7

ಪ್ರಶ್ನೋತ್ತರ

Published:
Updated:

‘ಮುನಿ ಮಹಾರಾಜರೇ, ತಾವಾದರೋ ಸ್ತ್ರೀ-ಪುರುಷರ ಮಧ್ಯೆ ಇರುತ್ತೀರ. ಬಹಳಷ್ಟು ರಮಣಿಯರು ನಿಮ್ಮ ನಡುವೆ ಬರುತ್ತಾರೆ. ಆಗ ತಮ್ಮ ಮನಸ್ಸಿನಲ್ಲಿ ಚಂಚಲತೆ ಉಂಟಾಗುವುದಿಲ್ಲವೇ?’_ ಎಂದು ಒಬ್ಬ ಶಿಕ್ಷಿತ ಯುವಕ, ಪ್ರಶ್ನೋತ್ತರ ವೇಳೆಯಲ್ಲಿ ಒಬ್ಬ ದಿಗಂಬರ ಮುನಿಯನ್ನು ಪ್ರಶ್ನಿಸಿದ.ಆಗ ಅವರು, ‘ಅಯ್ಯಾ, ನೀನು ನಿನ್ನ ತಾಯಿ ಹಾಗೂ ಅಕ್ಕತಂಗಿಯರು ಎದುರಿಗಿರುವಾಗ, ಕೆಲವೊಮ್ಮೆ ಅವರನ್ನು ಒಂಟಿಯಾಗಿ ಭೇಟಿಯಾದಾಗ, ನಿನ್ನ ಮನಸ್ಸಿನಲ್ಲಿ ಏನಾದರೂ ವಿಕಾರ ಉಂಟಾಗುವುದೋ?’ ಎಂದು ಮರುಪ್ರಶ್ನಿಸಿದರು.

‘ಇಲ್ಲ, ಸ್ವಾಮಿ ಇಲ್ಲ. ಸ್ವಂತ ಮಾತೆ ಹಾಗೂ ಸಹೋದರಿಯರ ಜೊತೆ ಇರುವಾಗ ವಿಕಾರವೆಲ್ಲಿ ಬರುತ್ತೆ? ಆಗ ಮನಸ್ಸಿನಲ್ಲಿ ಬಹಳ ಪವಿತ್ರತೆ ಬರುತ್ತೆ.’ ‘ಹಾ, ಇದೇ ನಮ್ಮ ರಹಸ್ಯ’- ಎನ್ನುತ್ತಾ ಸಂತರು ತಮ್ಮ ಮಾತು ಮುಂದುವರಿಸಿದರು. ‘ನಿನ್ನ ದೃಷ್ಟಿಯಲ್ಲಿ ನಿನಗೆ ಒಬ್ಬ ತಾಯಿ, ಒಬ್ಬ ಸೋದರಿ. ನಮ್ಮ ದೃಷ್ಟಿಯಲ್ಲಿ ಜಗತ್ತಿನ ಎಲ್ಲ ಮಾನಿನಿಯರು ತಾಯಂದಿರು, ಅಕ್ಕ ತಂಗಿಯರು. ಹೀಗಿರುವಲ್ಲಿ ಕೆಟ್ಟ ಭಾವನೆ ಹೇಗೆ ಬರಲು ಸಾಧ್ಯ? ಅಲ್ಲದೆ ಸದಾ ದುಷ್ಟಭಾವಗಳನ್ನು ನಾವು ನಿಷೇಧಿಸುತ್ತೇವೆ. ಜೊತೆಗೆ ಅದರ ದುಷ್ಟ ಪರಿಣಾಮಗಳನ್ನು ನಾವು ಪ್ರತಿಕ್ಷಣವೂ ಯೋಚಿಸುತ್ತೇವೆ. ನಾನು ಸಾಧು, ನಾನುಮುನಿ. ಜಗತ್ತು ನನ್ನನ್ನು ಪೂಜಿಸುವುದು. ನನ್ನನ್ನು ಪಂಚಪರಮೇಷ್ಠಿಗಳ ಪ್ರತಿನಿಧಿಯಾಗಿ ತಿಳಿಯುವುದು. ಜನ ನನ್ನ ಹತ್ತಿರ ಶ್ರದ್ಧೆಯಿಂದ ಬರುತ್ತಾರೆ. ನನ್ನನ್ನು ಎತ್ತರದ ಸ್ಥಾನದಲ್ಲಿ ಕೂರಿಸುತ್ತಾರೆ, ಪೂಜಿಸುತ್ತಾರೆ, ಅರ್ಚಿಸುತ್ತಾರೆ.

ನನಗೊಂದು ಜವಾಬ್ದಾರಿ ಇದೆ. ನನ್ನ ಪದವಿಯ ಗರಿಮೆಯನ್ನು ಕಡಿಮೆ ಮಾಡದೆ, ಕಾಪಾಡಿಕೊಂಡು ಬರಬೇಕು. ನನ್ನಿಂದ ಕಿಂಚಿತ್ತೂ ಅಕಾರ್ಯ ಆಗಬಾರದು. ಅಂಥ ಕೆಟ್ಟ ವಿಚಾರ ಬಂದರೆ, ಜನರ ಶ್ರದ್ಧೆ ನುಚ್ಚುನೂರಾಗುವುದು.ಈ ಒಳಗಿನ ವಿವೇಕ ನಮ್ಮನ್ನು ನಿಯಂತ್ರಿಸುತ್ತದೆ’- ಎಂದರು.

ಅನಂತರ ಸಂತರು ವಿಷಯವನ್ನು ಮತ್ತಷ್ಟು ಮನದಟ್ಟು ಮಾಡಿಸುವ ಸಲುವಾಗಿ ತಮ್ಮ ಪ್ರವಚನವನ್ನು ಮುಂದುವರಿಸಿದರು- ‘ಮನಸ್ಸಿನಲ್ಲಿ ದುರ್ಭಾವನೆಗಳು ಕ್ಷಣಕ್ಷಣವೂ ಅಂಕುರಿಸುತ್ತವೆ. ಒಳ್ಳೊಳ್ಳೆ ಭಾವನೆಗಳು, ವಿಚಾರಗಳು ಬರುವುದು ಕಡಿಮೆ. ಆದರೆ ಕೆಟ್ಟಭಾವಗಳು ಬರುವುದು ಹೆಚ್ಚು. ಆದ್ದರಿಂದ ಅವುಗಳನ್ನು ಕಂಟ್ರೋಲ್ ಮಾಡುವುದನ್ನು ಕಲಿಯಬೇಕು. ಕಲಿಯದಿದ್ದರೆ ಬದುಕು ಮೂರಾಬಟ್ಟೆ ಆಗುತ್ತದೆ. ನಾನು ಒಳ್ಳೆಯ ಮನುಷ್ಯ. ನಾನು ಒಳ್ಳೆಯ ಮನೆತನದವನು. ನನ್ನದೇ ಆದ ಪ್ರತಿಷ್ಠೆ ಇದೆ. ನನ್ನದೇ ಆದ ರೆಪ್ಯುಟೇಶನ್ ಇದೆ. ಇದಕ್ಕೆ ಕುಂದು ತರುವಂಥ ಯಾವ ಕೆಟ್ಟ ಕೆಲಸವನ್ನೂ ಮಾಡಬಾರದು ಎಂಬ ವಿವೇಕವೇ ನಮಗೆ ಸ್ವಯಂ ನಿಯಂತ್ರಣ ಸಾಧಿಸಲು ಶಕ್ತಿ ನೀಡುವುದು. ಆ ಶಕ್ತಿ ಎಲ್ಲೋ ಇಲ್ಲ. ನಮ್ಮಲ್ಲೇ ಇದೆ. ಅದನ್ನು ವಿಕಸಿತಗೊಳಿಸುವ ಶಿಕ್ಷಣ ನೀಡಬೇಕು.’

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry