ಐಎಸ್‌ಎಲ್‌ ಟಿಕೆಟ್‌ಗಾಗಿ ನೂಕುನುಗ್ಗಲು

7

ಐಎಸ್‌ಎಲ್‌ ಟಿಕೆಟ್‌ಗಾಗಿ ನೂಕುನುಗ್ಗಲು

Published:
Updated:
ಐಎಸ್‌ಎಲ್‌ ಟಿಕೆಟ್‌ಗಾಗಿ ನೂಕುನುಗ್ಗಲು

ಬೆಂಗಳೂರು: ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ನಾಲ್ಕನೇ ಆವೃತ್ತಿಯ ಫೈನಲ್‌ ಪಂದ್ಯದ ಟಿಕೆಟ್‌ ಖರೀದಿಸಲು ಗುರುವಾರ ಕಂಠೀರವ ಕ್ರೀಡಾಂಗಣದ ಕೌಂಟರ್‌ ಬಳಿ ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರಿಂದ ನೂಕು ನುಗ್ಗಲು ಉಂಟಾಯಿತು.

ಬೆಳಿಗ್ಗೆ 11 ಗಂಟೆಯಿಂದ ಕ್ರೀಡಾಂಗಣದ ‘ಜಿ’ ದ್ವಾರದ ಬಳಿ ಇರುವ ಕೌಂಟರ್‌ನಲ್ಲಿ ಟಿಕೆಟ್‌ ನೀಡುವುದಾಗಿ ‍ಪ್ರಾಯೋಜಕರು ತಿಳಿಸಿದ್ದರು. ಹೀಗಾಗಿ ಅಭಿಮಾನಿಗಳು ಬೆಳಿಗ್ಗೆ 7 ಗಂಟೆಗೆ ಕ್ರೀಡಾಂಗಣಕ್ಕೆ ಬಂದು ಸಾಲಿನಲ್ಲಿ ಕಾದು ಕುಳಿತಿದ್ದರು. ಕೌಂಟರ್‌ನಲ್ಲಿ ಟಿಕೆಟ್‌ ಕೊಡಲು ಆರಂಭಿಸಿದ ಕೂಡಲೇ ನೂಕುನುಗ್ಗಲು ಆರಂಭವಾಯಿತು. ಆಗ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಕೆಲವರು ಕಾಳಸಂತೆಯಲ್ಲಿ ನಿಗದಿಗಿಂತಲೂ ಹೆಚ್ಚಿನ ಹಣ ನೀಡಿ ಟಿಕೆಟ್‌ ಖರೀದಿಸಿದ ದೃಶ್ಯ ಸಾಮಾನ್ಯವಾಗಿತ್ತು.

‘ಬೆಳಿಗ್ಗೆ 9 ಗಂಟೆ ಸುಮಾರಿಗೆ ಕೌಂಟರ್‌ ಬಳಿ ಬಂದೆ. ಅದಾಗಲೇ ನೂರಾರು ಮಂದಿ ಸಾಲಿನಲ್ಲಿ ನಿಂತಿದ್ದರು. 10.30ರ ಸುಮಾರಿಗೆ ಕಾರ್ಪೊರೇಷನ್‌ ವೃತ್ತದವರೆಗೂ ಸಾಲು ಬೆಳೆದಿತ್ತು. ಟಿಕೆಟ್‌ ನೀಡಲು ಆರಂಭಿಸಿದಾಗ ಕೆಲವರು ಬ್ಯಾರಿಕೇಡ್‌ಗಳ ಮೇಲಿನಿಂದ ಹತ್ತಿ ಸಾಲಿನಲ್ಲಿ ನುಸುಳಲು ಯತ್ನಿಸಿದರು. ಹೀಗಾಗಿ ಅಭಿಮಾನಿಗಳ ನಡುವೆ ಜಟಾಪಟಿಯೂ ನಡೆಯಿತು’ ಎಂದು ಬಿಎಂಎಸ್‌ ಎಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿ ಸಂಯುಕ್ತ ಹೇಮಂತ್‌ ಹೇಳಿದರು.

‘ಎಲ್ಲಾ ಟಿಕೆಟ್‌ಗಳು ಬಿಕರಿಯಾಗಿವೆ. ಆನ್‌ಲೈನ್‌ನಲ್ಲೂ ಟಿಕೆಟ್‌ಗೆ ಭಾರಿ ಬೇಡಿಕೆ ಇದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಒಟ್ಟು ಎಷ್ಟು ಟಿಕೆಟ್‌ಗಳು ಮಾರಾಟವಾಗಿವೆ ಎಂಬುದನ್ನು ಅವರು ಹೇಳಲಿಲ್ಲ.

ಶನಿವಾರ ರಾತ್ರಿ 8 ಗಂಟೆಗೆ ಫೈನಲ್‌ ಪಂದ್ಯ ನಡೆಯಲಿದ್ದು ಬೆಂಗಳೂರು ಫುಟ್‌ಬಾಲ್‌ ಕ್ಲಬ್ (ಬಿಎಫ್‌ಸಿ) ಮತ್ತು ಚೆನ್ನೈಯಿನ್‌ ಎಫ್‌ಸಿ ತಂಡಗಳು ಮುಖಾಮುಖಿಯಾಗಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry