ನೀರು, ವಿದ್ಯುತ್‌ ಸಮರ್ಪಕ ಪೂರೈಕೆಗೆ ಆಗ್ರಹ

ಭಾನುವಾರ, ಮಾರ್ಚ್ 24, 2019
34 °C
ರಾಮನಗರದಲ್ಲಿ ಜೆಡಿಎಸ್‌ ಕಾರ್ಯಕರ್ತರಿಂದ ಪ್ರತಿಭಟನೆ

ನೀರು, ವಿದ್ಯುತ್‌ ಸಮರ್ಪಕ ಪೂರೈಕೆಗೆ ಆಗ್ರಹ

Published:
Updated:
ನೀರು, ವಿದ್ಯುತ್‌ ಸಮರ್ಪಕ ಪೂರೈಕೆಗೆ ಆಗ್ರಹ

ರಾಮನಗರ: ವಿದ್ಯುತ್‌ ಹಾಗೂ ಕುಡಿಯುವ ನೀರಿನ ಸಮರ್ಪಕ ಪೂರೈಕೆಗೆ ಆಗ್ರಹಿಸಿ ಜಾತ್ಯತೀತ ಜನತಾದಳದ ಕಾರ್ಯಕರ್ತರು ಗುರುವಾರ ನಗರದ ವಿವಿಧೆಡೆ ಪ್ರತಿಭಟನೆ ನಡೆಸಿದರು.

ಐಜೂರು ವೃತ್ತದಲ್ಲಿ ಸಮಾವೇಶಗೊಂಡ ಕಾರ್ಯಕರ್ತರು ಮಾನವ ಸರಪಳಿ ರಚಿಸಿ ರಾಜ್ಯ ಸರ್ಕಾರದ ವಿರುದ್ಧಘೋಷಣೆ ಕೂಗಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಧಿಕ್ಕಾರ ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಿಂದಾಗಿ ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ಥಗೊಂಡಿತ್ತು. ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಐಜೂರು ವೃತ್ತದಿಂದ ಮೆರವಣಿಗೆ ಹೊರಟ ಕಾರ್ಯಕರ್ತರು ಬೆಸ್ಕಾಂ ಕಚೇರಿ ಮುಂಭಾಗ ಧರಣಿ ಕುಳಿತರು. ನಗರದಲ್ಲಿ ಪ್ರತಿನಿತ್ಯ ವಿದ್ಯುತ್ ಕಣ್ಣಾಮುಚ್ಚಾಲೆ ಆಗುತ್ತಿದೆ. ಪರೀಕ್ಷೆ ಸಮಯ ಆಗಿರುವುದರಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಕೃಷಿ ಪಂಪ್‌ಸೆಟ್‌ಗಳಿಗೆ ನಿಯಮಿತವಾಗಿ ವಿದ್ಯುತ್‌ ಸರಬರಾಜು ಆಗದೇ ಕೃಷಿಕರು ತೊಂದರೆ ಅನುಭವಿಸುವಂತಾಗಿದೆ ಎಂದು ದೂರಿದರು.

ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರ ತವರು ಜಿಲ್ಲೆಯಲ್ಲಿಯೇ ಇಂತಹ ಪರಿಸ್ಥಿತಿ ಇದೆ. ಆದರೆ ಅವರು ರಾಜ್ಯದಲ್ಲಿ ವಿದ್ಯುತ್ ಸಮಸ್ಯೆಯೇ ಇಲ್ಲ ಎಂದು ಸುಳ್ಳು ಜಾಹೀರಾತುಗಳನ್ನು ನೀಡುವ ಮೂಲಕ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು. ಬೆಸ್ಕಾಂ ಎಇಇ ಉಮೇಶ್ ಮನವಿಸ್ವೀಕರಿಸಿದರು.

‘ಹೆದ್ದಾರಿ ವಿಸ್ತರಣೆ ಕಾಮಗಾರಿ ನಡೆಯುತ್ತಿರುವ ಕಾರಣವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಸಮರ್ಪಕವಾಗಿ ವಿದ್ಯುತ್ ಪೂರೈಕೆಗೆ ಕ್ರಮಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಜಲಮಂಡಳಿ ಕಚೇರಿಗೆ ಮುತ್ತಿಗೆ: ಪ್ರತಿಭಟನಾಕಾರರು ಜಲಮಂಡಳಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಅಧಿಕಾರಿಗಳು ನೀರು ಪೂರೈಕೆ ದರವನ್ನು ಹೆಚ್ಚಿಸಿದ್ದಾರೆ. ಆದರೆ ಸಮರ್ಪಕವಾಗಿ ನೀರು ಸರಬರಾಜು ಮಾಡಲು ಕ್ರಮಗಳನ್ನು ಕೈಗೊಂಡಿಲ್ಲ. ಯುಗಾದಿ ಹಬ್ಬ ಆಚರಣೆಗೂ ತೊಂದರೆಯಾಗಿದೆ ಎಂದು ಅವರು ದೂರಿದರು.

ವಿದ್ಯುತ್ ಹಾಗೂ ನೀರಿನ ಸಮಸ್ಯೆಯನ್ನು ಶೀಘ್ರ ಬಗೆಹರಿಸದಿದ್ದಲ್ಲಿ ಪ್ರತಿಭಟನೆ ತೀವ್ರಗೊಳಿಸಲಾಗುವುದು. ರಾಮನಗರ ಬಂದ್‌ಗೆ ಕರೆ ನೀಡಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನಾಕಾರರ ಮನವಿ ಸ್ವೀಕರಿಸಿದ ಜಲ ಮಂಡಳಿಯ ಮುಖ್ಯ ಎಂಜಿನಿಯರ್‌ ಕೇಶವ ‘ವಿದ್ಯುತ್ ಸಮಸ್ಯೆಯಿಂದ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಶೀಘ್ರದಲ್ಲಿ ಬಗೆಹರಿಸಲಾಗುವುದು. ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೂರದಂತೆ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ’ ಎಂದರು.

ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪಿ. ಅಶೋಕ್, ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ್, ವಿವಿಧ ಘಟಕಗಳ ಪದಾಧಿಕಾರಿಗಳಾದ ಸಿ.

ಉಮೇಶ್, ನಾಗರಾಜು, ರಾಜಶೇಖರ್, ಮುಕುಂದರಾಜು, ಸಿ.ಎಸ್‌. ಜಯ ಕುಮಾರ್, ಎಚ್‌.ಕೆ. ಲೋಕೇಶ್‌ ಕುಮಾರ್, ಅಜಯ್‌, ನಗರಸಭೆ ಸದಸ್ಯರಾದ ಎ.ರವಿ, ಪರ್ವೇಜ್ ಪಾಷ, ಮಂಜುನಾಥ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry