಅವರು, ‘ಚೆನ್ನೈ ನನ್ನ ಎರಡನೇ ಮನೆ’ ಎನ್ನಲು ಮರೆಯುವುದಿಲ್ಲ.

ಸದ್ಯಕ್ಕೆ ಪ್ರಭುದೇವ ಅವರ ಜತೆ ‘ಚಾರ್ಲಿ ಚಾಪ್ಲಿನ್‌ 2’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಎಲ್ಲ ಭಾಷೆಗಳಲ್ಲಿಯೂ ಹೊಸ ಬಗೆಯ, ವೈವಿಧ್ಯದ ಪಾತ್ರಗಳು ಬರುತ್ತಿರುವ ಬಗೆಗೆ ಅವರಿಗೆ ಖುಷಿಯಿದೆ. ಸದ್ಯದಲ್ಲಿಯೇ ಮತ್ತೊಂದು ಒಳ್ಳೆಯ ಸಿನಿಮಾ ಮೂಲಕ ಕನ್ನಡಕ್ಕೆ ಮರಳುವ ಅಭಿಲಾಷೆಯೂ ಅವರಲ್ಲಿದೆ.

**

ಕಲಾವಿದ ಎಂದರೆ ಅವನು ನಿರ್ದೇಶಕನ ಕನಸಿಗೆ ಜೀವ ಕೊಡುವವನು. ಅದನ್ನು ಎಷ್ಟು ಸಮರ್ಥವಾಗಿ ಮಾಡುತ್ತಾನೆ ಎನ್ನುವುದು ಅವನ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ.

ನಿಕ್ಕಿ ಗಿರ್ಲಾನಿ, ನಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT