ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಯಕಾರಿ ಸಮಿತಿ ಅವಧಿ 5 ವರ್ಷಕ್ಕೆ ವಿಸ್ತರಣೆ

ಕೋಟದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ವಿಶೇಷ ಸಭೆಯಲ್ಲಿ ಒಪ್ಪಿಗೆ, ಹಾಲಿ ಸಮಿತಿಗೂ ಅನ್ವಯ
Last Updated 15 ಮಾರ್ಚ್ 2018, 20:07 IST
ಅಕ್ಷರ ಗಾತ್ರ

ಉಡುಪಿ: ತೀವ್ರ ಕುತೂಹಲ ಕೆರಳಿಸಿದ್ದ ಕನ್ನಡ ಸಾಹಿತ್ಯ ಪರಿಷತ್‌ ಸದಸ್ಯರ ವಿಶೇಷ ಸಭೆಯು ಯಾವುದೇ ಗೊಂದಲ ಇಲ್ಲದೆ ಗುರುವಾರ ನಡೆಯಿತು. ಹಾಲಿ ಕಾರ್ಯಕಾರಿ ಸಮಿತಿಯೂ ಸೇರಿದಂತೆ ಸಮಿತಿಯ ಅವಧಿಯನ್ನು 3 ರಿಂದ 5 ವರ್ಷಕ್ಕೆ ವಿಸ್ತರಣೆ ಮಾಡುವುದು ಸೇರಿದಂತೆ ಹಲವು ತಿದ್ದುಪಡಿಗಳಿಗೆ ಒಪ್ಪಿಗೆ ಸಿಕ್ಕಿತು.

ಲೋಕಸಭೆ, ವಿಧಾನಸಭೆ, ಸ್ಥಳೀಯಾಡಳಿತ ಸಂಸ್ಥೆಗಳ ಅವಧಿ 5 ವರ್ಷವಿದೆ.  5 ವರ್ಷಕ್ಕೊಮ್ಮೆ ಚುನಾವಣೆ ಮಾಡುವುದರಿಂದ ಖರ್ಚು ಹಾಗೂ ಶ್ರಮ ಉಳಿಯಲಿದೆ. ದೀರ್ಘಾವಧಿ ಯೋಜನೆ ಹಮ್ಮಿಕೊಳ್ಳಲು ಅನುಕೂಲವಾಗಲಿದೆ ಎಂಬ ಕಾರಣ ನೀಡಿ ಒಪ್ಪಿಗೆ ಪಡೆಯಲಾಯಿತು.

ಕೋಟದಲ್ಲಿ ನಡೆದ ಸಭೆಯಲ್ಲಿ 802 ಮಂದಿ ಸದಸ್ಯರು ಭಾಗವಹಿಸಿದ್ದರು. ಬೈಲಾ ತಿದ್ದುಪಡಿಗಳ ವಿರೋಧವಾಗಿ ಕೇವಲ 7 ಮಂದಿ ಕೈ ಎತ್ತಿದರು. ಆದ್ದರಿಂದ ತಿದ್ದುಪಡಿಗೆ ಒಪ್ಪಿಗೆ ಸಿಕ್ಕಿದೆ ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ ಘೋಷಣೆ ಮಾಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ನಿರ್ಣಯಗಳು ಹೈಕೋರ್ಟ್‌ನ ತೀರ್ಪಿಗೆ ಒಳಪಟ್ಟಿರುತ್ತವೆ ಎಂದು ಸ್ಪಷ್ಟಪಡಿಸಿದರು.

ಅವಧಿ ವಿಸ್ತರಣೆ ನ್ಯಾಯಾಲಯ ಒಪ್ಪದು: ನಿರ್ಣಯದ ವಿರುದ್ಧವಾಗಿ ಕೆಲವರು ಮಾತ್ರ ವಿರೋಧ ವ್ಯಕ್ತಪಡಿಸಿದರೂ, ತಮ್ಮ ವಾದವನ್ನು ಬಲವಾಗಿ ಹಾಗೂ ಸಮರ್ಥವಾಗಿ ಮಂಡಿಸಿದರು. ಹುಬ್ಬಳ್ಳಿಯ ಹನುಮಾಕ್ಷಿ ಗೋಗಿ ಅವರು ಮಾತನಾಡಿ, ವಿಶೇಷ ಸಭೆ ನಡೆಸಲು ಆಯ್ಕೆ ಮಾಡಿಕೊಂಡ ಸ್ಥಳದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ‘ಯಾವ ಊರಿಗೆ ಬಸ್‌, ರೈಲು ಹಾಗೂ ಇತರ ಸಾರಿಗೆ ವ್ಯವಸ್ಥೆ ಉತ್ತಮವಾಗಿರುತ್ತದೆಯೋ ಹಾಗೂ ಎಲ್ಲ ಸದಸ್ಯರಿಗೂ ಭಾಗವಹಿಸಲು ಅನುಕೂಲವಾಗುತ್ತಿರುತ್ತದೆಯೋ ಅಂತಹ ಸ್ಥಳದಲ್ಲಿ ಸರ್ವ ಸದಸ್ಯರ ಸಭೆ ಕರೆಯುವುದು ನ್ಯಾಯ. ಆದರೆ ಅಂತಹ ಯಾವುದೇ ವ್ಯವಸ್ಥೆ ಇಲ್ಲದ ಊರಿನಲ್ಲಿ ಸಭೆ ಕರೆಯಲಾಗಿದೆ. ಇದೊಂದು ಪ್ರಜಾ
ಪ್ರಭುತ್ವ ವಿರೋಧಿ ಕ್ರಮ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

‘ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿಗಳಲ್ಲಿ ದೀರ್ಘಾವಧಿ ಯೋಜನೆ ಅನುಷ್ಠಾನಕ್ಕೆ ಅನುಕೂಲವಾಗಲಿ ಎಂದು ಅಧ್ಯಕ್ಷರ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ಆದರೆ, ಅಂತಹ ಯಾವುದೇ ಯೋಜನೆ ಇಲ್ಲದಿದ್ದರೂ ಪರಿಷತ್ತಿನ ಕಾರ್ಯಕಾರಿ ಸಮಿತಿ ಅವಧಿಯನ್ನು ವಿಸ್ತರಣೆ ಮಾಡಿರುವುದು ಸರಿಯಲ್ಲ. ಅಲ್ಲದೆ ಇಂತಹ ತಿದ್ದುಪಡಿಗಳ ವಿರುದ್ಧ ಹೈಕೋರ್ಟ್‌ ಹಾಗೂ ಸುಪ್ರೀಂಕೋರ್ಟ್ ಈಗಾಗಲೇ ಹಲವು ತೀರ್ಪು ನೀಡಿವೆ. ಆದ್ದರಿಂದ ತಿದ್ದುಪಡಿ ಪರವಾಗಿ ಶೇ 99 ರಷ್ಟು ಮಂದಿ ಇದ್ದರೂ ನ್ಯಾಯಾಲಯದಲ್ಲಿ ಇದು ನಿಲ್ಲುವುದಿಲ್ಲ’ ಎಂದು ಖಡಕ್ ಮಾತುಗಳಲ್ಲಿ ಹೇಳಿದರು.

‘ಕೇಂದ್ರೀಯ ಅಧ್ಯಕ್ಷರು ಹಾಗೂ ಜಿಲ್ಲಾಧ್ಯಕ್ಷರು ಮಾತ್ರ ಚುನಾವಣೆಯ ಮೂಲಕ ಆಯ್ಕೆಯಾಗುತ್ತಾರೆ. ಆಯ್ಕೆಯಾದವರು ಇತರ ಕಾರ್ಯಕಾರಿ ಸಮಿತಿ ಸದಸ್ಯರನ್ನು ನೇಮಕ ಮಾಡುತ್ತಾರೆ. ಈ ರೀತಿ ಮಾಡುವುದರಿಂದ ಮರ್ಜಿಗೆ ಬಿದ್ದು ಕೆಲಸ ಮಾಡಬೇಕಾಗುತ್ತದೆ. ಸ್ವಾತಂತ್ರ್ಯ ಇರುವುದಿಲ್ಲ’ ಎಂದು ಪ್ರತಿಪಾದಿಸಿದರು.

ಧಾರವಾಡದ ಲಕ್ಷ್ಮಣ ಎಂಬುವರು ಮಾತನಾಡಿ, ಮಹಿಳೆಯರ ಮೀಸಲಾತಿ ಹೆಚ್ಚಿಸಿ ಹಾಗೂ ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಿ ಎಂದು ಹೇಳಿದರು. ಅವಧಿ ವಿಸ್ತರಣೆ ಈಗ ಬೇಡ, ಮುಂದಿನ ಅವಧಿಗೆ ಆಯ್ಕೆಯಾಗುವ ಸಮಿತಿಗೆ ಅನ್ವಯಿಸಲಿ ಎಂಬ ಅಭಿಪ್ರಾಯ ಸಹ ವ್ಯಕ್ತವಾಯಿತು.

ಗೌರವ ಕೋಶಾಧಿಕಾರಿ ಪಿ. ಮಲ್ಲಿಕಾರ್ಜುನಪ್ಪ, ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷ ಮಾಯಣ್ಣ ಇದ್ದರು. ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
***
ಪ್ರಮುಖ ತಿದ್ದುಪಡಿಗಳು
* ಕಾರ್ಯಕಾರಿ ಸಮಿತಿ ಅವಧಿ 3ರಿಂದ 5 ವರ್ಷಕ್ಕೆ ವಿಸ್ತರಣೆ
* ಗುರುತಿನ ಚೀಟಿ ಇಲ್ಲದ ಸದಸ್ಯರು ಪ್ರಜಾ ಪ್ರಾತಿನಿಧ್ಯ ಕಾಯ್ದೆಯಲ್ಲಿ ಸೂಚಿಸಿರುವ ಗುರುತಿನ ಚೀಟಿಯಲ್ಲಿ ಒಂದನ್ನು ತೋರಿಸಿ ಮತದಾನ    ಮಾಡಬಹುದು, ಸಭೆಯಲ್ಲಿ ಭಾಗವಹಿಸಬಹುದು
* ವಾರ್ಷಿಕ ಸದಸ್ಯರು ಹಾಗೂ ವಾರ್ಷಿಕ ಸದಸ್ಯ ಸಂಸ್ಥೆಗಳನ್ನು ಕೈಬಿಡಲಾಗಿದೆ
* ‘ಕನ್ನಡ ನುಡಿ’ ಪತ್ರಿಕೆ ಚಂದಾದಾರರಾಗಲು ₹500 ಪಾವತಿಸಬೇಕು
* ಕಾರ್ಯಕಾರಿ ಸಮಿತಿಯಲ್ಲಿ ಮಹಿಳಾ ಮತ್ತು ಪರಿಶಿಷ್ಟ ಜಾತಿ– ಪಂಗಡದವರ ಪ್ರಾತಿನಿಧ್ಯ 2 ಕ್ಕೆ ಏರಿಕೆ
* ಗಡಿನಾಡ ಘಟಕಗಳಲ್ಲಿ ತೆಲಂಗಾಣ ರಾಜ್ಯ ಸೇರ್ಪಡೆ
* ಮತದಾರರ ಪಟ್ಟಿಯನ್ನು ಪ್ರಕಟಿಸಲು ಇರುವ ಕಾಲಾವಧಿ 90 ದಿನಗಳಿಗೆ ಏರಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT