ನಮ್ಮ ಸ್ಪರ್ಧೆ ತಡೆಯಲು ಆಗದು: ಬಾಲಕೃಷ್ಣ

7
ಮಾಗಡಿ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಸೇಡಿನ ರಾಜಕಾರಣ: ಆರೋಪ

ನಮ್ಮ ಸ್ಪರ್ಧೆ ತಡೆಯಲು ಆಗದು: ಬಾಲಕೃಷ್ಣ

Published:
Updated:

ರಾಮನಗರ: ಮುಂಬರುವ ಚುನಾವಣೆಯಲ್ಲಿ ನಾವು ಸ್ಪರ್ಧಿಸುವುದನ್ನು ಯಾರಿಂದಲೂ ತಡೆಯಲು ಆಗದು ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ಹೇಳಿದರು.

ಜೆಡಿಎಸ್‌ನಿಂದ ಅಮಾನತುಗೊಂಡಿರುವ ಏಳು ಮಂದಿ ಶಾಸಕರು ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಎಚ್‌.ಡಿ. ದೇವೇಗೌಡರು ತಂತ್ರ ರೂಪಿಸುತ್ತಿದ್ದಾರೆ ಎಂಬ ಸುದ್ದಿಯ ಕುರಿತು ಅವರು ಗುರುವಾರ ಇಲ್ಲಿ ಪತ್ರಕರ್ತರಿಗೆ ಪ್ರತಿಕ್ರಿಯಿಸಿದರು.

‘ರಾಜ್ಯಸಭೆ ಚುನಾವಣೆಯಲ್ಲಿ ನಮಗೆ ಬೇಕಾದ ಅಭ್ಯರ್ಥಿಗೆ ಮತ ಹಾಕಲು ಕಾನೂನು ಅಡ್ಡಿ ಬರುವುದಿಲ್ಲ. ವಿಪ್‌ಗೆ ತೋರಿಸಿ ಮತ ಹಾಕಬೇಕಷ್ಟೇ. ಇಂತಹವರಿಗೇ ಮತ ಹಾಕಬೇಕು ಎಂದೇನು ನಿಯಮ ಇಲ್ಲ. ಹಿಂದೆ ಎಲ್ಲಿಯೂ ಇಂತಹ ಪ್ರಕರಣಗಳಲ್ಲಿ ಶಾಸಕರನ್ನು ಅನರ್ಹಗೊಳಿಸಿದ ಉದಾಹರಣೆಗಳು ಇಲ್ಲ. ಇಲ್ಲಿಯೂ ಆಗಲಾರದು. ಅಂತಹ ಪರಿಸ್ಥಿತಿ ಬಂದರೆ ನಾವು ಕಾನೂನು ಹೋರಾಟ ಮಾಡುತ್ತೇವೆ’ ಎಂದರು.

‘23ರಂದು ನಡೆಯಲಿರುವ ಚುನಾವಣೆಗೆ ನಮಗೆ ಮತದಾನ ನಿರಾಕರಣೆ ಮಾಡಲು ಆಗದು. ತಾಂತ್ರಿಕವಾಗಿ ನಾವಿನ್ನೂ ಜೆಡಿಎಸ್‌ನಲ್ಲಿಯೇ ಇದ್ದೇವೆ. ಆದರೆ ಪಕ್ಷದಿಂದ ಅಮಾನತು ಮಾಡಿದ ಮೇಲೆ ನಮ್ಮನ್ನು ಕೇಳುವ ಹಕ್ಕು ಏನಿದೆ?’ ಎಂದು ಪ್ರಶ್ನಿಸಿದರು.

ಸೇಡಿನ ರಾಜಕಾರಣ: ಹಾಸನದಲ್ಲಿ ಯೋಧ ಸತ್ತಿದ್ದರೂ ಅವರ ಕುಟುಂಬಕ್ಕೆ ಸಾಂತ್ವನ ಹೇಳಲು ಹೋಗದ ಎಚ್‌.ಡಿ. ದೇವೇಗೌಡರು, ‘ನನ್ನ ವಿರುದ್ಧ ರಾಜಕೀಯ ಸೇಡಿನ ಸಲುವಾಗಿ ಕಾರ್ಯಕರ್ತರಿಗೆ ಸಾಂತ್ವನ ಹೇಳುವ ನಾಟಕ ಆಡುತ್ತಿದ್ದಾರೆ’ ಎಂದು ಅವರು ಟೀಕಿಸಿದರು.

ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಸಂದೇಶ ಹಾಕುವುದು ತಪ್ಪು. ಕ್ಷೇತ್ರದಲ್ಲಿ ಅದನ್ನು ಮೊದಲು ಶುರುಮಾಡಿದ್ದು ನನ್ನ ವಿರೋಧಿಗಳು. ನಂತರ ನಮ್ಮವರೂ ಆರಂಭಿಸಿ ಈಗ ಅದು ಅತಿರೇಕಕ್ಕೆ ಹೋಗಿದೆ. ಇನ್ನೊಬ್ಬರನ್ನು ಅವಹೇಳನಕಾರಿಯಾಗಿ ಬಿಂಬಿಸಲು ಯಾರು ಹಕ್ಕು ನೀಡಿಲ್ಲ. ನಾನು ಮೂರ್ನಾಲ್ಕು ಮಂದಿ ವಿರುದ್ಧ ಪೊಲೀಸರಿಗೆ ಅಧ್ಯಾಪಕರೊಬ್ಬರು ನನ್ನ ವಿರುದ್ಧ ಸಂದೇಶ ಹರಡಿದ್ದು, ಅವರ ವಿರುದ್ಧದ ತನಿಖೆ ನಡೆದಿದೆ. ಉಳಿದವು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಪೊಲೀಸರು ಹೇಳುತ್ತಾರೆ ಎಂದರು.

ನೈಸ್ ವಂಚನೆಗೆ ಗೌಡರೇ ಕಾರಣ: ‘ಅಶೋಕ್‌ ಖೇಣಿಯನ್ನು ರಾಜ್ಯಕ್ಕೆ ಕರೆ ತಂದಿದ್ದು ಅಂದು ಮುಖ್ಯಮಂತ್ರಿಯಾಗಿದ್ದ ದೇವೇಗೌಡರು. ನೈಸ್ ಎಂಬ ಪಾಪದ ಕೂಸು ಹುಟ್ಟಿದ್ದೇ ಅವರಿಂದ. ಅವರು ಸಸಿ ನೆಟ್ಟರು. ಮಿಕ್ಕವರು ನೀರು ಎರೆದರು. ಈಗ ಪ್ರಕರಣ ನ್ಯಾಯಾಲಯದಲ್ಲಿ ಇದೆ. ಅಂದೇ ದೇವೇಗೌಡರು ಕಾನೂನು ಬಿಗಿ ಮಾಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ’ ಎಂದರು.

‘ನಮ್ಮ ಕ್ಷೇತ್ರದಲ್ಲಿ ನೈಸ್‌ಗೆ ಸೇರಿರುವ ರೈತರ ಜಮೀನನ್ನು ಮಾತುಕತೆ ಮೂಲಕ ಮನವೊಲಿಸಿ ಬಿಡಿಸುತ್ತೇವೆ’ ಎಂದು ಭರವಸೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry