4

ಫ್ಲೆಕ್ಸ್‌, ಬ್ಯಾನರ್, ಬಂಟಿಂಗ್ಸ್‌ ಹರಿದಿದ್ಯಾಕೆ?

Published:
Updated:
ಫ್ಲೆಕ್ಸ್‌, ಬ್ಯಾನರ್, ಬಂಟಿಂಗ್ಸ್‌ ಹರಿದಿದ್ಯಾಕೆ?

ಚಿತ್ರದುರ್ಗ: ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಸಮಾರಂಭದ ಅಂಗವಾಗಿ ಗುರುವಾರ ಬೆಳಿಗ್ಗೆ ಹೊಸದುರ್ಗ ಪಟ್ಟಣದ ತುಂಬಾ ಬ್ಯಾನರ್, ಬಂಟಿಂಗ್ಸ್‌, ಫ್ಲೆಕ್ಸ್‌ಗಳದ್ದೇ ಕಾರುಬಾರು. ಇಡೀ ಪಟ್ಟಣವನ್ನು ಬಣ್ಣ ಬಣ್ಣದ ತೋರಣಗಳಂತೆ ಅಲಂಕರಿಸಿದ್ದವು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಎಚ್. ಆಂಜನೇಯ, ಶಾಸಕ ಗೋವಿಂದಪ್ಪ, ಸ್ಥಳೀಯ ಜಿಲ್ಲಾ ಪಂಚಾಯ್ತಿ ಸದಸ್ಯರು, ಸರ್ಕಾರದ ಸಚಿವರು... ಹೀಗೆ ತಮ್ಮ ಆಸಕ್ತಿಗೆ ತಕ್ಕಂತೆ ವಿಭಿನ್ನ ಬ್ಯಾನರ್‌, ಫ್ಲೆಕ್ಸ್‌ ಪಟ್ಟಣದ ಮುಖ್ಯ ರಸ್ತೆಯಲ್ಲಿ ಹಾಕಿಸಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯಾಹ್ನ 12.40ಕ್ಕೆ ಹೆಲಿಕಾಪ್ಟರ್‌ನಲ್ಲಿ ಸ್ಟೇಡಿಯಂಗೆ ಬಂದಿಳಿದರು. ಅಲ್ಲಿಂದ ಇದೇ ರಸ್ತೆಯ

ಮೂಲಕವೇ ಸಾಗಿದರು. ನಂತರ ಕೆಎಸ್‌ಆರ್‌ಟಿಸಿ ಡಿಪೊ ಎದುರಿನಲ್ಲಿ ನಿರ್ಮಿಸಿದ್ದ ವೇದಿಕೆಯಲ್ಲಿ ಭಾಷಣ ಮಾಡಿ, ಜನರಿಗೆಲ್ಲ ಶುಭಾಶಯ ಹೇಳಿ ಹೊರಟರು. ಅತ್ತ ಸಿದ್ದರಾಮಯ್ಯ ಅವರ ಕಾರು ಹೋಗುತ್ತಿದ್ದಂತೆ ಇತ್ತ ಕೆಲವರು ರಸ್ತೆಯ ಇಕ್ಕೆಲಗಳಲ್ಲಿದ್ದ ಪೋಸ್ಟರ್‌ಗಳನ್ನು ಜಿದ್ದಿಗೆ ಬಿದ್ದವರಂತೆ ಹರಿಯಲು ಆರಂಭಿಸಿದರು.

ಸಭಾಂಗಣದ ಎದುರಿನಿಂದ ಹಿಡಿದು ಪಟ್ಟಣದ ಪ್ರಮುಖ ರಸ್ತೆಯವರೆಗೂ ರಸ್ತೆಯ ಇಕ್ಕೆಲಗಳಲ್ಲಿದ್ದ ಬ್ಯಾನರ್‌ಗಳೆಲ್ಲಾ ಕ್ಷಣಾರ್ಧದಲ್ಲಿ ನಾಪತ್ತೆಯಾಗಿಬಿಟ್ಟವು. ಕೆಲವರು ‘ಹಸ್ತ’ದ ಚಿತ್ರವಿರುವ ಬಂಟಿಂಗ್ಸ್ ದಾರವನ್ನು ಹಲ್ಲಿನಿಂದ ತುಂಡರಿಸಿಕೊಂಡು ಅವುಗಳನ್ನು ಸಂಗ್ರಹ ಮಾಡಿಕೊಳ್ಳುತ್ತಿದ್ದರು.

ಒಬ್ಬರು ಪೋಸ್ಟರ್ ಹರಿಯುತ್ತಿದ್ದರೆ, ಮತ್ತೊಬ್ಬರು ತುಂಬಾ  ಮುತುವರ್ಜಿಯಿಂದ ಸಹಾಯ ಮಾಡುತ್ತಿದ್ದರು. ಹೊರಗಿನಿಂದ ಬಂದ ಜನರಿಗೆ ಈ ಫ್ಲೆಕ್ಸ್‌ ಹರಿಯುವುದು ದುಷ್ಕೃತ್ಯದಂತೆ ಕಾಣುತ್ತಿತ್ತು. ‘ಯಾರೋ ವಿರೋಧ ಪಕ್ಷದವರೇ ಹರಿಯುತ್ತಿದ್ದಾರೇನೋ’ ಎಂದುಕೊಳ್ಳುವಂತಿತ್ತು. ಸೋಜಿಗ ಉಂಟು ಮಾಡುತ್ತಿತ್ತು. ಫ್ಲೆಕ್ಸ್ ಹರಿಯುವವರನ್ನು ‘ಯಾಕೆ ಹೀಗೆ ಹರಿಯುತ್ತಿದ್ದೀರಿ’ ಎಂದು ಕೇಳಿದರೂ ಉತ್ತರ ಹೇಳಲು ಯಾರೂ  ತಯಾರಿರುತ್ತಿರಲಿಲ್ಲ. ಸ್ಥಳೀಯರಿಗೆ ಇದು ಹೊಸ ವಿಷಯ ಎಂದು ಎನ್ನಿಸಲೇ ಇಲ್ಲ.

ಕೊನೆಗೆ ವ್ಯಕ್ತಿಯೊಬ್ಬರು ಈ ‘ಫ್ಲೆಕ್ಸ್ ಹರಿಯುವ ಕಾಯಕ’ದ ಹಿಂದಿನ ಗುಟ್ಟು ಏನು ಎಂದು ಬಿಡಿಸಿ ಹೇಳಿದರು. ಈ ಫ್ಲೆಕ್ಸ್‌ ಹರಿದುಕೊಂಡು ಹೋಗಿ, ಕೆಲವರು ಮನೆಗಳಲ್ಲಿ ಕಾಳು ಕಡಿಗಳನ್ನು ಒಣಗಿಸುವ ತಾಡಪಾಲಾಗಿ ಬಳಸಿದರೆ, ತರಕಾರಿ ಮಾರುವವರು ಗುಡಿಸಿಲಿಗಾಗಿ ಬಳಸುತ್ತಾರೆ. ಕೆಲ ರೈತರು ಜಮೀನಿನಲ್ಲಿ ಪ್ರಾಣಿಗಳನ್ನು ಬೆದರಿಸಲು ಬಣ್ಣ ಬಣ್ಣದ ಬಂಟಿಂಗ್‌ಗಳನ್ನು ಜಮೀನಿನ ಗಡಿಗೆ ಕಟ್ಟುತ್ತಾರೆ. ‘ಗಾಳಿಗೆ ಪರ ಪರ ಎಂದು ಹೊಡೆದುಕೊಂಡಾಗ, ಪ್ರಾಣಿಗಳು ಹೆದರಿ ಓಡುತ್ತವೆಯಂತೆ’. ಹಾಗಾಗಿ, ಪುಕ್ಕಟ್ಟೆಯಾಗಿ ಸಿಗುವ ಈ ಬ್ಯಾನರ್‌, ಬಂಟಿಂಗ್‌ಗಳನ್ನು ಹೀಗೆ ಸಂಗ್ರಹಿಸಿಕೊಂಡು ಹೋಗುತ್ತಾರಂತೆ ಎಂಬ ಮಾಹಿತಿ ಸಿಕ್ಕಿತು.

ಇಷ್ಟೆಲ್ಲ ಕಥೆ ಕೇಳಿದ ಮೇಲೆ, ‘ನಿರುಪಯುಕ್ತ ಎನ್ನುವ ಪೋಸ್ಟರ್, ಬ್ಯಾನರ್, ಬಂಟಿಂಗ್ ಅನ್ನು ಹೀಗೂ ಬಳಸುತ್ತಾರೇ’ ಎಂದು ಅಚ್ಚರಿ ಮೂಡಿದ್ದಂತೂ ಹೌದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry